ಸಂಭೋಗದಿಂದ ಸಮಾಧಿಯೆಡೆಗೆ – ಪ್ರೀತಿಯೆಂದರೇನು? (ಭಾಗ ೧) January 23, 2010
Posted by uniquesupri in ಸಂಭೋಗದಿಂದ ಸಮಾಧಿಯೆಡೆಗೆ.Tags: ಓಶೋ, ಓಶೋ ರಜನೀಶ್, ಪ್ರೀತಿ ಎಂದರೇನು, ಸಂಭೋಗದಿಂದ ಸಮಾಧಿಯೆಡೆಗೆ, sex to superconciousness
2 comments
(ರಜನೀಶರ ಅತಿ ಜನಪ್ರಿಯವಾದ ಉಪನ್ಯಾಸ ಮಾಲಿಕೆಯಾದ ‘ಸಂಭೋಗದಿಂದ ಸಮಾಧಿಯೆಡೆಗೆ’ ಪುಸ್ತಕವಾಗಿ ಪ್ರಕಟಗೊಂಡು ಹೆಸರು ಮಾಡಿತ್ತು. ಸೆಕ್ಸ್ ಗುರು ಎಂಬ ಅಪಖ್ಯಾತಿಗೆ ಒಳಗಾದ ರಜನೀಶ್ ಸೆಕ್ಸ್ ಹಾಗೂ ಪ್ರೀತಿಯ ಬಗ್ಗೆ ಹೊಂದಿದ್ದ ಆಳವಾದ ತಿಳುವಳಿಕೆ ಈ ಉಪನ್ಯಾಸಗಳಲ್ಲಿ ಕಾಣುತ್ತದೆ.)
ಪ್ರೀತಿಯನ್ನನುಭವಿಸುವುದು ಸುಲಭ, ವ್ಯಾಖ್ಯಾನಿಸುವುದು ನಿಜಕ್ಕೂ ಕಷ್ಟ. ಮೀನಿಗೆ ಸಮುದ್ರ ಎಂದರೇನೆಂದು ವ್ಯಾಖ್ಯಾನಿಸಲು ಹೇಳಿ, ಅದು “ಇದೇ ಸಮುದ್ರ. ಸುತ್ತಲು ಇರುವುದೆಲ್ಲಾ ಸಮುದ್ರ. ಅಷ್ಟೇ” ಎಂದು ಸುಮ್ಮನಾಗುತ್ತದೆ. ಸಮುದ್ರವನ್ನು ವ್ಯಾಖ್ಯಾನಿಸು ಎಂದು ಒತ್ತಾಯಿಸಿದರೆ ಸಮಸ್ಯೆ ಕಠಿಣವಾಗುತ್ತದೆ. ಜೀವನದ ಅತಿ ಸುಂದರವಾದ ಸಂಗತಿಗಳನ್ನು ಅನುಭವಿಸಬಹುದು, ಅರಿಯಬಹುದು ಆದರೆ ಅವನ್ನು ವಿವರಿಸುವುದು, ವ್ಯಾಖ್ಯಾನಿಸುವುದು ತೀರಾ ಕಷ್ಟ.
ದುರಂತ ಏನೆಂದರೆ ಮನುಷ್ಯ ಕಳೆದ ನಾಲ್ಕೈದು ಸಾವಿರ ವರ್ಷಗಳಲ್ಲಿ ತಾನು ಆಸ್ಥೆಯಿಂದ ಅನುಭವಿಸಬೇಕಾದ, ಒಳಗಿನಿಂದ ಕಂಡುಕೊಳ್ಳಬೇಕಾದ ಪ್ರೀತಿಯ ಬಗ್ಗೆ ಬರಿದೇ ಮಾತನಾಡಿ ಕಾಲ ತಳ್ಳಿದ್ದಾನೆ. ಪ್ರೀತಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಲಾಗಿದೆ, ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಲಾಗಿದೆ, ದೇವಸ್ಥಾನಗಳಲ್ಲಿ, ಚರ್ಚುಗಳಲ್ಲಿ ಭಕ್ತಿ ಮಂತ್ರಗಳನ್ನು ನಿರಂತರವಾಗಿ ಪಠಿಸಲಾಗುತ್ತಿದೆ – ಪ್ರೀತಿಯ ಹೆಸರಲ್ಲಿ ಮಾಡದಿರುವ ಕೆಲಸವಾದರೂ ಏನಿದೆ? ಆದರೂ ಮನುಷ್ಯನ ಬದುಕಿನಲ್ಲಿ ಇಂದಿಗೂ ಪ್ರೀತಿಗೆ ಜಾಗವಿಲ್ಲ. ಮಾನವ ಕುಲದ ಶಬ್ಧಭಂಡಾರದ ಆಳಕ್ಕೆ ಶೋಧಿಸಿದರೆ ಪ್ರೀತಿಗಿಂದ ಹುಸಿಯಾದ ಇನ್ನೊಂದು ಪದ ದೊರಕದು.
ಎಲ್ಲಾ ಧರ್ಮಗಳು ಪ್ರೀತಿಯನ್ನು ಬೋಧಿಸುತ್ತವೆ. ಆದರೆ ಎಲ್ಲೆಡೆಯೂ ಇರುವಂಥ ಪ್ರೀತಿ ಎಂಥದ್ದು? ವಂಶಪಾರ್ಯವಾಗಿ ಬಂದ ದೌರ್ಭಾಗ್ಯದ ಹಾಗಿರುವ ಹುಸಿ ಪ್ರೀತಿ ಮನುಷ್ಯನ ಜೀವನದಲ್ಲಿರಬಹುದಾದ ಉಳಿದೆಲ್ಲಾ ಪ್ರೀತಿಗೆ ಅಡ್ಡಿಯಾಗಿದೆ. ಆದರೆ ಜನರು ಈ ಧಾರ್ಮಿಕ ಮುಖಂಡರನ್ನು ಪ್ರೀತಿಯನ್ನು ಹರಡುವವರು ಎಂದು ಪೂಜಿಸುತ್ತಾರೆ. ವಾಸ್ತವವಾಗಿ ಅವರು ಪ್ರೀತಿಯನ್ನು ಹುಸಿಯಾಗಿಸಿದ್ದಾರೆ. ಪ್ರೀತಿಯ ಎಲ್ಲಾ ಕಾಲುವೆಗಳನ್ನು ಬತ್ತಿಸಿದ್ದಾರೆ. ಇದರಲ್ಲಿ ಪೂರ್ವ ಪಶ್ಚಿಮಗಳೆಂಬ, ಭಾರತ-ಅಮೇರಿಕಾಗಳೆಂಬ ವ್ಯತ್ಯಾಸವಿಲ್ಲ.
ಮನುಷನಲ್ಲಿನ್ನೂ ಪ್ರೀತಿಯ ಹರಿವು ಕಾಣಿಸಿಕೊಂಡಿಲ್ಲ. ಇದಕ್ಕೆ ನಾವು ಮನುಷ್ಯನಿಗೇ ದೋಷವನ್ನು ಆರೋಪಿಸುತ್ತೇವೆ. ಮನುಷ್ಯ ಕೆಟ್ಟು ಹೋಗಿರುವುದಕ್ಕೇ ಆತನಲ್ಲಿ ಪ್ರೀತಿ ಅರಳುತ್ತಿಲ್ಲ. ಆತನ ಜೀವನದಲ್ಲಿ ಪ್ರೀತಿಯ ಒರತೆ ಚಿಮ್ಮುವುದಿಲ್ಲ ಎನ್ನುತ್ತೇವೆ. ಆತನ ಮನಸ್ಸು ವಿಷಯುಕ್ತವಾಗಿದೆ ಎಂದು ದೂಷಿಸುತ್ತೇವೆ. ಮನಸ್ಸು ವಿಷಯುಕ್ತವಲ್ಲ. ದೇವರ ಈ ಸೃಷ್ಟಿಯಲ್ಲಿ ಯಾವುದೂ ವಿಷಯುಕ್ತವಲ್ಲ. ಎಲ್ಲವೂ ಸಿಹಿಯಾದ ಮಕರಂದವೇ. ಈ ಮಕರಂದದ ಬಟ್ಟಲನ್ನು ವಿಷವಾಗಿ ಪರಿವರ್ತಿಸಿಕೊಂಡವನು ಮನುಷ್ಯನೇ. ಈ ಕೃತ್ಯದಲ್ಲಿ ಮುಖ್ಯ ಅಪರಾಧಿಗಳು ಶಿಕ್ಷಕರೆಂದು ಕರೆಯಲ್ಪಡುವವರು, ಮಹಾತ್ಮರು, ಸಂತರೆಂದು ಕರೆಸಿಕೊಳ್ಳುವವರು ಹಾಗೂ ರಾಜಕಾರಣಿಗಳು.
