jump to navigation

ಸಂಶಯವಾದಿಯ ನಂಬಿಕೆಗಳು (ಭಾಗ4) January 15, 2009

Posted by uniquesupri in ಓಶೋ ಹೇಳಿದ್ದು.
1 comment so far

(ಭಾಗ )

ಒಮ್ಮೆ ಹೀಗಾಯಿತು… ಒಬ್ಬ ಖ್ಯಾತ ಸೋಫಿಸ್ಟ್ ಗುರುವಿನ ಬಳಿ ಯುವಕನೊಬ್ಬ ಬಂದ. ಯುವಕ ಆಗರ್ಭ ಶ್ರೀಮಂತನಾಗಿದ್ದ. ಗುರುವು ಬಹುದೊಡ್ಡ ಸಂಭಾವನೆಯನ್ನು ಕೇಳಿದ. ಯುವಕ ಹೇಳಿದ, “ಯೋಚಿಸಬೇಡಿ, ನೀವು ಕೇಳಿದಷ್ಟು ಹಣ ಕೊಡುತ್ತೇನೆ, ಆದರೆ ನನ್ನದೊಂದು ನಿಬಂಧನೆಯಿದೆ. ಸಂಭಾವನೆಯ ಅರ್ಧ ಭಾಗದ ಹಣವನ್ನು ನಾನೀಗ ಕೊಡುತ್ತೇನೆ, ಇನ್ನರ್ಧ ಭಾಗವನ್ನು ನಾನು ನನ್ನ ಮೊದಲ ವಾದವನ್ನು ಗೆದ್ದಾಗ ನೀಡುತ್ತೇನೆ. ಅದು ನೀವು ನನಗೆ ನಿಜವಾಗಿಯೂ ವಾದಕಲೆಯನ್ನು ಕಲಿಸಿರುವಿರೋ ಇಲ್ಲವೇ ಸುಮ್ಮನೆ ಮೋಸ ಮಾಡಿರುವಿರೋ ಎಂಬುದಕ್ಕೆ ಪರೀಕ್ಷೆ.”

ಅವನ ಮಾತು ಸಮಂಜಸವಾಗಿತ್ತು, ಗುರುವಿಗೆ ಅದರಲ್ಲಿ ಯಾವ ಹುಳುಕೂ ಕಾಣಲಿಲ್ಲ, “ನೀನು ಯೋಚಿಸಬೇಡ. ನಾನು ಇಡೀ ಗ್ರೀಸಿನಲ್ಲೇ ಶ್ರೇಷ್ಠನಾದ ಗುರು, ನೀನು ವಾದದಲ್ಲಿ ಗೆದ್ದೇ ಗೆಲ್ಲುವೆ.” osho03

ಅರ್ಧ ಮೊತ್ತವನ್ನು ಯುವಕ ತೆತ್ತ. ಎರಡು ವರ್ಷಗಳಲ್ಲಿ ಯುವಕನನ್ನು ವಾದಕಲೆಯಲ್ಲಿ ಪಾರಂಗತನನ್ನಾಗಿಸಲಾಯಿತು, ಯಾರ ಪರವಾಗಿ ವಾದಿಸಿದರೂ ಗೆಲ್ಲಬಲ್ಲನವನಾಗಿದ್ದ. ಆಸ್ತಿಕವಾದದ ಪರವಾಗಿ ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ, ಹಾಗೆಯೇ ನಾಸ್ತಿಕವಾದದ ಪರ ನಿಂತು ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ. ಈಗವನಿಗೆ ವಾದವನ್ನು ಹೇಗೆ ಮಂಡಿಸಬೇಕು, ಹೇಗೆ ಮನವೊಲಿಸಬೇಕು ಎಂಬ ಕಲೆ ಕರಗತವಾಗಿತ್ತು.

ಗುರು ಹೇಳಿದ, “ಇಲ್ಲಿಗೆ ನಿನ್ನ ಶಿಕ್ಷಣ ಮುಗಿಯಿತು. ಇನ್ನರ್ಧ ಹಣವನ್ನು ಪಾವತಿ ಮಾಡು.”

ಆತ ಹೇಳಿದ, “ಆದರೆ ನಾನಿನ್ನೂ ವಿಜಯಿಯಾಗಿಲ್ಲ. ನಮ್ಮ ಒಪ್ಪಂದದ ಪ್ರಕಾರ ನೀವು ಕಾಯಬೇಕು.” ಆ ಯುವಕ ಗುರುವಿಗಿಂತ ಹೆಚ್ಚು ಚಾಣಾಕ್ಷ. ಆತ ಯಾರೊಂದಿಗೂ ವಾದವನ್ನೇ ಮಾಡಲಿಲ್ಲ. ನೀವೇನೇ ಹೆಳಿದರು ಆತ ಹೌದು ಎನ್ನುತ್ತಿದ್ದ. ಯಾವ ವಾದಕ್ಕೂ ಆತ ಇಳಿಯುತ್ತಿರಲಿಲ್ಲವಾದ್ದರಿಂದ ಗೆಲ್ಲುವ ಪ್ರಶ್ನೆಯೇ ಇರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆದರೆ ವೃದ್ಧ ಗುರುವನ್ನು ಹೀಗೆ ಮೋಸ ಮಾಡಲಾಗದು, ಈ ಯುವಕನಸ್ಸು ಅತಿಯಾಯಿತು.

ವೃದ್ಧ ನ್ಯಾಯಾಲಯದಲ್ಲಿ ಯುವಕನ ಮೇಲೆ ಮೊಕದ್ದಮೆ ಹೂಡಿದ. ತನ್ನ ಶಿಕ್ಷಣ ಮುಗಿದ ಮೇಲೆ ಕೊಡುತ್ತೇನೆ ಎಂದಿದ್ದ ಅರ್ಧ ಮೊತ್ತವನ್ನು ಆತ ಪಾವತಿಸಿಲ್ಲ ಎಂದು ಆರೋಪಿಸಿದ. ಗುರುವಿನ ಉಪಾಯ ನಾಜೂಕಿನದಾಗಿತ್ತು. “ಒಂದು ವೇಳೆ ಕೋರ್ಟು ‘ನಿನ್ನ ಹಣವನ್ನು ನೀನು ಪಡೆಯಬೇಕು ಎಂದರೆ ಈ ಯುವಕ ವಾದವನ್ನು ಗೆಲ್ಲಬೇಕು’ ಎಂದರೆ ನಾನು ಸೋತಂತೆ. ಅಂದರೆ ಯುವಕ ವಾದದಲ್ಲಿ ಗೆದ್ದಂತಾಗುತ್ತದೆ. ಆತ ನನ್ನ ಹಣವನ್ನು ಕೊಡಬೇಕಾಗುತ್ತದೆ.” ಹೀಗೆ ಆಲೋಚಿಸಿದ ಆತ ಕೋರ್ಟಿನ ಹೊರಗೆ ಯುವಕನಿಗೆ, “ಈಗ ನೀನು ನಿನ್ನ ಮೊದಲ ಕೇಸು ಗೆದ್ದಿರುವೆ. ನನ್ನ ಹಣವನ್ನು ಕೊಡು” ಎಂದು ಕೇಳಿ ಹಣವನ್ನು ಪಡೆಯಬಹುದು ಎಂದುಕೊಂಡ.

ಆತ ಇನ್ನೊಂದು ಸಾಧ್ಯತೆಯ ಬಗೆಗೂ ಆಲೋಚಿಸಿದ: ತಾನೇನಾದರೂ ಮೊಕದ್ದಮೆ ಗೆದ್ದರೆ – ಅದು ಸಾಧ್ಯವಾಗದು, ಆದರೂ ಆತ ಬಹು ಶ್ರೇಷ್ಠ ವಾದಿಯಾಗಿದ್ದ – ಆಗಲೂ ಸಹ ತಾನು ಯುವಕನಿಗೆ, “ನೀನು ನ್ಯಾಯಾಲಯದ ಅಪ್ಪಣೆಯಂತೆ ನಡೆಯಬೇಕು, ನನಗೆ ಹಣವನ್ನು ಕೊಡಬೇಕು.” ಎನ್ನಬಹುದು. ಆದರೆ ಯುವಕ ತನ್ನ ಶಿಷ್ಯ, ಆತ ತನ್ನೆಲ್ಲಾ ಪಟ್ಟುಗಳನ್ನು ಅರಿತವನಾಗಿದ್ದ ಎಂಬುದು ಗುರುವಿಗೆ ತಿಳಿದಿರಲಿಲ್ಲ.

ಯುವಕ ನ್ಯಾಯಾಲಯದಲ್ಲಿ ತರ್ಕಬದ್ಧವಾಗಿ ವಾದಿಸಿದ. ಅಸಲಿಗೆ ಮೊಕದ್ದಮೆ ಆತನ ಪರವಾಗಿಯೇ ಇತ್ತು. “ನಾನು ನನ್ನ ಮೊದಲ ವಾದವನ್ನು ಗೆಲ್ಲುವವರೆಗೆ ಇನ್ನರ್ಧ ಹಣವನ್ನು ಕೊಡುವುದಿಲ್ಲ.” ಗುರುವಿಗೆ ವಾದದಲ್ಲಿ ಗೆಲ್ಲುವ ಆಸಕ್ರಿಯಿರಲಿಲ್ಲ. ಆತ ಹೇಳಿದ, “ಹೌದು, ಈ ಒಪ್ಪಂದವನ್ನು ನಾವು ಮಾಡಿಕೊಂಡದ್ದು ನಿಜ.” ಕೋರ್ಟಿನಲ್ಲಿ ಆತ ತನ್ನ ಸೋಲು ಒಪ್ಪಿಕೊಂಡ, ಹೊರಗೆ ಯುವಕನನ್ನು “ಈಗ…?” ಎಂದು ಕೇಳಬಹುದು ಎಂದು ಭಾವಿಸುತ್ತಾ.

