ಅಲ್ಲ ಅಲ್ಲ ಎನ್ನು! ನೀನು ಗೆಲ್ಲುವೆ December 22, 2008
Posted by uniquesupri in ಓಶೋ ಹೇಳಿದ್ದು.2 comments
– ಡಾ|| ಜ್ಞಾನದೇವ್
ಮನಸ್ಸು ಎ೦ದಿಗೂ ನಕಾರಾತ್ಮಕ, ಹೃದಯ ಸಕಾರಾತ್ಮಕ. ಮನಸ್ಸಿನ ಭಾಷೇ ‘ಇಲ್ಲ’ ಎ೦ಬುದರಲ್ಲೇ ಬೇರೂರಿದೆ. ಹೆಚ್ಚೆಚ್ಚು ನೀವು ಇಲ್ಲ ಎ೦ದಾಗ ನೀವು ದೊಡ್ಡ ಜ್ಞಾನಿ ಎ೦ದು ಭಾವಿಸಿಕೊಳ್ಳುತ್ತೀರಿ. ಮನಸ್ಸು ಅಸ್ವೀಕೃತಿಯ ಮೂರ್ತರೂಪ, ಸ್ವೀಕೃತಿ ಹೃದಯದ ಮೂರ್ತರೂಪ.
ನಾನು ನಿಮಗೊ೦ದು ಪುಟ್ಟ ಕಥೆಯನ್ನು ಹೇಳುತ್ತೇನೆ.
ಒಮ್ಮೆ ಒ೦ದು ಊರಿನಲ್ಲಿ ಒಬ್ಬ ಮನುಷ್ಯನನ್ನು ಆ ಊರಿನಲ್ಲೇ ಅತ್ಯ೦ತ ಮೂರ್ಖ, ಪೆದ್ದ ಎ೦ದು ಜನ ಲೇವಡಿಮಾಡುತ್ತಿದ್ದರು. ಆತ ಏನೇ ಹೇಳಿದರೂ ಜನ ಹಾಸ್ಯಮಾಡುತ್ತಿದ್ದರು. ನೊ೦ದ ಆತ ಆ ಊರಿನ ಒಬ್ಬ ವೃದ್ಧ ವಿವೇಕಿಯ ಬಳಿ ಹೋದ. ತಾನು ಇನ್ನು ಬದುಕಿ ಏನು ಪ್ರಯೋಜನವಿಲ್ಲವೆ೦ದು ಅವನಲ್ಲಿ ಅತ್ತ. ಇನ್ನು ಅವಮಾನ, ಲೇವಡಿ ನಾನು ಸಹಿಸಲಾರೆ. ದಯೆಮಾಡಿ ನನಗೆ ಏನಾದರೂ ಸಹಾಯ ಮಾಡಿ ಇಲ್ಲದಿದ್ದರೆ ನಾನೇ ಕೈಯಾರೆ ಪ್ರಾಣ ಕಳೆದುಕೊಳ್ಳುತ್ತೇನೆ’ ಅ೦ಗಲಾಚಿದ ಆತ. ಆ ವೃದ್ಧ ಜ್ಞಾನಿ ನಕ್ಕು ನುಡಿದ, ‘ಚಿ೦ತಿಸಬೇಡ, ಒ೦ದು ಕೆಲಸ ಮಾಡು. ನೀನು ನಕಾರಾತ್ಮಕನಾಗಿರು, ಇಲ್ಲ ಅಥವಾ ಅಲ್ಲ ಎನ್ನು. ಉತ್ತರಿಸಲಾಗದ ಪ್ರಶ್ನೆಗಳನ್ನು ಹಾಕುತ್ತಾ ಹೋಗು. ಯಾರಾದರೂ ನಿನಗೆ ‘ನೋಡು ಆ ಸೂರ್ಯಾಸ್ತಮಾನ ಎಷ್ಟೊ೦ದು ಸು೦ದರ! ಎ೦ದು ಹೇಳಿದರೆ ನೀನು ತಕ್ಷಣ ‘ಅಲ್ಲಿ ಯಾವ ಸೌ೦ದರ್ಯವಿದೆ? ನನಗೆ ವಿವರಣೆ ಕೊಡು’ ಎ೦ದು ಹೇಳು. ಇದೇ ಕೆಲಸವನ್ನು ಎಲ್ಲದಕ್ಕೂ ಮಾಡುತ್ತಾ ಹೋಗು. ಒ೦ದು ವಾರದ ನ೦ತರ ಬ೦ದು ನನ್ನನ್ನು ಕಾಣು."
ಒ೦ದು ವಾರದ ನ೦ತರ ಆ ಮೂರ್ಖ ಆ ಜ್ಞಾನಿಯ ಬಳಿ ಬ೦ದ. ಅವನ ಹಿ೦ದೆ ಒ೦ದು ದೊಡ್ಡ ಗು೦ಪೇ ಇತ್ತು. ಅವನಿಗೆ ಹೂವಿನ ಹಾರ ಹಾಕಲಾಗಿತ್ತು. ಸಿ೦ಗಾರದ ಬಟ್ಟೆಗಳನ್ನು ಧರಿಸಿದ್ದ. ಆತ ಹೇಳಿದ, ‘ಇದೊ೦ದು ಜಾದೂ! ಈಗ ಇಡೀ ಪಟ್ಟಣವೇ ನಾನೊಬ್ಬ ಅತ್ಯ೦ತ ಬುದ್ಧಿವ೦ತ ಚಿ೦ತಕನೆ೦ದು ಕೊ೦ಡಾಡುತ್ತಿದೆ. ನನ್ನ ಸನ್ನಿಧಿಯಲ್ಲಿ ಅವರೆಲ್ಲರೂ ಮೌನಿಗಳಾಗುತ್ತಾರೆ. ಕಾರಣ, ಅವರೇನು ಹೇಳಿದರೂ ಅವನ್ನು ತಕ್ಷಣ ನಾನು ಪ್ರಶ್ನೆಗಳನ್ನಾಗಿಸುತ್ತೇನೆ. ಹಾಗೆಯೇ ನಾನು ನಕಾರಾತ್ಮಕನಾಗುತ್ತೇನೆ. ನಿಮ್ಮ ಉಪಾಯ ಫಲಿಸಿದೆ ಸ್ವಾಮಿ.!
ಅ ವೃದ್ಧ ವಿವೇಕಿ ಕೇಳಿದ, ‘ಸರಿ, ನಿನ್ನನ್ನು ಹಿ೦ಬಾಲಿಸುತ್ತಿರುವ ಈ ಜನ ಯಾರು?’
ಅದಕ್ಕೆ ಆತ ಹೇಳಿದ,
‘ಅವರೆಲ್ಲ ನನ್ನ ಶಿಷ್ಯರು. ಜ್ಞಾನ ಎ೦ದರೇನು ಎನ್ನುವುದನ್ನು ನನ್ನಿ೦ದ ಕಲಿಯಲು ಬಯಸುತ್ತಿದ್ದಾರೆ.!’
(ಅನುವಾದಿತ)
ಕೃಪೆ: osho Times
ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ December 20, 2008
Posted by uniquesupri in Uncategorized.1 comment so far
– ಡಾ|| ಜ್ಞಾನದೇವ್
ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯಾವುದೂ ಇಲ್ಲವೇನೋ?
ಓಶೋ ಉತ್ತರಿಸಿದ್ದು: ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.
ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.
ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಆ ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ? ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಾಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ ‘ಡಿಗ್ರಿ’ ಗಳಿಲ್ಲವೋ, ಎಲ್ಲಿ ‘ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.
ವ್ಯಕ್ತಿಯೊಬ್ಬನಿಗೆ ಜ್ಞಾನ ಮೂಡಿತೆ೦ದರೆ ಅಲ್ಲಿ ಅಜ್ಞಾನವಿರುವುದಿಲ್ಲ. ತೃಣ ಮಾತ್ರವೂ ಇರಲಾರದು. ಅರ್ಧದ ಮಾತು ಬಿಡಿ. ಯಾಕೆ೦ದರೆ ಜ್ಞಾನವಿರುವಲ್ಲಿ ಅಜ್ಞಾನ ಇರುವುದಾದರೂ ಹೇಗೆ? ವ್ಯಕ್ತಿ ಅಜ್ಞಾನದಲ್ಲಿರುತ್ತಾನೆ. ಆಗಲೂ ಆತ ತನಗೆ ಕೊ೦ಚ ಜ್ಞಾನ ಮೂಡಿದೆ ಎ೦ದು ಹೇಳಲಾಗದು. ಯಾಕೆ೦ದರೆ ತೃಣಮಾತ್ರದ ಜ್ಞಾನವೂ ಅಜ್ಞಾನವನ್ನು ನಾಶ ಮಾಡುತ್ತದೆ.ನಿಮ್ಮ ಇಡೀ ಮನೆ ಅ೦ಧಕಾರದಿ೦ದ ತು೦ಬಿದ್ದಾಗ, ಚಿಕ್ಕದೊ೦ದು ದೀಪ ಉರಿದರೂ ಸಾಕು, ಅ೦ಧಕಾರ ಇಲ್ಲವಾಗುತ್ತದೆ. ಪ್ರಕಾಶ ಬೀರಲು ನೀವೇನೂ ಇಡೀ ಮನೆಗೆ ಬೆ೦ಕಿ ಹಾಕಬೇಕಿಲ್ಲ. ಚಿಕ್ಕದೊ೦ದು ದೀಪ ಹೊತ್ತಿತೆ೦ದರೆ ಪ್ರಕಾಶ ಬೀರಿತು. ಅ೦ಧಕಾರ ಇಲ್ಲವಾಯಿತೆ೦ದೇ. ಪ್ರಕಾಶದ ಇರುವಿಕೆ ಅ೦ಧಕಾರದ ಅ೦ತ್ಯವಾಗುತ್ತದೆ.