ಈ ಅಂಶವನ್ನು ವಿವರವಾಗಿ ಧ್ಯಾನಿಸಿ. ಈ ರೋಗವನ್ನು ತುರ್ತಾಗಿ ಗುರುತಿಸಿ ನಿವಾರಿಸದಿದ್ದರೆ ಮುಂದೆಂದೂ ಮನುಷ್ಯನ ಬದುಕಿನಲ್ಲಿ ಪ್ರೀತಿಯನ್ನು ಕಾಣುವುದಕ್ಕೆ ಸಾಧ್ಯವಿಲ್ಲ.
ಜಗತ್ತಿನಲ್ಲಿ ಪ್ರೀತಿಯು ಅರಳದಿರುವುದಕ್ಕೆ ಮನುಷ್ಯನೇ ಕಾರಣ ಎನ್ನುವುದನ್ನು ನಾವು ಕುರುಡಾಗಿ ನಂಬಿದ್ದೇವೆ. ಈ ನಮ್ಮ ಕುರುಡು ನಂಬಿಕೆಗೆ ನಾವು ಆಧಾರವಾಗಿ ಬಳಸುವ ಮೂಲಗಳೇ ನಿಜವಾದ ಅಪರಾಧಿಗಳು. ದಾರಿತಪ್ಪಿಸುವ ತತ್ವಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ, ಶತಮಾನಗಳ ನಂತರ ಈ ತತ್ವಗಳ ಹಿಂದಿರುವ ಕುತರ್ಕವನ್ನು ಗುರುತಿಸುವುದಕ್ಕೆ ನಾವು ವಿಫಲರಾಗುತ್ತೇವೆ. ಆಗ ಗೊಂದಲ ಸೃಷ್ಟಿಯಾಗುತ್ತದೆ. ಈ ತತ್ವಗಳು ಅಸಹಜವಾದ, ನೈಸರ್ಗಿಕವಲ್ಲದ ಬದುಕನ್ನು ಬೋಧಿಸುತ್ತವೆ. ಮನುಷ್ಯನಿಗೆ ಎಂದಿಗೂ ಆ ರೀತಿ ಬದುಕಲು ಸಾಧ್ಯವಾಗುವುದಿಲ್ಲ. ಆಗ ಸುಲಭವಾಗಿ ನಾವು ಮನುಷ್ಯನಲ್ಲೇ ದೋಷವಿರಬೇಕು ಎನ್ನುವ ತೀರ್ಮಾನಕ್ಕೆ ಬರುತ್ತೇವೆ.
ಒಂದಾನೊಂದು ಕಾಲದಲ್ಲಿ ಒಬ್ಬ ಬೀಸಣಿಗೆ ಮಾರುವವನಿದ್ದ. ಪ್ರತಿದಿನ ಆತ ರಾಜನ ಅರಮನೆಯ ಮುಂದೆ ಹಾದುಹೋಗುತ್ತಿದ್ದ. ತನ್ನ ಬೀಸಣಿಗೆಗಳು ವಿಶಿಷ್ಟವಾದವು, ಅಪರೂಪವಾದವು. ಇಂತಹ ಬೀಸಣಿಗೆಗಳನ್ನು ಯಾರೂ ಎಲ್ಲೂ ಕಂಡಿರಲು ಸಾಧ್ಯವಿಲ್ಲ ಎಂದು ಕೊಚ್ಚಿಕೊಳ್ಳುತ್ತಿದ್ದ. ಅರಮನೆಯಲ್ಲಿದ್ದ ರಾಜನಿಗೆ ಈ ಬೀಸಣಿಗೆಯವನಲ್ಲಿ ಆಸಕ್ತಿ ಮೂಡಿತ್ತು. ಎಲ್ಲಾ ಬಗೆಯ ಅಪರೂಪದ, ಬೆಲೆಬಾಳುವ ಬೀಸಣಿಗೆಗಳನ್ನು ಆತ ಜಗತ್ತಿನ ಮೂಲೆ ಮೂಲೆಗಳಿಂದ ಸಂಗ್ರಹಿಸಿದ್ದ. ಒಮ್ಮೆ ಆತ ಅರಮನೆಯ ಮೇಲ್ಛಾವಣಿಯಿಂದ ಬಗ್ಗಿ ಈ ವಿಶಿಷ್ಟ ಬೀಸಣಿಕೆಳನ್ನು ನೋಡಿದ. ಅವುಗಳು ಸಾದಾ ಬೀಸಣಿಗೆಗಳಂತೆ ಕಂಡವು. ಮಾರುವವನನ್ನು ಒಳಕ್ಕೆ ಕರೆಸಿಕೊಂಡು ರಾಜ ಕೇಳಿದ, “ಆ ಬೀಸಣಿಗೆಗಳ ವಿಶಿಷ್ಟತೆಯೇನು? ಏನು ಅವುಗಳ ಬೆಲೆ?”
ವ್ಯಾಪಾರಿ ಹೇಳಿದ, “ಮಹಾಪ್ರಭೂ, ದುಬಾರಿಯೇನಲ್ಲ. ಇವುಗಳ ಗುಣಮಟ್ಟಕ್ಕೆ ಹೋಲಿಸಿದರೆ ಬೆಲೆ ಕಡಿಮೆಯೇ. ಬರೀ ನೂರು ರುಪಾಯಿ.”
ರಾಜನಿಗೆ ಆಶ್ಚರ್ಯವಾಯಿತು. “ನೂರು ರುಪಾಯಿಯಾ? ಇದು ನಯಾಪೈಸೆಯ ಬೀಸಣಿಗೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಸಿಕ್ಕುತ್ತೆ. ಇದಕ್ಕೆ ನೀನು ನೂರು ರುಪಾಯಿ ಹೇಳುವೆಯಾ? ಏನು ವಿಶೇಷತೆ ಇದೆ ಇವುಗಳಲ್ಲಿ?”
“ಗುಣಮಟ್ಟ! ಪ್ರತಿಯೊಂದು ಬೀಸಣಿಗೆಯೂ ನೂರು ವರ್ಷಗಳ ಕಾಲ ಬಾಳಿಕೆ ಬರುತ್ತವೆ.” ವ್ಯಾಪಾರಿ ಉತ್ತರಿಸಿದ.
“ಇವನ್ನು ನೋಡಿದರೆ ಒಂದು ವಾರವೂ ಬಾಳಿಕೆ ಬರುವಂತಿಲ್ಲ. ನನಗೇನು ಮೋಸ ಮಾಡುತ್ತಿರುವೆಯಾ? ರಾಜನೊಂದಿಗೇ ಮೋಸದಾಟ ಆಡುವೆಯಾ?” ರಾಜ ಗುಡುಗಿದ.
“ನನ್ನೊಡೆಯ, ಆ ಧೈರ್ಯ ನಾನು ಮಾಡಬಲ್ಲೆನೆ? ನಾನು ಪ್ರತಿದಿನ ಬೀಸಣಿಗೆ ಮಾರಲು ನಿಮ್ಮರಮನೆಯ ಬಳಿಯೇ ನಡೆದು ಹೋಗುವೆನು. ಬೀಸಣಿಗೆ ಬೆಲೆ ನೂರು ರುಪಾಯಿ, ನೂರು ವರ್ಷ ಇದು ಬಾಳಿಕೆ ಬಾರದಿದ್ದರೆ ನಾನು ಹೊಣೆ. ನಾನು ಬೀದಿಯಲ್ಲೇ ಸಿಕ್ಕುವೆ. ಮೇಲಾಗಿ ನೀವು ಈ ರಾಜ್ಯದ ಒಡೆಯರು ನಿಮ್ಮಿಂದ ತಲೆತಪ್ಪಿಸಿಕೊಂಡು ಬಾಳಲು ಸಾಧ್ಯವೇ?” ವ್ಯಾಪಾರಿ ವಿನಯದಿಂದ ಉತ್ತರಿಸಿದ.
ಆತ ಹೇಳಿದ ಬೆಲೆ ಕೊಟ್ಟು ರಾಜ ಬೀಸಣಿಗೆಯನ್ನು ಖರೀದಿಸಿದ. ವ್ಯಾಪಾರಿಯ ಮಾತಿನಲ್ಲಿ ನಂಬಿಕೆಯಿರದಿದ್ದರೂ ರಾಜನಿಗೆ ಆ ಬೀಸಣಿಗೆಯನ್ನು ಪರೀಕ್ಷಿಸುವ ಕುತೂಹಲವಿತ್ತು. ಯಾವ ಆಧಾರದ ಮೇಲೆ ಈತ ಹೀಗೆ ಭರವಸೆ ನೀಡಬಲ್ಲ ಎಂದು ತಿಳಿಯಬೇಕೆನಿಸಿತ್ತು. ವ್ಯಾಪಾರಿಗೆ ಒಂದು ವಾರ ಕಳೆದು ಬಂದು ನೋಡಲು ತಿಳಿಸಲಾಯ್ತು.