ಗುರು ಮೊಕದ್ದಮೆ ಸೋತ. ಕೋರ್ಟಿನ ಹೊರಗೆ ಮೆಟ್ಟಿಲುಗಳನ್ನು ಇಳಿಯುವಾಗ ಯುವಕನನ್ನು ಹಿಡಿದು ಪಕ್ಕಕ್ಕೆ ಕರೆದು, “ಹುಡುಗಾ, ಈಗ ನೀನು ನಿನ್ನ ಮೊದಲ ವಾದವನ್ನು ಗೆದ್ದಿರುವೆ. ನನ್ನ ಹಣವನ್ನು ಕೊಟ್ಟು ಬಿಡು.” ಎಂದ.

ಯುವಕ ಹೇಳಿದ, “ನಾನು ನಿಮ್ಮ ಶಿಷ್ಯ, ನನ್ನ ನೀವು ಮೋಸ ಮಾಡಲು ಆಗುವುದಿಲ್ಲ. ನಾನು ನ್ಯಾಯಾಲಯದ ಅಪ್ಪಣೆಯ ವಿರುದ್ಧ ವರ್ತಿಸಲಾರೆ. ಅದು ನ್ಯಾಯಾಲಯದ ನಿಂದನೆಯಾಗುತ್ತದೆ. ಅಷ್ಟಕ್ಕೂ ನೀವು ಒತ್ತಾಯ ಮಾಡುವುದಿದ್ದರೆ, ನ್ಯಾಯಾಲಯದೊಳಕ್ಕೆ ಬಂದು ಮ್ಯಾಜಿಸ್ಟ್ರೇಟ್ ಎದುರು ಕೇಳಿ.”

ಈ ಸೊಫಿಸ್ಟ್ ಪದ್ಧತಿ ಕಾಲಾಂತರಗಳಿಂದ ನಾನಾ ಹೆಸರುಗಳನ್ನು ಪಡೆದುಕೊಂಡು ಮುಂದುವರಿದುಕೊಂಡು ಬಂದಿದೆ- ಈಗ ಇದನ್ನು ಸಂಶಯವಾದ ಎನ್ನುತ್ತಾರೆ. ಸಂಶಯವಾದಿಗೆ ಯಾವ ಸಿದ್ಧಾಂತವೂ ಇರುವುದಿಲ್ಲ, ಹಾಗಾಗಿ ಆತನನ್ನು ನೀವು ಸೋಲಿಸಲು ಸಾಧ್ಯವಾಗುವುದಿಲ್ಲ. ಆತ ಏನನ್ನೂ ಪ್ರತಿಪಾದಿಸುವುದಿಲ್ಲ. ಆತ ಏನನ್ನೂ ಪ್ರತಿಪಾದಿಸದಿದ್ದರೆ ನೀವು ಆತನನ್ನು ಸೋಲಿಸು ಹೇಗೆ ಸಾಧ್ಯ? ಆತನಿಗೆ ಯಾವುದರಲ್ಲೂ ಶ್ರದ್ಧೆ ಇಲ್ಲ. ಹೀಗಾಗಿ ಆತ ಹೆಚ್ಚು ಬಲಿಷ್ಠನಾಗಿರುತ್ತಾನೆ. ನಿಮಗೆ ಶ್ರದ್ಧೆಯಿದೆ, ನಿಮ್ಮ ಶ್ರದ್ಧೆಯಲ್ಲಿ ಆತ ಹುಳುಕುಗಳನ್ನು ಪತ್ತೆ ಹಚ್ಚಬಲ್ಲ, ನಿಮ್ಮನ್ನು ಸೋಲಿಸಬಲ್ಲ.

ಸಂಶಯವಾದಿ ನಂಬಿಕೆಗಳು, ಶ್ರದ್ಧೆಗಳು ಇರುವ ಯಾರ ವಿರುದ್ಧವಾದರೂ ಗೆಲ್ಲಬಲ್ಲ. ಹುರುಳಿಲ್ಲದ ವಾದ ಹಾಗೂ ವಿಜಯಗಳಲ್ಲದೆ ಸಂಶಯವಾಗಿ ಏನನ್ನೂ ಪಡೆದುಕೊಳ್ಳುವುದಿಲ್ಲ. ಮತ್ತು ಆತ ತನ್ನ ವಾದದಲ್ಲಿ ಹೆಚ್ಚು ನಿಷ್ಣಾತನಾಗುತ್ತ ಹೋದಷ್ಟೂ, ಜೀವನ ಇರುವುದು ವಾದಕ್ಕಲ್ಲ, ಜೀವನ ಎಂದರೆ ‘ಇಲ್ಲ’ ಎನ್ನುವುದಲ್ಲ, ‘ಇಲ್ಲ’ ಎನ್ನುವುದು ಸಾವು ಎಂಬುದನ್ನು ಮರೆಯುತ್ತಾ ಹೋಗುತ್ತಾನೆ. ಇಡೀ ಜೀವನ ಇತರರ ವಾದವನ್ನು ಸೋಲಿಸುತ್ತಾ ಹೋಗುವುದರಿಂದ ನಿಮಗೇನು ಸಿಕ್ಕುತ್ತದೆ, ನಿಮ್ಮ ಜೀವನವನ್ನು ನೀವು ಹಾಳು ಮಾಡಿಕೊಳ್ಳುವಿರಿ  ಅಷ್ಟೇ.

ನಾನು ನಿಮಗೆ ಸಂಶಯವಾದವನ್ನು ಕಲಿಸುತ್ತಿಲ್ಲ, ನಾನು ನಿಮಗೆ ಪ್ರಶ್ನಿಸುವ ಕಲೆಯನ್ನು ಕಲಿಸುತ್ತಿರುವೆ. ಪ್ರಶ್ನೆ ನಿಮಗೆ ಇದು ತಪ್ಪು, ಇದು ಇಲ್ಲ ಎಂದು ಹೇಳುವುದಿಲ್ಲ. ಅದು ಹೆಳುವುದಿಷ್ಟೇ, “ನನಗೆ ತಿಳಿದಿಲ್ಲ. ನಾನಿನ್ನೂ ಅದನ್ನು ಅನುಭವಿಸಿಲ್ಲ; ಹೀಗಾಗಿ, ನಾನು ಸತ್ಯವನ್ನು, ನೈಜವಾದದ್ದನ್ನು ಪಡೆಯುವವರೆಗೆ ಪ್ರಶ್ನಿಸುವುದನ್ನು ಬಿಡುವುದಿಲ್ಲ. ಅನಂತರ ನಾನು ಬರೀ ‘ಹೌದು’ ಆಗಿರುತ್ತೇನೆ- ಆದರೆ ಅದಕ್ಕೆ ಮುನ್ನ ಅಲ್ಲ.”

ಪ್ರಶ್ನೆಗಳಿರುವ ಮನುಷ್ಯ, ಹೌದು ಪ್ರಶ್ನೆಗಳಿರುವ ಮನುಷ್ಯ ಮಾತ್ರ ಒಂದು ದಿನ ಸತ್ಯ ಕಂಡುಕೊಳ್ಳುವ ಮನುಷ್ಯನಾಗುತ್ತಾನೆ.

(ಮುಗಿಯಿತು)

ಸಂಶಯವಾದಿಯ ನಂಬಿಕೆಗಳು (ಭಾಗ 3) January 14, 2009

Posted by uniquesupri in ಓಶೋ ಹೇಳಿದ್ದು.
add a comment

(ಮೊದಲ ಭಾಗ)  (ಎರಡನೆಯ ಭಾಗ)

ಸಾಕ್ರೆಟಿಸನಿಗೂ ಮುನ್ನ ಇದ್ದ ಈ ಸಂಶಯವಾದಿಗಳ ಶಾಲೆಯನ್ನು ಸೊಫಿಸಂ ಎನ್ನಲಾಗುತ್ತಿತ್ತು. ಅವರು ಸಂಚರಿಸುತ್ತಾ ಬೋಧನೆ ನಡೆಸುತ್ತಿದ್ದ ಶಿಕ್ಷಕರು. ನಿಮ್ಮನ್ನು ಸೊಫಿಸ್ಟ್ ಆಗಿಸಲು ಅವರು ಬಹುದೊಡ್ಡ ಪ್ರಮಾಣದ ಫೀ ಅಪೇಕ್ಷಿಸುತ್ತಿದ್ದರು. ಸೋಫಿಸ್ಟ್ ವಾದದಲ್ಲಿ ಯಾರ ಪರವಾದರೂ ಇಲ್ಲಬಲ್ಲವನಾಗಿರುತ್ತಿದ್ದ ಆತನಿಗೆ ಸತ್ಯದ ಬಗ್ಗೆ ಕಾಳಜಿಯಿರುತ್ತಿರಲಿಲ್ಲ. ನೀವು ಹೆಚ್ಚು ಹಣ ಕೊಟ್ಟರೆ ಆತ ನಿಮ್ಮ ಪರವಾಗಿ ವಾದ ಮಾಡುವನು. ಒಂದು ವೇಳೆ ನಿಮ್ಮ ವಿರೋಧಿ ಪಕ್ಷದವರು ಹೆಚ್ಚು ಹಣ ಕೊಟ್ಟರೆ ಆತ ಅವರ ಪರವಾಗಿ ವಾದ ಮಾಡುವನು. ಆತನಿಗೆ ಸ್ವತಃ osho ಏನೊಂದೂ ತಿಳಿದಿರುವುದಿಲ್ಲ, ಆದರೆ ಆತನಿಗೆ ವಾದದ, ತರ್ಕದ ಕಲೆ ತಿಳಿದಿರುತ್ತದೆ.

