ಓಶೋ:ನಾನು ಈವರೆಗೆ ತಿಳಿದಷ್ಟು December 20, 2008
Posted by uniquesupri in Uncategorized.trackback
-ಸುಪ್ರೀತ್.ಕೆ.ಎಸ್
ಓಶೋ ರಜನೀಶ್ ವಿಚಾರಧಾರೆ ನನಗೆ ಪರಿಚಯವಾದದ್ದು ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಬರಹಗಳ ಮೂಲಕ.ತಾವು ಓದಿದ್ದನ್ನು, ಮೆಚ್ಚಿಕೊಂಡದ್ದನ್ನು, ತಾವು ಪ್ರಭಾವಿತರಾದ ವಿಚಾರಗಳನ್ನೆಲ್ಲಾ ಓದುಗರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ರವಿ ಬೆಳಗೆರಯವರ ಪತ್ರಿಕೆಯ ಓದಿನಿಂದ ನಾನು ಆಸಕ್ತಿ ಬೆಳೆಸಿಕೊಂಡ ಅನೇಕ ವ್ಯಕ್ತಿಗಳಲ್ಲಿ ಓಶೋ ಕೂಡ ಒಬ್ಬ (ಒಬ್ಬರು ಎಂದ ಕೂಡಲೇ ದೂರ ತಳ್ಳಿದ ಭಾವ ಮನಸ್ಸಲ್ಲಿ ಮೂಡುವುದರಿಂದ ಏಕವಚನವನ್ನೇ ಬಳಸುವೆ, ಬಹುಶಃ ಓಶೋ ಇದನ್ನು ವಿರೋಧಿಸುತ್ತಿರಲಿಲ್ಲವೆನಿಸುತ್ತದೆ!).
ಓಶೋ ಬಗ್ಗೆ ಕುತೂಹಲದಿಂದ ಯಾರ ಬಳಿಯಾದರೂ ಕೇಳಿದರೆ ಒಂದೋ ತಮಗೆ ತಿಳಿದಿಲ್ಲ ಎಂದು ಕೆಲವರು ಪ್ರಾಮಾಣಿಕವಾಗಿ, ಮತ್ತೆ ಕೆಲವರು ನುಣುಚಿಕೊಳ್ಳುವ ಪ್ರಯತ್ನವಾಗಿ ಹೇಳುತ್ತಾರೆ. ಇನ್ನು ಕೆಲವರು ನಿಮ್ಮ ಚಾರಿತ್ರ್ಯದ ಬಗ್ಗೆ ಅನುಕಂಪ ತೋರಿಸುತ್ತಾರೆ. ಹೈಸ್ಕೂಲಿನಲ್ಲಿದ್ದಾಗ ಮನೆಗೆ ಹತ್ತಿರವಿದ್ದ ರಾಮಕೃಷ್ಣಾಶ್ರಮದ ಲೈಬ್ರರಿಯಲ್ಲಿ ಓಶೋನ ದೊಡ್ಡ ಭಾವಚಿತ್ರ ಮುಖಪುಟದಲ್ಲಿರುವ ಪುಸ್ತಕ ಕೈಗೆತ್ತಿಕೊಂಡು ಪುಟ ತಿರುವುತ್ತಿದ್ದಾಗ ಎದುರಿಗಿದ್ದ ಹಿರಿಯರನೇಕರು ‘ಇವನಿಗೇನು ಬಂತು ಕೇಡು’ ಎಂಬಂತೆ ನನ್ನೆಡೆಗೆ ಕರುಣೆಯಿಂದ ನೋಡಿದ್ದು