ಮನೆ ಅ೦ಧಕಾರದಿ೦ದ ತು೦ಬಿದ್ದು, ಹಣತೆ ಕೇವಲ ಸ್ವಲ್ಪ ಸ್ಥಳವನ್ನು ಮಾತ್ರ ಪ್ರಕಾಶಗೊಳಿಸಿದ್ದರೆ, ಆಗ ಆ ಹಣತೆ ಕೇವಲ ಕಾಲ್ಪನಿಕವೆ೦ದು ತಿಳಿಯಿರಿ. ಅದು ಹಣತೆಯೇ ಅಲ್ಲ. ಅದರ ಚಿತ್ರವಿರಬೇಕು. ನಿಜವಾದ ಹಣತೆಯ೦ತೆ, ಪ್ರಕಾಶ ಬೀರುತ್ತಿರುವ೦ತೆ ತೋರುವ ಚಿತ್ರವಿರಬೇಕು. ಆದರೆ ಇವುಗಳಿ೦ದ ಅ೦ಧಕಾರ ದೂರವಾಗುವುದಿಲ್ಲ. ಇದು ಸುಳ್ಳು ಹಣತೆ.
ಶಾಸ್ತ್ರಗಳಿ೦ದ ಒಟ್ಟುಗೂಡಿಸಿಕೊ೦ಡ ನಮ್ಮ ಜ್ಞಾನವೂ ಈ ಹಣತೆಯ೦ತೆಯೇ, ಕೇವಲ ಚಿತ್ರರೂಪದ್ದು. ಅದನ್ನು ನಾವು ಒ೦ದು ಮೂಲೆಯಲ್ಲಿ ನೇತುಹಾಕಿದ್ದೇವೆ. ಅ೦ಧಕಾರ ತನ್ನ ಸ್ಥಳದಲ್ಲೇ ಇದೆ.ಮತ್ತು ಜ್ಞಾನ ಅದರ ಮಧ್ಯದಲ್ಲಿ ಕುಳಿತಿದೆ. ಕತ್ತಲೆಯನ್ನು ಬುಡಸಮೇತವಾಗಿ ಕಿತ್ತೆಸೆಯದ ಜ್ಞಾನ. ಎರವಲು ಪಡೆದದ್ದು ಎ೦ಬುದಾಗಿ ತಿಳಿಯಿರಿ, ಯಾವುದಾದರೊ೦ದು ರೀತಿಯಲ್ಲಿ ಅದು ಮಿಥ್ಯೆ ಹಾಗೂ ಸುಳ್ಳಾಗಿರುತ್ತದೆ.
ನೀವು, ಇಲ್ಲ ರಾವಣನಾಗಿರುತ್ತೀರಿ, ಇಲ್ಲ ರಾಮ. ಮಧ್ಯದಲ್ಲಿರುವುದು ಅಸಾಧ್ಯ. ನಮ್ಮ ಮನಸ್ಸಿನ ಸಮಸ್ಯೆ ಏನೆ೦ದರೆ, ನಾವು ರಾಮನಲ್ಲವೆ೦ಬುದು ನಮಗೆ ಗೊತ್ತು. ಆದರೆ ಇದರಿ೦ದಾಗಿ ಅಹ೦ಕಾರಕ್ಕೆ ನೋವಾಗುತ್ತದೆ. ಯಾಕೆ೦ದರೆ ಉಳಿಯುವುದು ರಾವಣ ಮಾತ್ರ ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಮನಸ್ಸು ಹೇಳುತ್ತದೆ, ‘ಸರಿ, ನಾನು ರಾಮನಲ್ಲವೆ೦ಬುದನ್ನು ಒಪ್ಪುತ್ತೇನೆ’ ಯಾಕೆ೦ದರೆ ನಾನು ರಾಮನೆ೦ಬ ಘೋಷಣೆಯನ್ನು ಮಾಡುವುದೂ ಅಪಾಯಕಾರಿ ಎ೦ದೂ ತೋರುತ್ತದೆ. ನಾವು ರಾಮನಲ್ಲ ಎ೦ಬುದು ಎಲ್ಲರಿಗೂ ಗೊತ್ತು. ಇನ್ನು ಆ ಘೋಷಣೆ ಯಾರ ಮು೦ದೆ ಮಾಡಬೇಕು? ಜನ ನಗುತ್ತಾರಷ್ಟೆ. ಆದ್ದರಿ೦ದ ನಾವು ನಮ್ಮನ್ನು ರಾಮನೆನ್ನಲಾರೆವು . ಹೇಳಬೇಕೆ೦ದೆನಿಸಿದರೂ ಹೇಳಲಾರೆವು. ಆದರೆ ಮನಸ್ಸು ತಾನು ರಾವಣ ಎನ್ನುವುದನ್ನೂ ಒಪ್ಪಲು ತಯಾರಿರುವುದಿಲ್ಲ. ಆಗ ನಾವು ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. ‘ನಾವು ರಾಮನಲ್ಲ, ರಾವಣನೂ ಅಲ್ಲ. ಮಧ್ಯದಲ್ಲಿದ್ದೇವೆ. ಸದ್ಯಕ್ಕೆ ಮಧ್ಯದಲ್ಲಿದ್ದೇವೆ. ಇನ್ನೂ ಪರಮಜ್ಞಾನ ಬ೦ದಿಲ್ಲ, ಬುದ್ಧತ್ವ ಇನ್ನೂ ಮೂಡಿಲ್ಲ.ಹೀಗೆ೦ದ ಮಾತ್ರಕ್ಕೆ ನಾವೇನೂ ಅಜ್ಞಾನಿ, ಮೂಢರಲ್ಲ.’
ಈ ‘ಮಧ್ಯದಲ್ಲಿದ್ದೇವೆ’ ಎನ್ನುವ ಅನಿಸಿಕೆ ಅತಿ ಅಪಾಯಕಾರಿ. ಯಾಕೆ೦ದರೆ ಇದು ನಿಮಗೆ ನಿಜಸ್ಥಿತಿ ಅರಿವಾಗಲು ಬಿಡುವುದೇ ಇಲ್ಲ.ನೀವು ರಾವಣರೆ೦ಬ ತಿಳಿವು ಮೂಡುವುದೇ ಒಳ್ಳೆಯದು. ನೀವು ಹೆದರುವ೦ಥ ಕೆಟ್ಟದ್ದು ರಾವಣನಲ್ಲಿ ಇರುವುದಾದರೂ ಏನು? ನೀವು ರಾವಣನ ವ್ಯಕ್ತಿತ್ವವನ್ನು ಅರಿತಿರಾದರೆ, ನೀವು ಮಧ್ಯದಲ್ಲಿರುವುದು ಸಾಧ್ಯವಿಲ್ಲವೆ೦ದೂ, ಹೆಚ್ಚೆ೦ದರೆ ನೀವು ದೊಡ್ಡ ರಾವಣನೋ ಇಲ್ಲವೇ ಚಿಕ್ಕ ರಾವಣನೋ ಆಗಿರಬಹುದೆ೦ಬುದನ್ನು ಅರಿಯುವಿರಿ. ಪ್ರಾಯಶಃ ನೀವು ಚಿಕ್ಕ ರಾವಣನಾಗಿರಬಹುದು.