ಒಂದು ಕಥೆಯಿದೆ… ಸಣ್ಣ ಊರೊಂದರಲ್ಲಿ ಪುಟ್ಟದೊಂದು ಚರ್ಚ್ ಇತ್ತು. ಅಲ್ಲಿನ ಪಾದ್ರಿಗೆ ಒಬ್ಬ ಮುದುಕನಿಂದ ಬಹಳವೇ ಕಿರಿಕಿರಿ ಅನುಭವಿಸುತ್ತಿದ್ದ. ಆದರೆ ಚರ್ಚಿನ ಸಮೂಹದಲ್ಲೇ ಆತ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ಆತ ಚರ್ಚಿಗೆ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ- ಹಾಗೆ ನೋಡಿದರೆ ಆ ಚರ್ಚನ್ನು ಕಟ್ಟಿಸಿದ್ದೇ ಆತ. ಪಾದ್ರಿಗೂ ಸಂಬಳವನ್ನು ನೀಡುತ್ತಿದ್ದವನು ಆತನೇ. ಪ್ರತಿ ಪ್ರವಚನದಲ್ಲೂ ಆತ ಚರ್ಚಿನ ಮೊದಲ ಸಾಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಮುದುಕ ಪ್ರವಚನದ ಮಧ್ಯದಲ್ಲೇ ನಿದ್ದೆಗೆ ಜಾರಿ ಬಿಡುತ್ತಿದ್ದ. ಆತನ ನಿದ್ರೆಯಿಂದ ಪಾದ್ರಿಗೆ ಕಿರಿಕಿರಿಯಾಗುತ್ತಿರಲಿಲ್ಲ – ಆತ ನಿಜಕ್ಕೂ ಗಟ್ಟಿಯಾಗಿ ಗೊರಕೆ ಹೊಡೆಯುತ್ತಿದ್ದ. ಇದರಿಂದ ಪಾದ್ರಿಗಷ್ಟೇ ಅಲ್ಲ, ಚರ್ಚಿನಲ್ಲಿದ್ದ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಆತನ ಗೊರಕೆಯಿಂದ ಚರ್ಚಿನ ಇತರರ ನಿದ್ರೆಗೆ ಭಂಗವಾಗುತ್ತಿತ್ತು!

ಕಡೆಗೆ ಚರ್ಚಿನ ಇತರೆ ಭಕ್ತರು ಪಾದ್ರಿಗೆ ಹೇಳಿದರು, “ಈಗ ಏನಾದರೂ ಮಾಡಲೇಬೇಕು. ಈ ಮುದುಕ ಮೊದಲ ಸಾಲಲ್ಲೇ ಕುಳಿತು ಗೊರಕೆ ಹೊಡೆಯುತ್ತಾನೆ ಇದರಿಂದ ನಿಮಗೂ ತೊಂದರೆ, ನಮ್ಮೆಲ್ಲರ ನಿದ್ರೆಗೂ ತೊಂದರೆ.”

ಕ್ರೈಸ್ತ ದೇಶಗಳಲ್ಲಿನ ಜನರು ಶನಿವಾರ ತಡ ರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ. ಏಕೆಂದರೆ ನಾಳೆ ಭಾನುವಾರ, ಅವರು ವಿಶ್ರಮಿಸಿಕೊಳ್ಳಬಹುದು. ಮುಂಜಾನೆಯೇ ಚರ್ಚಿಗೆ ಹೋಗಬೇಕು. ಬಹುಶಃ ಅವರು ಹಿಂದಿನ ರಾತ್ರಿಯಿಡೀ ನಿದ್ರೆಯನ್ನೇ ಮಾಡಿರುವುದಿಲ್ಲ– ಹಾಗೂ ಚರ್ಚು ನಿದ್ರೆಗೆ ಅತ್ಯಂತ ಪ್ರಸಕ್ರವಾದ ಜಾಗ.

ಹಾಗಾಗಿ ಅವರು ಹೇಳಿದರು, “ನಾವು ಇಷ್ಟು ಮುಂಚಿತವಾಗಿ ಮುಂಜಾನೆಯಲ್ಲಿಯೇ ಚರ್ಚಿಗೆ ಬರುವುದು ತಣ್ಣಗೆ ಒಂದು ಸಣ್ಣ ನಿದ್ದೆ ತೆಗೆಯಲು. ಆದರೆ ಈ ಮೂರ್ಖ ಎಲ್ಲರನ್ನೂ ಎಬ್ಬಿಸಿಬಿಡುತ್ತಾನೆ. ನಿಮ್ಮ ಪ್ರವಚನವನ್ನು ಕೇಳುವುದಕ್ಕೆ ಬದಲಾಗಿ ನಾವು ಆತನ ಗೊರಕೆಯನ್ನು ಕೇಳಬೇಕು. ದಯವಿಟ್ಟು ಇದರ ಬಗ್ಗೆ ಏನಾದರೂ ಮಾಡಿ.”

ಪಾದ್ರಿ ಆಲೋಚಿಸಿದ. ಮುದುಕ ಪ್ರತಿ ಸಲ ಚರ್ಚಿಗೆ ಬರುವಾಗ ತನ್ನ ಮೊಮ್ಮಗನನ್ನು ಕರೆದುಕೊಂಡು ಬರುತ್ತಿದ್ದ, ಆ ಹುಡುಗ ಸಾಮಾನ್ಯವಾಗಿ ಮುದುಕನ ಪಕ್ಕದಲ್ಲೇ ಇರುತ್ತಿದ್ದ, ಪಾದ್ರಿ ಅಂದುಕೊಂಡ, “ಬಹುಶಃ ಆ ಹುಡುಗನಿಗೆ ಆಮಿಷ ಒಡ್ಡಬಹುದು.”

ಆ ಹುಡುಗನನ್ನು ಕರೆದು ಪಾದ್ರಿ ಹೇಳಿದ, “ನೀನು ನಿನ್ನ ತಾತನನ್ನು ನಿದ್ದೆ ಮಾಡುವಾಗಲೆಲ್ಲಾ ಎಬ್ಬಿಸಿದರೆ ನಿನಗೆ ಪ್ರತಿ ಭಾನುವಾರ ಒಂದು ಡಾಲರ್ ಕೊಡುವೆ. ನೀನು ಮಾಡಬೇಕಾದ್ದು ಇಷ್ಟೇ, ಆತ ಗೊರಕೆ ಹೊಡೆಯಲು ಶುರುಮಾಡಿದಾಗಲೆಲ್ಲಾ ನೀನು ಆತನಿಗೆ ಹೊಡೆದು ಎಚ್ಚರಿಸುತ್ತಿರಬೇಕು.”

ಹುಡುಗ ಹೇಳಿದ, “ಒಳ್ಳೆಯದು. ಅವನಿಗೆ ನಾನು ಮಲಗುವುದಕ್ಕೆ ಬಿಡುವುದಿಲ್ಲ.”.

ಮುಂದಿನ ಭಾನುವಾರ ಆಹ್ಲಾದಕರವಾಗಿತ್ತು. ಎಲ್ಲರೂ ಹಾಯಾಗಿ ಮಲಗಿದರು. ಪಾದ್ರಿ ಪ್ರತಿ ಬಾರಿ ಹೇಳುತ್ತಿದ್ದ ಪ್ರವಚನವನ್ನೇ ಪುನರುಚ್ಚರಿಸಿದ… ಆತನ ಬಳಿ ಮೂರ್ನಾಲ್ಕು ಪ್ರವಚನಗಳು ಸಿದ್ಧವಾಗಿರುತ್ತಿದ್ದವು. ಹುಡುಗ ಮುದಕನಿಗೆ ಬಡಿದು ಬಡಿದು ಎಚ್ಚರವಾಗಿಸುತ್ತಿದ್ದ.

ಮುದುಕ ಕೇಳಿದ, “ಏನಿದು ತಲೆ ಹರಟೆ, ಪದೇ ಪದೇ ಏನು ಮಾಡುತ್ತಿದ್ದೀಯ?”

ಹುಡುಗ ನಕ್ಕ, ಆದರೆ ಮುದುಕನಿಗೆ ಗೊರಕೆ ಹೊಡೆಯಲು ಬಿಡಲಿಲ್ಲ.

ಪ್ರವಚನ ಮುಗಿದ ನಂತರ ಮುದುಕ ತನ್ನ ಮೊಮ್ಮಗನಿಗೆ ಕೇಳಿದ, “ಏನು ವಿಷಯ? ನನ್ನ ಬೆಳಗನ್ನೆಲ್ಲಾ ಹಾಳು ಮಾಡಿದೆಯಲ್ಲ? ಯಾಕೆ ಹೇಳು..”

ಹುಡುಗ ಹೇಳಿದ, “ಇದು ವ್ಯಾಪಾರದ ವಿಷಯ. ನಿನ್ನನ್ನು ಗೊರಕೆ ಹೊಡೆಯದಂತೆ ತಡೆದರೆ ಆತ ನನಗೆ ಒಂದು ಡಾಲರ್ ಕೊಡುತ್ತಾನೆ.”

ಮುದುಕ ಹೇಳಿದ, “ಯೋಚನೆ ಮಾಡಬೇಡ, ಇದು ವ್ಯಾಪಾರ ಅನ್ನುವುದಾದರೆ ನಾನು ನಿನಗೆ ಪ್ರತಿವಾರ ಎರಡು ಡಾಲರ್ ಕೊಡುತ್ತೇನೆ. ಮುಂದಿನ ವಾರದಿಂದ ನನ್ನ ನಿದ್ದೆ ಹಾಳು ಮಾಡಬೇಡ.”

ಮುಂದಿನ ಭಾನುವಾರ ಬಂದಿತು. ಪಾದ್ರಿಗೆ ಆಶ್ಚರ್ಯವಾಯಿತು. ಮುದುಕ ಗೊರಕೆ ಹೊಡೆಯುತ್ತಿರುವುದನ್ನು ಕಂಡು ಪಾದ್ರಿ ಹುಡುಗನತ್ತ ತಿರುಗಿ ಕಣ್ಣು ಮಿಟುಕಿಸಿ ಮುದಕನನ್ನು ಎಚ್ಚರವಾಗಿಸುವಂತೆ ಸೂಚಿಸುತ್ತಾನೆ. ಆದರೆ ಹುಡುಗ ಸುಮ್ಮನೆ ನಗುತ್ತಾ ಕುಳಿತಿದ್ದ. ಮುದುಕ ನಿರಾಯಾಸವಾಗಿ ಗೊರಕೆ ಹೊಡೆಯುತ್ತಿದ್ದ. ಉಳಿದ ಯಾರಿಗೂ ನಿದ್ದೆ ಬರಲಿಲ್ಲ. ಪ್ರವಚನ ಮುಗಿಸಿದ ನಂತರ ಪಾದ್ರಿ ಹುಡುಗನನ್ನು ಪಕ್ಕಕ್ಕೆ ಕರೆದು ಕೇಳಿದ, “ಏನಾಯ್ತು, ನಿನಗೆ ಡಾಲರ್ ಬೇಡವೇ?”

