jump to navigation

ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು October 23, 2009

Posted by uniquesupri in ಓಶೋ ಹೇಳಿದ್ದು.
Tags: , , , ,
trackback

ನಾನೊಂದು ಹಳ್ಳಿಗೆ ಹೋಗಿದ್ದೆ. ಅಲ್ಲಿ ಒಬ್ಬಾತ ಹೇಳುವುದನ್ನು ಕೇಳಿದೆ, “ವೈರಾಗ್ಯವೇ ನಿಜವಾದ ಧರ್ಮ. ತ್ಯಾಗದಿಂದ ವೈರಾಗ್ಯ ಸಾಧ್ಯ. ಕಷ್ಟಕರವಾದ ಸಾಧನೆ ಹಾಗೂ ಶಿಸ್ತಿನಿಂದ ವೈರಾಗ್ಯವನ್ನು ಸಾಧಿಸಬಹುದು.”

ಇದನ್ನು ಕೇಳುತ್ತಿದ್ದ ಹಾಗೆ ನನಗೆ ನನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದು ನೆನಪಾಯ್ತು. ನದೀ ತೀರಕ್ಕೆ ನಾವು ಪಿಕ್‌ನಿಕ್‌ಗೆಂದು ತೆರಳಿದ್ದೆವು. ನದಿ ಚಿಕ್ಕದಿದ್ದರೂ ಅದರ ಮರಳ ದಂಡೆ ವಿಶಾಲವಾಗಿ ಹರಡಿಕೊಂಡಿತ್ತು. ಆ ದಂಡೆಯ ಮೇಲೆ ಬಣ್ಣ ಬಣ್ಣದ ಹೊಳೆಯುವ ಕಲ್ಲುಗಳ ರಾಶಿಯೇ ಇತ್ತು. ಅದ್ಭುತವಾದ ಸಂಪತ್ತನ್ನು ಎಡವಿ ನಿಂತ ಅನುಭವ ನನಗಾಯ್ತು. ಸಂಜೆಯಾಗುವಷ್ಟರಲ್ಲಿ ನಾನು ಅದೆಷ್ಟು ಕಲ್ಲುಗಳನ್ನು ಒಟ್ಟುಗೂಡಿಸಿದ್ದೆನೆಂದರೆ, ಅವನ್ನು ಹೊತ್ತೊಯ್ಯುವುದೇ ಅಸಾಧ್ಯವಾಗಿತ್ತು. ಅವನ್ನು ಅಲ್ಲಿಯೇ ಬಿಟ್ಟು ಹೊರಡುವಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ನನ್ನ ಸಂಗಡಿಗರಿಗೆ ಆ ಕಲ್ಲುಗಳ ಬಗೆಗಿದ್ದ ನಿರಾಸಕ್ತಿಯನ್ನು ಕಂಡು ನನಗೆ ವಿಪರೀತ ಆಶ್ಚರ್ಯವಾಗಿತ್ತು,

ಆ ದಿನ ಅವರು ನನಗೆ ಅತಿ ದೊಡ್ಡ ವಿರಾಗಿಗಳಾಗಿ ಕಂಡಿದ್ದರು. ಇವತ್ತು ನನಗೆ ಅನ್ನಿಸುವುದೆಂದರೆ, ಒಮ್ಮೆ ಕಲ್ಲುಗಳನ್ನು ಅವು ಕಲ್ಲುಗಳು ಎಂದು ತಿಳಿದ ಮೇಲೆ ತ್ಯಾಗದ, ವೈರಾಗ್ಯದ ಪ್ರಶ್ನೆಯೇ ಹುಟ್ಟದು.

ಅಜ್ಞಾನವೇ ಲೋಲುಪತೆ.

ತಿಳುವಳಿಕೆಯೇ ವೈರಾಗ್ಯ.

ವೈರಾಗ್ಯ ಎಂಬುದು ಸಾಧಿಸಬೇಕಾದ ಸಂಗತಿಯಲ್ಲ. ಅದು ನೀವು ಮಾಡಬೇಕಾದ ಕೆಲಸವಲ್ಲ. ಅದು ತಾನಾಗಿ ಸಂಭವಿಸುವಂಥದ್ದು. ತಿಳುವಳಿಕೆಯಿಂದ ಹುಟ್ಟುವ ಸಹಜವಾದ ಮನಸ್ಥಿತಿಯದು. ಲೋಲುಪತೆ ಯಾಂತ್ರಿಕವಾದದ್ದು. ಅದೂ ಸಹ ನೀವು ಮಾಡಿದ ಕೆಲಸವಲ್ಲ. ನಿಮ್ಮ ಅಜ್ಞಾನದಿಂದ ಸಹಜವಾಗಿ ಹುಟ್ಟುವಂಥದ್ದು.

ಹೀಗಾಗಿ ವೈರಾಗ್ಯವೆಂಬುದು ಅತಿ ಪ್ರಯಾಸಕರವಾದ ಕೆಲಸ ಎಂಬ ಕಲ್ಪನೆ ಅರ್ಥಹೀನವಾದದ್ದು. ಮೊದಲಿಗೆ, ಅದು ನೀವು ಮಾಡಬಹುದಾದಂತಹ ಕೆಲಸವಲ್ಲ- ಕೆಲಸಗಳು ಮಾತ್ರ ಪ್ರಯಾಸಕರವಾಗಿರಬಲ್ಲವು- ಅದೊಂದು ಪರಿಣಾಮ. ಎರಡನೆಯದಾಗಿ, ವೈರಾಗ್ಯದಲ್ಲಿ ಬಿಟ್ಟು ಹೋಗುವಂತೆ ಕಾಣುವ ಸಂಗತಿಯು ಕ್ಷುಲ್ಲಕವಾದದ್ದು. ಪಡೆಯುವಂಥದ್ದು ಅಮೂಲ್ಯವಾದದ್ದು.

ನಿಜಕ್ಕೂ, ತ್ಯಾಗವೆಂಬ ಸಂಗತಿ ಇಲ್ಲವೇ ಇಲ್ಲ. ಏಕೆಂದರೆ ನಾವು ಬಿಟ್ಟುದಕ್ಕಿಂತ ಎಷ್ಟೋ ಪಾಲು ಹೆಚ್ಚಿನದನ್ನು ಪಡೆಯುತ್ತೇವೆ. ನಿಜ ಸಂಗತಿಯೆಂದರೆ, ನಾವು ಬಿಡುವುದು ಕೇವಲ ಸಂಕೋಲೆಯನ್ನು, ಗಳಿಸುವುದು ಬಿಡುಗಡೆಯನ್ನು; ನಾವು ಬಿಡುವುದು ಕೇವಲ ಚಿಪ್ಪುಗಳನ್ನು, ಆದರೆ ಪಡೆಯುವುದು ವಜ್ರಗಳನ್ನು; ನಾವು ಕೈ ಬಿಡುವುದು ಕೇವಲ ಸಾವನ್ನು, ಗಳಿಸುವುದು ಚಿರಂಜೀವಿತ್ವವನ್ನು; ನಾವು ಬಿಡುವುದು ಕತ್ತಲೆಯನ್ನು ಪಡೆಯುವುದು ಅನಂತವಾದ, ಶಾಶ್ವತವಾದ ಬೆಳಕನ್ನು.

ಎಲ್ಲಿದೆ ಇದರಲ್ಲಿ ತ್ಯಾಗ? ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು.

Comments»

1. Mounesh - August 3, 2010

REALLY TRUE.101% TRUE


Leave a comment