ನಿಮ್ಮ ವಿಧಾನಗಳು, ನಿಮ್ಮ ಚೇತನದ ಗುಣ ಒ೦ದು ಚಿಕ್ಕ ಬಿ೦ದುವಾದರೇನು, ಸಾಗರವಾದರೇನು, ವ್ಯತ್ಯಾಸವಾದರೂ ಏನು? ಸಾಗರದ ಒ೦ದು ಹನಿ ಉಪ್ಪು, ಇಡೀ ಸಾಗರವೂ ಉಪ್ಪೇ. ಬುದ್ಧ ಹೇಳುತ್ತಿದ್ದರು, ‘ಸಾಗರದ ಒ೦ದು ಹನಿಯನ್ನು ನೆಕ್ಕಿ ನೋಡಿದೆಯೆ೦ದರೆ, ನೀವು ಇಡೀ ಸಾಗರವನ್ನೇ ನೆಕ್ಕಿ ನೋಡಿದ೦ತೆ.’ ಎ೦ದು. ವಿಜ್ಞಾನಿಗಳು ಹೇಳುತ್ತಾರೆ, ಸಾಗರದ ಒ೦ದು ಬಿ೦ದುವನ್ನು ವಿಶ್ಲೇಷಿಸಿದಿರಾದರೆ, ಇಡೀ ಸಾಗರವನ್ನೇ ವಿಶ್ಲೇಷಿಸಿದ೦ತೆ. ಹನಿಯೊ೦ದರಲ್ಲಿ ಏನಿದೆಯೋ ಅದುವೇ ಇಡೀ ಸಾಗರದಲ್ಲಿಯೂ ಇದೆ. ಸಾಗರ ಮ್ಯಾಗ್ನಿಫೈಡ್ ಆಗಿದೆ, ವಿಸ್ತಾರವಾಗಿದೆ, ಮತ್ತು ಹನಿ ಸ೦ಕುಚಿತವಾಗಿದೆ. ಅದು ಅದರ ಸ೦ಕೋಚವಾಗಿದೆ. ನೀವು ಸಾಗರವಾಗಿ ಇರದೇ ಇರಬಹುದು, ಕೇವಲ ಹನಿಯಾಗಿರಬಹುದು, ಆದರೆ ಮೂಲಧರ್ಮವು ಅದೇ ಆಗಿರುವುದು.
ರಾವಣನಾಗಿರುವುದರಿ೦ದ ಆಗುವ ತೊ೦ದರೆಯಾದರೂ ಏನು? ನಿಮ್ಮಲ್ಲಿ ಇಲ್ಲದೆ ಇರುವುದು ಆತನಲ್ಲಿ ಏನಿದೆ ಎ೦ಬುದನ್ನು ಸ್ವಲ್ಪ ಗಮನಿಸೋಣ. ರಾವಣನಿಗೆ ಹಣದ ಹುಚ್ಚು, ಸಾಮ್ರಾಜ್ಯವನ್ನು ವಿಸ್ತರಿಸಬೇಕೆ೦ಬ ಆಕಾ೦ಕ್ಷೆ ಇತ್ತು. ಸ್ತ್ರೀಲೋಲನಾಗಿದ್ದ. ಆ ಸ್ತ್ರೀ ಪರಾಯಿಯಾಗಿದ್ದರೂ, ಮತ್ತೊಬ್ಬನ ಹೆ೦ಡತಿಯಾಗಿದ್ದರೂ ಸಹ, ಆಕೆ ಆತನಿಗೆ ಬೇಕೆನಿಸಿದರೆ ಆತನ ರಾಜಮಹಲಿಗೆ ಸೇರಲೇಬೇಕಾಗುತ್ತಿತ್ತು. ಆತ ಪ೦ಡಿತ, ಶಾಸ್ತ್ರಪಾರ೦ಗತನಾಗಿದ್ದ.
ರಾವಣನ ಈ ಗುಣಧರ್ಮಗಳಲ್ಲಿ ನಮ್ಮಲ್ಲಿ ಹುಡುಕಿ ನೋಡಿದರೆ ಸಿಗದಿರುವ೦ತಹ, ಪ್ರಯತ್ನಿಸಿದರೆ ದೊರೆಯದ೦ತಹ, ಗುಣಗಳು ಯಾವುದಿವೆ? ಸ್ತ್ರೀಯರು ನಮ್ಮನ್ನು ಆಕರ್ಶಿಸುತ್ತಾರೆ. ಹಾಗೆ ನೋಡಿದಲ್ಲಿ ಪರಸ್ತ್ರೀ ಹೆಚ್ಚು ಆಕರ್ಷಿಸುತ್ತಾಳೆ, ತಮ್ಮ ಸ್ತ್ರೀಯರಿಗಿ೦ತ. ಯಾಕೆ೦ದರೆ ಯಾವುದು ನಮ್ಮದೋ, ಅದು ದಿನಕಳೆದ೦ತೆಲ್ಲಾ ಸಾಮಾನ್ಯವಾಗುತ್ತದೆ. ಯಾವುದು ತನ್ನದೋ ಅದನ್ನು ಮನಸ್ಸು ಬೇಸರಿಸುತ್ತದೆ. ತನ್ನ ಪತ್ನಿಯಿ೦ದ ಯಾರಾದರೂ ಆಕರ್ಷಿತನಾಗುವನೇನು? ತನ್ನ ಪತ್ನಿಯಲ್ಲಿ ಯಾವುದೇ ಆಕರ್ಷಣೆ ಇರುವುದಿಲ್ಲ. ಹಾಗೆ ನೋಡಿದಲ್ಲಿ, ಯಾವುದು ನಮಗೆ ಉಪಲಬ್ಧವಾಗಿರುವುದೋ ಅದರಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಯಾವುದು ಉಪಲಬ್ಧವಿಲ್ಲವೋ ಅದರಲ್ಲೇ ಆಕರ್ಷಣೆ ಇರುವುದು. ಅಲ್ಲದೆ ಪಡೆಯುವುದು ಕಷ್ಟವಾದಷ್ಟೂ ಆಕರ್ಷಣೆ ಹೆಚ್ಚು.
ರಾಮನ ಸ್ತ್ರೀಯಲ್ಲಿ ರಾವಣ ಕ೦ಡದ್ದು ಈ ಕಷ್ಟವನ್ನೇ. ಈ ಕಷ್ಟ ಬಲು ದೊಡ್ಡದು. ಬಲು ಆಳವಾದದ್ದಾಗಿತ್ತು. ಈ ಕಷ್ಟವಾದರೂ ಯಾವುದು? ರಾಮನ ಸ್ತ್ರೀಯನ್ನು ಅಪಹರಿಸುವುದು ಕಷ್ಟವಾಗಿರಲಿಲ್ಲ. ಅದನ್ನು ರಾವಣ ಆಗಲೇ ಮಾಡಿ ಮುಗಿಸಿದ್ದ. ರಾಮನ ಸ್ತ್ರೀಯನ್ನು ಬಗ್ಗಿಸುವುದು ಕಷ್ಟದ ಕೆಲಸ. ಇದು ರಾವಣನಿ೦ದಾಗಲಿಲ್ಲ. ಈ ಸಮಸ್ಯೆ ಒ೦ದು ಸವಾಲಾಯಿತು. ರಾಮನ ಬಗ್ಗೆ ಸೀತೆಯ ಪ್ರೇಮ ಎಷ್ಟು ಪರಿಪೂರ್ಣವಾಗಿತ್ತೆ೦ದರೆ, ಆಕೆಯ ಹೃದಯದಲ್ಲಿ ರಾವಣ ಪ್ರವೇಶಿಸಬಹುದಾದ೦ತಹ ಒ೦ದು ಚಿಕ್ಕ ರ೦ಧ್ರವೂ ಇರಲಿಲ್ಲ.-ಇದು ಸವಾಲಾಗಿತ್ತು.
ವೇಶ್ಯೆಯರಲ್ಲಿ ಸ್ವಲ್ಪ ಮಾತ್ರ ಆಕರ್ಷಣೆ ಉ೦ಟಾಗುತ್ತದೆ. ಸತಿಯಲ್ಲೂ ಆಕರ್ಷಣೆ ಉ೦ಟಾಗುತ್ತದೆ. ವೇಶ್ಯೆಯಲ್ಲಿ ಆಕರ್ಷಣೆ ಎ೦ತಹುದು? ನಿಮ್ಮ ಜೇಬಿನ ಭಾರ ಸ್ವಲ್ಪ ಇಳಿಯಿತೆ೦ದರೆ ಆಕೆ ದೊರೆಯುತ್ತಾಳೆ. ಆಕೆಯಲ್ಲಿ ರಸವಾದರೂ ಏನು? ಸೀತೆಯಲ್ಲಿ ಇತ್ತು ಆಸಕ್ತಿ. ಆಕೆಯನ್ನು ಕೊಳ್ಳುವುದು ಅಸ೦ಭವವಾಗಿತ್ತು. ಆಕೆಯ ಹೃದಯದೊಳಗೆ ಪ್ರವೇಶಿಸಲು ಯಾವುದೇ ಉಪಾಯವೂ ಇರಲಿಲ್ಲ.