ಆತ ಹೇಳಿದ, “ನಾನೇನ್ ಮಾಡ್ಲಿ? ಇದು ವ್ಯಾಪಾರದ ವಿಷಯ.”

ಪಾದ್ರಿ ಕೇಳಿದ, “ಏನು ವ್ಯಾಪಾರ?”

ಆತ ಹೇಳಿದ, “ತಾತ ನನಗೆ ಎರಡು ಡಾಲರ್ ಕೊಡುತ್ತೀನಿ ಅಂದಿದ್ದಾನೆ. ಈಗ ಏನು ಮಾಡ್ತೀರಿ ನೋಡಿ.”

ಪಾಪದ ಪಾದ್ರಿಗೆ ತಾನು ಮುದುಕನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಯಿತು. ಈತ ಮೂರು ಡಾಲರ್ ಕೊಟ್ಟರೆ – ಇದು ಬಡವ ಪಾದ್ರಿಗೆ ದೊಡ್ಡ ಮೊತ್ತವಾಗುತ್ತದೆ – ಮುದುಕ ನಾಲ್ಕು ಡಾಲರ್ ಕೊಡುತ್ತಾನೆ. ಈ ತಂತ್ರ ಉಪಯೋಗಿಸಿದರೆ ತಾನು ಸಂಪೂರ್ಣವಾಗಿ ಸೋಲಪ್ಪಬೇಕಾಗುತ್ತದೆ ಎಂಬುದು ಅರಿವಾಗುತ್ತದೆ. ಹುಡುಗನಿಗೆ ಪಾದ್ರಿಯ ಪ್ರವಚನದಲ್ಲೂ ಆಸಕ್ತಿಯಿಲ್ಲ, ಚರ್ಚಿನ ಕಲಾಪದಲ್ಲೂ ಆಸಕ್ತಿಯಿಲ್ಲ, ಮುದುಕನ ಬಗ್ಗೆಯೂ ಆಸಕ್ತಿಯಿಲ್ಲ. ಇದು ಆತನಿಗೆ ಕೇವಲ ವ್ಯಾಪಾರದ ಪ್ರಶ್ನೆಯಷ್ಟೇ.

ಇದು ಸೊಫಿಸ್ಟರ ಧೋರಣೆಯಾಗಿತ್ತು. ದೊಡ್ಡ ರಾಜರು ತಮ್ಮ ಮಕ್ಕಳನ್ನು ಸೋಫಿಸ್ಟ್‌ಗಳ ಬಳಿ ಶಿಕ್ಷಣಕ್ಕೆ ಕಳುಹಿಸುತ್ತಿದ್ದರು. ಮುಂದೆ ಅವರು ರಾಜರಾದಾಗ ಯಾವ ವಾದವನ್ನಾದರೂ ಗೆಲ್ಲಬೇಕು ಎಂಬುದು ಆ ಶಿಕ್ಷಣದ ಉದ್ದೇಶವಾಗಿತ್ತು. ಸೋಫಿಸ್ಟನಿಗೆ ಸರಿ ತಪ್ಪು ಎಂಬುದರ ಪ್ರಶ್ನೆಯೇ ಏಳುವುದಿಲ್ಲ, ಆತನಿಗೆ ಯಾರ ವಾದ ಬಲವಾದದ್ದು ಎಂಬುದಷ್ಟೇ ಪ್ರಶ್ನೆ.

(ಮುಂದುವರೆಯುವುದು…)

ಸಂಶಯವಾದಿಯ ನಂಬಿಕೆಗಳು (ಭಾಗ 2) January 13, 2009

Posted by uniquesupri in Uncategorized.
add a comment

ಮೊದಲ ಭಾಗ

ಅನ್ವೇಷಕನಿಗೆ ಪ್ರಶ್ನೆ ಎನ್ನುವುದು ಒಂದು ಸಾಧನವಷ್ಟೇ. ಪ್ರಶ್ನೆ ನಿಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ. ಅದೊಂದು ಸವಾಲು. ನೀವು ಹೌದು ಎಂದೂ ಹೇಳುತ್ತಿಲ್ಲ, ಇಲ್ಲ ಎಂದೂ ಹೇಳುತ್ತಿಲ್ಲ. ನೀವು ಹೇಳುವುದಿಷ್ಟೇ, “ ನಾನು  ತಿಳಿದಿಲ್ಲ. ಸ್ವತಃ ಅನುಭವಿಸುವವರೆಗೆ ನಾನು ಯಾವುದನ್ನೂ ನಂಬುವುದಿಲ್ಲ. ಒಂದು ಸಲಕ್ಕೆ ನಾನು  ನಿಸ್ಸಂದೇಹವಾದಂಥ ಉತ್ತರ ಕಂಡುಕೊಂಡ ಮೇಲೆ ಎಷ್ಟೇ ಪ್ರಯತ್ನ ಪಟ್ಟರೂ ನನ್ನ ಪ್ರಶ್ನೆ ನಿಲ್ಲುವುದಿಲ್ಲ, ಅದು ತಾನಾಗಿ ಬಿದ್ದು ಹೋಗುತ್ತದೆ.”

ಸತ್ಯ ಎನ್ನುವುದು ಅದೆಷ್ಟು ವಿಸ್ತಾರವಾದದ್ದು, ವಾಸ್ತವವಾದದ್ದು, ಸ್ಪಷ್ಟವಾದದ್ದು, ಮೂಕವಿಸ್ಮಿತಗೊಳಿಸುವಂಥದ್ದು ಎಂದರೆ ಅದರೆದುರು ನಮ್ಮ ನಿಜ ಪ್ರಪಂಚವೇ ಕನಸಾಗಿ ಕಾಣುವುದು.

ಪ್ರಶ್ನೆ ಎನ್ನುವುದು ಅತ್ಯಂತ ಮಹತ್ವವಾದ ಸಂಗತಿ. ಕಟ್ಟ ಕಡೆಯವರೆಗೆ ಪ್ರಶ್ನಿಸಿತ್ತಾ ಹೋದವರಿಗೆ ಮಾತ್ರ ಸತ್ಯವೇನೆಂದು ಕಂಡಿತು, ಪ್ರೀತಿ ಎಂದರೇನು, ಮೌನ ಎಂದರೇನು, ಸೌಂದರ್ಯ ಎಂದರೇನು ಎಂಬುದು ಅರಿವಾಯಿತು. ಸಂಶಯವಾದಿಗೆ ಏನೂ ಕಾಣುವುದಿಲ್ಲ. ಆತ ಸಂಪೂರ್ಣ ಖಾಲಿಯಾಗಿರುತ್ತಾನೆ, ಆದರೆ ಹೆಚ್ಚು ಸದ್ದು ಮಾಡುತ್ತಾನೆ. ಖಾಲಿ ಪಾತ್ರೆಗಳು ಹೆಚ್ಚು ಸದ್ದು ಮಾಡುವಂತೆ. ನೀವು ಸಂಶಯವಾದಿಯೊಂದಿಗೆ ವಾದಕ್ಕೆ ನಿಲ್ಲಲಾಗದು, ಆತ ನೀವು ಹೇಳಿದಕ್ಕೆಲ್ಲಾ ಇಲ್ಲ ಎಂದು ಹೇಳುತ್ತಾನೆ, ಅವನೆದುರು ವಸ್ತುವಿನಂತೆ ತಂದಿಡಲಾಗದ ಮೌಲ್ಯಗಳನ್ನೆಲ್ಲಾ ಆತ ಇಲ್ಲ ಎಂದು ವಾದಿಸುತ್ತಾನೆ. osho5155

ಆದರೆ ಪ್ರಶ್ನೆಯ ಹಾದಿ ತುಂಬಾ ದೀರ್ಘವಾದದ್ದು ಹಾಗೂ ಕಠಿಣವಾದದ್ದು. ಅದು ಸತ್ಯವಲ್ಲದ್ದನ್ನೆಲ್ಲಾ ಅಳಿಸಿಹಾಕುತ್ತಾ ಹೋಗುತ್ತದೆ, ಕಡೆಗೆ ಸತ್ಯವಾದದ್ದು ಮಾತ್ರ ಉಳಿಯುತ್ತದೆ. ಒಮ್ಮೆ ಸತ್ಯ ಎದುರು ಮುಖಾ ಮುಖಿಯಾಗಿ ನಿಂತ ಮೇಲೆ, ಅದನ್ನು ಅನುಭವಿಸಿದ ಮೇಲೆ ಯಾರೂ ಸಹ ಅದನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಅನುಭವದ ಮುಖಾಂತರ ‘ಹೌದು’ ಹುಟ್ಟುತ್ತದೆ: “ಹೌದು, ಭಗವಾನ್, ಹೌದು”.

ಇದು ನಂಬಿಕೆಯಲ್ಲ. ಇದನ್ನು ನೀವು ಆತಂಕವನ್ನು, ಯಾತನೆಯನ್ನು, ದುಗುಡವನ್ನು ಅನುಭವಿಸಿ ಅನ್ವೇಷಿಸಿದ್ದೀರಿ. ಹಲವು ಸಂದರ್ಭಗಳಲ್ಲಿ ನಿಮಗೆ ಪಯಣ ಅಂತ್ಯವಿಲ್ಲದ್ದು, ನಿರರ್ಥಕವಾದದ್ದು ಎನ್ನಿಸಿ ನಿಂತು ಬಿಡಬೇಕು ಅನ್ನಿಸಿದ್ದಿದೆ.  ಅದು ಹಾಗಿಲ್ಲ. ಅಂತ್ಯವೆಂಬುದೊಂದಿದೆ, ನೀವು ನಡೆಯುತ್ತಿರಬೇಕಷ್ಟೇ.