ಮೂರೇ ದಿನದಲ್ಲಿ ಬೀಸಣಿಗೆಯ ಕೇಂದ್ರದಲ್ಲಿದ್ದ ಕಡ್ಡಿ ಮುರಿದುಹೋಯ್ತು. ವಾರ ಕಳೆಯುವಷ್ಟರಲ್ಲಿ ಬೀಸಣಿಗೆ ಸಂಪೂರ್ಣ ಜೀರ್ಣವಾಯ್ತು. ಇನ್ನು ಆ ವ್ಯಾಪಾರಿ ಇತ್ತ ತಲೆ ಹಾಕುವುದಿಲ್ಲ ಎಂದು ರಾಜನಿಗೆ ಖಾತರಿಯಾಯ್ತು. ಆದರೆ ಆತನ ಅಚ್ಚರಿಯಾಗುವಂತೆ ಏಳು ದಿನ ಕಳೆದ ನಂತರ ವ್ಯಾಪಾರಿ ಏನೂ ನಡೆದೇ ಇಲ್ಲ ಎಂಬಂತೆ ಅರಮನೆಗೆ ಬಂದ.
ಆತನನ್ನು ಕಂಡು ರಾಜನಿಗೆ ಕೋಪವೇರಿತು. “ನೀಚ! ಮೂರ್ಖ! ನೋಡಿಲ್ಲಿ ನೀನು ಕೊಟ್ಟ ಬೀಸಣಿಗೆಗೆ ನಾಲ್ಕೇ ದಿನದಲ್ಲಿ ಯಾವ ಪಾಡು ಬಂದಿದೆ. ಇದು ನೂರು ವರ್ಷ ಬಾಳಿಕೆ ಬರುತ್ತೆ ಎಂದಿದ್ದೆಯಲ್ಲ, ನೀನೇನು ಹುಚ್ಚನೋ ಇಲ್ಲ ಮಹಾಮೋಸಗಾರನೋ?”
ವ್ಯಾಪಾರಿ ದೈನ್ಯದಿಂದ ಉತ್ತರಿಸಿದ, “ಮನ್ನಿಸಬೇಕು. ಪ್ರಭುಗಳಿಗೆ ಈ ಬೀಸಣಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಸರಿಯಾಗಿ ಬಳಸಿದ್ದರೆ ಇದು ನೂರು ವರ್ಷ ಬಾಳಿಕೆ ಬಂದೇ ಬರುವುದು.”
“ಅಬ್ಬ! ಬೀಸಣಿಗೆ ಬಳಸುವುದು ಹೇಗೆಂದೂ ನಾನು ಕಲಿಯಬೇಕಾ?” ಕೋಪದಿಂದ ಪ್ರಶ್ನಿಸಿದ ರಾಜ.
“ದಯವಿಟ್ಟು ಕೋಪಮಾಡಿಕೊಳ್ಳಬೇಡಿ. ನನ್ನ ಬೀಸಣಿಗೆಗೆ ಈ ದುಸ್ಥಿತಿಗೆ ಹೇಗೆ ಬಂದಿತು? ನೀವದನ್ನು ಹೇಗೆ ಬಳಸಿದಿರಿ?”
ರಾಜ ಬೀಸಣಿಗೆಯನ್ನೆತ್ತಿಕೊಂಡು ಹಿಂದಕ್ಕೆ ಮುಂದಕ್ಕೆ ಸಾಮಾನ್ಯವಾಗಿ ಬೀಸುವಂತೆ ಬೀಸುತ್ತ ತೋರಿಸಿದ.
“ಈಗ ನನಗೆ ಅರ್ಥವಾಯ್ತು. ನೀವು ಹೀಗೆ ಬೀಸಬಾರದು.” ವ್ಯಾಪಾರಿ ಹೇಳಿದ.
“ಏನು? ಬೇರೆ ಹೇಗೆ ಬೀಸುವುದು?” ರಾಜ ಕೇಳಿದ.
ವ್ಯಾಪಾರಿ ವಿವರಿಸಿದ, “ಬೀಸಣಿಗೆಯನ್ನು ಅಲುಗದಂತೆ ಮುಖದ ಮುಂದೆ ಹಿಡಿದುಕೊಂಡು ತಲೆಯನ್ನು ಎಡಕ್ಕೂ ಬಲಕ್ಕೂ ತಿರುಗಿಸಬೇಕು. ಹೀಗೆ ಬಳಸಿದರೆ ಬೀಸಣಿಗೆ ನೂರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ನೀವು ಗತಿಸಿಹೋಗಬಹುದು ಆದರೆ ಬೀಸಣಿಗೆ ಇದ್ದ ಹಾಗೇ ಇರುತ್ತೆ. ನನ್ನ ಬೀಸಣಿಗೆಯಲ್ಲಿ ಯಾವ ದೋಷವೂ ಇಲ್ಲ, ದೋಷವಿರುವುದು ಅದನ್ನು ಬಳಸುವ ರೀತಿಯಲ್ಲಿ.”
ಮಾನವ ಕುಲಕ್ಕೆ ಇಂಥದ್ದೇ ದೋಷವನ್ನು ಆರೋಪಿಸಲಾಗಿದೆ. ಸಾವಿರಾರು ವರ್ಷಗಳಿಂದ ಒಟ್ಟು ಸೇರುತ್ತಿರುವ ರೋಗದಿಂದ ಮನುಕುಲ ನರಳುತ್ತಿದೆ. ಇದಕ್ಕೆ ಕಾರಣ ಮನುಷ್ಯನೇ ಹೊರತು ಸಂಸ್ಕೃತಿಯಲ್ಲ ಎಂದು ಮತ್ತೆ ಮತ್ತೆ ಹೇಳಲಾಗುತ್ತಿದೆ. ಮನುಷ್ಯ ಕೊಳೆಯುತ್ತಿದ್ದಾನೆ, ಆದರೂ ಪರಂಪರೆಯನ್ನು ಕೊಂಡಾಡಲಾಗುತ್ತದೆ. ನಮ್ಮ ಶ್ರೇಷ್ಠ ಪರಂಪರೆ! ನಮ್ಮ ಮತ!
“ಮನುಷ್ಯನಲ್ಲಿ ತಪ್ಪಿದೆ, ಆತ ಬದಲಾಗಬೇಕು” ಎನ್ನಲಾಗುತ್ತದೆ. ಆದರೂ ಯಾರೊಬ್ಬರೂ ಎದ್ದು ನಿಂತು ಇದನ್ನು ಪ್ರಶ್ನಿಸುವುದಿಲ್ಲ. ಮನುಷ್ಯನಲ್ಲಿ ಪ್ರೀತಿಯನ್ನು ಅರಳಿಸುವುದಕ್ಕೆ ವಿಫಲವಾದ ಸಂಸ್ಕೃತಿ ಹಾಗೂ ಮತಗಳು ಹುಸಿ ಮೌಲ್ಯಗಳ ಮೇಲೆ ನಿಂತಿವೆ ಎಂದು ತೋರಿಸಿಕೊಡುವುದಿಲ್ಲ. ಈ ಸಾವಿರ ವರ್ಷಗಳಲ್ಲಿ ಪ್ರೀತಿ ಅರಳಿಲ್ಲವೆಂದರೆ, ನಾನು ಹೇಳುವೆ – ಇವೇ ಸಂಸ್ಕೃತಿ, ಮತಗಳು ಇದ್ದರೆ- ಇನ್ನು ಸಾವಿರ ವರ್ಷ ಕಳೆದರೂ ಪ್ರೀತಿ ತುಂಬಿದ ಮನುಷ್ಯನನ್ನು ಕಾಣಲಿಕ್ಕೆ ಸಾಧ್ಯವಿಲ್ಲ. ಇವತ್ತಿನ ಮನುಷ್ಯನೇ ನಾಳೆಯೂ ಇರುತ್ತಾನೆ. ಶಿಷ್ಟಾಚಾರ, ನಾಗರೀಕತೆ, ತಂತ್ರಜ್ಞಾನಗಳೆಂಬ ಆತನ ಹೊರಕವಚಗಳು ಸಮಯ ಕಳೆದಂತೆ ಬದಲಾಗುತ್ತವೆಯೇ ಹೊರತು ಒಳಗೆ ಆತ ಹಾಗೆಯೇ ಉಳಿದಿರುತ್ತಾನೆ.