ಆದ್ದರಿ೦ದಲೇ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ. ಪಾಶ್ಚಿಮಾತ್ಯರೂ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ ಎ೦ಬುದನ್ನು ಒಪ್ಪುತ್ತಾರೆ. ಪಶ್ಚಿಮದ ಸ್ತ್ರೀ ಹೆಚ್ಚು ಸು೦ದರಳಾಗಿರಬಹುದು, ಆಕೆಯ ದೇಹ ಮಾಟವಾಗಿಯೂ ಇರಬಹುದು. ಆದರೂ ಆಕೆ ಪೂರ್ವದ ಸಾಧಾರಣ ಹೆ೦ಗಸಿನಷ್ಟು ಆಕರ್ಷಕಳಾಗಿ ತೋರುವುದಿಲ್ಲ. ಏಕೆ೦ದರೆ ಪೂರ್ವದ ಸ್ತ್ರೀಯ ಹೃದಯದೊಳಗೆ ಪ್ರವೇಶಿಸುವುದು ಅಸ೦ಭವ; ಸವಾಲು ಬಲು ದೊಡ್ಡದು.
ರಾವಣನ ಅ೦ತಃಪುರದಲ್ಲಿ ಸು೦ದರಿಯರಿಗೇನು ಕೊರತೆಯಿದ್ದಿರಲಿಲ್ಲ. ಪ್ರಾಯಶಃ ಸೀತೆಗಿ೦ತಲೂ ಸು೦ದರಿಯರು ಇದ್ದಿರಬಹುದು. ಆದರೆ ರಾಮನೆಡೆಗೆ ಸೀತೆಯ ಅನನ್ಯ ಭಕ್ತಿ ರಾವಣನಿಗೊ೦ದು ದೊಡ್ಡ ಸವಾಲಾಯಿತು.
ನಿಮಗೂ ಸಹ ಇದೇ ಸವಾಲಾಗಿದೆ. ಮತ್ತೊಬ್ಬ ಸ್ತ್ರೀಯಲ್ಲಿ ರಸವಿದೆ. ಇದು ರಾವಣನ ಚೇತನದ ಗುಣಧರ್ಮ. ಮಿಕ್ಕವರ ಬಳಿ ಇರುವುದರ ಬಗ್ಗೆ ಆಸೆ ಇದೆ. ನಿಮ್ಮ ಬಳಿ ಇರುವುದರಲ್ಲಿ ಅಷ್ಟೊ೦ದು ಆಸೆಯಿಲ್ಲ.
ರಾಮನಿಗೆ ಮತ್ಯಾವ ಸ್ತ್ರೀಯಲ್ಲೂ ರಸ ಕ೦ಡುಬರುವುದಿಲ್ಲ. ಸೀತೆಯಲ್ಲಿ ಇಡೀ ಪ್ರಪ೦ಚವೇ ದೊರೆತ೦ತೆ. ತನ್ನ ಬಳಿ ಏನಿದೆಯೋ ಅದರಲ್ಲೇ ಸ೦ತೋಶ. ಅದರಲ್ಲೇ ಆಳವಾದ ಸ೦ತೃಪ್ತಿ. ಇನ್ನೂ ಬೇಕೆ೦ಬ ಬಯಕೆ ಇಲ್ಲ.
ಓಶೋ:ನಾನು ಈವರೆಗೆ ತಿಳಿದಷ್ಟು December 20, 2008
Posted by uniquesupri in Uncategorized.add a comment
-ಸುಪ್ರೀತ್.ಕೆ.ಎಸ್
ಓಶೋ ರಜನೀಶ್ ವಿಚಾರಧಾರೆ ನನಗೆ ಪರಿಚಯವಾದದ್ದು ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಬರಹಗಳ ಮೂಲಕ.ತಾವು ಓದಿದ್ದನ್ನು, ಮೆಚ್ಚಿಕೊಂಡದ್ದನ್ನು, ತಾವು ಪ್ರಭಾವಿತರಾದ ವಿಚಾರಗಳನ್ನೆಲ್ಲಾ ಓದುಗರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ರವಿ ಬೆಳಗೆರಯವರ ಪತ್ರಿಕೆಯ ಓದಿನಿಂದ ನಾನು ಆಸಕ್ತಿ ಬೆಳೆಸಿಕೊಂಡ ಅನೇಕ ವ್ಯಕ್ತಿಗಳಲ್ಲಿ ಓಶೋ ಕೂಡ ಒಬ್ಬ (ಒಬ್ಬರು ಎಂದ ಕೂಡಲೇ ದೂರ ತಳ್ಳಿದ ಭಾವ ಮನಸ್ಸಲ್ಲಿ ಮೂಡುವುದರಿಂದ ಏಕವಚನವನ್ನೇ ಬಳಸುವೆ, ಬಹುಶಃ ಓಶೋ ಇದನ್ನು ವಿರೋಧಿಸುತ್ತಿರಲಿಲ್ಲವೆನಿಸುತ್ತದೆ!).
ಓಶೋ ಬಗ್ಗೆ ಕುತೂಹಲದಿಂದ ಯಾರ ಬಳಿಯಾದರೂ ಕೇಳಿದರೆ ಒಂದೋ ತಮಗೆ ತಿಳಿದಿಲ್ಲ ಎಂದು ಕೆಲವರು ಪ್ರಾಮಾಣಿಕವಾಗಿ, ಮತ್ತೆ ಕೆಲವರು ನುಣುಚಿಕೊಳ್ಳುವ ಪ್ರಯತ್ನವಾಗಿ ಹೇಳುತ್ತಾರೆ. ಇನ್ನು ಕೆಲವರು ನಿಮ್ಮ ಚಾರಿತ್ರ್ಯದ ಬಗ್ಗೆ ಅನುಕಂಪ ತೋರಿಸುತ್ತಾರೆ. ಹೈಸ್ಕೂಲಿನಲ್ಲಿದ್ದಾಗ ಮನೆಗೆ ಹತ್ತಿರವಿದ್ದ ರಾಮಕೃಷ್ಣಾಶ್ರಮದ ಲೈಬ್ರರಿಯಲ್ಲಿ ಓಶೋನ ದೊಡ್ಡ ಭಾವಚಿತ್ರ ಮುಖಪುಟದಲ್ಲಿರುವ ಪುಸ್ತಕ ಕೈಗೆತ್ತಿಕೊಂಡು ಪುಟ ತಿರುವುತ್ತಿದ್ದಾಗ ಎದುರಿಗಿದ್ದ ಹಿರಿಯರನೇಕರು ‘ಇವನಿಗೇನು ಬಂತು ಕೇಡು’ ಎಂಬಂತೆ ನನ್ನೆಡೆಗೆ ಕರುಣೆಯಿಂದ ನೋಡಿದ್ದು ನೆನಪಿದೆ. ಆತನ ಬಗ್ಗೆ ಅಲ್ಲಿ ಇಲ್ಲಿ ಕೇಳಿ ತಿಳಿದವರಿಗೆ ಆತ ಬೋಧಿಸಿದ ಮುಕ್ತ ಲೈಂಗಿಕತೆಯ ಬಗ್ಗೆ ನಾನಾ ಭ್ರಮೆಗಳು ಹುಟ್ಟಿಕೊಂಡಿರುತ್ತವೆ. ಡಿಕ್ಷನರಿಯಲ್ಲಿ ಕೇವಲ ಅವಾಚ್ಯ ಶಬ್ಧಗಳನ್ನೇ ಹುಡುಕುವ ಸ್ವಭಾವದವರು ‘ಸೆಕ್ಸ್ ಗುರು’ ಎಂದೇ ಆತನನ್ನು ಲೇವಡಿ ಮಾಡುತ್ತಾರೆ. ಮೊದಲಲ್ಲಿ ಆತನನ್ನು ಪರಿಚಯಿಸಿಕೊಳ್ಳುವವರಿಗೆ ಓಶೋನ ಲೈಂಗಿಕತೆಯ ಬಗೆಗಿನ ವಿವರಣೆಗಳೆಡೆಗೇ ಆಕರ್ಷಣೆ ಬೆಳೆಯುತ್ತದೆ. ಅನೇಕರು ಆ tabooನಿಂದಾಗಿಯೇ ಓಶೋ ಬಗ್ಗೆ ತಿಳಿಯುವುದಕ್ಕೆ, ಆತನ ವಿಚಾರಗಳಿಗೆ ತೆರೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ‘ಸೆಕ್ಸ್ ಗುರುವಿನಿಂದ ಕಲಿಯುವಂಥದ್ದು ಏನಿದ್ದೀತು ನಮಗೆ? ’ ಎಂಬ ಧೋರಣೆಯಿಂದ ಓಶೋ ಬಗ್ಗೆ ಅನವಶ್ಯಕವಾದ ಅಸಡ್ಡೆಯನ್ನು ಬೆಳೆಸಿಕೊಳ್ಳುತ್ತಾರೆ. ರವಿಬೆಳಗೆರೆ ಹಾಗೂ ವಿಶ್ವೇಶ್ವರ ಭಟ್ಟರು ತಮ್ಮ ಅಂಕಣಗಳಲ್ಲಿ ಓಶೋನ ವಿಚಾರಗಳನ್ನು ಯಥಾವತ್ತಾಗಿ ಕನ್ನಡಕ್ಕೆ ತಂದು ಪ್ರಕಟಿಸಿದ್ದನ್ನು ಓದುವವರೆಗೆ ನಾನೂ ಕೂಡ ಹೀಗೇ ಇದ್ದೆ ಎನ್ನಬಹುದು.
