jump to navigation

ಓಶೋ ಎಂಬ ಹಕ್ಕಿ December 20, 2008

Posted by uniquesupri in ಮಾತುಕತೆ.
Tags: , , , , , , ,
add a comment

-ಸುಪ್ರೀತ್.ಕೆ.ಎಸ್

ರಜನೀಶ್ ಚಂದ್ರ ಮೋಹನ್ ಎಂಬ ವ್ಯಕ್ತಿಯನ್ನು ಜಗತ್ತು ನೂರಾರು ಹೆಸರುಗಳಿಂದ ಕರೆದಿದೆ. ತಮಗೆ ಕಂಡ ಆತನ ಮುಖಕ್ಕೆ ತಮಗೆ ತೋಚಿದ ಹೆಸರನ್ನು ಜನರು ಕೊಡುತ್ತಾ ಬಂದಿದ್ದಾರೆ. ಆದರೆ ಕ್ಷಣ ಕ್ಷಣಕ್ಕೂ ಹೊಸ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುವ, ಹೆಚ್ಚು ಹೆಚ್ಚು ಆಳಕ್ಕಿಳಿದಷ್ಟು ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಹೋಗುವ ವ್ಯಕ್ತಿಯ ಎದುರು ಜಗತ್ತಿನ ಹೆಸರುಗಳೆಲ್ಲಾ ಕಳಾಹೀನವಾಗಿವೆ. ಆತನನ್ನು ಹಿಡಿದಿಡುವಲ್ಲಿ ಅಕ್ಷರಗಳ ಪುಂಜಗಳು ಸೋತಿವೆ. ಆತನನ್ನು ಆಚಾರ್ಯ ಎಂದು ಕರೆದರು, ಭಗವಾನ್ ಎಂದು ಸಂಬೋಧಿಸಿದರು. ಓಶೋ ಎಂದು ಕೂಗಿದರು. ಸೆಕ್ಸ್ ಗುರು ಎಂದು ಗೇಲಿ ಮಾಡಿದರು. ರಾಲ್ಸ್ ರಾಯ್ಸ್ ಸನ್ಯಾಸಿ ಎಂದು ಬಿರುದುಕೊಟ್ಟರು, ಡೈಮಂಡ್ ವಾಚಿನ ಬುದ್ಧ ಎಂದು ಕರೆದು ನಕ್ಕರು, ಭಗವಂತ ಎಂದು ಪಾದಕ್ಕೆರಗಿದರು, ಮಾನಸಿಕ ಅಸ್ವಸ್ಥ ಎಂದು ತೀರ್ಪುಕೊಟ್ಟರು. ಆದರೆ ಯಾವುದಂದರೆ ಯಾವುದಕ್ಕೂ ನಿಲುಕದೆ ಸ್ವಚ್ಛಂದವಾಗಿ ಆತ ಹಾರಾಡುತ್ತಲೇ ಇದ್ದ. ಅದಕ್ಕಾಗಿಯೇ ಆತನನ್ನು ನಾನು ಹಕ್ಕಿ ಎಂದಿರುವುದು.

acharya_rajneesh_10

ಹಕ್ಕಿ ಹಾರುವುದನ್ನು ಗಮನಿಸಿದ್ದೀರಾ? ಕಣ್ಣಿಗೆ ಕಾಣದಷ್ಟು ತೆಳುವಾದ ಗಾಳಿಯನ್ನು ಒತ್ತಿ ರೆಕ್ಕೆ ಬಿಚ್ಚಿ ಹಾರುವುದು ಸುಲಭದ ಮಾತಲ್ಲ. ಆಕಾಶವೇನೋ ಸ್ವಚ್ಛಂದವಾಗಿದೆ. ವಿಶಾಲವಾಗಿ ವ್ಯಾಪಿಸಿದೆ. ಆದರೆ ರೆಕ್ಕೆ ಬಿಚ್ಚಿ ಕಣ್ಣು ಮುಚ್ಚಿಕೊಂಡು ನೆಗೆಯುವ ಹಕ್ಕಿ ತನ್ನೆಲ್ಲಾ ಅನವಶ್ಯಕ ಭಾರವನ್ನು ಕಳಚಬೇಕಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಬೆತ್ತಲಾಗಬೇಕಾಗುತ್ತದೆ. ಎಲ್ಲಿವರೆಗೆ ಸಾಧ್ಯವೋ ಅಲ್ಲಿಯವರೆಗೆ ಎಲ್ಲಾ ಮೋಹಗಳನ್ನು ತೊರೆಯಬೇಕಾಗುತ್ತದೆ. ತನ್ನದೆಂದುಕೊಂಡ ಎಲ್ಲವನ್ನೂ ಬಿಟ್ಟು ಹೊರಡಬೇಕಾಗುತ್ತದೆ. ಪಾಂಡಿತ್ಯ, ಪುಸ್ತಕ ಜ್ಞಾನ, ಶಬ್ಧ ಸಂಪತ್ತು, ನೈಪುಣ್ಯತೆ, ಬುದ್ಧಿವಂತಿಕೆ ಎಲ್ಲವನ್ನೂ ನೆಲದ ಮೇಲೇ ಬಿಸುಟು ಹಾರಬೇಕಾಗುತ್ತದೆ. ಗಳಿಸಿಕೊಂಡ ಸಂಪತ್ತು, ಹೆಸರು, ಪ್ರತಿಷ್ಠೆ, ಆದರ್ಶ, ನೈತಿಕತೆ, ಜನಬೆಂಬಲ ಎಲ್ಲವನ್ನೂ ಮರೆತು ನೆಗೆಯಬೇಕಾಗುತ್ತದೆ. ರೆಕ್ಕೆಯನ್ನು ನಂಬಿಕೊಂಡು ಆಗಸಕ್ಕೆ ಹಾರುವ ಹಕ್ಕಿಗೆ ಭಾರ ಕಡಿಮೆಯಾದಷ್ಟು ಸ್ವಾತಂತ್ರ್ಯ ಹೆಚ್ಚಾಗುತ್ತದೆ. ಹೀಗೆ ಹಕ್ಕಿಯ ಹಾಗೆ ಬದುಕಿದವನು ಓಶೋ.