ನಾವು ನಮ್ಮ ಸಂಸ್ಕೃತಿ, ಮತಗಳನ್ನು ವಿಮರ್ಶಿಸಿಕೊಳ್ಳಲು ಸಿದ್ಧರಿಲ್ಲ, ಆದರೂ ಅವುಗಳನ್ನು ಎದೆತುಂಬ ಹಾಡಿಹೊಗಳುತ್ತೇವೆ. ಅವುಗಳ ಪಾಲಕರ, ಸಂತರ ಕಾಲುಗಳಿಗೆ ಮುತ್ತಿಕ್ಕುತ್ತೇವೆ. ನಮ್ಮ ಆಲೋಚನಾ ವಿಧಾನವನ್ನು, ಮನುಕುಲ ನಡೆದು ಬಂದ ದಾರಿಯನ್ನು ಅವಲೋಕಿಸಿ ಅವರು ನಮ್ಮನ್ನು ದಾರಿತಪ್ಪಿಸುತ್ತಿರಬಹುದು, ಅವರು ಹೇಳುವುದೆಲ್ಲ ತಪ್ಪಿರಬಹುದು ಎಂದು ಪರೀಕ್ಷಿಸುವ ಗೋಜಿಗೇ ನಾವು ಹೋಗುವುದಿಲ್ಲ.
ಮೂಲದಲ್ಲಿರುವ ತತ್ವಗಳು ದೋಷಯುಕ್ತವಾಗಿವೆ ಹಾಗೂ ಹುಸಿ ಮೌಲ್ಯಗಳಿಂದ ಕೂಡಿವೆ ಎಂದು ನಾನು ಹೇಳುವೆ. ಈ ಮಾತಿಗೆ ಇಂದಿನ ಮನುಷ್ಯನಿಗಿಂತ ಬೇರೆ ಸಾಕ್ಷಿ ಬೇಕೆ?
(ಸಶೇಷ)
ಗುರುವಿನೊಂದಿಗಿರಲು ಗುಂಡಿಗೆ ಬೇಕು! January 16, 2010
Posted by uniquesupri in ಓಶೋ ಹೇಳಿದ್ದು.Tags: ಓಶೋ ರಜನೀಶ್, ಗುರು, ಬುದ್ಧ, ಯೇಸು, ಶಿಕ್ಷಕ, ಸಾಕ್ರೆಟಿಸ್, Osho
1 comment so far
ಜೆನ್,ಜೆಸ್ಟ್,ಜಿಪ್,ಜ್ಯಾಪ್ ಅಂಡ್ ಜಿಂಗ್ ಉಪನ್ಯಾಸಮಾಲಿಕೆಯ ಏಳನೆಯ ಉಪನ್ಯಾಸದ ಸಂಗ್ರಹಾನುವಾದ.
ನೂರು ಮಂದಿ ಗುರುಗಳು ಎನ್ನಿಸಿಕೊಂಡವರಲ್ಲಿ ಒಬ್ಬನು ಮಾತ್ರ ಗುರು, ಉಳಿದ ತೊಂಬತ್ತೊಂಬತ್ತು ಮಂದಿ ಶಿಕ್ಷಕರಾಗಿರುತ್ತಾರೆ. ಶಿಕ್ಷಕನು ಆವಶ್ಯಕವಾಗಿ ಹೆಚ್ಚು ಓದಿದವನಾಗಿರುತ್ತಾನೆ. ಗುರುವಿಗೆ ಓದು ಅವಶ್ಯಕವಲ್ಲ. ಶಿಕ್ಷಕ ಸಂಪ್ರದಾಯ, ಕಟ್ಟಳೆ, ಸಮಾಜದ ರೀತಿ ನೀತಿ, ಶಾಸ್ತ್ರ-ಸಂಹಿತೆಗಳನ್ನು ಅರೆದು ಕುಡಿದಿರುತ್ತಾನೆ. ಆತನದು ಎರವಲು ಜೀವನ. ಎರವಲು ಪಡೆದ ಯಾವ ಸಂಗತಿಗಳೂ ಜೀವನವನ್ನು ಹಗುರವಾಗಿಸುವುದಿಲ್ಲ. ಸ್ವಂತಿಕೆಯಿಲ್ಲದ ವ್ಯಕ್ತಿ ಭಾರವಾಗಿ, ಸಪ್ಪೆಯಾಗಿ, ಶುಷ್ಕವಾಗಿ, ಸತ್ತವನಂತೆ ಇರುತ್ತಾನೆ. ಗುರು ಬಂಡುಕೋರ . ಆತ ತನ್ನ ಸ್ವಂತಿಕೆಯಿಂದ ಬದುಕುತ್ತಾನೆ. ಆತ ಅಪ್ರಯತ್ನ ಪೂರ್ವಕವಾಗಿ, ಸಹಜವಾಗಿರುತ್ತಾನೆ, ಸಾಂಪ್ರದಾಯಿಕವಾಗಿ ಅಲ್ಲ. ಸಾಂಪ್ರದಾಯಿಕವಾಗಿರುವುದು ಗುರುವಿಗೆ ಅಸಾಧ್ಯ. ಯೇಸು ಹುಟ್ಟಿನಿಂದ ಯಹೂದಿ ಆದರೆ ಆತ ಯಹೂದಿಯಲ್ಲ, ಬುದ್ಧ ಹುಟ್ಟಿನಿಂದ ಹಿಂದು ಆದರೆ ಆತ ಹಿಂದುವಲ್ಲ. ಈ ಮಾತು ಎಲ್ಲಾ ಗುರುಗಳಿಗೂ ಅನ್ವಯಿಸುತ್ತದೆ. ಆದರೆ ಶಿಕ್ಷಕ ಹಾಗಲ್ಲ. ಆತ ಗುರುವಿನ ಅಣಕು ಚಿತ್ರದ ಹಾಗೆ. ಆತ ತಾನು ಗುರು ಎಂಬಂತೆ ನಟಿಸುತ್ತಾನೆ, ಅದು ಆತನ ಅಹಂಕಾರದ ಸುಳಿಯಷ್ಟೇ. ಗುರು ಅಹಂಕಾರರಹಿತನು, ಆತನಲ್ಲಿ ಪ್ರೀತಿಯಲ್ಲದೆ ಬೇರೇನು ಇಲ್ಲ. ಅಹಂಕಾರ ಕೈಬಿಟ್ಟ ತಕ್ಷಣ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಪ್ರೀತಿ, ಅನುಕಂಪ ಹಾಗೂ ಮಧುರತೆಗಳು ಆವರಿಸಿಕೊಳ್ಳುತ್ತವೆ. ಅದು ಶುದ್ಧ ಸಂಭ್ರಮ. ಅದೊಂದು ದೀಪಗಳ ಹಬ್ಬ, ಒಂದು ಹಾಡು, ಒಂದು ಕುಣಿತ, ಕಾರಣವಿಲ್ಲದ ಸಂಭ್ರಮ.
ಗುರು ಕಾವ್ಯ ಸಂಗೀತವಿದ್ದಂತೆ. ಶಿಕ್ಷಕನೋ ಗಣಿತ, ಲೆಕ್ಕಾಚಾರಗಳಿದ್ದಂತೆ. ಶಿಕ್ಷಕ ಪದಗಳ ಲೋಕದಲ್ಲಿರುತ್ತಾನೆ, ಗುರು ಪದಗಳಿಗೆ ಮೀರಿ ಜೀವಿಸುತ್ತಿರುತ್ತಾನೆ. ಆದರೆ ನಾವು ಗುರುವನ್ನು ಅರ್ಥಮಾಡಿಕೊಳ್ಳುವ ಭಾಷೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬಿಟ್ಟಿದ್ದೇವೆ. ಏಕೆಂದರೆ ಒಬ್ಬ ಗುರು ಅವತರಿಸುವುದು ತುಂಬಾ ವಿರಳವಾಗಿ.