ಈ ಓಶೋ ಯಾರು ಎಂದು ಯಾರಾದರೂ ಹೊಸಬರು ಕೇಳಿದರೆ ಏನಂತ ಉತ್ತರಿಸುವುದು ಎಂಬ ಗೊಂದಲವಾಗುತ್ತದೆ. ನಾವು ತುಂಬಾ ಪ್ರಭಾವಿತರಾದವರ ಬಗ್ಗೆ ವಸ್ತುನಿಷ್ಠವಾಗಿ, ಯಾವ ಭಾವಾವೇಶವಿಲ್ಲದೆ ಹೊಸಬರಿಗೆ ಹೇಳಲು ನಮಗೆ ವಿಪರೀತ ಕಷ್ಟ ಎಂಬುದು ಒಂದು ಸಂಗತಿಯಾದರೆ, ಓಶೋನಂತಹ ವಿವಾದಾತ್ಮಕ, ವಿರೋಧಾಭಾಸದ ವ್ಯಕ್ತಿಯ ಬಗ್ಗೆ ಏನಂತ ಹೇಳುವುದು ಎಂಬ ಸಂಕಟ ಎದುರಾಗುತ್ತದೆ. ವಿವೇಕಾನಂದರ ಬಗ್ಗೆ ಯಾರಾದರೂ ಕೇಳಿದರೆ ಸನಾತನ ಹಿಂದೂ ಧರ್ಮ ಪತಾಕೆಯನ್ನು ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಹಾರಿಸಿದವರು, ಉಪನಿಷತ್ತು ಬೋಧಿಸಿದ ಜೀವಪರವಾದ ಹಿಂದೂ ತತ್ವ ಚಿಂತನೆಯನ್ನು ಜಗತ್ತಿಗೆ ಹೊಸ ರೀತಿಯಲ್ಲಿ ನೀಡಿದವರು, ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬಿದವರು ಎಂದು ಹೇಳುವ ಪ್ರಯತ್ನ ಮಾಡಬಹುದು. ಗಾಂಧೀಜಿ ಬಗ್ಗೆ ಹೇಳುವುದಾದರೆ ಅಹಿಂಸೆಯನ್ನು ಅನ್ಯಾಯದ ವಿರುದ್ಧ ಹೋರಾಟದ ಅಸ್ತ್ರವಾಗಿ ಯಶಸ್ವಿಯಾಗಿ ಬಳಸಿಕೊಂಡು ತೋರಿದ ಸಂತನ ವ್ಯಕ್ತಿತ್ವದ ರಾಜಕಾರಣಿ ಎಂದು ಹೇಳಿದರೆ ಸಾಕಾಗುತ್ತದೆ. ಆದರೆ ಓಶೋ ಬಗ್ಗೆ ಏನು ಹೇಳುವುದು? ರಾಮಕೃಷ್ಣ ಪರಮಹಂಸರ ಬಗ್ಗೆ ಏನು ಹೇಳುವುದು? ಅವರನ್ನು ಜ್ಞಾನೋದಯ ಹೊಂದಿದವರು ಎಂದು ಹೇಳಿ ಕೈತೊಳೆದುಕೊಳ್ಳಲು ಸಾಧ್ಯವಾಗದು, ಏಕೆಂದರೆ ಜ್ಞಾನೋದಯ ಎಂದರೇನು ಎಂಬ ಪ್ರಶ್ನೆ ಎದುರಾದರೆ ಉತ್ತರಿಸಲು ನಾವು ಸಮರ್ಥರಾಗಿರುವುದಿಲ್ಲ!
ಓಶೋ ಪ್ರತಿಪಾದಿಸಿದ್ದು ಏನನ್ನು? ಅರಾಜಕತೆಯನ್ನಾ? ಎಗ್ಗಿಲ್ಲದ ಲೈಂಗಿಕ ಸ್ವಾತಂತ್ರ್ಯವನ್ನಾ? ಎಲ್ಲಾ ಬಗೆಯ ಸಾಂಸ್ಥಿಕ ಚಿಂತನೆಗಳಿಂದ ಬಿಡುಗಡೆಯನ್ನಾ? ಹೇಳುವುದು ಕಷ್ಟ. ಏಕೆಂದರೆ ಆತನನ್ನು ಗ್ರಹಿಸಲು ಮೊದಲು ನಾವು ನಮ್ಮೆಲ್ಲಾ ಸ್ವಂತ ವಿಚಾರ, ಅಭಿಪ್ರಾಯಗಳಿಂದ ಮುಕ್ತರಾಗ ಬೇಕಾಗುತ್ತದೆ. ಆತನ ವಿಚಾರಗಳನ್ನು ಅವುಗಳ ಸತ್ವದ ಆಧಾರದ ಮೇಲೆ ವಿಮರ್ಶಿಸಲು ನಾವು ನಮ್ಮೆಲ್ಲಾ ಪೂರ್ವಾಗ್ರಹಗಳಿಂದ ಹೊರಬರಬೇಕಾಗುತ್ತದೆ. ನಮ್ಮ ಇಷ್ಟ, ದ್ವೇಷ, ಅಸೂಯೆಗಳಿಂದ ನಮ್ಮನ್ನು ಹೊರಗೆಳೆದು ತರಬೇಕಾಗುತ್ತದೆ. ಆತನೇ ಹೇಳುವಂತೆ ನಾವು ಆತನನ್ನು ಗ್ರಹಿಸಬೇಕಾದರೆ ಒಂದು ಕನ್ನಡಿಯಾಗಬೇಕು. ಕನ್ನಡಿ ತನ್ನೊಳಗೆ ಏನನ್ನು ಇಟ್ಟುಕೊಂಡಿರುವುದಿಲ್ಲ. ಅದು ತನ್ನೆದುರು ನಿಂತ ವ್ಯಕ್ತಿ ಅಥವಾ ವಸ್ತುವನ್ನು ಮಾತ್ರ ತೋರುತ್ತದೆ. ತನ್ನದೆಂಬುದೇನನ್ನೂ ಸೇರಿಸುವುದಿಲ್ಲ. ತನ್ನ ಯಾವ ಸ್ವಭಾವವನ್ನು ಅದು ಹೇರುವುದಿಲ್ಲ. ಓಶೋನನ್ನು ನಾವು ಅರಿಯಬೇಕಾದರೆ ಹಾಗಾಗಬೇಕಂತೆ. ಆತನ ಪ್ರಕಾರ ಆತನೂ ಒಂದು ಸ್ವಚ್ಛವಾದ ಕನ್ನಡಿ. ಆತನೆದುರು ಮತ್ತೊಂದು ಕನ್ನಡಿ ನಿಂತರೆ ಉಂಟಾಗುವುದು ಕೊನೆಯಿಲ್ಲದ ಅನಂತ ಪ್ರತಿಬಿಂಬಗಳು(reflections). ಬಿಂಬಕ್ಕೊಂದು ಪ್ರತಿಬಿಂಬ ಅದಕ್ಕೊಂದು ಪ್ರತಿಬಿಂಬ ಹೀಗೆ ಅಸಂಖ್ಯವಾದ, ನಿಲುಕಿಗೆ ಸಿಗದಷ್ಟು ಬಿಂಬಗಳು ಇಬ್ಬರೊಳಗೂ ಪ್ರತಿಧ್ವನಿಸುತ್ತವೆ. ಅದು ನಿಜವಾದ ಗ್ರಹಿಕೆಯ ಸ್ವರೂಪ. ಒಂದು ವೇಳೆ ನಮಗೆ ಸ್ವಚ್ಛ ಕನ್ನಡಿಯಾಗಲು ಸಾಧ್ಯವಾಗದಿದ್ದರೆ, ನಮ್ಮ ಪ್ರಜ್ಞೆಯ ಮೇಲೆ ಕಲೆಗಳು, ಕೊಳೆ, ಮಲಿನತೆ ಇದ್ದರೆ ನಾವು ಆತನನ್ನು ಸರಿಯಾಗಿ ಪ್ರತಿಬಿಂಬಿಸಲು ಸಾಧ್ಯವಾಗುವುದಿಲ್ಲ. ಆದರೆ ಆತ ಮಾತ್ರ ನಮ್ಮೆಲ್ಲಾ ಮಲಿನತೆ, ದೋಷ, ವಕ್ರತೆಗಳನ್ನು ಯಾವ ಮೋಹವೂ ಇಲ್ಲದೆ ಕಣ್ಣಿಗೆ ರಾಚುವಂತೆ ತೋರಿಬಿಡಬಲ್ಲ. ಅದರಿಂದಾಗಿ ನಾವು ಭಯಭೀತರಾಗುತ್ತೇವೆ. ಆತನೊಂದಿಗೆ ಮುಖಾಮುಖಿಯಾಗಲು ಹಿಂದೇಟು ಹಾಕುತ್ತೇವೆ!