ನೆನಪಿದೆ. ಆತನ ಬಗ್ಗೆ ಅಲ್ಲಿ ಇಲ್ಲಿ ಕೇಳಿ ತಿಳಿದವರಿಗೆ ಆತ ಬೋಧಿಸಿದ ಮುಕ್ತ ಲೈಂಗಿಕತೆಯ ಬಗ್ಗೆ ನಾನಾ ಭ್ರಮೆಗಳು ಹುಟ್ಟಿಕೊಂಡಿರುತ್ತವೆ. ಡಿಕ್ಷನರಿಯಲ್ಲಿ ಕೇವಲ ಅವಾಚ್ಯ ಶಬ್ಧಗಳನ್ನೇ ಹುಡುಕುವ ಸ್ವಭಾವದವರು ‘ಸೆಕ್ಸ್ ಗುರು’ ಎಂದೇ ಆತನನ್ನು ಲೇವಡಿ ಮಾಡುತ್ತಾರೆ. ಮೊದಲಲ್ಲಿ ಆತನನ್ನು ಪರಿಚಯಿಸಿಕೊಳ್ಳುವವರಿಗೆ ಓಶೋನ ಲೈಂಗಿಕತೆಯ ಬಗೆಗಿನ ವಿವರಣೆಗಳೆಡೆಗೇ ಆಕರ್ಷಣೆ ಬೆಳೆಯುತ್ತದೆ. ಅನೇಕರು ಆ tabooನಿಂದಾಗಿಯೇ ಓಶೋ ಬಗ್ಗೆ ತಿಳಿಯುವುದಕ್ಕೆ, ಆತನ ವಿಚಾರಗಳಿಗೆ ತೆರೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ‘ಸೆಕ್ಸ್ ಗುರುವಿನಿಂದ ಕಲಿಯುವಂಥದ್ದು ಏನಿದ್ದೀತು ನಮಗೆ? ’ ಎಂಬ ಧೋರಣೆಯಿಂದ ಓಶೋ ಬಗ್ಗೆ ಅನವಶ್ಯಕವಾದ ಅಸಡ್ಡೆಯನ್ನು ಬೆಳೆಸಿಕೊಳ್ಳುತ್ತಾರೆ. ರವಿಬೆಳಗೆರೆ ಹಾಗೂ ವಿಶ್ವೇಶ್ವರ ಭಟ್ಟರು ತಮ್ಮ ಅಂಕಣಗಳಲ್ಲಿ ಓಶೋನ ವಿಚಾರಗಳನ್ನು ಯಥಾವತ್ತಾಗಿ ಕನ್ನಡಕ್ಕೆ ತಂದು ಪ್ರಕಟಿಸಿದ್ದನ್ನು ಓದುವವರೆಗೆ ನಾನೂ ಕೂಡ ಹೀಗೇ ಇದ್ದೆ ಎನ್ನಬಹುದು.
ಈ ಓಶೋ ಯಾರು ಎಂದು ಯಾರಾದರೂ ಹೊಸಬರು ಕೇಳಿದರೆ ಏನಂತ ಉತ್ತರಿಸುವುದು ಎಂಬ ಗೊಂದಲವಾಗುತ್ತದೆ. ನಾವು ತುಂಬಾ ಪ್ರಭಾವಿತರಾದವರ ಬಗ್ಗೆ ವಸ್ತುನಿಷ್ಠವಾಗಿ, ಯಾವ ಭಾವಾವೇಶವಿಲ್ಲದೆ ಹೊಸಬರಿಗೆ ಹೇಳಲು ನಮಗೆ ವಿಪರೀತ ಕಷ್ಟ ಎಂಬುದು ಒಂದು ಸಂಗತಿಯಾದರೆ, ಓಶೋನಂತಹ ವಿವಾದಾತ್ಮಕ, ವಿರೋಧಾಭಾಸದ ವ್ಯಕ್ತಿಯ ಬಗ್ಗೆ ಏನಂತ ಹೇಳುವುದು ಎಂಬ ಸಂಕಟ ಎದುರಾಗುತ್ತದೆ. ವಿವೇಕಾನಂದರ ಬಗ್ಗೆ ಯಾರಾದರೂ ಕೇಳಿದರೆ ಸನಾತನ ಹಿಂದೂ ಧರ್ಮ ಪತಾಕೆಯನ್ನು ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಹಾರಿಸಿದವರು, ಉಪನಿಷತ್ತು ಬೋಧಿಸಿದ ಜೀವಪರವಾದ ಹಿಂದೂ ತತ್ವ ಚಿಂತನೆಯನ್ನು ಜಗತ್ತಿಗೆ ಹೊಸ ರೀತಿಯಲ್ಲಿ ನೀಡಿದವರು, ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬಿದವರು ಎಂದು ಹೇಳುವ ಪ್ರಯತ್ನ ಮಾಡಬಹುದು. ಗಾಂಧೀಜಿ ಬಗ್ಗೆ ಹೇಳುವುದಾದರೆ ಅಹಿಂಸೆಯನ್ನು ಅನ್ಯಾಯದ ವಿರುದ್ಧ ಹೋರಾಟದ ಅಸ್ತ್ರವಾಗಿ ಯಶಸ್ವಿಯಾಗಿ ಬಳಸಿಕೊಂಡು ತೋರಿದ ಸಂತನ ವ್ಯಕ್ತಿತ್ವದ ರಾಜಕಾರಣಿ ಎಂದು ಹೇಳಿದರೆ ಸಾಕಾಗುತ್ತದೆ. ಆದರೆ ಓಶೋ ಬಗ್ಗೆ ಏನು ಹೇಳುವುದು? ರಾಮಕೃಷ್ಣ ಪರಮಹಂಸರ ಬಗ್ಗೆ ಏನು ಹೇಳುವುದು? ಅವರನ್ನು ಜ್ಞಾನೋದಯ ಹೊಂದಿದವರು ಎಂದು ಹೇಳಿ ಕೈತೊಳೆದುಕೊಳ್ಳಲು ಸಾಧ್ಯವಾಗದು, ಏಕೆಂದರೆ ಜ್ಞಾನೋದಯ ಎಂದರೇನು ಎಂಬ ಪ್ರಶ್ನೆ ಎದುರಾದರೆ ಉತ್ತರಿಸಲು ನಾವು ಸಮರ್ಥರಾಗಿರುವುದಿಲ್ಲ!
ಓಶೋ ಪ್ರತಿಪಾದಿಸಿದ್ದು ಏನನ್ನು? ಅರಾಜಕತೆಯನ್ನಾ? ಎಗ್ಗಿಲ್ಲದ ಲೈಂಗಿಕ ಸ್ವಾತಂತ್ರ್ಯವನ್ನಾ? ಎಲ್ಲಾ ಬಗೆಯ ಸಾಂಸ್ಥಿಕ ಚಿಂತನೆಗಳಿಂದ ಬಿಡುಗಡೆಯನ್ನಾ? ಹೇಳುವುದು ಕಷ್ಟ. ಏಕೆಂದರೆ ಆತನನ್ನು ಗ್ರಹಿಸಲು ಮೊದಲು ನಾವು ನಮ್ಮೆಲ್ಲಾ ಸ್ವಂತ ವಿಚಾರ, ಅಭಿಪ್ರಾಯಗಳಿಂದ ಮುಕ್ತರಾಗ ಬೇಕಾಗುತ್ತದೆ. ಆತನ ವಿಚಾರಗಳನ್ನು ಅವುಗಳ ಸತ್ವದ ಆಧಾರದ ಮೇಲೆ ವಿಮರ್ಶಿಸಲು ನಾವು