ಪ್ರಶ್ನೆ ಶಸ್ತ್ರಚಿಕಿತ್ಸೆಯಂಥದ್ದು – ಅದು ಅಸಂಗತವಾದದ್ದನ್ನೆಲ್ಲಾ ಕತ್ತರಿಸುತ್ತಾ ಹೋಗುತ್ತದೆ. ಕಡೆಗೆ ಸಂಗತವಾದದ್ದು, ಸತ್ಯವಾದದ್ದು ಮಾತ್ರ ಉಳಿಯುತ್ತದೆ. ಪ್ರಶ್ನೆ ಮೋಡಗಳನ್ನು ತೆಗೆಯುತ್ತದೆ.

ಸಂಶಯವಾದಿ ಮೋಡ ಕವಿದ ಆಗಸವನ್ನು ನೋಡಿ ಸೂರ್ಯನೇ ಇಲ್ಲ ಅನ್ನುತ್ತಾನೆ, ಆತನಿಗೆ ಸೂರ್ಯ ಕಾಣುತ್ತಿರುವುದಿಲ್ಲ. ಆತ ಸೂರ್ಯ ಇಲ್ಲವೇ ಇಲ್ಲ, ಬೆಳಕೇ ಇಲ್ಲ ಎಂಬ ತೀರ್ಮಾನಕ್ಕೆ ಬಂದು ನಿಲ್ಲುತ್ತಾನೆ. ಪ್ರಶ್ನಿಸುವವ ಮೋಡಗಳನ್ನೆಲ್ಲಾ ಬೇಧಿಸಿ ದಾರಿ ಮಾಡಿಕೊಂಡು ಹೋಗುತ್ತಾನೆ. ಮೋಡದ ಹಿಂದೆ ಏನೋ ಇದೆ ಎಂದು ಆತ ನಂಬುತ್ತಾನೆ ಎಂದಲ್ಲ, ಅಲ್ಲಿ ಏನೂ ಇಲ್ಲದಿರಬಹುದು, ಆದರೆ ಆತನಿಗೆ ಮೋಡದ ಹಿಂದೇನಿದೆ ಎಂಬುದು ತಿಳಿಯಬೇಕಿರುತ್ತದೆ. ಹಾಗೆ ಮುಂದುವರೆದು ಹೋದವರೆಲ್ಲಾ ಸತ್ಯವನ್ನು ಕಂಡಿದ್ದಾರೆ, ಅದಕ್ಕೆ ಧೈರ್ಯ ಬೇಕು.

ಸಂಶಯವಾದಿ ಜಗತ್ತಿನ ಇತರ ಧಾರ್ಮಿಕ ಶ್ರದ್ಧೆಯ ಜನರ, ಆಸ್ತಿಕರ ಹಾಗೆಯೇ ಇರುತ್ತಾನೆ. ಸಂಶಯವಾದ ಎಂಬುದು ನಕರಾತ್ಮಕವಾದ ಮುಖ, ಅದು ನಕರಾತ್ಮಕವಾದ ಧರ್ಮ. ಸಂಶಯವಾದಿಗೂ, ಆಸ್ತಿಕನಿಗೂ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರಿಗೂ ಹುಡುಕಬೇಕು ಎನ್ನುವ ಹಂಬಲವಿರುವುದಿಲ್ಲ. ಒಬ್ಬ ಮೋಡದ ಹಿಂದೆ ಸೂರ್ಯನಿದ್ದಾನೆ ಎಂದು ನಂಬುತ್ತಾನೆ, ಮತ್ತೊಬ್ಬ ಸೂರ್ಯ ಇಲ್ಲ ಎಂದು. ಇಬ್ಬರಿಗೂ ಅನ್ವೇಷಣೆಯ ದೀರ್ಘವಾದ ಹಾದಿಯನ್ನು ತುಳಿಯುವ ಆಸಕ್ತಿಯಿಲ್ಲ. ಆ ಹಾದಿಯಲ್ಲಿರುವ ದುಸ್ವಪ್ನಗಳನ್ನು ಎದುರಿಸುವ ಛಾತಿಯಿಲ್ಲ. ಮೋಡದ ಆಚೆಗೆ ನಡೆಯುವ ಧೈರ್ಯವಿಲ್ಲ. ಕೆಲವೇ ಕೆಲವರು ಹಾಗೆ ನಡೆದಿದ್ದಾರೆ.

ನಾನು ನಿಮಗೆ ಪ್ರಶ್ನಿಸುವುದನ್ನು ಕಲಿಸುತ್ತೇನೆ, ಸಂಶಯವಾದವನ್ನು ಅಲ್ಲ. ನೆನಪಿಡಿ, ಪ್ರಶ್ನೆ ಸಂಶಯವಾದವಲ್ಲ; ಅದು ಹುಡುಕಾಟ, ಅನ್ವೇಷಣೆ.

(ಮುಂದುವರೆಯಲಿದೆ…)

ಸಂಶಯವಾದಿಯ ನಂಬಿಕೆಗಳು (ಭಾಗ ೧) January 12, 2009

Posted by uniquesupri in ಓಶೋ ಹೇಳಿದ್ದು.
3 comments

[ ಸಂಪದದ ಬಹುತೇಕ ಚರ್ಚೆಗಳಲ್ಲಿ ಭಾಗವಹಿಸುವಾಗ ನಾನು ಒಂದಂಶವನ್ನು ಗಮನಿಸಿದ್ದಿದೆ. ಕೆಲವು ಲೇಖನಗಳು ಕೆಲವರ ಭಾವನೆಗಳ ಅಭಿವ್ಯಕ್ತಿಯಾಗಿರುತ್ತವೆ. ಉದಾಹರಣೆಗೆ, ನಾನು ಹೆಮ್ಮೆಯ ಹಿಂದೂ ಎಂದು ಯಾರೊ ಬರೆದಿರುತ್ತಾರೆ. ತಮ್ಮ ನಂಬಿಕೆಯ ಬಗ್ಗೆ ಅಭಿಮಾನದಿಂದ ಏನನ್ನೋ ಹೇಳಿಕೊಂಡಿರುತ್ತಾರೆ. ಆಗ ಹಲವು ಸಲ ನನ್ನನ್ನೂ ಸೇರಿದಂತೆ ಅನೇಕರು, ಹಿಂದೂ ಎಂದರೆ ಯಾರು, ಹಿಂದೂ ಎನ್ನುವುದು ಏನು ಎಂದು ಪ್ರಶ್ನಿಸಿದ್ದೇವೆ. ಚರ್ಚೆಯ ವಿಷಯವಾಗಿ ಆ ಪ್ರಶ್ನೆಯನ್ನು ಎತ್ತಿಕೊಂಡರೆ ಸಮಂಜಸ, ಆದರೆ ನಂಬಿಕೆಗಳು, ಭಾವನೆಗಳನ್ನು ಎದುರಿಸಲು ಆ ಪ್ರಶ್ನೆಯನ್ನು ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಬಹಳ ಹಿಂದೆಯೇ ಮನವರಿಕೆಯಾಗಿದೆ. ಆದರೂ ಕೆಲವೊಮ್ಮೆ ವಾದದ ಮದದಲ್ಲಿ ಪ್ರಶ್ನಿಸುವಿಕೆಯನ್ನು ಸಂಯಮದ ಗಡಿ ದಾಟಿ ತೆಗೆದುಕೊಂಡು ಹೋದದ್ದಿದೆ. ಅದರ ಬಗ್ಗೆ ನನಗೆ ಪಶ್ಚಾತಾಪವಿದೆ.

ಹಿಂದೂ ಎಂದರೆ ಯಾರು ಎಂದು ಹಲವರು ಸಂಪದದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವರ ವಿವರಣೆಗಳನ್ನು ಖಂಡ ತುಂಡವಾಗಿ ಕತ್ತರಿಸುವ ಪ್ರಶ್ನೆಗಳನ್ನು ಹಲವರು ಎಸೆದಿದ್ದೇವೆ. ನಾನಂತೂ ನನಗೆ ಸಮಂಜಸವಾದ ವಿವರಣೆ ಸಿಕ್ಕುವವರೆಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಒಂದು ಹಂತದಲ್ಲಿ ನನಗೆ ಒಂದು ಯೋಚನೆ ಶುರುವಾಗುತ್ತದೆ. ಇಷ್ಟೆಲ್ಲಾ ಇತರರ ನಂಬಿಕೆಯನ್ನು, ಸಿದ್ಧಾಂತಗಳನ್ನು, ಧರ್ಮ ಭಾವನೆಯನ್ನು ಪ್ರಶ್ನಿಸುವ ನನ್ನ ನಂಬಿಕೆ ಯಾವುದು? ನನ್ನ ಧರ್ಮ ಯಾವುದು? ನನ್ನ ಜೀವನ ಧೋರಣೆ ಎಂಥದ್ದು? ಬಹುಶಃ ನಾನು ಇದರ ಬಗ್ಗೆ ಗಮನ ಹರಿಸದೆ ಇತರರ ಭಾವನೆ, ನಂಬಿಕೆ, ಧರ್ಮ, ಜೀವನ ದೃಷ್ಟಿಯ ಸಾಚಾತನದ ಬಗ್ಗೆ ಹೆಚ್ಚು ಕಾಳಜಿ ಮಾಡಿದೆನೆನೋ ಎಂದು ಆತಂಕವಾಗುತ್ತದೆ.

