ಬ್ಲಾಗಿಗರ ಪರಿಚಯ
ಹೆಸರು ಸುಪ್ರೀತ್.ಕೆ.ಎಸ್. ವಯಸ್ಸು ಇಪ್ಪತ್ತು. ಇಂಜಿನಿಯರಿಂಗ್ ಓದು.
ಕನ್ನಡದಲ್ಲಿ ಬರೆಯುವುದೆಂದರೆ ಇಷ್ಟ. ಸಾಹಿತ್ಯದಲ್ಲಿ ಆಸಕ್ತಿಯಿದೆ. ಕತೆ, ಕಾದಂಬರಿ, ಕವನಗಳು ಇಷ್ಟವಾದ ಹಾಗೆಯೇ ವೈಜ್ಞಾನಿಕ ಬರಹಗಳೂ, ರಾಜಕೀಯ ವಿಶ್ಲೇಷಣೆಗಳೂ ಗಮನ ಸೆಳೆಯುತ್ತವೆ. ಬರವಣಿಗೆ ಹಾಗೂ ಓದುವುದು ಮುಖ್ಯ ಹವ್ಯಾಸವಾದರೂ ಆಗಾಗ ಸಮಕಾಲೀನ ವಿಷಯಗಳ ಚರ್ಚೆಗಳಲ್ಲಿ ಭಾರಿ ಆಸಕ್ತಿಯಿಂದ ಭಾಗವಹಿಸುತ್ತೇನೆ. ಕನ್ನಡದಷ್ಟು ಇಂಗ್ಲೀಷ್ ಸರಾಗವಿಲ್ಲ ಎಂಬ ಬಗ್ಗೆ ಸಂಕೋಚ ಹಾಗೂ ಉಡಾಫೆಯಿದೆ.
ಎಲ್ಲಾ ಬಗೆಯ ಸ್ಥಾಪಿತ ಸಿದ್ಧಾಂತಗಳ, ಮನಸ್ಥಿತಿಗಳ ಬಗ್ಗೆ ಸಿಟ್ಟಿದೆ. ಅವೆಲ್ಲವನ್ನೂ ಮೀರಬೇಕೆಂಬ ಹಂಬಲವಿದೆ. ಬ್ಲಾಗಿನಲ್ಲಿ ಕವಿತೆಯ ಬಗ್ಗೆ ಆಸಕ್ತಿ ಬೆಳೆಯಿತು. ಇಷ್ಟ ಎನ್ನುವ ಮಟ್ಟಿಗೆ ಯಾವ ಕವಿಯನ್ನೂ ಓದಿಕೊಂಡಿಲ್ಲ. ಲಂಕೇಶ್, ಶಿವರಾಮ ಕಾರಂತ, ತೇಜಸ್ವಿ, ಡಿ.ಎಸ್.ನಾಗಭೂಷಣ್, ಅನಂತಮೂರ್ತಿಯರ ವೈಚಾರಿಕತೆಯನ್ನು ಆಸ್ವಾದಿಸುತ್ತಾ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ರವಿ ಬೆಳಗೆರೆ, ಜೋಗಿ,ಜಯಂತ ಕಾಯ್ಕಿಣಿ, ಅಗ್ನಿ ಶ್ರೀಧರ್, ತೇಜಸ್ವಿ, ನಾಗೇಶ್ ಹೆಗಡೆ, ಚೇತನಾ ತೀರ್ಥಹಳ್ಳಿಯವರ ಬರವಣಿಗೆಯ ಶೈಲಿಯನ್ನು ಆರಾಧಿಸುತ್ತಾ, ಅನುಕರಿಸುತ್ತಾ, ಅನುಮಾನಿಸುತ್ತಾ ಅವೆಲ್ಲವನ್ನೂ ದಾಟುವ ಪ್ರಯತ್ನ ಮಾಡುತ್ತಾ ಬರೆಯುತ್ತಿದ್ದೇನೆ. ಹೆಚ್ಚು ಓದಿರುವುದು ಕಾರಂತರ ಕಾದಂಬರಿಗಳು. ಸಾಹಿತ್ಯಿಕ ಓದಿಗಿಂತ ಪತ್ರಿಕೆಗಳು, ಮ್ಯಾಗಝೀನುಗಳ ಓದೇ ಹೆಚ್ಚು. ಇದರಿಂದ ಎಲ್ಲಾ ತಿಳಿದಿದ್ದೇನೆ ಎನ್ನುವ ಭ್ರಮೆ ಆಗಾಗ ತಲೆಗೆ ಹತ್ತುತ್ತದೆ. ಅಷ್ಟೇ ಬೇಗನೇ ಇಳಿದುಹೋಗುತ್ತದೆ. ಓಶೋ ನನ್ನನ್ನು ಗೊಂದಲಕ್ಕೆ ತಳ್ಳಿ ನಾನಾಗಿ ಈಜಿ ದಡ ತಲುಪುವಂತೆ ಮಾಡುತ್ತಾರೆ, ನನ್ನೆಲ್ಲಾ ಊರುಗೋಲುಗಳನ್ನು ನಿಷ್ಕರುಣೆಯಿಂದ ಕಿತ್ತೆಸೆಯುತ್ತಾರೆ ಎಂಬ ಕಾರಣಕ್ಕೆ ಇಷ್ಟವಾಗುತ್ತಾರೆ. ಗಾಂಧಿ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಇಚ್ಛೆಯಿದೆ. ವಿಜ್ಞಾನವನ್ನು ಸರಳವಾಗಿ ಬರೆಯಬೇಕೆಂಬ ಕನಸಿದೆ. ನನ್ನ ಸಹಜೀವಿಗಳ ಬಗೆಗೇ ಏನೂ ಆಸಕ್ತಿ ಬೆಳೆಸಿಕೊಂಡಿಲ್ಲವಲ್ಲ ಎಂಬ ಯೋಚನೆಯಿದೆ.