ನಮ್ಮೆಲ್ಲಾ ಪೂರ್ವಾಗ್ರಹಗಳಿಂದ ಹೊರಬರಬೇಕಾಗುತ್ತದೆ. ನಮ್ಮ ಇಷ್ಟ, ದ್ವೇಷ, ಅಸೂಯೆಗಳಿಂದ ನಮ್ಮನ್ನು ಹೊರಗೆಳೆದು ತರಬೇಕಾಗುತ್ತದೆ. ಆತನೇ ಹೇಳುವಂತೆ ನಾವು ಆತನನ್ನು ಗ್ರಹಿಸಬೇಕಾದರೆ ಒಂದು ಕನ್ನಡಿಯಾಗಬೇಕು. ಕನ್ನಡಿ ತನ್ನೊಳಗೆ ಏನನ್ನು ಇಟ್ಟುಕೊಂಡಿರುವುದಿಲ್ಲ. ಅದು ತನ್ನೆದುರು ನಿಂತ ವ್ಯಕ್ತಿ ಅಥವಾ ವಸ್ತುವನ್ನು ಮಾತ್ರ ತೋರುತ್ತದೆ. ತನ್ನದೆಂಬುದೇನನ್ನೂ ಸೇರಿಸುವುದಿಲ್ಲ. ತನ್ನ ಯಾವ ಸ್ವಭಾವವನ್ನು ಅದು ಹೇರುವುದಿಲ್ಲ. ಓಶೋನನ್ನು ನಾವು ಅರಿಯಬೇಕಾದರೆ ಹಾಗಾಗಬೇಕಂತೆ. ಆತನ ಪ್ರಕಾರ ಆತನೂ ಒಂದು ಸ್ವಚ್ಛವಾದ ಕನ್ನಡಿ. ಆತನೆದುರು ಮತ್ತೊಂದು ಕನ್ನಡಿ ನಿಂತರೆ ಉಂಟಾಗುವುದು ಕೊನೆಯಿಲ್ಲದ ಅನಂತ ಪ್ರತಿಬಿಂಬಗಳು(reflections). ಬಿಂಬಕ್ಕೊಂದು ಪ್ರತಿಬಿಂಬ ಅದಕ್ಕೊಂದು ಪ್ರತಿಬಿಂಬ ಹೀಗೆ ಅಸಂಖ್ಯವಾದ, ನಿಲುಕಿಗೆ ಸಿಗದಷ್ಟು ಬಿಂಬಗಳು ಇಬ್ಬರೊಳಗೂ ಪ್ರತಿಧ್ವನಿಸುತ್ತವೆ. ಅದು ನಿಜವಾದ ಗ್ರಹಿಕೆಯ ಸ್ವರೂಪ. ಒಂದು ವೇಳೆ ನಮಗೆ ಸ್ವಚ್ಛ ಕನ್ನಡಿಯಾಗಲು ಸಾಧ್ಯವಾಗದಿದ್ದರೆ, ನಮ್ಮ ಪ್ರಜ್ಞೆಯ ಮೇಲೆ ಕಲೆಗಳು, ಕೊಳೆ, ಮಲಿನತೆ ಇದ್ದರೆ ನಾವು ಆತನನ್ನು ಸರಿಯಾಗಿ ಪ್ರತಿಬಿಂಬಿಸಲು ಸಾಧ್ಯವಾಗುವುದಿಲ್ಲ. ಆದರೆ ಆತ ಮಾತ್ರ ನಮ್ಮೆಲ್ಲಾ ಮಲಿನತೆ, ದೋಷ, ವಕ್ರತೆಗಳನ್ನು ಯಾವ ಮೋಹವೂ ಇಲ್ಲದೆ ಕಣ್ಣಿಗೆ ರಾಚುವಂತೆ ತೋರಿಬಿಡಬಲ್ಲ. ಅದರಿಂದಾಗಿ ನಾವು ಭಯಭೀತರಾಗುತ್ತೇವೆ. ಆತನೊಂದಿಗೆ ಮುಖಾಮುಖಿಯಾಗಲು ಹಿಂದೇಟು ಹಾಕುತ್ತೇವೆ!
