ಧರ್ಮಗಳೆಂಬ ಮನಸ್ಸಿನ ಮುಖಗಳು January 2, 2010
Posted by uniquesupri in ಓಶೋ ಹೇಳಿದ್ದು.Tags: ಓಶೋ, ಕನ್ ಫ್ಯೂಶಿಯಸ್, ಕ್ರೈಸ್ತರು, ಜೈನ, ತಾವೋ, ಧರ್ಮ, ಬೌದ್ಧ, ಮನಸ್ಸು, ಮುಸಲ್ಮಾನ, ಹಿಂದು, Osho
add a comment
ಮನುಷ್ಯನ ಮನಸ್ಸಿಗೆ ಹಲವು ಮುಖಗಳಿವೆ. ಒಂದೊಂದು ಧರ್ಮವೂ ಮನಸ್ಸಿನ ಒಂದೊಂದು ಮುಖವನ್ನು ವೈಭವೀಕರಿಸಿ, ಅದನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವ ಕೆಲಸ ಮಾಡಿದೆ.
ಯಾರನ್ನೋ ನೀವು ಹಿಂದು ಎನ್ನುತ್ತೀರಿ, ಮತ್ತೊಬ್ಬನನ್ನು ಮುಸಲ್ಮಾನ ಎನ್ನುವಿರಿ, ಮಗದೊಬ್ಬನನ್ನು ಜೈನ. ಆದರೆ ವಾಸ್ತವವಾಗಿ ಇದು ಸತ್ಯವಲ್ಲ. ಪ್ರತಿ ವ್ಯಕ್ತಿಯಲ್ಲಿಯೂ ಎಲ್ಲಾ ಧರ್ಮಗಳು ಸುಪ್ತವಾಗಿರುತ್ತವೆ. ಆತನಲ್ಲಿ ಹಿಂದುವು ಇರುತ್ತಾನೆ, ಮುಸಲ್ಮಾನನೂ ಇರುತ್ತಾನೆ, ಕ್ರೈಸ್ತ, ಜೈನರೂ, ಬೌದ್ಧ, ಯಹೂದಿಗಳೂ ಇರುತ್ತಾರೆ. ಆತನೇನಾದರೂ ಬೌದ್ಧ ಕುಟುಂಬದಲ್ಲಿ ಹುಟ್ಟಿದನಾದರೆ ಆತನಲ್ಲಿನ ಬೌದ್ಧ ಮೇಲ್ಪದರಕ್ಕೆ ಬರುತ್ತಾನೆ. ಆತನಲ್ಲಿನ ಬೌದ್ಧ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತಾನೆ, ಉಳಿದವುಗಳನ್ನು ಹತ್ತಿಕ್ಕುತ್ತಾನೆ. ಬದಲಾಗಿ ಆತ ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದರೆ ಆತನ ಮನಸ್ಸಿನ ಇನ್ನೊಂದು ಮುಖ ಪ್ರಮುಖವಾಗುತ್ತದೆ. ಆದರೆ ಹತ್ತಿಕ್ಕಲ್ಪಟ್ಟ ಮನಸ್ಸಿನ ಉಳಿದ ಅಂಶಗಳು ಸುಮ್ಮನಿರುವುದಿಲ್ಲ, ಅವು ಸುಪ್ತವಾಗಿ ಕೆಲಸ ಮಾಡುತ್ತಲೇ ಇರುತ್ತವೆ.
ನಾನು ಕಂಡಿರುವಂತೆ, ಒಬ್ಬ ವ್ಯಕ್ತಿಯಲ್ಲಿ ಎಲ್ಲಾ ಧರ್ಮಗಳೂ ಇವೆ. ಇದರಿಂದಾಗಿಯೇ ಎಲ್ಲ ಧರ್ಮಗಳನ್ನು ಅನುಸಂಧಾನಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ವಾಸ್ತವಾವಾಗಿ ಈ ಅನುಸಂಧಾನಕ್ಕೆ ಯಾವ ಬೆಲೆಯೂ ಇಲ್ಲ.ಅದು ಕೇವಲ ಮನಸ್ಸಿನ ವಿವಿಧ ಮುಖಗಳನ್ನು ಅನುಸಂಧಾನಗೊಳಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ.
ಉದಾಹರಣೆಗೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಹಂ ಇದ್ದೇ ಇರುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಈ ಅಹಂಕಾರವನ್ನು ಅದರ ಪರಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ‘ನಿನಗಿಂಥ ನಾನು ಶ್ರೇಷ್ಠ’ ಎಂಬ ಭಾವನೆ ಪ್ರತಿ ಹಿಂದೂವಿನಲ್ಲೂ ಇರುತ್ತದೆ. ತಾನು ಈ ಜಗತ್ತಿಗೆ ಬೋಧಿಸುವುದಕ್ಕಾಗಿ, ಬ್ರಹ್ಮ ಜ್ಞಾನವನ್ನು ತಿಳಿಸುವುದಕ್ಕಾಗಿ ಹಿಂದುವಾಗಿ ಹುಟ್ಟಿದ್ದೇನೆ ಎಂದು ಆತ ನಂಬುತ್ತಾನೆ. ತನ್ನದು ಅತಿ ಪುರಾತನವಾದ, ಪವಿತ್ರವಾದ ಸನಾತನ ಧರ್ಮ. ತಾನು ಧರ್ಮಾಂಧನಲ್ಲ, ಸಹಿಷ್ಣು, ತಾನು ಯಾರ ಬದುಕಿನಲ್ಲೂ ಮಧ್ಯ ಪ್ರವೇಶಿಸುವುದಿಲ್ಲ, ಯಾರ ಮೇಲೂ ಆಕ್ರಮಣ ಮಾಡಿದವನಲ್ಲ ಎಂದು ಆತ ನಂಬುತ್ತಾನೆ. ಆದರೆ ಆತ ತನಗರಿವಿಲ್ಲದೆ ಇವೆಲ್ಲವನ್ನೂ ಮಾಡುತ್ತಿರುತ್ತಾನೆ.
ಹಿಂದೂಗಳು ಹೆಚ್ಚು ಅಸಹಿಷ್ಣುಗಳು. ತಾವು ಸಹಿಷ್ಣುಗಳು ಎಂದುಕೊಳ್ಳುವಲ್ಲೇ ಅವರ ಅಸಹಿಷ್ಣುತೆ ಇಣುಕುತ್ತದೆ. ಒಳಗೆ ಅಸಹಿಷ್ಣುತೆ ಇರದಿದ್ದರೆ ತಾನು ಸಹಿಷ್ಣು ಎಂದು ಭಾವಿಸುವ ಪ್ರಮೇಯವೇ ಉದ್ಭವಿಸದು.
ಇದು ಕೇವಲ ಹಿಂದೂ ಧರ್ಮದ ಗುಣವಲ್ಲ. ಎಲ್ಲಾ ಧರ್ಮಗಳಲ್ಲಿಯೂ ಇದು ನಾನಾ ರೂಪದಲ್ಲಿ ಆವರಿಸಿಕೊಂಡಿದೆ. ಯಹೂದಿಯರು ತಾವು ದೇವರಿಂದ ಆರಿಸಲ್ಪಟ್ಟ ಜನರು ಎಂದು ನಂಬುತ್ತಾರೆ. ಕ್ರೈಸ್ತರು ಕ್ರಿಸ್ತನೊಬ್ಬನೇ ದೇವರ ಮಗ, ಅಂತಿಮ ತೀರ್ಪಿನ ದಿನದಂದು ಆತ ತನ್ನ ಕುರಿಗಳನ್ನು ಉಳಿದ ಮಂದೆಯಿಂದ ಬೇರ್ಪಡಿಸುತ್ತಾನೆ. ಆತನನ್ನು ನಂಬದವರನ್ನು ನರಕದ ಬೆಂಕಿಗೆ ನೂಕುತ್ತಾನೆ ಎಂದು ನಂಬುತ್ತಾರೆ. ತಾವು ಉಳಿದವರಿಗಿಂತ ಶ್ರೇಷ್ಠ ಎಂಬ ಈ ಅಹಂಕಾರ ಎಲ್ಲಾ ಧರ್ಮದವರಲ್ಲಿಯೂ ಇದೆ. ಮುಸಲ್ಲಾನ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಕನ್‌ಫ್ಯೂಶಿಯನ್, ತಾವೊ – ಎಲ್ಲರಲ್ಲೂ ಇದೆ. ಆದರೆ ಈ ಅಂಶವನ್ನು ಅಭಿವೃದ್ಧಿ ಪಡಿಸಿ, ಶುದ್ಧೀಕರಿಸಿ, ಸುಂದರಗಾಣುವಂತೆ ಮಾಡಿದ ಶ್ರೇಯ ಹಿಂದುಗಳದು.