ಪ್ರಶ್ನಿಸುವುದು ಎಲ್ಲಾ ಸಂದರ್ಭಗಳಲ್ಲೂ ಒಳ್ಳೆಯದಾ? ನಂಬಿಕೆ ಎಂಬುದೊಂದು ಇಲ್ಲವಾ? ಶ್ರದ್ಧೆ ಮೂಡಬೇಕಾದ ಜಾಗದಲ್ಲಿ ಪ್ರಶ್ನೆ ಇಟ್ಟುಕೊಂಡರೆ ಆಗುವ ಅಪಾಯವೇನು ಎಂದು ನನ್ನ ನಾನು ಅಸ್ಪಷ್ಟವಾಗಿ ಕೇಳಿಕೊಂಡದ್ದಿದೆ. ನನ್ನ ಹಾಗೂ ನನ್ನಂತೆ ಪ್ರಶ್ನಿಸುವ ಅನೇಕರ ಪ್ರಶ್ನೆಗಳು ನಿಜವಾಗಿಯೂ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲವನ್ನು ಹೊತ್ತಿರುತ್ತವೆಯಾ ಇಲ್ಲವೇ ಇತರರ ವಾದವನ್ನು ಕತ್ತರಿಸಿ ಹಾಕುವ ಆಯುಧವಾಗಿ ಮೆರೆಯುತ್ತಿವೆಯಾ ಎಂದು ಆಲೋಚಿಸಿದ್ದಿದೆ. ಆದರೆ ಅವೆಲ್ಲಾ ಅಸ್ಪಷ್ಟವಾಗಿ ಪ್ರಜ್ಞೆಯನ್ನು ಚುಚ್ಚುವ ಸೂಜಿಗಳಾಗಿ ಮನದ ಮೂಲೆಯಲ್ಲೆಲ್ಲೋ ಹರಿದಾಡುತ್ತಿದ್ದವು. ನಿನ್ನೆ ಓಶೋನ ಒಂದು ಪ್ರವಚನವನ್ನು ಓದುವಾಗ ಆ ಸೂಜಿಗಳು ಸ್ಪಷ್ಟವಾಗಿ ಕಣ್ಣ ಮುಂದೆ ಬಂದವು.

ಆ ಪ್ರವಚನ ಇಲ್ಲಿ ಕೊಟ್ಟರೆ ಉಪಯುಕ್ತವಾಗಬಹುದು ಎನ್ನಿಸಿ ಅದನ್ನು ಕೊಟ್ಟಿರುವೆ.]
………………………………………..

ಪ್ರಶ್ನೆ:
ಪ್ರೀತಿಯ ಓಶೋ,
ಸಂಶಯವಾದಿ ಅನುಯಾಯಿಯಾಗಲಾರ ಎಂದು ಹೇಳಿರುವೆ. ಜೊತೆಗೇ ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ ಎಂದಿರುವೆ. ದಯವಿಟ್ಟು ಸಂಶಯವಾದ(skepticism)  ಹಾಗೂ ಪ್ರಶ್ನಿಸುವಿಕೆ(doubt)ಯ ನಡುವಿನೆ ವ್ಯತ್ಯಾಸವನ್ನು ವಿವರಿಸು.

ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವೆ ಬಹುದೊಡ್ಡ ವ್ಯತ್ಯಾಸವಿದೆ. ಬರೀ ವ್ಯತ್ಯಾಸವಿರುವುದಲ್ಲ, ಅವೆರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿರುವಂಥವು.

ಸಂಶಯವಾದ ಎಂಬುದು ಈಗಾಗಲೇ ಒಂದು ಧರ್ಮ-ಶ್ರದ್ಧೆಯಾಗಿದೆ, ಒಂದು ನಂಬಿಕೆಯಾಗಿದೆ, ಒಂದು osho07 ತೀರ್ಮಾನವಾಗಿದೆ. ಇದು ನಕರಾತ್ಮಕವಾದ ತೀರ್ಮಾನ. ಸಂಶಯವಾಗಿದೆ ತನ್ನದೆಂಬ ಸಿದ್ಧಾಂತ ಯಾವುದೂ ಇರುವುದಿಲ್ಲ; ಆತ ಕೇವಲ ಇತರರ ಸಿದ್ಧಾಂತದ ವಿರುದ್ಧವಾಗಿ ವಾದ ಮಾಡುತ್ತಾನೆ. ಆತನ ಸಿದ್ಧಾಂತದ ಬಗ್ಗೆ ನೀವು ಪ್ರಶ್ನಿಸಬಾರದು. ಆತನಲ್ಲಿ ಯಾವ ಸಿದ್ಧಾಂತವೂ ಇರುವುದಿಲ್ಲ. ಆತ ಒಂದು ದೊಡ್ಡ ಸೊನ್ನೆ. ಆತ ನಕರಾತ್ಮಕ ವ್ಯಕ್ತಿ. ಆತ ಯಾವುದನ್ನೂ ನಂಬುವುದಿಲ್ಲ – ಆದರೆ ಇದೂ ಸಹ ಒಂದು ನಂಬಿಕೆಯಾಗಿರುತ್ತದೆ.

ಉದಾಹರಣೆಗೆ, ಆತ ದೇವರನ್ನು ನಂಬುವುದಿಲ್ಲ. ಆತನನ್ನು ನಾವು ನಂಬಿಕೆಯಿಲ್ಲದವ ಎಂದು ಕರೆಯುತ್ತೇವೆ, ಆದರೆ ಆತ ದೇವರಲ್ಲಿ ನಂಬಿಕೆಯಿಲ್ಲದವ ಎಂದು ಕರೆಯುವುದು ಸರಿಯಲ್ಲ; ಆತ ದೇವರು ಇಲ್ಲ ಎಂದು ನಂಬಿರುತ್ತಾನೆ. ಇದು ನಕರಾತ್ಮಕವಾದ ನಂಬಿಕೆಯಾದ್ದರಿಂದ ನೀವು ಗೊಂದಲಕೊಳ್ಳಗಾಗುವಿರಿ. ಆಸ್ತಿಕ ದೇವರಲ್ಲಿ ನಂಬಿಕೆ ಹೊಂದಿರುತ್ತಾನೆ, ನಾಸ್ತಿಕ ದೇವರನ್ನು ನಂಬುವುದಿಲ್ಲ, ಆದರೆ ಆತ ಅನ್ವೇಷಕನಲ್ಲ, ಆತ ಸೃಜನಶೀಲನಲ್ಲ, ಆತ ಸಕಾರತ್ಮಕ ವ್ಯಕ್ತಿಯಲ್ಲ. ಆತ ಸತ್ಯಾನ್ವೇಷಣೆ ಮಾಡುತ್ತಿಲ್ಲ.

ಪುರಾತನ ಗ್ರೀಸಿನಲ್ಲಿ ಸಾಕ್ರೆಟಿಸ್‌ಗಿಂತ ಮುಂಚೆ ಒಂದು ವಿಚಾರ ಶಾಲೆಯಿತ್ತು, ಅವರನ್ನು ಸೋಫಿಸ್ಟ್ (sophist)ಗಳೆನ್ನುತ್ತಿದ್ದರು. ಅವರು ಸಂಶಯವಾದಿಗಳು. ಅವರಲ್ಲಿ ತಮ್ಮದೆನ್ನುವ ಯಾವ ಸಿದ್ಧಾಂತವೂ ಇರಲಿಲ್ಲ, ಆದರೆ ಇತರರ ಸಿದ್ಧಾಂತವನ್ನು ನಾಶ ಮಾಡಲು ಎಲ್ಲಾ ಆಯುಧಗಳೂ, ಎಲ್ಲಾ ಪ್ರತಿವಾದಗಳೂ ಇದ್ದವು.

ಇಲ್ಲ ಎಂದು ಹೇಳುವುದು ತುಂಬಾ ಸುಲಭ.

ಇದೆ ಎಂದು ಹೇಳುವುದು ಕಷ್ಟದ ಕೆಲಸ.

ನೀವು ಯಾವುದನ್ನು ಬೇಕಾದರೂ ಇಲ್ಲ ಎಂದು ಹೇಳಬಹುದು. ಯಾರಾದರೂ, ‘‘ ಸುಂದರವಾದ ಸೂರ್ಯಾಸ್ತವನ್ನು ನೋಡಲ್ಲಿ’’ ಎಂದು ಹೇಳಿದರೆ ನೀವು,“ನಾನು ಸೂರ್ಯ ಮುಳುಗುತ್ತಿರುವದನ್ನು ನೋಡುತ್ತಿರುವೆ. ಆದರೆ ಅದರಲ್ಲಿ ಸುಂದರವಾದದ್ದೇನೂ ನನಗೆ ಕಾಣುತ್ತಿಲ್ಲ. ಸೌಂದರ್ಯ ಎಂದರೇನು ಎಂದು ಮೊದಲು ನನಗೆ ವಿವರಿಸು. ಸೂರ್ಯಾಸ್ತವನ್ನು ಸುಂದರ ಎಂದು ಹೇಗೆ ಕರೆಯಬಲ್ಲೆ ನೀನು? ಸೌಂದರ್ಯ ಎಂಬುದನ್ನು ವ್ಯಾಖ್ಯಾನಿಸದೆ ನೀನು ಸೂರ್ಯಾಸ್ತವನ್ನು ಸುಂದರ ಎಂದು ಕರೆಯಲಾಗದು.” ಎನ್ನಬಹುದು.

ಸೌಂದರ್ಯ ವ್ಯಾಖ್ಯಾನವನ್ನು ಮೀರಿದ್ದು. ಸಾವಿರಾರು ವರ್ಷಗಳಿಂದ ಜನರು ಸೌಂದರ್ಯವನ್ನು, ಸತ್ಯವನ್ನು, ಪ್ರೀತಿಯನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಪ್ರಯತ್ನವೂ ಫಲಕಾರಿಯಾಗಿಲ್ಲ. ಇದಕ್ಕೆ ಸರಳವಾದ ಕಾರಣವೆಂದರೆ ಇವೆಲ್ಲಾ ಅನುಭವಗಳು. ನೀವು ಅನುಭವಗಳನ್ನು, ಅನುಭವಿಸಬೇಕಾದವುಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆದರೆ ಇವನ್ನೆಲ್ಲಾ ನಿರಾಕರಿಸುವುದು ಕಷ್ಟದ ಕೆಲಸವಲ್ಲ.