ಸ್ಥಾಪಿತ ಧರ್ಮಗಳನ್ನೆಲ್ಲಾ ವಿರೋಧಿಸುವ, ಧರ್ಮ ಮನುಷ್ಯರಲ್ಲಿ ಕೀಳರಿಮೆಯನ್ನು ಬೆಳೆಸುವ ವ್ಯವಸ್ಥಿತ್ತ ಯೋಜನೆಗಳು ಎಂದು ವಾದಿಸುವ ಓಶೋ ಪ್ರತಿಯೊಬ್ಬ ಮನುಷ್ಯನೂ ತನ್ನ ಧರ್ಮವನ್ನು ತಾನೇ ಕಂಡುಕೊಳ್ಳಬೇಕು ಎಂದು ಪ್ರತಿಪಾದಿಸಿದವನು. ಹೊರಗಿನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ, ಎಲ್ಲವೂ ನಮ್ಮೊಳಗಿನಿಂದಲೇ ಬರಬೇಕು. ಉತ್ತಮ ಕ್ರೈಸ್ತನಾಗುವುದು, ಒಳ್ಳೆಯ ಮುಸ್ಲಿಮನಾಗುವುದು, ಶ್ರೇಷ್ಠ ಬೌದ್ಧನಾಗುವುದು ಮನುಷ್ಯನ ಜನ್ಮದ ಉದ್ದೇಶವಲ್ಲ. ಇರುವ ಒಂದು ಜನ್ಮವನ್ನು ಬೇರಾರದೋ ಆದರ್ಶವನ್ನು ಬೆನ್ನಟ್ಟುವಲ್ಲಿ ಕಳೆದುಕೊಳ್ಳುವುದು ಮೂರ್ಖತನ. ಬುದ್ಧ ಕಂಡುಕೊಂಡ ಸತ್ಯವನ್ನು ತಿಳಿದುಕೊಳ್ಳಲು ಇಡೀ ಜೀವನವನ್ನು ಮುಡಿಪಾಗಿರಿಸಿದ ಪಂಡಿತ ಆ ಸಮಯದಲ್ಲಿ ತಾನೇ ಬುದ್ಧನಾಗಬಹುದು ಎಂಬುದನ್ನು ಮರೆಯುತ್ತಾನೆ ಎನ್ನುವ ಓಶೋ ಪ್ರಕಾರ ಬೌದ್ಧ ಧರ್ಮೀಯನಾಗುವ ಬದಲು ಬುದ್ಧನೇ ಆಗಬೇಕು. ಕ್ರೈಸ್ತನಾಗುವ ಹಂಬಲದ ಜಾಗದಲ್ಲಿ ಕ್ರಿಸ್ತನೇ ಆಗುವ ಅವಕಾಶವನ್ನು ಕಂಡುಕೊಳ್ಳಬೇಕು. ಹಾಗೆ ನೋಡಿದರೆ ಓಶೋನ ವಿಚಾರಗಳನ್ನು ತಿಳಿಯುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಸದಾ ಎಚ್ಚರವಾಗಿ ಗಮನಿಸುತ್ತಿರಬೇಕು. ಏಕೆಂದರೆ ಒಂದು ಹಂತದಲ್ಲಿ ನಾವು ಓಶೋನ ‘ಧರ್ಮೀಯ’ರಾಗಿಬಿಡುವ ಅಪಾಯವಿದೆ! ಸಿದ್ಧ ಉತ್ತರಗಳನ್ನು, ನಂಬಿಕೆಗಳನ್ನು ಕೊಡುವ ಪ್ರತಿಯೊಬ್ಬರೂ ನಿಮ್ಮ ಶತ್ರುಗಳೆಂದು ತಿಳಿಯಿರಿ ಎಂದ ಓಶೋ. ನಾವು ಆತ ಹೇಳಿದ ಪ್ರತಿಯೊಂದನ್ನೂ ನಂಬುತ್ತಾ ಹೋದರೆ ಆತನನ್ನೇ ನಮ್ಮ ಶತ್ರುವನ್ನಾಗಿಸಿಕೊಳ್ಳುವ ಆಪತ್ತು ಎದುರಾಗುತ್ತದೆ! ಸದಾ ಎಚ್ಚರಾಗಿರುವುದಷ್ಟೇ ನಾವು ಮಾಡಬಹುದಾದ ಕೆಲಸ!
ನೋ ಜೋಕ್ಸ್ ಪ್ಲೀಸ್! December 20, 2008
Posted by uniquesupri in Uncategorized.Tags: ಓಶೋ, ಗಾಂಭೀರ್ಯ, ಜೋಕು, ತತ್ವಜ್ಞಾನಿ, ನಗ ಸಾಮ್ರಾಟ್, ಪೋಪ್, ಹಾಸ್ಯ
add a comment
-ನಗೆ ಸಾಮ್ರಾಟ್
ಓಶೋ ಎಂಬ ಜಗತ್ತಿನ ಅತ್ಯಂತ funny ಮನುಷ್ಯನ ಬಗ್ಗೆ ನಾವು ತುಂಬಾ ಸೀರಿಯಸ್ಸಾಗಿ ಯೋಚಿಸ್ತಿದ್ದೀವಿ ಅಂತ ನಾನೂ ತುಂಬಾ ಸಲ ಸೀರಿಯಸ್ಸಾಗಿ ಆಲೋಚಿಸಿದ್ದಿದೆ! ಸಹಜವಾಗಿ ತೇಲಿಬಂದ ಗಾಳಿಗೆ ತೊನೆಯುವ ಗಿಡದ ರೆಂಬೆಯನ್ನು ಕಂಡು ಪುಟ್ಟ ಮಗು ಕೈತಟ್ಟಿ ಸಂಭ್ರಮಿಸಿ ಕುಣಿಯುವುದನ್ನೂ ನಾವು ಜಗತ್ತಿನ ನಿಗೂಢಗಳಲ್ಲಿ ಒಂದು ಎಂದು ಭಾವಿಸುತ್ತೇವೆ. ಮಗುವಿನ ಮುಗ್ಧ ಸಂಭ್ರಮದ ಬಗ್ಗೆ ಪಾಂಡಿತ್ಯಪೂರ್ಣವಾದ ಪ್ರಬಂಧ ಬರೆದು ಎಂಥಾ ವಿಸ್ಮಯ ಅಂತ ಕೃತಕ ಅಚ್ಚರಿಯನ್ನು ನಟಿಸುವಾಗ ನಮಗೆ ನಾವು ಪಂಡಿತರಾಗುವ ಹಾದಿಯಲ್ಲಿ ಬಿಟ್ಟುಬಂದದ್ದು ಅದೇ ಮುಗ್ಧತೆಯನ್ನು ಎಂದು ಹೊಳೆಯುವುದಿಲ್ಲ. ಅದೇ ಗಾಳಿಗೆ, ಅದೇ ಗಿಡದ ಕೊಂಬೆ ತೊನೆಯುವುದನ್ನು ಕಂಡು ನಾವೂ ಕೇಕೆ ಹಾಕಿಕೊಂಡು ನಗಬಹುದು ಹಾಗೂ ಆ ರೀತಿ ನಗುವುದರಲ್ಲೇ ಜೀವ ಕಳೆ ಇರುವುದು ಎಂಬುದು ನಮಗೆ ತಿಳಿಯುವುದಿಲ್ಲ. ಅಬೋಧ ಮಗುವನ್ನು ಬಹುದೊಡ್ಡ ಗುರುವಾಗಿ ನಾವು ಕಂಡು ಬೆರಗಾಗುತ್ತೇವೆ!