ಸ್ಥಾಪಿತ ಧರ್ಮಗಳನ್ನೆಲ್ಲಾ ವಿರೋಧಿಸುವ, ಧರ್ಮ ಮನುಷ್ಯರಲ್ಲಿ ಕೀಳರಿಮೆಯನ್ನು ಬೆಳೆಸುವ ವ್ಯವಸ್ಥಿತ್ತ ಯೋಜನೆಗಳು ಎಂದು ವಾದಿಸುವ ಓಶೋ ಪ್ರತಿಯೊಬ್ಬ ಮನುಷ್ಯನೂ ತನ್ನ ಧರ್ಮವನ್ನು ತಾನೇ ಕಂಡುಕೊಳ್ಳಬೇಕು ಎಂದು ಪ್ರತಿಪಾದಿಸಿದವನು. ಹೊರಗಿನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ, ಎಲ್ಲವೂ ನಮ್ಮೊಳಗಿನಿಂದಲೇ ಬರಬೇಕು. ಉತ್ತಮ ಕ್ರೈಸ್ತನಾಗುವುದು, ಒಳ್ಳೆಯ ಮುಸ್ಲಿಮನಾಗುವುದು, ಶ್ರೇಷ್ಠ ಬೌದ್ಧನಾಗುವುದು ಮನುಷ್ಯನ ಜನ್ಮದ ಉದ್ದೇಶವಲ್ಲ. ಇರುವ ಒಂದು ಜನ್ಮವನ್ನು ಬೇರಾರದೋ ಆದರ್ಶವನ್ನು ಬೆನ್ನಟ್ಟುವಲ್ಲಿ ಕಳೆದುಕೊಳ್ಳುವುದು ಮೂರ್ಖತನ. ಬುದ್ಧ ಕಂಡುಕೊಂಡ ಸತ್ಯವನ್ನು ತಿಳಿದುಕೊಳ್ಳಲು ಇಡೀ ಜೀವನವನ್ನು ಮುಡಿಪಾಗಿರಿಸಿದ ಪಂಡಿತ ಆ ಸಮಯದಲ್ಲಿ ತಾನೇ ಬುದ್ಧನಾಗಬಹುದು ಎಂಬುದನ್ನು ಮರೆಯುತ್ತಾನೆ ಎನ್ನುವ ಓಶೋ ಪ್ರಕಾರ ಬೌದ್ಧ ಧರ್ಮೀಯನಾಗುವ ಬದಲು ಬುದ್ಧನೇ ಆಗಬೇಕು. ಕ್ರೈಸ್ತನಾಗುವ ಹಂಬಲದ ಜಾಗದಲ್ಲಿ ಕ್ರಿಸ್ತನೇ ಆಗುವ ಅವಕಾಶವನ್ನು ಕಂಡುಕೊಳ್ಳಬೇಕು. ಹಾಗೆ ನೋಡಿದರೆ ಓಶೋನ ವಿಚಾರಗಳನ್ನು ತಿಳಿಯುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಸದಾ ಎಚ್ಚರವಾಗಿ ಗಮನಿಸುತ್ತಿರಬೇಕು. ಏಕೆಂದರೆ ಒಂದು ಹಂತದಲ್ಲಿ ನಾವು ಓಶೋನ ‘ಧರ್ಮೀಯ’ರಾಗಿಬಿಡುವ ಅಪಾಯವಿದೆ! ಸಿದ್ಧ ಉತ್ತರಗಳನ್ನು, ನಂಬಿಕೆಗಳನ್ನು ಕೊಡುವ ಪ್ರತಿಯೊಬ್ಬರೂ ನಿಮ್ಮ ಶತ್ರುಗಳೆಂದು ತಿಳಿಯಿರಿ ಎಂದ ಓಶೋ. ನಾವು ಆತ ಹೇಳಿದ ಪ್ರತಿಯೊಂದನ್ನೂ ನಂಬುತ್ತಾ ಹೋದರೆ ಆತನನ್ನೇ ನಮ್ಮ ಶತ್ರುವನ್ನಾಗಿಸಿಕೊಳ್ಳುವ ಆಪತ್ತು ಎದುರಾಗುತ್ತದೆ! ಸದಾ ಎಚ್ಚರಾಗಿರುವುದಷ್ಟೇ ನಾವು ಮಾಡಬಹುದಾದ ಕೆಲಸ!
Comments»
No comments yet — be the first.