ಶಿಕ್ಷಕ ಹೆಚ್ಚು ತಿಳಿದುಕೊಂಡಿರುವವನಾಗಿರುತ್ತಾನೆ, ಹೆಚ್ಚು ಅರ್ಥ ಮಾಡಿಕೊಂಡವನಾಗಿರುತ್ತಾನೆ; ಆತ ಈ ನಮ್ಮ ಮೂರ್ಖ ಅಸ್ತಿತ್ವದ ಭಾಗವಾಗಿರುತ್ತಾನೆ. ಆತನೂ ನಿಮ್ಮಂತೇ ಕುರುಡ. ಆದರೆ ಆತ ನಿಮ್ಮ ಭಾಷೆಯನ್ನು ಮಾತನಾಡುತ್ತಾನೆ. ಹೀಗಾಗಿ ಆತ ನಿಮಗೆ ಅರ್ಥವಾಗುತ್ತಾನೆ. ಗುರು ಕುರುಡನಲ್ಲ. ಆತ ಮಾತನಾಡುವುದು ವಿಶಿಷ್ಟವಾದ ಭಾಷೆ. ಹೀಗಾಗಿ ಆತ ಹೊರಗಿನವನಾಗಿ ಕಾಣುತ್ತಾನೆ. ಶಿಕ್ಷಕ ನಿಮ್ಮವನಾಗಿ ಕಾಣುತ್ತಾನೆ. ಆತನೊಂದಿಗೆ ಹೊಂದಿಕೊಳ್ಳುವುದು ನಿಮಗೆ ಸುಲಭ, ಏಕೆಂದರೆ ಆತ ನಿಮ್ಮ ಮಟ್ಟದಲ್ಲಿಯೇ ಇರುತ್ತಾನೆ. ಗುರು ಅನ್ಯಗ್ರಹದವ, ಆತ ಅಪರಿಚಿತ. ಆತ ನಿಮ್ಮೊಳಗೆ ನಿಮ್ಮ ನಡುವೆ ಬಾಳುತ್ತಿದ್ದರೂ ಅತೀತಕ್ಕೆ ಸೇರಿದವ. ಆತನ ಸಂದೇಶ ದೂರದ, ಅತಿ ದೂರದ ಮೂಲದಿಂದ ಬಂದಿರುತ್ತದೆ. ಗ್ರಹಿಸಿಲ್ಲದ, ಗ್ರಹಿಸಲಾಗದುದರ ಪ್ರತಿನಿಧಿಯಾಗಿ ಆತ ಇಲ್ಲಿರುತ್ತಾನಷ್ಟೆ. ಆತ ನಿಮ್ಮ ಶಾಸ್ತ್ರಗಳ ಭಾಷೆ ಮಾತನಾಡುವುದಿಲ್ಲ, ಆತ ತನ್ನದೇ ಸಂವಹನವನ್ನು ರೂಪಿಸಿಕೊಳ್ಳುತ್ತಾನೆ.
ಗುರುವನ್ನು ನೀವು ಹಗೆಯಂತೆ ಕಾಣುವಿರಿ. ಶಿಕ್ಷಕನ ಬಗ್ಗೆ ನಿಮಗೆ ಅನುಕಂಪವಿರುತ್ತದೆ ಆದರೆ ಗುರುವಿನ ಬಗ್ಗೆ ನಿಮಲ್ಲಿ ಆಳವಾದ ಹಗೆತನವಿರುತ್ತದೆ. ಆತನನ್ನು ಕೊಲ್ಲುವುದಕ್ಕೆ, ನಾಶ ಮಾಡುವುದಕ್ಕೆ ಬಯಸುತ್ತೀರಿ. ಏಕಂದರೆ ಆತ ನಿಮ್ಮ ಬದುಕಲ್ಲಿ ಗೊಂದಲವೇಳಿಸುತ್ತಾನೆ. ನಿಮ್ಮ ಭ್ರಮೆಗಳನ್ನು ಛಿದ್ರಗೊಳಿಸುತ್ತಾನೆ, ನೀವು ಈ ಮೊದಲು ನಂಬಿದ ವಿಚಾರಗಳಿಗೆ ಹೊಡೆತಕೊಡುತಾನೆ. ಆತ ನಿಮ್ಮ ಅಡಿಪಾಯಕ್ಕೇ ಆಘಾತ ಉಂಟುಮಾಡುತ್ತಾನೆ – ನೀವು ನಿಂತಿರುವ ನೆಲವನ್ನೇ ತೆಗೆದು ಹಾಕುತ್ತಾನೆ. ಆತ ನಿಮ್ಮ ವಿಚಾರವಂತಿಕೆ, ನಿಮ್ಮ ಸಮಾಧಾನಗಳನ್ನು ನಾಶ ಮಾಡುತ್ತಾನೆ.
ಸಾಮಾನ್ಯವಾಗಿ ಸಮಾಜವು ಎರಡು ಭಾಗಗಳಾಗಿ ವಿಂಗಡಣೆಯಾಗಿದೆ: ‘ತಲೆ’ಗಳು ಹಾಗೂ ‘ಕೈ’ಗಳು. ನಾವು ಜನರನ್ನು ವಿಂಗಡಿಸಿರುವುದು ಹೀಗೆಯೇ: ಕಾರ್ಮಿಕರು ಹಾಗೂ ಮೇಲ್ವಿಚಾರಕರು. ಇದು ಕಾಕತಾಳೀಯವಲ್ಲ, ಅತಿ ಪ್ರಮುಖವಾದ ಸಂಗತಿ. ತಲೆ ಕೈಗಳನ್ನು ಆಳುತ್ತದೆ. ಆದರೆ ಇಲ್ಲಿ ಮೂರನೆಯ ವಿಂಗಡಣೆ ಇಲ್ಲವೇ ಇಲ್ಲ. – ‘ಹೃದಯ’ಗಳದ್ದು. ಗುರು ತೀರಾ ವಿರಳವಾಗಿರುವ ಈ ಮೂರನೆಯ ವಿಂಗಡಣೆಗೆ ಸೇರುತ್ತಾನೆ.
ಯಾವಗಲೋ ಒಮ್ಮೊಮ್ಮೆ ಅಪರೂಪಕ್ಕೆ ಒಬ್ಬ ಯೇಸು, ಒಬ್ಬ ಬುದ್ಧ, ಒಬ್ಬ ಝರಾತುಷ್ಟ್ರ, ಒಬ್ಬ ಲಾವೋ ತ್ಸು, ಒಬ್ಬ ಚಾಂಗ್ ತ್ಸುವನ್ನು ಕಾಣುತ್ತೀರಿ. ಆದರೆ ಇವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಿಮಗೆ ಸಾಧ್ಯವೇ ಆಗುವುದಿಲ್ಲ.
ನಿಮ್ಮ ಮುಂದಾಳುಗಳು ನಿಜವಾಗಿ ಮುಂದಾಳುಗಳಲ್ಲ, ಅವರು ತಮ್ಮ ಹಿಂಬಾಲಕರನ್ನು ಹಿಂಬಾಲಿಸುವವರು. ನಿಮ್ಮ ಶಿಕ್ಷಕರು ಶಿಕ್ಷಕರಲ್ಲ, ಅವರು ಅನವರತ ನಿಮ್ಮ ಪೂರ್ವಾಗ್ರಹಗಳಿಗೆ ಹೊಂದಿಕೊಳ್ಳುತ್ತಿರುತ್ತಾರೆ. ಇಲ್ಲವಾದರೆ ನೀವು ಅವರನ್ನು ಗೌರವಿಸುವುದಿಲ್ಲ; ಆಗ ಪ್ರತಿಷ್ಟೆಗೆ, ಅಧಿಕಾರಕ್ಕೆ ಅವಕಾಶ ಸಿಕ್ಕುವುದಿಲ್ಲ. ಎಲ್ಲರೂ ಕುರುಡರ ಭಾಷೆ ಮಾತನಾಡುವುದು, ಶಿಕ್ಷಕ ನಿಮಗೆ ಅದನ್ನು ಮನದಟ್ಟು ಮಾಡುತ್ತಾನೆ, ನಿಮ್ಮನ್ನು ಖುಶಿಯಾಗಿಡುತ್ತಾನೆ.
ಗುರು ಮುಚ್ಚಿದ ನಿಮ್ಮ ಗಾಯಗಳನ್ನು ಬೆಳಕಿಗೆ ಒಡ್ಡುತ್ತಾನೆ. ಗುರುವಿನೊಂದಿಗಿರುವುದು ಯಾತನೆಯನ್ನು ಕೊಡುತ್ತದೆ! ಒಬ್ಬನು ಶಿಲುಬೆಯ ಮೇಲೆ ಸಾಯುವುದಕ್ಕೆ, ವಿಷ ಸೇವಿಸುವುದಕ್ಕೆ, ನಿಮ್ಮಿಂದ ಕೊಲ್ಲಲ್ಪಡುವುದಕ್ಕೆ, ಹಿಂಸಿಸಲ್ಪಡುವುದಕ್ಕೆ ಸಿದ್ಧನಾಗದಿದ್ದರೆ ಆತ ಗುರುವಾಗಲಾರ. ಆತ ಸದಾ ಅಪಾಯದೊಂದಿಗೇ ಓಡಾಡುತ್ತಿರುತ್ತಾನೆ.