ಯಾವ ಧರ್ಮ ಗುರುವಿನ ಉಪದೇಶದಲ್ಲಾದರೂ ನೀವು ಜೋಕುಗಳನ್ನು ಕೇಳಿದ್ದೀರಾ? ಯಾವುದೇ ದೇಶದ ತತ್ವಜ್ಞಾನಿಯೊಬ್ಬ ಎಲ್ಲರೊಡನೆ ಕುಣಿಯುತ್ತಾ, ಹಿನ್ನೆಲೆಯಲ್ಲಿ ಕೇಳುವ ವಾದ್ಯದ ತಾಳಕ್ಕೆ ಹೆಜ್ಜೆ ಹಾಕುತ್ತಾ ಅದನ್ನೇ ಧ್ಯಾನ ಎಂದದ್ದನ್ನು ನೋಡಿದ್ದೀರಾ? ‘ನಾನು ಹಾಸ್ಯಾಸ್ಪದವಾಗಿರಲಿಕ್ಕೆ ಸರ್ವ ರೀತಿಯಲ್ಲೂ ಸ್ವತಂತ್ರನು’ ಎಂದು ಘೋಷಿಸಿಕೊಂಡ ‘ಗುರು’ವಿನ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಯೇಸು ಕ್ರಿಸ್ತ ಹೇಳಿದ ಕಥೆಗಳನ್ನು ನೆನಪು ಮಾಡಿಕೊಳ್ಳಿ, ಬುದ್ಧನ ಉಪದೇಶಗಳನ್ನು ತಿರುವಿ ಹಾಕಿ, ಮೊಹಮ್ಮದ್ ಪೈಗಂಬರ್ ಹೇಳಿದ ‘ದೇವರ ಆದೇಶ’ಗಳನ್ನು ಕಿವಿಗೊಟ್ಟು ಕೇಳಿ, ವಿವೇಕಾನಂದರ ವೀರ ವಾಣಿಗೆ ಕಿವಿಯಾಗಿ ಅಲ್ಲೆಲ್ಲಾದರೂ ನಿಮಗೆ ಒಂದೇ ಒಂದು ಪೋಲಿ ಜೋಕು ಕಣ್ಣಿಗೆ ಬೀಳುತ್ತದಾ? ಇಲ್ಲ. ಅದಕ್ಕೇ ಓಶೋ ಎಲ್ಲರಿಗಿಂತ ಭಿನ್ನನಾಗಿ ಕಾಣುವುದು. ಆದರೆ ಭಿನ್ನತೆಯಷ್ಟೇ ಆತನ ಸ್ವಂತಿಕೆಯಲ್ಲ ಅನ್ನೋದನ್ನ ಸ್ವಲ್ಪ ಸಮಯದಲ್ಲಿ ನಿಮಗೆ ಗೋಚರಿಸುವಂತೆ ಮಾಡುತ್ತಾನೆ ಆತ.
ಈ ಪುಟ್ಟ ಟಿಪ್ಪಣಿಯನ್ನು ಮುಗಿಸುವುದಕ್ಕೆ ಮುನ್ನ ಇತ್ತೀಚೆಗಷ್ಟೇ ಓದಿದ ಓಶೋನ ಉಪನ್ಯಾಸದಲ್ಲಿನ ಜೋಕನ್ನು ನೆನಪು ಮಾಡಿಕೊಳ್ಳಬಯಸುತ್ತೇನೆ. ಅವಳೊಬ್ಬ ಅಮೇರಿಕನ್ ಮಹಿಳೆ. ಹೊಸತಾಗಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರ ಗೊಂಡಿದ್ದಳು. ಹೊಸತಾಗಿ ಮತಾಂತರ ಗೊಂಡ ಕ್ರೈಸ್ತರ ಹುಮ್ಮಸ್ಸು ಬಹುದೊಡ್ಡದಿರುತ್ತದೆ.
ಸರಿ ಒಮ್ಮೆ ನಗರದ ಪ್ರಖ್ಯಾತ ಚರ್ಚಿಗೆ ಕ್ರೈಸ್ತ ಧರ್ಮ ಗುರು ಪೋಪ್ ಭೇಟಿಕೊಡುತ್ತಾರೆ. ಈ ಮಹಿಳೆಯ ಹುಮ್ಮಸ್ಸು ಹಾಗೂ ಆಕೆ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡ ರೀತಿಯನ್ನು ಕೇಳಿ ತಿಳಿದು ಪೋಪ್ಗೆ ಅತೀವ ಸಂತೋಷವಾಗುತ್ತದೆ. ಆತನೊಂದಿಗೆ ಮಾತನಾಡಬಯಸಿದ ಆಕೆಗೆ ಅನುಮತಿಯನ್ನೂ ಕೊಡುತ್ತಾನೆ. ಈ ಮಹಿಳೆ ಪೋಪ್ ಬಳಿ ಮಾತಿಗೆ ನಿಲ್ಲುತ್ತಾಳೆ. ಅವರ ಕೋಣೆಯ ಹೊರಗೆ ನಿಂತಿದ್ದ ಭದ್ರತಾ ಸಿಬ್ಬಂದಿಗೆ ಪೋಪ್ ಆಕೆಯೊಂದಿಗೆ ಯಾವುದೋ ಗಾಢ ಚರ್ಚೆಯಲ್ಲಿ ಮಗ್ನನಾಗಿರುವಂತೆ ಕಾಣುತ್ತದೆ. ಇದನ್ನು ಕಂಡ ಪತ್ರಕರ್ತನೊಬ್ಬನಿಗೆ ಆಶ್ಚರ್ಯವಾಗುತ್ತದೆ. ಪೋಪ್ ಇಷ್ಟು ಹೊತ್ತು ಯಾರೊಂದಿಗೆ ಚರ್ಚೆ ನಡೆಸುತ್ತಿರಬಹುದು? ಏನೆಂದು ಮಾತುಕತೆ ನಡೆಯುತ್ತಿರಬಹುದು ಎಂದು ಆತ ಕುತೂಹಲಗೊಳ್ಳುತ್ತಾನೆ. ಆ ಹೆಣ್ಣಿನೊಂದಿಗೆ ಪೋಪ್ ಚರ್ಚಿಸುತ್ತಿರುವ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಆತ ಕೋಣೆಯ ಬಳಿಗೆ ಬರುತ್ತಾನೆ. ಪೋಪ್ ದೀನ ಸ್ವರದಲ್ಲಿ ಆ ಹೆಣ್ಣಿಗೆ ಹೇಳುತ್ತಿರುತ್ತಾನೆ, ‘ತಾಯಿ ನನ್ನನ್ನು ಬಿಟ್ಟು ಬಿಡು ನಾನು ಈಗಾಗಲೇ ಕ್ಯಾಥೋಲಿಕ್ ಆಗಿದ್ದೇನೆ.’
ಇಲ್ಲಿರುವ ಒಂದು ಧರ್ಮ ಹಾಗೂ ಧಾರ್ಮಿಕ ಸಂಗತಿಗಳ ಉಲ್ಲೇಖ ಕೇವಲ ಸಾಂಕೇತಿಕ. ಯಾವ ಧರ್ಮಕ್ಕಾದರೂ ಇದು ಅನ್ವಯವಾಗುತ್ತದೆ. ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಗಂಭೀರವಾಗುವವರೇ ಜಗತ್ತಿನಲ್ಲಿ ಹೆಚ್ಚು. ಜೋಕನ್ನೂ ಗಂಭೀರವಾಗಿ ಪರಿಗಣಿಸುವುದು ಅವರ ಕರ್ಮ!
ಓಶೋ ಎಂಬ ಹಕ್ಕಿ December 20, 2008
Posted by uniquesupri in ಮಾತುಕತೆ.Tags: ಓಶೋ, ಓಶೋ ಎಂಬ ಹಕ್ಕಿ, ಚೇತನಾ, ಜ್ಞಾನದೇವ್, ನಗೆ ಸಾಮ್ರಾಟ್, ಬ್ಲಾಗು, ಭೋಗದ ಗುರು, ಸೆಕ್ಸ್ ಗುರು
add a comment
-ಸುಪ್ರೀತ್.ಕೆ.ಎಸ್
ರಜನೀಶ್ ಚಂದ್ರ ಮೋಹನ್ ಎಂಬ ವ್ಯಕ್ತಿಯನ್ನು ಜಗತ್ತು ನೂರಾರು ಹೆಸರುಗಳಿಂದ ಕರೆದಿದೆ. ತಮಗೆ ಕಂಡ ಆತನ ಮುಖಕ್ಕೆ ತಮಗೆ ತೋಚಿದ ಹೆಸರನ್ನು ಜನರು ಕೊಡುತ್ತಾ ಬಂದಿದ್ದಾರೆ. ಆದರೆ ಕ್ಷಣ ಕ್ಷಣಕ್ಕೂ ಹೊಸ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುವ, ಹೆಚ್ಚು ಹೆಚ್ಚು ಆಳಕ್ಕಿಳಿದಷ್ಟು ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಹೋಗುವ ಆ ವ್ಯಕ್ತಿಯ ಎದುರು ಜಗತ್ತಿನ ಹೆಸರುಗಳೆಲ್ಲಾ ಕಳಾಹೀನವಾಗಿವೆ. ಆತನನ್ನು ಹಿಡಿದಿಡುವಲ್ಲಿ ಅಕ್ಷರಗಳ ಪುಂಜಗಳು ಸೋತಿವೆ. ಆತನನ್ನು ಆಚಾರ್ಯ ಎಂದು ಕರೆದರು, ಭಗವಾನ್ ಎಂದು ಸಂಬೋಧಿಸಿದರು. ಓಶೋ ಎಂದು ಕೂಗಿದರು. ಸೆಕ್ಸ್ ಗುರು ಎಂದು ಗೇಲಿ ಮಾಡಿದರು. ರಾಲ್ಸ್ ರಾಯ್ಸ್ ಸನ್ಯಾಸಿ ಎಂದು ಬಿರುದುಕೊಟ್ಟರು, ಡೈಮಂಡ್ ವಾಚಿನ ಬುದ್ಧ ಎಂದು ಕರೆದು ನಕ್ಕರು, ಭಗವಂತ ಎಂದು ಪಾದಕ್ಕೆರಗಿದರು, ಮಾನಸಿಕ ಅಸ್ವಸ್ಥ ಎಂದು ತೀರ್ಪುಕೊಟ್ಟರು. ಆದರೆ ಯಾವುದಂದರೆ ಯಾವುದಕ್ಕೂ ನಿಲುಕದೆ ಸ್ವಚ್ಛಂದವಾಗಿ ಆತ ಹಾರಾಡುತ್ತಲೇ ಇದ್ದ. ಅದಕ್ಕಾಗಿಯೇ ಆತನನ್ನು ನಾನು ಹಕ್ಕಿ ಎಂದಿರುವುದು.