ಮುಸಲ್ಮಾನನು ಮೂಲತಃ ಧರ್ಮಾಂಧ. ಅಚಲವಾದ ಕುರುಡು ವಿಶ್ವಾಸ ಮನಸ್ಸಿನ ಹಲವು ಮುಖಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಅಂಶವು ಸುಪ್ತವಾಗಿರುತ್ತದೆ. ಆದರೆ ಮುಸಲ್ಮಾನನು ಮನಸ್ಸಿನ ಈ ಅಂಶವನ್ನು ಬೃಹತ್ತಾಗಿ ಬೆಳೆಸಿದ್ದಾನೆ. ತನ್ನ ಧರ್ಮ ಭೂಮಿಗೆ ಬಂದ ಕಡೆಯ ಧರ್ಮ. ಮೊಹಮದ್ ಕಟ್ಟಕಡೆಯ ಪ್ರವಾದಿ. ಮುಂದೆ ಬೇರಾವ ಪ್ರವಾದಿಯೂ ಬರುವುದಿಲ್ಲ; ದೇವರು ತನ್ನ ಸಂದೇಶದ ಕಡೆಯ ಆವೃತ್ತಿಯನ್ನು ಕಳಿಸಿಯಾಗಿದೆ. ಈ ಮುಂಚೆಯೂ ಸಂದೇಶಗಳು ಕಳಿಸಲ್ಪಟ್ಟಿದ್ದವು, ಆದರೆ ಈಗ ಅವೆಲ್ಲವೂ ರದ್ದಾದಂತೆ. ಕಡೆಯ ಸಂದೇಶ ತಲುಪಿಯಾಗಿದೆ ಹಾಗೂ ಅದು ಸತ್ಯವೂ,ಪರಿಪೂರ್ಣವೂ ಆಗಿರುವುದರಿಂದ ಮತ್ತ್ಯಾವ ಪ್ರವಾದಿ ಹುಟ್ಟಿಬರುವ ಆವಶ್ಯಕತೆಯಿಲ್ಲ – ಇದು ಆತನ ನಂಬಿಕೆ. ಇದು ಶುದ್ಧ ಧರ್ಮಾಂಧತೆ. ಇದು ಎಲ್ಲಾ ಧರ್ಮಗಳಲ್ಲೂ ಇದೆ.
ಕಾಲಿಫ್ ಉಮರ್ ಕೈಲಿ ಉರಿಯುವ ಬೆಂಕಿಯನ್ನು ಹಿಡಿದು ಅಲೆಕ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ತಲುಪುತ್ತಾನೆ. ”ಖುರಾನ್‌ನಲ್ಲಿ ಇಲ್ಲದ ವಿಷಯವೇನಿದೆ ಈ ಗ್ರಂಥಾಲಯದ ಪುಸ್ತಕಗಳಲ್ಲಿ?” ಎಂದು ಗ್ರಂಥಪಾಲಕನನ್ನು ಪ್ರಶ್ನಿಸುತ್ತಾನೆ. ಉತ್ತರಕ್ಕೂ ಕಾಯದೆ ತಾನೇ ಹೇಳುತ್ತಾನೆ, “ಖುರಾನಿನಲ್ಲಿರುವುದಕ್ಕಿಂತ ಹೆಚ್ಚಿನದು ಅವುಗಳಲ್ಲಿದ್ದರೆ ನಾನವನ್ನು ಸುಟ್ಟು ಹಾಕುತ್ತೇನೆ. ಏಕೆಂದರೆ ಖುರಾನ್ ಪರಿಪೂರ್ಣವಾದದ್ದು. ಇದರಲ್ಲಿ ಇಲ್ಲದ ವಿಷಯಗಳ ಆವಶ್ಯಕತೆ ಇಲ್ಲ. ಖುರಾನ್ ಒಂದೇ ಸಾಕು. ಇನ್ನು ಖುರಾನ್ ಹೇಳಿರುವುದನ್ನೇ ಆ ಪುಸ್ತಕಗಳು ಬೇರೆ ರೀತಿಯಲ್ಲಿ ಹೇಳಿರುವುದಾದರೆ ಅವುಗಳನ್ನು ಸುಟ್ಟು ಹಾಕುವೆ. ಏಕೆಂದರೆ ಖುರಾನ್ ಸತ್ಯವೂ, ಪರಿಪೂರ್ಣವೂ ಆಗಿರುವಾಗ ಬೇರೆ ಪುಸ್ತಕಗಳು ಯಾಕೆ ಬೇಕು?” ಇದು ಧರ್ಮಾಂಧನ ಮನಸ್ಸು ವರ್ತಿಸುವ ರೀತಿ. ತಾನು ಸರಿ ಉಳಿದವರೆಲ್ಲ ತಪ್ಪು ಎನ್ನುವುದೇ ಕುರುಡು ವಿಶ್ವಾಸದ ತಳಹದಿ. ಯಾವ ವಿಷಯದಲ್ಲಿ ತಾನು ಸರಿ, ಯಾವುದರಲ್ಲಿ ಇತರರು ತಪ್ಪು ಎನ್ನುವ ಪ್ರಶ್ನೆ ಧರ್ಮಾಂಧನಿಗೆ ಉದ್ಭವಿಸದು. ತಾನು ನಂಬಿರುವುದೆಲ್ಲವೂ ಸರಿ, ಉಳಿದದ್ದೆಲ್ಲಾ ತಪ್ಪು. ಆತ ತಾರ್ಕಿಕವಾಗಿ ಯೋಚಿಸಲಾರ, ಏನನ್ನೂ ಅರ್ಥ ಮಾಡಿಕೊಳ್ಳಲಾರ. ಆತ ವಿಶ್ವಾಸಿ, ಅಂಧವಿಶ್ವಾಸಿ. ಈ ಅಂಶವು ಎಲ್ಲಾ ಧರ್ಮಗಳಲ್ಲಿಯೂ ಇದ್ದರೂ ಇಸ್ಲಾಂ ಇದನ್ನು ಅದೆಷ್ಟರ ಮಟ್ಟಿಗೆ ಬೆಳೆಸಿದೆಯೆಂದರೆ, ಇದು ಅದರ ಮುಖವೇ ಆಗಿಹೋಗಿದೆ.
ಜೈನನು ಹಿಂಸಾ ವಿನೋದಿ. ಪ್ರತಿ ಮನಸ್ಸೂ ಹಿಂಸಾ ವಿನೋದಿಯೇ. ದೇಹವನ್ನು ದಂಡಿಸಿದಷ್ಟೂ ಮನಸ್ಸು ಉಬ್ಬುತ್ತದೆ. ದೇಹದಂಡನೆಯನ್ನು ನೀವು ಇಷ್ಟಪಡಲು ಶುರು ಮಾಡುತ್ತೀರಿ ಏಕೆಂದರೆ ಮನಸ್ಸು ಹೇಳುತ್ತೆ, “ಈಗ ನಾನು ಈ ದೇಹದ ಒಡೆಯ, ದೇಹ ನನಗೆ ಗುಲಾಮ.” ಇದನ್ನೇ ಜೈನ ಧರ್ಮ ಬೋಧಿಸುವುದು. ದೇಹವನ್ನು ಗೆಲ್ಲು. ದೇಹ ಆಹಾರವನ್ನು ಬೇಡಿದರೆ ನೀಡಬೇಡ. ನಿನ್ನ ದೇಹದ ಒಡೆಯ ನೀನು, ನಿನ್ನ ಯಜಮಾನಿಕೆಯನ್ನು ದೇಹದ ಮೇಲೆ ಸ್ಥಾಪಿಸು. ಹೀಗಾಗಿ ಉಪವಾಸವೆಂಬುದು ಜೈನ ಧರ್ಮದ ಅವಿಭಾಜ್ಯ ಅಂಗವಾಯಿತು. ಹೆಚ್ಚೆಚ್ಚು ದಿನಗಳ ಕಾಲ ಉಪವಾಸವಿರಬಲ್ಲವನು ದೊಡ್ಡ ಸಂತನಾಗುತ್ತಾನೆ. ನಿಜಕ್ಕೂ ಅವರು ದೇಹವನ್ನು ಹಿಂಸಿಸುವ ಮಾನಸಿಕ ಅಸ್ವಸ್ಥರು. ದೇಹ ದೇವಾಲಯ- ಅದನ್ನು ಪ್ರೀತಿಸಬೇಕು, ಗೌರವಿಸಬೇಕು.