ಸಂಶಯವಾದಿ ಈಗಾಗಲೇ ಎಲ್ಲಾ ವಿಷಯಗಳ ಬಗೆಗೆ ತನ್ನ ‘ಇಲ್ಲ’ ಎಂಬ ಧೋರಣೆಯನ್ನು ಸ್ಥಾಪಿಸಿಕೊಂಡು ಬಿಟ್ಟಿರುತ್ತಾನೆ. ಈತ ಇತರ ಆಸ್ತಿಕರಿಗಿಂತ ಭಿನ್ನನಾದವನಲ್ಲ. ಅವರೂ ತಮ್ಮ ನಂಬಿಕೆಗಳಲ್ಲಿ ನೆಲೆನಿಂತಿದ್ದಾರೆ. ಇವರಿಬ್ಬರೂ ಅನ್ವೇಷಣೆಯ ಮಾರ್ಗದಲ್ಲಿರುವವರಲ್ಲ.

ಈಗ ನಿಮಗೆ ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವಿನ ವೈರುಧ್ಯ ಅರ್ಥವಾಗಿರಬಹುದು. ಪ್ರಶ್ನಿಸುವಿಕೆ ಎಂಬುದು ತೀರ್ಮಾನವಲ್ಲ. ಪ್ರಶ್ನೆ ಪಯಣವೊಂದರ ಆರಂಭ. ಅದೊಂದು ತೀರ್ಥಯಾತ್ರೆ. ಸಂಶಯವಾದಿ ಆಗಲೇ ಎಲ್ಲವಕ್ಕೂ ‘ಇಲ್ಲ’ ಎಂಬ ಉತ್ತರವನ್ನು ಕಂಡುಕೊಂಡಿರುತ್ತಾನೆ. ತನ್ನೆದುರು ಇರಿಸಲಾಗದ ಎಲ್ಲ, ತಾನು ಮೇಜಿನ ಮೇಲಿಟ್ಟುಕೊಂಡು ವಿಭಜಿಸಲಾಗದ ಎಲ್ಲವನ್ನೂ ಆತ ‘ಇಲ್ಲ’ ಎಂದು ತೀರ್ಮಾನಿಸಿಬಿಟ್ಟಿರುತ್ತಾನೆ.

ಕಾರ್ಲ್ ಮಾರ್ಕ್ಸ್ ಹೀಗೆ ಹೇಳಿದ್ದ, “ದೇವರನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ, ಟೆಸ್ಟ್ ಟ್ಯೂಬಿನಲ್ಲಿ ನೋಡುವವರೆಗೆ ನಾನು ಆತನನ್ನು ನಂಬುವುದಿಲ್ಲ.”

ದೇವರು ಟೆಸ್ಟ್ ಟ್ಯೂಬಿನಲ್ಲಿ ಕಂಡುಕೊಳ್ಳಬೇಕಾದುದಲ್ಲ. ದೇವರನ್ನು ಅರಸಬೇಕು. ನೀವು ಅರಸುವಿಕೆಯ ಹಾದಿಯಲ್ಲಿರುವಾಗ ಸಾವಿರಾರು ಸಂಗತಿಗಳನ್ನು ಪ್ರಶ್ನಿಸಬೇಕಾಗುತ್ತದೆ, ಆದರೆ ಈ ಹುಡುಕುವಿಕೆಯಲ್ಲಿ ನೀವೊಂದು ನಿಲ್ದಾಣವನ್ನು ತಲುಪುತ್ತೀರಿ, ಅಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳು ಮಾಯವಾಗಿಬಿಡುತ್ತವೆ. ಅಚಾನಕ್ಕಾಗಿ ನೀವು ಸತ್ಯದೆದುರು ಮುಖ ಮಾಡಿ ನಿಂತಿರುತ್ತೀರಿ. ನೀವು ಚಕಿತರಾಗಿರುತ್ತೀರಿ, ನಿಮಗೆ ದೇವರು ಸಿಕ್ಕಿರುವುದಿಲ್ಲ, ಆದರೆ ನೀವು ಏನನ್ನೋ ಕಂಡುಕೊಂಡಿರಿ ಎಂಬುದನ್ನು ನಿರಾಕರಿಸಲೂ ಸಾಧ್ಯವಾಗುವುದಿಲ್ಲ, ದೇವರಿಗಿಂತ ಉನ್ನತವಾದದ್ದೇನನ್ನೋ ನೀವು ಕಂಡುಕೊಂಡಿರುತ್ತೀರಿ. ಇದನ್ನು ನಾನು ದೈವತ್ವ ಎಂದು ಕರೆಯುತ್ತೇನೆ.

(ಮುಂದುವರೆಯಲಿದೆ…)

ಓಶೋ ವಿಚಾರಗಳು ಪ್ರಾಕ್ಟಿಕಲ್ಲಾಗಿವೆಯೇ? January 10, 2009

Posted by uniquesupri in ಚರ್ಚೆ.
add a comment

– ಸುಪ್ರೀತ್.ಕೆ.ಎಸ್

ಈ ಬ್ಲಾಗನ್ನು ತೆರೆಯುವುದರ ಉದ್ದೇಶ ಓಶೋ ಮೇಲಿನ ನನ್ನ ಪ್ರೀತಿ, ಮುನಿಸು, ಅಭಿಮಾನ, ಆತನ ಬಗೆಗಿರುವ ಬೆರಗು, ಕುತೂಹಲ, ಅನುಮಾನ, ಅಸಹ್ಯಗಳನ್ನು ಬರೆದಿರಿಸುವುದು, ಆ ಮೂಲಕ ನನ್ನೊಳಗೊಂದು ಸ್ಪಷ್ಟ ನಿಲುವನ್ನು ರೂಪಿಸಿಗೊಳ್ಳುತ್ತಾ ಹೋಗುವುದು ಎಂದಾಗಿತ್ತು. ಓಶೋನ ವಿಚಾರಗಳನ್ನು ನಾನೆಷ್ಟೇ ಮೆಚ್ಚಿದರೂ pg12_3 ಅವನ್ನು ಯಥಾವತ್ತಾಗಿ ಬ್ಲಾಗಿಗೆ ಹಾಕುವುದು ವ್ಯರ್ಥ ಶ್ರಮ ಎನ್ನಿಸಿ ಸುಮ್ಮನಾದೆ. ಹಾಗೆ ನೋಡಿದರೆ ಅಂತರ್ಜಾಲದಲ್ಲಿ ಓಶೋ ಸಾಹಿತ್ಯಕ್ಕೆ ಕೊರತೆಯೇನೂ ಇಲ್ಲ. ಆತನ ಪ್ರತಿಯೊಂದು ಭಾಷಣ, ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಓಶೋ ವಿಚಾರಗಳಿಗಾಗಿಯೇ ಮೀಸಲಾದ ಪತ್ರಿಕೆಯಿದೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿರುವ ಪ್ರವಚನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಹೊರಟರೆ ನಮ್ಮ ಶ್ರದ್ಧೆಯೆಂಬ ಕಲ್ಮಷವೇ ಸೇರಿಕೊಂಡು ಭಾಷಾಂತರ ಮೂಲಕ್ಕಿಂತ ಹೆಚ್ಚು ಕ್ಲಿಷ್ಟಕರವಾಗಿಬಿಡುತ್ತದೆ. ಮೇಲಾಗಿ ಓಶೋ ಇಂಥದ್ದೊಂದು ವಿಷಯದ ಬಗ್ಗೆ ಎಂದು ತಯಾರಾಗಿ ಮಾತಾಡಿದವನಲ್ಲ. ತನ್ನ ಸಂನ್ಯಾಸಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಒಂದೊಂದು ಪ್ರವಚನದಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ವಿಷಯಗಳನ್ನು ವಿವರಿಸುತ್ತಾ ಹೋಗುವ ಆತನ ಶೈಲಿಯನ್ನು ಅನೇಕ ವೇಳೆ ನಾವು ವಿರೋಧಾಭಾಸ ಎಂದು ಭಾವಿಸುತ್ತೇವೆ.ಯೇಸುವಿನ ಬಗ್ಗೆ ಇದುವರೆಗೂ ನಾನು ಕೇಳಿರುವ ಪ್ರವಚನಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಕೆಲವೊಂದು ವೇಳೆ ವೈರುಧ್ಯಗಳಂತೆ ಕಾಣುವ ಹಾಗೆ ಆತ ಮಾತನಾಡಿದ್ದಾನೆ. ಹೀಗಾಗಿ ಓಶೋ ಚಿಂತನೆ ಎಂಬುದು ನನ್ನೆದುರು ಸಮುದ್ರದ ಹಾಗೆ ನಿಂತಂತೆ ಭಾಸವಾಗುತ್ತದೆ. ಕಲ್ಲು ಸಕ್ಕರೆಯ ದೊಡ್ಡ ಬಂಡೆಯೆದುರು ನಿಂತಂತೆ ಅನ್ನಿಸುತ್ತದೆ. ಹೀಗಾಗಿ ಆತನ ಪ್ರವಚನಗಳನ್ನು ಯಥವಾತ್ತಾಗಿ ಭಾಷಾಂತರಿಸಿ ಬ್ಲಾಗಿಗೆ ಹಾಕುವುದಕ್ಕಿಂತ ಆತನ ಪ್ರೇರಣೆಯಿಂದ ನಾನು ಕಂಡುಕೊಂಡ ಸತ್ಯ ಯಾವುದು, ಆತ ನನ್ನಲ್ಲಿ ಹುಟ್ಟುಹಾಕಿದ ವಿಚಾರಗಳು ಯಾವುವು, ಅವು ನನ್ನೊಳಗೆ ಮಾಡಿದ ಪ್ರಭಾವಗಳೇನು ಎಂಬುದರ ಬಗ್ಗೆ ಬರೆಯುತ್ತೇನೆ.