ಬ್ಲಾಗಿಗೆ ಓಶೋ ಎಂಬ ಹಕ್ಕಿ’ ಎಂದು ಹೆಸರು ಕೊಟ್ಟಿದ್ದರ ಹಿಂದೆ ಇಷ್ಟೆಲ್ಲಾ ಯೋಚಿಸಿದ್ದೆನಾ? ಖಂಡಿತಾ ಇಲ್ಲ. ಅದು ಕಣ್ಣೆದುರಿಗೆ ದಿಗಂತದವರೆಗೆ ಹಬ್ಬಿ ಅಂತ್ಯವನ್ನೇ ಮರೆಯಾಗಿಸಿದ ಜಲಸಾಗರವನ್ನು ಕಂಡು ಅಬ್ಬಾ’ ಎಂದಷ್ಟೇ spontaneous ಆಗಿ ತೋಚಿದ ಹೆಸರು. ಓಶೋ ಭಜನೆ ಬ್ಲಾಗಿನ ಉದ್ದೇಶವಾಗಿದ್ದರೆ ಇದರ ಹೆಸರು ಜಗದ್ಗುರು ಓಶೋ ರಜನೀಶ್’ ಎಂದಾಗಿರುತ್ತಿತ್ತು. ಇಲ್ಲವೇ ಅರೆಬೆಂದ ಮಾಹಿತಿಯ ಪ್ರಚಾರವೇ ನಮ್ಮ ಉದ್ದೇಶವಾಗಿದ್ದರೆ ಸೆಕ್ಸ್ ಗುರು ರಜನೀಶ್’ ಎಂಬ ಹೆಸರು ಕೊಡುತ್ತಿದ್ದೆವು. ಬ್ಲಾಗಿನ ಹೆಸರಿನಷ್ಟೇ spontaneous ಆದ, ರಜನೀಶ್ ವಿಚಾರದೊಂದಿಗೆ ಮುಖಾಮುಖಿಯಾದಾಗ ಕ್ಷಣದಲ್ಲಿ ಹುಟ್ಟಿದ ಆಲೋಚನೆಯನ್ನು, ಭಾವವನ್ನು ಹರಿಬಿಡುವುದು ಇದರ ಉದ್ದೇಶ. ಕ್ಷಣದಲ್ಲಿ ನಮ್ಮಲ್ಲಿ ಹುಟ್ಟಿದ ಭಾವವಷ್ಟೇ ಸತ್ಯ. ನಮ್ಮ ಮನಸ್ಸಿನಲ್ಲಿ ಮೂಡಿನಿಂತ ಚಿತ್ರಣವೇ ಸತ್ಯ. ಉಳಿದದ್ದೆಲ್ಲವೂ ನಮ್ಮ interpretationಗಳು ಮಾತ್ರ.


ಓಶೋನ ಗೀಳು ಹತ್ತಿಸಿಕೊಂಡ ನನಗೆ ಓಶೋ ಕಾಣಿಸಿದ ಸಂಗತಿಗಳು, ನನ್ನ ಮೇಲೆ ಓಶೋನ ಪ್ರಭಾವ ಮಾಡಿದ ಪರಿಣಾಮಗಳು, ಓಶೋನ ಚಿಂತನೆಯಿಂದ ನಾನು ಅನುಭವಿಸಿದ ಹಿಂಸೆ ಎಲ್ಲವನ್ನೂ ನಾನು ಬ್ಲಾಗಿನ ಅಂಗಳದಲ್ಲಿ ಕೂತು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್ನುಳಿದ ಹಾಗೆ ಅಕ್ಕ ಚೇತನಾ ಇದ್ದಾಳೆ, ಹಿರಿಯರಾದ ಡಾ||ಜ್ಞಾನದೇವ್ ಇದ್ದಾರೆ. ಅನಾಮಿಕತೆಯಲ್ಲೇ ಐಡೆಂಟಿಟಿ ಕಂಡುಕೊಳ್ಳಬಯಸುವ ನಗೆ ಸಾಮ್ರಾಟ’ರು ಇದ್ದಾರೆ ನಮ್ಮ ಅಂಗಳದಲ್ಲಿ. ಜೊತೆಗೆ ಸಾಕಷ್ಟು ಬೆಳದಿಂಗಳೂ ಚೆಲ್ಲಿಕೊಂಡಿದೆ. ನೀವೂ ಬಂದುಬಿಡಿ ಹಾಯಾಗಿ ಮೌನದಲ್ಲಿ ಮಾತನಾಡುತ್ತಾ, ಮಾತಿನಲ್ಲಿ ಮೌನವನ್ನು ಕೇಳುತ್ತಾ ವಿಹರಿಸೋಣ