ಈ ಹಿಂಸಾವಿನೋದಿ ಗುಣ ಜೈನರ ಸ್ವತ್ತೇನಲ್ಲ. ನಿಮ್ಮ ದೇಹವನ್ನು ದಂಡನೆಗೊಳಪಡಿಸುವುದನ್ನು ನೀವು ಸುಖಿಸುತ್ತೀರಿ. ದೇಹವನ್ನು ಹಿಂಸಿಸಿ ಅದನ್ನೊಂದು ಯಂತ್ರದ ಹಾಗೆ, ಸೇವಕನ ಹಾಗೆ ನಡೆಸಿಕೊಂಡರೆ ನೀವು ಉಬ್ಬಿ ಹೋಗುತ್ತೀರಿ. ನೀವು ಶಕ್ತಿಶಾಲಿ ಎಂಬ ಭಾವನೆ ನಿಮ್ಮನ್ನಾವರಿಸುತ್ತದೆ. ದೇಹವನ್ನು ದಂಡಿಸುವಲ್ಲಿ ವಿಫಲರಾದಿರೆಂದರೆ ನೀವು ಖಿನ್ನರಾಗುತ್ತೀರಿ. ಈ ಅಂಶವೂ ಸಹ ಎಲ್ಲಾ ಧರ್ಮಗಳಲ್ಲಿ ಅಡಕವಾಗಿದೆ. ಆದರೆ ಅದನ್ನು ಸಿಂಗರಿಸಿ, ಹೊಳೆಯುವಂತೆ ತಿಕ್ಕಿ ತೀಡಿ ಬೆಳೆಸಿದ್ದು ಜೈನ ಧರ್ಮ.
ಇನ್ನು ಬೌದ್ಧ ಧರ್ಮ ಮನಸ್ಸಿನ ಮತ್ತೊಂದು ಮುಖವಾದ ಪಲಾಯನವಾದವನ್ನು ಬೆಳೆಸಿತು. ಪ್ರಪಂಚವನ್ನು ಎದುರಿಸಬೇಡ, ಓಡಿ ಹೋಗು, ಬೆಟ್ಟಕ್ಕೆ ಹೋಗು, ಕಾಡನ್ನು ಸೇರಿಕೋ, ಸರ್ವ ಸಂಗ ಪರಿತ್ಯಾಗಿಯಾಗಿ ನಿಲ್ಲು. ಇದು ಶುದ್ಧ ಪಲಾಯನವಾದ. ಎಲ್ಲರಲ್ಲೂ ಇರುವ ಈ ಅಂಶವನ್ನು ಬೆಳೆಸಿ, ಅದಕ್ಕೊಂದು ರೂಪ ಕೊಟ್ಟು, ಅದನ್ನೊಂದು ತತ್ವಜ್ಞಾನವಾಗಿ ರೂಪಿಸಿ, ಅದರ ಮೇಲೆ ವಾದ ಮಾಡಿ, ಅದನ್ನು ಗಟ್ಟಿಗೊಳಿಸಿದ್ದು ಬೌದ್ಧರು.
ಹೀಗೆ ಎಲ್ಲಾ ಧರ್ಮಗಳು ಮನಸ್ಸಿನ ಒಂದೊಂದು ಮುಖವನ್ನು ಅಪ್ಪಿಕೊಂಡು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡವು. ಎಲ್ಲವೂ ಮನಸ್ಸನ್ನೇ ಅವಲಂಬಿಸಿರುವುದರಿಂದ ಇವ್ಯಾವೂ ನಿಜದ ಅಧ್ಯಾತ್ಮವನ್ನು ನೀಡಲಾರವು.
ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!! November 7, 2009
Posted by uniquesupri in ಓಶೋ ಹೇಳಿದ್ದು.Tags: ಓಶೋ, ಕ್ಯಾಥೊಲಿಕ್, ಕ್ರೈಸ್ತರು, ಮದರ್ ತೆರೆಸಾ, ಮಿಶಿನರಿ, ರಜನೀಶ್
add a comment
– ಹೇಮಾ ಪವಾರ್, ಬೆಂಗಳೂರು
ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು.ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ.
ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇ ಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ.
ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.
ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?
೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು
ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗುಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು
ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.
ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?
ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು. ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ,ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.
***
ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು.
ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.
ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!
ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ
ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.
ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ, ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ,
ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.
ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ.
ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.
ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ.
ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.
ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ
ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.
ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಧರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!
ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ.
ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!