ಓಶೋ ಬಗ್ಗೆ ಹಿಂದೆ ಬರೆದಿದ್ದ ಕೆಲವು ಬರಹಗಳಿಗೆ ಬಂದಿದ್ದ ಥರೇವಾರಿ ಪ್ರತಿಕ್ರಿಯೆಗಳಲ್ಲಿ ನನ್ನ ಗಮನ ಸೆಳೆದ ಪ್ರತಿಕ್ರಿಯೆ ಒಂದಿದೆ. ಓಶೋನ ಬಗ್ಗೆ ನನ್ನ ಹಾಗೆ ಕುತೂಹಲದಿಂದ ಓದಿಕೊಂಡಿರುವ ಬ್ಲಾಗಿಗರೊಬ್ಬರ ಪ್ರತಿಕ್ರಿಯೆ ಇದು: “ರಜನೀಶನ ವಿಚಾರಗಳು ಎಷ್ಟೇ ಕ್ರಾಂತಿಕಾರಿಯಾಗಿದ್ದರೂ, ಎಷ್ಟೇ ತಾರ್ಕಿಕ ಅನ್ನಿಸಿದರೂ ಅವು ಪ್ರಾಕ್ಟಿಕಲ್ ಅಲ್ಲ.”  

ಹಲವು ಬಾರಿ ನಾನೂ ವಿಚಾರಗಳ ಪ್ರಾಕ್ಟಿಕಲ್ ಮಹತ್ವದ ಬಗ್ಗೆ ಆಲೋಚಿಸಿದ್ದಿದೆ. ಇದು ಕೇವಲ ಓಶೋ ವಿಚಾರಗಳಲ್ಲ ಬಗೆಗಿನ ಮಾತಲ್ಲ. ಗಾಂಧೀಜಿಯ ವಿಚಾರಗಳನ್ನು ಓದುವಾಗ, ಅಹಿಂಸೆಯ ಬಗ್ಗೆ, ಅಸಹಕಾರದಿಂದ, ಪ್ರೇಮದಿಂದ ಶತ್ರುವಿನ ಮನಗೆಲ್ಲುವ ಬಗ್ಗೆ, ಪ್ರಾಣವನ್ನು ಕೊಡಲು ಬೇಕಾದರೂ ಸಿದ್ಧರಾಗಬೇಕು ಆದರೆ ಸತ್ಯವನ್ನು ಬಿಟ್ಟುಕೊಡಬಾರದು ಎಂಬ ಬಗ್ಗೆ ಅವರ ವಿಚಾರಗಳನ್ನು ಓದುವಾಗ ಇವೆಲ್ಲಾ ಕೇಳಲು ಚೆನ್ನಾಗಿವೆ, ಪ್ರಾಕ್ಟಿಕಲಿ ಸಾಧ್ಯವಾಗುವಂಥವಾ ಎಂದೆನಿಸಿದ್ದಿದೆ. ವಿವೇಕಾನಂದರಿಂದ ಹಿಡಿದು ವ್ಯಕ್ತಿತ್ವ ವಿಕಸನ ಪುಸ್ತಕ ಬರೆದ ಲೇಖಕನವರೆಗೆ ಎಲ್ಲರ ಚಿಂತನೆಗಳನ್ನು ಕೇಳಿದಾಗ ಇವನ್ನು ಪಾಲಿಸಲು ಸಾಧ್ಯವಾಗುತ್ತದಾ ಎಂಬ ಪ್ರಶ್ನೆ ಏಳುತ್ತದೆ.

ಓಶೋ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಿಕೊಂಡಾಗ ನನಗೆ ಈ ಪ್ರಶ್ನೆಯ ಹಾಗೂ ಅದರ ಹಿಂದಿನ ಉದ್ದೇಶದ ಬಗ್ಗೆಯೇ ನಗುಬರುತ್ತದೆ. ಓಶೋ ತನ್ನ ಜೀವಮಾನವಿಡೀ ಹೇಳಿದ್ದು, ರೆಡಿಮೇಡ್ ಉತ್ತರಗಳನ್ನು ನಂಬುತ್ತಾ, ನಿಮ್ಮ ಬುದ್ಧಿವಂತಿಕೆಯನ್ನು ಅವಮಾನಿಸಬೇಡಿ. ಶಾಸ್ತ್ರಗಳು, ಧಾರ್ಮಿಕ ಗ್ರಂಥಗಳು, ಧರ್ಮ ಗುರುಗಳು, ಢೋಂಗಿ ಬೋಧಕರು ನಿಮ್ಮ ಪ್ರಶ್ನೆಗಳಿಗೆಲ್ಲಾ ಒದಗಿಸುವ ಸಿದ್ಧ ಮಾದರಿಯ ಉತ್ತರಗಳಿಂದ ಸಂತೃಪ್ತರಾಗಿ ಪ್ರಶ್ನಿಸುವುದನ್ನೇ ಮರೆತುಬಿಡಬೇಡಿ. ನಿಮ್ಮ ಬುದ್ಧಿವಂತಿಕೆಯನ್ನು ಗೌರವಿಸಿ. ಪ್ರಶ್ನಿಸುವುದನ್ನು ನಿಲ್ಲಿಸಬೇಡಿ. ನೀವಾಗಿ ಉತ್ತರ ಕಂಡುಕೊಳ್ಳದ ಹೊರತು ಯಾವ ಉತ್ತರಗಳೂ ನಿಮ್ಮವಾಗುವುದಿಲ್ಲ. ಹೀಗೆ ಹೇಳುವುದೆಂದರೆ ಆಸರೆಗಾಗಿ ನಮ್ಮ ಕೈ, ಕಾಲು ತಡವುವ ಮಗುವನ್ನು ಬಿಡಿಸಿ ನೆಲದ ಮೇಲೆ ಬಿಟ್ಟು ಅದು ತಾನಾಗಿ ತನ್ನ ಕಾಲ ಮೇಲೆ ನಿಲ್ಲಲು ಬಿಡುವುದು. ಅವಲಂಬನೆಯಿಂದ ಮುಕ್ತವಾಗಿಸುವುದು. ಓಶೋನ ಈ ಮಾರ್ಗದಲ್ಲಿ ಯಾವುದೇ ಸಿದ್ಧಾಂತಗಳಿಲ್ಲ. ಇದು ಸತ್ಯ, ಇದನ್ನು ನೀನು ಒಪ್ಪಿಕೊಳ್ಳಬೇಕು. ನಾನು ಹೇಳಿದಂತೆ ನಡೆದರೆ ನಿನಗೆ ಸತ್ಯ ಸಿಕ್ಕುತ್ತದೆ ಎಂದು ಆತ ಹೇಳಲಿಲ್ಲ. ನಿನ್ನ ಸತ್ಯವನ್ನು ನೀನೇ ಕಂಡುಕೊಳ್ಳಬೇಕು, ಅವರಿವರು ಒದಗಿಸುವ ಸತ್ಯದಿಂದ ನೀನು ತೃಪ್ತನಾಗಿ, ಅವರ ಮೇಲೆ ಅವಲಂಬಿತನಾಗಬೇಡ ಎಂದ.

ಈಗ ಹೇಳಿ ಓಶೋನ ವಿಚಾರಗಳನ್ನು ಪಾಲಿಸುವುದು ಎಂಬ ಮಾತಿಗೆ ಅರ್ಥವಿದೆಯೇ? ನಿಮ್ಮ ಸ್ವಂತ ಅನುಭವದಲ್ಲಿ ಕಂಡುಕೊಳ್ಳದೆ ಏನನ್ನೂ ಒಪ್ಪಬೇಡಿ, ಯಾರನ್ನೂ ಅನುಸರಿಸಬೇಡಿ, ಯಾವುದನ್ನೂ ಪಾಲಿಸಬೇಡಿ ಎಂಬ ವಿಚಾರವನ್ನೇ ‘ಪಾಲಿಸುವುದು’ ಎನ್ನುವುದು ಹಾಸ್ಯಾಸ್ಪದ.

ಓಶೋ ಅಷ್ಟೇ ಅಲ್ಲ, ಸತ್ಯವನ್ನು ಕಂಡುಕೊಂಡ ಅನೇಕರು ಹೇಳಿದ್ದು ಅದನ್ನೇ. ನಿಮ್ಮ ಸತ್ಯವನ್ನು ನೀವೇ ಕಂಡುಕೊಳ್ಳಬೇಕು.  ಅವರಿವರ ಕಾಲು, ಕೈ ಹಿಡಿದು ನಡೆಯಬೇಡ ನಿನ್ನ ಕಾಲ ಮೇಲೆ ನೀನು ನಿಲ್ಲು ಎಂದು ಹೇಳಿದಂತೆ ಇದು.

ಓಶೋನ ವಿಚಾರವನ್ನು ‘ನಂಬುವುದು’ , ಆತ ಹೇಳಿದ್ದನ್ನೆಲ್ಲಾ ವಿಮರ್ಶಿಸದೆ ಒಪ್ಪಿಕೊಳ್ಳುವುದು, ನಮ್ಮ ಪ್ರಶ್ನೆಗಳಿಗೆಲ್ಲಾ ಆತ ಉತ್ತರ ಕೊಡುತ್ತಾನೆ ಎಂದು ಭಾವಿಸುವುದು ಇವೆಲ್ಲವೂ ನಮ್ಮನ್ನು ನಾವು ಅವಲಂಬಿತರನ್ನಾಗಿಸಿಕೊಂಡಂತೆಯೇ. ನಮ್ಮ ಬುದ್ಧಿವಂತಿಕೆಯನ್ನು , ಸಾಮರ್ಥ್ಯವನ್ನು ನಾವು ಕಡೆಗಣಿಸಿದಂತೆಯೇ. ಇದನ್ನೇ ಮಾಡಬೇಡಿ ಎಂದು ಎಚ್ಚರಿಸಿದವ ಓಶೋ.