ಶಿಕ್ಷಕ ನಿಮಗೆ ಹೊಂದಿಕೊಳ್ಳುತ್ತಾನೆ. ಗುರು ಇದಕ್ಕೆ ವಿರುದ್ಧ; ನೀವು ಆತನಿಗೆ ಹೊಂದಿಕೊಳ್ಳಬೇಕು. ನೀವು ಲಕ್ಷಾಂತರ ಸಂಖ್ಯೆಯಲ್ಲಿರುತ್ತೀರಿ, ಬುದ್ಧ ಯಾವಾಗಲೂ ಒಬ್ಬನೇ. ನೀವು ಸದಾ ಬಹುಸಂಖ್ಯಾತರು, ಅಧಿಕಾರವೆಲ್ಲ ನಿಮ್ಮ ಬಳಿಯೇ ಇರುತ್ತದೆ. ನಿಮ್ಮ ಅಧಿಕಾರವೇನಿದ್ದರೂ ಪೊಳ್ಳು. ನೀವು ಯೇಸುವನ್ನು ಶಿಲುಬೆಗೇರಿಸಬಹುದು ಆದರೆ ಆತನ ಚೈತನ್ಯವನ್ನು ಕೊಲ್ಲಲಾಗುವುದಿಲ್ಲ. ಸಾಕ್ರೆಟಿಸನಿಗೆ ವಿಷವುಣ್ಣಿಸಬಹುದು ಆದರೆ ಆತನ ಸಂದೇಶಕ್ಕೆ ವಿಷವಿಕ್ಕಲಾಗುವುದಿಲ್ಲ.
ಈ ಶಿಕ್ಷಕರ ದೊಡ್ಡಿಯಲ್ಲಿ ಒಂದು ವೇಳೆ ನಿಮಗೆ ನಿಜವಾದ ಅರಿವುಳ್ಳ ಗುರು ಸಿಕ್ಕಿದರೂ ಆತನನ್ನು ಗುರುತಿಸುವಲ್ಲಿ ನೀವು ಬಹುಪಾಲು ವಿಫಲರಾಗುತ್ತೀರಿ.ಆತ ಕೋಪಿಷ್ಟನಾಗಿರುತ್ತಾನೆ. ಆತ ಅದೆಂಥ ಆಘಾತಕಾರಿ ವ್ಯಕ್ತಿತ್ವದವನಾಗಿರುತ್ತಾನೆಂದರೆ, ನೀವು ಅಲ್ಲಿಂದ ಪರಾರಿಯಾಗಬೇಕೆಂದು ಬಯಸುತ್ತೀರಿ. ನಿಮಗೆ ಉಸಿರುಗಟ್ಟಿ ಸಾಯುವಂತೆ ಭಾಸವಾಗುತ್ತದೆ. ಆತ ನಿಮ್ಮ ಪ್ರತಿಯೊಂದು ವಿಚಾರವನ್ನು, ಸಿದ್ಧಾಂತವನ್ನು, ನಂಬಿಕೆಯನ್ನು – ಒಟ್ಟಿನಲ್ಲಿ ಏನೇನು ಅತ್ಯಮೂಲ್ಯ ಎಂದು ಭಾವಿಸಿ ಹೊತ್ತಿರುತ್ತೀರೋ – ಅದನ್ನೆಲ್ಲ ಒಡೆದು ಹಾಕುತ್ತಾನೆ. ಅರಿವುಳ್ಳ ಗುರುವಿನ ಬಳಿ ನೀವು ವಜ್ರಗಳೆಂದು ಹೊತ್ತವೆಲ್ಲ ಸಾಮಾನ್ಯ ಕಲ್ಲುಗಳೆಂದು ಅರಿವಾಗುತ್ತದೆ.
ಗುರುವಿನೊಂದಿಗೆ ಇರುವುದಕ್ಕೆ ನಿಜಕ್ಕೂ ಗುಂಡಿಗೆ ಇರಬೇಕು. ಅಹಂಕಾರವನ್ನು, ನಿಮ್ಮ ನಿನ್ನೆಗಳನ್ನು, ನಿಮ್ಮೆಲ್ಲ ಬಂಡವಾಳವನ್ನು ಕೈಬಿಡುವ ಗುಂಡಿಗೆ ಇರಬೇಕು. ಸಮಾಜವನ್ನು ಎದುರುಹಾಕಿಕೊಂಡು, ಸಂಸ್ಕೃತಿಯನ್ನು ಎದುರಿಸಿ, ಇಡೀ ಇತಿಹಾಸವನ್ನು ಎದುರುಹಾಕಿಕೊಂಡು ಅಪಾಯಕಾರಿಯಾಗಿ ಬದುಕುವ ಗುಂಡಿಗೆ ಬೇಕು.
ನಿಜವಾದ ಶಿಷ್ಯ ಬಂಡುಕೋರನಾಗಿರುತ್ತಾನೆ, ಏಕೆಂದರೆ ಆತನ ಗುರು ಪರಮ ಬಂಡುಕೋರನಾಗಿರುತ್ತಾನೆ!
ಧರ್ಮಗಳೆಂಬ ಮನಸ್ಸಿನ ಮುಖಗಳು January 2, 2010
Posted by uniquesupri in ಓಶೋ ಹೇಳಿದ್ದು.Tags: ಓಶೋ, ಕನ್ ಫ್ಯೂಶಿಯಸ್, ಕ್ರೈಸ್ತರು, ಜೈನ, ತಾವೋ, ಧರ್ಮ, ಬೌದ್ಧ, ಮನಸ್ಸು, ಮುಸಲ್ಮಾನ, ಹಿಂದು, Osho
add a comment
ಮನುಷ್ಯನ ಮನಸ್ಸಿಗೆ ಹಲವು ಮುಖಗಳಿವೆ. ಒಂದೊಂದು ಧರ್ಮವೂ ಮನಸ್ಸಿನ ಒಂದೊಂದು ಮುಖವನ್ನು ವೈಭವೀಕರಿಸಿ, ಅದನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವ ಕೆಲಸ ಮಾಡಿದೆ.
ಯಾರನ್ನೋ ನೀವು ಹಿಂದು ಎನ್ನುತ್ತೀರಿ, ಮತ್ತೊಬ್ಬನನ್ನು ಮುಸಲ್ಮಾನ ಎನ್ನುವಿರಿ, ಮಗದೊಬ್ಬನನ್ನು ಜೈನ. ಆದರೆ ವಾಸ್ತವವಾಗಿ ಇದು ಸತ್ಯವಲ್ಲ. ಪ್ರತಿ ವ್ಯಕ್ತಿಯಲ್ಲಿಯೂ ಎಲ್ಲಾ ಧರ್ಮಗಳು ಸುಪ್ತವಾಗಿರುತ್ತವೆ. ಆತನಲ್ಲಿ ಹಿಂದುವು ಇರುತ್ತಾನೆ, ಮುಸಲ್ಮಾನನೂ ಇರುತ್ತಾನೆ, ಕ್ರೈಸ್ತ, ಜೈನರೂ, ಬೌದ್ಧ, ಯಹೂದಿಗಳೂ ಇರುತ್ತಾರೆ. ಆತನೇನಾದರೂ ಬೌದ್ಧ ಕುಟುಂಬದಲ್ಲಿ ಹುಟ್ಟಿದನಾದರೆ ಆತನಲ್ಲಿನ ಬೌದ್ಧ ಮೇಲ್ಪದರಕ್ಕೆ ಬರುತ್ತಾನೆ. ಆತನಲ್ಲಿನ ಬೌದ್ಧ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತಾನೆ, ಉಳಿದವುಗಳನ್ನು ಹತ್ತಿಕ್ಕುತ್ತಾನೆ. ಬದಲಾಗಿ ಆತ ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದರೆ ಆತನ ಮನಸ್ಸಿನ ಇನ್ನೊಂದು ಮುಖ ಪ್ರಮುಖವಾಗುತ್ತದೆ. ಆದರೆ ಹತ್ತಿಕ್ಕಲ್ಪಟ್ಟ ಮನಸ್ಸಿನ ಉಳಿದ ಅಂಶಗಳು ಸುಮ್ಮನಿರುವುದಿಲ್ಲ, ಅವು ಸುಪ್ತವಾಗಿ ಕೆಲಸ ಮಾಡುತ್ತಲೇ ಇರುತ್ತವೆ.
ನಾನು ಕಂಡಿರುವಂತೆ, ಒಬ್ಬ ವ್ಯಕ್ತಿಯಲ್ಲಿ ಎಲ್ಲಾ ಧರ್ಮಗಳೂ ಇವೆ. ಇದರಿಂದಾಗಿಯೇ ಎಲ್ಲ ಧರ್ಮಗಳನ್ನು ಅನುಸಂಧಾನಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ವಾಸ್ತವಾವಾಗಿ ಈ ಅನುಸಂಧಾನಕ್ಕೆ ಯಾವ ಬೆಲೆಯೂ ಇಲ್ಲ.ಅದು ಕೇವಲ ಮನಸ್ಸಿನ ವಿವಿಧ ಮುಖಗಳನ್ನು ಅನುಸಂಧಾನಗೊಳಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ.
ಉದಾಹರಣೆಗೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಹಂ ಇದ್ದೇ ಇರುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಈ ಅಹಂಕಾರವನ್ನು ಅದರ ಪರಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ‘ನಿನಗಿಂಥ ನಾನು ಶ್ರೇಷ್ಠ’ ಎಂಬ ಭಾವನೆ ಪ್ರತಿ ಹಿಂದೂವಿನಲ್ಲೂ ಇರುತ್ತದೆ. ತಾನು ಈ ಜಗತ್ತಿಗೆ ಬೋಧಿಸುವುದಕ್ಕಾಗಿ, ಬ್ರಹ್ಮ ಜ್ಞಾನವನ್ನು ತಿಳಿಸುವುದಕ್ಕಾಗಿ ಹಿಂದುವಾಗಿ ಹುಟ್ಟಿದ್ದೇನೆ ಎಂದು ಆತ ನಂಬುತ್ತಾನೆ. ತನ್ನದು ಅತಿ ಪುರಾತನವಾದ, ಪವಿತ್ರವಾದ ಸನಾತನ ಧರ್ಮ. ತಾನು ಧರ್ಮಾಂಧನಲ್ಲ, ಸಹಿಷ್ಣು, ತಾನು ಯಾರ ಬದುಕಿನಲ್ಲೂ ಮಧ್ಯ ಪ್ರವೇಶಿಸುವುದಿಲ್ಲ, ಯಾರ ಮೇಲೂ ಆಕ್ರಮಣ ಮಾಡಿದವನಲ್ಲ ಎಂದು ಆತ ನಂಬುತ್ತಾನೆ. ಆದರೆ ಆತ ತನಗರಿವಿಲ್ಲದೆ ಇವೆಲ್ಲವನ್ನೂ ಮಾಡುತ್ತಿರುತ್ತಾನೆ.
ಹಿಂದೂಗಳು ಹೆಚ್ಚು ಅಸಹಿಷ್ಣುಗಳು. ತಾವು ಸಹಿಷ್ಣುಗಳು ಎಂದುಕೊಳ್ಳುವಲ್ಲೇ ಅವರ ಅಸಹಿಷ್ಣುತೆ ಇಣುಕುತ್ತದೆ. ಒಳಗೆ ಅಸಹಿಷ್ಣುತೆ ಇರದಿದ್ದರೆ ತಾನು ಸಹಿಷ್ಣು ಎಂದು ಭಾವಿಸುವ ಪ್ರಮೇಯವೇ ಉದ್ಭವಿಸದು.
ಇದು ಕೇವಲ ಹಿಂದೂ ಧರ್ಮದ ಗುಣವಲ್ಲ. ಎಲ್ಲಾ ಧರ್ಮಗಳಲ್ಲಿಯೂ ಇದು ನಾನಾ ರೂಪದಲ್ಲಿ ಆವರಿಸಿಕೊಂಡಿದೆ. ಯಹೂದಿಯರು ತಾವು ದೇವರಿಂದ ಆರಿಸಲ್ಪಟ್ಟ ಜನರು ಎಂದು ನಂಬುತ್ತಾರೆ. ಕ್ರೈಸ್ತರು ಕ್ರಿಸ್ತನೊಬ್ಬನೇ ದೇವರ ಮಗ, ಅಂತಿಮ ತೀರ್ಪಿನ ದಿನದಂದು ಆತ ತನ್ನ ಕುರಿಗಳನ್ನು ಉಳಿದ ಮಂದೆಯಿಂದ ಬೇರ್ಪಡಿಸುತ್ತಾನೆ. ಆತನನ್ನು ನಂಬದವರನ್ನು ನರಕದ ಬೆಂಕಿಗೆ ನೂಕುತ್ತಾನೆ ಎಂದು ನಂಬುತ್ತಾರೆ. ತಾವು ಉಳಿದವರಿಗಿಂತ ಶ್ರೇಷ್ಠ ಎಂಬ ಈ ಅಹಂಕಾರ ಎಲ್ಲಾ ಧರ್ಮದವರಲ್ಲಿಯೂ ಇದೆ. ಮುಸಲ್ಲಾನ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಕನ್‌ಫ್ಯೂಶಿಯನ್, ತಾವೊ – ಎಲ್ಲರಲ್ಲೂ ಇದೆ. ಆದರೆ ಈ ಅಂಶವನ್ನು ಅಭಿವೃದ್ಧಿ ಪಡಿಸಿ, ಶುದ್ಧೀಕರಿಸಿ, ಸುಂದರಗಾಣುವಂತೆ ಮಾಡಿದ ಶ್ರೇಯ ಹಿಂದುಗಳದು.
ಮುಸಲ್ಮಾನನು ಮೂಲತಃ ಧರ್ಮಾಂಧ. ಅಚಲವಾದ ಕುರುಡು ವಿಶ್ವಾಸ ಮನಸ್ಸಿನ ಹಲವು ಮುಖಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಅಂಶವು ಸುಪ್ತವಾಗಿರುತ್ತದೆ. ಆದರೆ ಮುಸಲ್ಮಾನನು ಮನಸ್ಸಿನ ಈ ಅಂಶವನ್ನು ಬೃಹತ್ತಾಗಿ ಬೆಳೆಸಿದ್ದಾನೆ. ತನ್ನ ಧರ್ಮ ಭೂಮಿಗೆ ಬಂದ ಕಡೆಯ ಧರ್ಮ. ಮೊಹಮದ್ ಕಟ್ಟಕಡೆಯ ಪ್ರವಾದಿ. ಮುಂದೆ ಬೇರಾವ ಪ್ರವಾದಿಯೂ ಬರುವುದಿಲ್ಲ; ದೇವರು ತನ್ನ ಸಂದೇಶದ ಕಡೆಯ ಆವೃತ್ತಿಯನ್ನು ಕಳಿಸಿಯಾಗಿದೆ. ಈ ಮುಂಚೆಯೂ ಸಂದೇಶಗಳು ಕಳಿಸಲ್ಪಟ್ಟಿದ್ದವು, ಆದರೆ ಈಗ ಅವೆಲ್ಲವೂ ರದ್ದಾದಂತೆ. ಕಡೆಯ ಸಂದೇಶ ತಲುಪಿಯಾಗಿದೆ ಹಾಗೂ ಅದು ಸತ್ಯವೂ,ಪರಿಪೂರ್ಣವೂ ಆಗಿರುವುದರಿಂದ ಮತ್ತ್ಯಾವ ಪ್ರವಾದಿ ಹುಟ್ಟಿಬರುವ ಆವಶ್ಯಕತೆಯಿಲ್ಲ – ಇದು ಆತನ ನಂಬಿಕೆ. ಇದು ಶುದ್ಧ ಧರ್ಮಾಂಧತೆ. ಇದು ಎಲ್ಲಾ ಧರ್ಮಗಳಲ್ಲೂ ಇದೆ.