ಒಮ್ಮೆ ಬ್ಲಾಗಿಂಗಿನ ಗುಂಗಿಗೆ ಬಿದ್ದು ಐದಾರು ಬ್ಲಾಗ್ ತೆರೆದು ಕೈಲಾದಷ್ಟು ಬರೆದು ಅನಂತರ ತಲೆಕೆಟ್ಟು ಎಲ್ಲವನ್ನೂ ಅಳಿಸಿಹಾಕಿ ನಿರಾಳನಾಗಿದ್ದ ಅನುಭವವಿದೆ. ಮತ್ತೆ ಕೈ ಕಡಿಯಲು ಶುರು ಮಾಡಿದಾಗ ಬ್ಲಾಗಿನ ಜಗತ್ತಿಗೆ ವಾಪಸ್ಸಾಗಿದ್ದೇನೆ. ಕಳೇದ ಎರಡು ವರ್ಷಗಳಿಂದ ನಾನು ಹಾಗೂ ನನ್ನ ವಯಸ್ಸಿನ ಕೆಲವು ಗೆಳೆಯರು ಸೇರಿ ‘ಸಡಗರ’ ಎಂಬ ಹೆಸರಿನ ಮಾಸ ಪತ್ರಿಕೆಯೊಂದನ್ನು ಪ್ರಕಟಿಸಿ ಚಂದಾದಾರರಿಗೆ ಕಳುಹಿಸಿಕೊಡುತ್ತಿದ್ದೇವೆ. ನನ್ನನ್ನು ಅವರು ಪತ್ರಿಕೆಯ ಸಂಪಾದಕ ಎಂದು ನೇಮಿಸಿದ್ದಾರೆ.
ಸಂಗೀತ ಸಂಯೋಜನೆಯಲ್ಲಿ ಆಸಕ್ತಿ ಇದೆ. ಆದರೆ ಅದರ ಎಬಿಸಿಡಿಯೂ ತಿಳಿದಿಲ್ಲ. ಸಾಯುವುದರೊಳಗೆ ಕೊಳನ್ನು ನುಡಿಸುವುದನ್ನು ಕಲಿಯಬೇಕು ಎಂದು ಹಗಲು ಗನಸು ಕಾಣುವಾಗಲೆಲ್ಲಾ ತಪ್ಪದೆ ನೆನಪು ಮಾಡಿಕೊಳ್ಳುತ್ತೇನೆ. ತಿಂಗಳಿಗೊಮ್ಮೆ ಗಲ್ಲಿ ಕ್ರಿಕೆಟ್ ಆಡಿದಾಗಲೆಲ್ಲಾ ನಾನು ಅದ್ಭುತ ಕ್ರಿಕೆಟರ್ ಆಗಬೇಕು ಎಂದುಕೊಳ್ಳುತ್ತೇನೆ. ಮುಂದೇನಾಗಬೇಕು ಎಂದು ಯೋಚಿಸುತ್ತ ಕುಳಿತರೆ ಸಾಲುಗಟ್ಟಿಬರುವ ನೂರಾರು ಆಲೋಚನೆಗಳನ್ನು ಕಂಡು ನನಗಿನ್ನೂ ಕನಸು ಕಾಣುವುದಕ್ಕೆ ಬರುತ್ತೆ ಎಂದುಕೊಂಡು ಖುಶಿಯಾಗುತ್ತೇನೆ.
ಇದು ಈವರೆಗಿನ ಪ್ರವರ. ಮರುಕ್ಷಣವೇ ಏನಾದರೂ ಬದಲಾವಣೆಗಳಾಗಬಹುದು. ಹೀಗಾಗಿ ಮೇಲೆ ಹೇಳಿರುವುದೆಲ್ಲಾ ಸತ್ಯ ಎಂದು ಪ್ರಮಾಣೀಕರಿಸುವ ಅಪರಾಧ ಮಾಡುವುದಿಲ್ಲ!
……………………
ಚೇತನಾ ತೀರ್ಥಹಳ್ಳಿ
ಡಾ|| ಜ್ಞಾನದೇವ್
ನಗೆ ಸಾಮ್ರಾಟ್
Comments»
No comments yet — be the first.