ಹಕ್ಕಿ ಹಾರುವುದನ್ನು ಗಮನಿಸಿದ್ದೀರಾ? ಕಣ್ಣಿಗೆ ಕಾಣದಷ್ಟು ತೆಳುವಾದ ಗಾಳಿಯನ್ನು ಒತ್ತಿ ರೆಕ್ಕೆ ಬಿಚ್ಚಿ ಹಾರುವುದು ಸುಲಭದ ಮಾತಲ್ಲ. ಆಕಾಶವೇನೋ ಸ್ವಚ್ಛಂದವಾಗಿದೆ. ವಿಶಾಲವಾಗಿ ವ್ಯಾಪಿಸಿದೆ. ಆದರೆ ರೆಕ್ಕೆ ಬಿಚ್ಚಿ ಕಣ್ಣು ಮುಚ್ಚಿಕೊಂಡು ನೆಗೆಯುವ ಹಕ್ಕಿ ತನ್ನೆಲ್ಲಾ ಅನವಶ್ಯಕ ಭಾರವನ್ನು ಕಳಚಬೇಕಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಬೆತ್ತಲಾಗಬೇಕಾಗುತ್ತದೆ. ಎಲ್ಲಿವರೆಗೆ ಸಾಧ್ಯವೋ ಅಲ್ಲಿಯವರೆಗೆ ಎಲ್ಲಾ ಮೋಹಗಳನ್ನು ತೊರೆಯಬೇಕಾಗುತ್ತದೆ. ತನ್ನದೆಂದುಕೊಂಡ ಎಲ್ಲವನ್ನೂ ಬಿಟ್ಟು ಹೊರಡಬೇಕಾಗುತ್ತದೆ. ಪಾಂಡಿತ್ಯ, ಪುಸ್ತಕ ಜ್ಞಾನ, ಶಬ್ಧ ಸಂಪತ್ತು, ನೈಪುಣ್ಯತೆ, ಬುದ್ಧಿವಂತಿಕೆ ಎಲ್ಲವನ್ನೂ ನೆಲದ ಮೇಲೇ ಬಿಸುಟು ಹಾರಬೇಕಾಗುತ್ತದೆ. ಗಳಿಸಿಕೊಂಡ ಸಂಪತ್ತು, ಹೆಸರು, ಪ್ರತಿಷ್ಠೆ, ಆದರ್ಶ, ನೈತಿಕತೆ, ಜನಬೆಂಬಲ ಎಲ್ಲವನ್ನೂ ಮರೆತು ನೆಗೆಯಬೇಕಾಗುತ್ತದೆ. ರೆಕ್ಕೆಯನ್ನು ನಂಬಿಕೊಂಡು ಆಗಸಕ್ಕೆ ಹಾರುವ ಹಕ್ಕಿಗೆ ಭಾರ ಕಡಿಮೆಯಾದಷ್ಟು ಸ್ವಾತಂತ್ರ್ಯ ಹೆಚ್ಚಾಗುತ್ತದೆ. ಹೀಗೆ ಹಕ್ಕಿಯ ಹಾಗೆ ಬದುಕಿದವನು ಓಶೋ.
ಈ ಬ್ಲಾಗಿಗೆ ‘ಓಶೋ ಎಂಬ ಹಕ್ಕಿ’ ಎಂದು ಹೆಸರು ಕೊಟ್ಟಿದ್ದರ ಹಿಂದೆ ಇಷ್ಟೆಲ್ಲಾ ಯೋಚಿಸಿದ್ದೆನಾ? ಖಂಡಿತಾ ಇಲ್ಲ. ಅದು ಕಣ್ಣೆದುರಿಗೆ ದಿಗಂತದವರೆಗೆ ಹಬ್ಬಿ ಅಂತ್ಯವನ್ನೇ ಮರೆಯಾಗಿಸಿದ ಜಲಸಾಗರವನ್ನು ಕಂಡು ‘ಅಬ್ಬಾ’ ಎಂದಷ್ಟೇ spontaneous ಆಗಿ ತೋಚಿದ ಹೆಸರು. ಓಶೋ ಭಜನೆ ಬ್ಲಾಗಿನ ಉದ್ದೇಶವಾಗಿದ್ದರೆ ಇದರ ಹೆಸರು ‘ಜಗದ್ಗುರು ಓಶೋ ರಜನೀಶ್’ ಎಂದಾಗಿರುತ್ತಿತ್ತು. ಇಲ್ಲವೇ ಅರೆಬೆಂದ ಮಾಹಿತಿಯ ಪ್ರಚಾರವೇ ನಮ್ಮ ಉದ್ದೇಶವಾಗಿದ್ದರೆ ‘ಸೆಕ್ಸ್ ಗುರು ರಜನೀಶ್’ ಎಂಬ ಹೆಸರು ಕೊಡುತ್ತಿದ್ದೆವು. ಬ್ಲಾಗಿನ ಹೆಸರಿನಷ್ಟೇ spontaneous ಆದ, ರಜನೀಶ್ ವಿಚಾರದೊಂದಿಗೆ ಮುಖಾಮುಖಿಯಾದಾಗ ಆ ಕ್ಷಣದಲ್ಲಿ ಹುಟ್ಟಿದ ಆಲೋಚನೆಯನ್ನು, ಭಾವವನ್ನು ಹರಿಬಿಡುವುದು ಇದರ ಉದ್ದೇಶ. ಆ ಕ್ಷಣದಲ್ಲಿ ನಮ್ಮಲ್ಲಿ ಹುಟ್ಟಿದ ಭಾವವಷ್ಟೇ ಸತ್ಯ. ನಮ್ಮ ಮನಸ್ಸಿನಲ್ಲಿ ಮೂಡಿನಿಂತ ಚಿತ್ರಣವೇ ಸತ್ಯ. ಉಳಿದದ್ದೆಲ್ಲವೂ ನಮ್ಮ interpretationಗಳು ಮಾತ್ರ.
ಓಶೋನ ಗೀಳು ಹತ್ತಿಸಿಕೊಂಡ ನನಗೆ ಓಶೋ ಕಾಣಿಸಿದ ಸಂಗತಿಗಳು, ನನ್ನ ಮೇಲೆ ಓಶೋನ ಪ್ರಭಾವ ಮಾಡಿದ ಪರಿಣಾಮಗಳು, ಓಶೋನ ಚಿಂತನೆಯಿಂದ ನಾನು ಅನುಭವಿಸಿದ ಹಿಂಸೆ ಎಲ್ಲವನ್ನೂ ನಾನು ಈ ಬ್ಲಾಗಿನ ಅಂಗಳದಲ್ಲಿ ಕೂತು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್ನುಳಿದ ಹಾಗೆ ಅಕ್ಕ ಚೇತನಾ ಇದ್ದಾಳೆ, ಹಿರಿಯರಾದ ಡಾ||ಜ್ಞಾನದೇವ್ ಇದ್ದಾರೆ. ಅನಾಮಿಕತೆಯಲ್ಲೇ ಐಡೆಂಟಿಟಿ ಕಂಡುಕೊಳ್ಳಬಯಸುವ ‘ನಗೆ ಸಾಮ್ರಾಟ’ರು ಇದ್ದಾರೆ ನಮ್ಮ ಅಂಗಳದಲ್ಲಿ. ಜೊತೆಗೆ ಸಾಕಷ್ಟು ಬೆಳದಿಂಗಳೂ ಚೆಲ್ಲಿಕೊಂಡಿದೆ. ನೀವೂ ಬಂದುಬಿಡಿ ಹಾಯಾಗಿ ಮೌನದಲ್ಲಿ ಮಾತನಾಡುತ್ತಾ, ಮಾತಿನಲ್ಲಿ ಮೌನವನ್ನು ಕೇಳುತ್ತಾ ವಿಹರಿಸೋಣ…