ಕಾಲಿಫ್ ಉಮರ್ ಕೈಲಿ ಉರಿಯುವ ಬೆಂಕಿಯನ್ನು ಹಿಡಿದು ಅಲೆಕ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ತಲುಪುತ್ತಾನೆ. ”ಖುರಾನ್‌ನಲ್ಲಿ ಇಲ್ಲದ ವಿಷಯವೇನಿದೆ ಈ ಗ್ರಂಥಾಲಯದ ಪುಸ್ತಕಗಳಲ್ಲಿ?” ಎಂದು ಗ್ರಂಥಪಾಲಕನನ್ನು ಪ್ರಶ್ನಿಸುತ್ತಾನೆ. ಉತ್ತರಕ್ಕೂ ಕಾಯದೆ ತಾನೇ ಹೇಳುತ್ತಾನೆ, “ಖುರಾನಿನಲ್ಲಿರುವುದಕ್ಕಿಂತ ಹೆಚ್ಚಿನದು ಅವುಗಳಲ್ಲಿದ್ದರೆ ನಾನವನ್ನು ಸುಟ್ಟು ಹಾಕುತ್ತೇನೆ. ಏಕೆಂದರೆ ಖುರಾನ್ ಪರಿಪೂರ್ಣವಾದದ್ದು. ಇದರಲ್ಲಿ ಇಲ್ಲದ ವಿಷಯಗಳ ಆವಶ್ಯಕತೆ ಇಲ್ಲ. ಖುರಾನ್ ಒಂದೇ ಸಾಕು. ಇನ್ನು ಖುರಾನ್ ಹೇಳಿರುವುದನ್ನೇ ಆ ಪುಸ್ತಕಗಳು ಬೇರೆ ರೀತಿಯಲ್ಲಿ ಹೇಳಿರುವುದಾದರೆ ಅವುಗಳನ್ನು ಸುಟ್ಟು ಹಾಕುವೆ. ಏಕೆಂದರೆ ಖುರಾನ್ ಸತ್ಯವೂ, ಪರಿಪೂರ್ಣವೂ ಆಗಿರುವಾಗ ಬೇರೆ ಪುಸ್ತಕಗಳು ಯಾಕೆ ಬೇಕು?” ಇದು ಧರ್ಮಾಂಧನ ಮನಸ್ಸು ವರ್ತಿಸುವ ರೀತಿ. ತಾನು ಸರಿ ಉಳಿದವರೆಲ್ಲ ತಪ್ಪು ಎನ್ನುವುದೇ ಕುರುಡು ವಿಶ್ವಾಸದ ತಳಹದಿ. ಯಾವ ವಿಷಯದಲ್ಲಿ ತಾನು ಸರಿ, ಯಾವುದರಲ್ಲಿ ಇತರರು ತಪ್ಪು ಎನ್ನುವ ಪ್ರಶ್ನೆ ಧರ್ಮಾಂಧನಿಗೆ ಉದ್ಭವಿಸದು. ತಾನು ನಂಬಿರುವುದೆಲ್ಲವೂ ಸರಿ, ಉಳಿದದ್ದೆಲ್ಲಾ ತಪ್ಪು. ಆತ ತಾರ್ಕಿಕವಾಗಿ ಯೋಚಿಸಲಾರ, ಏನನ್ನೂ ಅರ್ಥ ಮಾಡಿಕೊಳ್ಳಲಾರ. ಆತ ವಿಶ್ವಾಸಿ, ಅಂಧವಿಶ್ವಾಸಿ. ಈ ಅಂಶವು ಎಲ್ಲಾ ಧರ್ಮಗಳಲ್ಲಿಯೂ ಇದ್ದರೂ ಇಸ್ಲಾಂ ಇದನ್ನು ಅದೆಷ್ಟರ ಮಟ್ಟಿಗೆ ಬೆಳೆಸಿದೆಯೆಂದರೆ, ಇದು ಅದರ ಮುಖವೇ ಆಗಿಹೋಗಿದೆ.
ಜೈನನು ಹಿಂಸಾ ವಿನೋದಿ. ಪ್ರತಿ ಮನಸ್ಸೂ ಹಿಂಸಾ ವಿನೋದಿಯೇ. ದೇಹವನ್ನು ದಂಡಿಸಿದಷ್ಟೂ ಮನಸ್ಸು ಉಬ್ಬುತ್ತದೆ. ದೇಹದಂಡನೆಯನ್ನು ನೀವು ಇಷ್ಟಪಡಲು ಶುರು ಮಾಡುತ್ತೀರಿ ಏಕೆಂದರೆ ಮನಸ್ಸು ಹೇಳುತ್ತೆ, “ಈಗ ನಾನು ಈ ದೇಹದ ಒಡೆಯ, ದೇಹ ನನಗೆ ಗುಲಾಮ.” ಇದನ್ನೇ ಜೈನ ಧರ್ಮ ಬೋಧಿಸುವುದು. ದೇಹವನ್ನು ಗೆಲ್ಲು. ದೇಹ ಆಹಾರವನ್ನು ಬೇಡಿದರೆ ನೀಡಬೇಡ. ನಿನ್ನ ದೇಹದ ಒಡೆಯ ನೀನು, ನಿನ್ನ ಯಜಮಾನಿಕೆಯನ್ನು ದೇಹದ ಮೇಲೆ ಸ್ಥಾಪಿಸು. ಹೀಗಾಗಿ ಉಪವಾಸವೆಂಬುದು ಜೈನ ಧರ್ಮದ ಅವಿಭಾಜ್ಯ ಅಂಗವಾಯಿತು. ಹೆಚ್ಚೆಚ್ಚು ದಿನಗಳ ಕಾಲ ಉಪವಾಸವಿರಬಲ್ಲವನು ದೊಡ್ಡ ಸಂತನಾಗುತ್ತಾನೆ. ನಿಜಕ್ಕೂ ಅವರು ದೇಹವನ್ನು ಹಿಂಸಿಸುವ ಮಾನಸಿಕ ಅಸ್ವಸ್ಥರು. ದೇಹ ದೇವಾಲಯ- ಅದನ್ನು ಪ್ರೀತಿಸಬೇಕು, ಗೌರವಿಸಬೇಕು.
ಈ ಹಿಂಸಾವಿನೋದಿ ಗುಣ ಜೈನರ ಸ್ವತ್ತೇನಲ್ಲ. ನಿಮ್ಮ ದೇಹವನ್ನು ದಂಡನೆಗೊಳಪಡಿಸುವುದನ್ನು ನೀವು ಸುಖಿಸುತ್ತೀರಿ. ದೇಹವನ್ನು ಹಿಂಸಿಸಿ ಅದನ್ನೊಂದು ಯಂತ್ರದ ಹಾಗೆ, ಸೇವಕನ ಹಾಗೆ ನಡೆಸಿಕೊಂಡರೆ ನೀವು ಉಬ್ಬಿ ಹೋಗುತ್ತೀರಿ. ನೀವು ಶಕ್ತಿಶಾಲಿ ಎಂಬ ಭಾವನೆ ನಿಮ್ಮನ್ನಾವರಿಸುತ್ತದೆ. ದೇಹವನ್ನು ದಂಡಿಸುವಲ್ಲಿ ವಿಫಲರಾದಿರೆಂದರೆ ನೀವು ಖಿನ್ನರಾಗುತ್ತೀರಿ. ಈ ಅಂಶವೂ ಸಹ ಎಲ್ಲಾ ಧರ್ಮಗಳಲ್ಲಿ ಅಡಕವಾಗಿದೆ. ಆದರೆ ಅದನ್ನು ಸಿಂಗರಿಸಿ, ಹೊಳೆಯುವಂತೆ ತಿಕ್ಕಿ ತೀಡಿ ಬೆಳೆಸಿದ್ದು ಜೈನ ಧರ್ಮ.
ಇನ್ನು ಬೌದ್ಧ ಧರ್ಮ ಮನಸ್ಸಿನ ಮತ್ತೊಂದು ಮುಖವಾದ ಪಲಾಯನವಾದವನ್ನು ಬೆಳೆಸಿತು. ಪ್ರಪಂಚವನ್ನು ಎದುರಿಸಬೇಡ, ಓಡಿ ಹೋಗು, ಬೆಟ್ಟಕ್ಕೆ ಹೋಗು, ಕಾಡನ್ನು ಸೇರಿಕೋ, ಸರ್ವ ಸಂಗ ಪರಿತ್ಯಾಗಿಯಾಗಿ ನಿಲ್ಲು. ಇದು ಶುದ್ಧ ಪಲಾಯನವಾದ. ಎಲ್ಲರಲ್ಲೂ ಇರುವ ಈ ಅಂಶವನ್ನು ಬೆಳೆಸಿ, ಅದಕ್ಕೊಂದು ರೂಪ ಕೊಟ್ಟು, ಅದನ್ನೊಂದು ತತ್ವಜ್ಞಾನವಾಗಿ ರೂಪಿಸಿ, ಅದರ ಮೇಲೆ ವಾದ ಮಾಡಿ, ಅದನ್ನು ಗಟ್ಟಿಗೊಳಿಸಿದ್ದು ಬೌದ್ಧರು.
ಹೀಗೆ ಎಲ್ಲಾ ಧರ್ಮಗಳು ಮನಸ್ಸಿನ ಒಂದೊಂದು ಮುಖವನ್ನು ಅಪ್ಪಿಕೊಂಡು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡವು. ಎಲ್ಲವೂ ಮನಸ್ಸನ್ನೇ ಅವಲಂಬಿಸಿರುವುದರಿಂದ ಇವ್ಯಾವೂ ನಿಜದ ಅಧ್ಯಾತ್ಮವನ್ನು ನೀಡಲಾರವು.