jump to navigation

ಸಂಭೋಗದಿಂದ ಸಮಾಧಿಯೆಡೆಗೆ – ಪ್ರೀತಿಯೆಂದರೇನು? (ಭಾಗ ೧) January 23, 2010

Posted by uniquesupri in ಸಂಭೋಗದಿಂದ ಸಮಾಧಿಯೆಡೆಗೆ.
Tags: , , , ,
trackback

(ರಜನೀಶರ ಅತಿ ಜನಪ್ರಿಯವಾದ ಉಪನ್ಯಾಸ ಮಾಲಿಕೆಯಾದ ‘ಸಂಭೋಗದಿಂದ ಸಮಾಧಿಯೆಡೆಗೆ’ ಪುಸ್ತಕವಾಗಿ ಪ್ರಕಟಗೊಂಡು ಹೆಸರು ಮಾಡಿತ್ತು. ಸೆಕ್ಸ್ ಗುರು ಎಂಬ ಅಪಖ್ಯಾತಿಗೆ ಒಳಗಾದ ರಜನೀಶ್ ಸೆಕ್ಸ್ ಹಾಗೂ ಪ್ರೀತಿಯ ಬಗ್ಗೆ ಹೊಂದಿದ್ದ ಆಳವಾದ ತಿಳುವಳಿಕೆ ಈ ಉಪನ್ಯಾಸಗಳಲ್ಲಿ ಕಾಣುತ್ತದೆ.)

ಪ್ರೀತಿಯನ್ನನುಭವಿಸುವುದು ಸುಲಭ, ವ್ಯಾಖ್ಯಾನಿಸುವುದು ನಿಜಕ್ಕೂ ಕಷ್ಟ.  ಮೀನಿಗೆ ಸಮುದ್ರ ಎಂದರೇನೆಂದುosho ವ್ಯಾಖ್ಯಾನಿಸಲು ಹೇಳಿ, ಅದು “ಇದೇ ಸಮುದ್ರ. ಸುತ್ತಲು ಇರುವುದೆಲ್ಲಾ ಸಮುದ್ರ. ಅಷ್ಟೇ” ಎಂದು ಸುಮ್ಮನಾಗುತ್ತದೆ. ಸಮುದ್ರವನ್ನು ವ್ಯಾಖ್ಯಾನಿಸು ಎಂದು ಒತ್ತಾಯಿಸಿದರೆ ಸಮಸ್ಯೆ ಕಠಿಣವಾಗುತ್ತದೆ. ಜೀವನದ ಅತಿ ಸುಂದರವಾದ ಸಂಗತಿಗಳನ್ನು ಅನುಭವಿಸಬಹುದು, ಅರಿಯಬಹುದು ಆದರೆ ಅವನ್ನು ವಿವರಿಸುವುದು, ವ್ಯಾಖ್ಯಾನಿಸುವುದು ತೀರಾ ಕಷ್ಟ.

ದುರಂತ ಏನೆಂದರೆ ಮನುಷ್ಯ ಕಳೆದ ನಾಲ್ಕೈದು ಸಾವಿರ ವರ್ಷಗಳಲ್ಲಿ ತಾನು ಆಸ್ಥೆಯಿಂದ ಅನುಭವಿಸಬೇಕಾದ, ಒಳಗಿನಿಂದ ಕಂಡುಕೊಳ್ಳಬೇಕಾದ ಪ್ರೀತಿಯ ಬಗ್ಗೆ ಬರಿದೇ ಮಾತನಾಡಿ ಕಾಲ ತಳ್ಳಿದ್ದಾನೆ. ಪ್ರೀತಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಲಾಗಿದೆ, ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಲಾಗಿದೆ, ದೇವಸ್ಥಾನಗಳಲ್ಲಿ, ಚರ್ಚುಗಳಲ್ಲಿ ಭಕ್ತಿ ಮಂತ್ರಗಳನ್ನು ನಿರಂತರವಾಗಿ ಪಠಿಸಲಾಗುತ್ತಿದೆ – ಪ್ರೀತಿಯ ಹೆಸರಲ್ಲಿ ಮಾಡದಿರುವ ಕೆಲಸವಾದರೂ ಏನಿದೆ? ಆದರೂ ಮನುಷ್ಯನ ಬದುಕಿನಲ್ಲಿ ಇಂದಿಗೂ ಪ್ರೀತಿಗೆ ಜಾಗವಿಲ್ಲ. ಮಾನವ ಕುಲದ ಶಬ್ಧಭಂಡಾರದ ಆಳಕ್ಕೆ ಶೋಧಿಸಿದರೆ ಪ್ರೀತಿಗಿಂದ ಹುಸಿಯಾದ ಇನ್ನೊಂದು ಪದ ದೊರಕದು.

ಎಲ್ಲಾ ಧರ್ಮಗಳು ಪ್ರೀತಿಯನ್ನು ಬೋಧಿಸುತ್ತವೆ. ಆದರೆ ಎಲ್ಲೆಡೆಯೂ ಇರುವಂಥ ಪ್ರೀತಿ ಎಂಥದ್ದು? ವಂಶಪಾರ್ಯವಾಗಿ ಬಂದ ದೌರ್ಭಾಗ್ಯದ ಹಾಗಿರುವ ಹುಸಿ ಪ್ರೀತಿ ಮನುಷ್ಯನ ಜೀವನದಲ್ಲಿರಬಹುದಾದ ಉಳಿದೆಲ್ಲಾ ಪ್ರೀತಿಗೆ ಅಡ್ಡಿಯಾಗಿದೆ. ಆದರೆ ಜನರು ಈ ಧಾರ್ಮಿಕ ಮುಖಂಡರನ್ನು ಪ್ರೀತಿಯನ್ನು ಹರಡುವವರು ಎಂದು ಪೂಜಿಸುತ್ತಾರೆ. ವಾಸ್ತವವಾಗಿ ಅವರು ಪ್ರೀತಿಯನ್ನು ಹುಸಿಯಾಗಿಸಿದ್ದಾರೆ. ಪ್ರೀತಿಯ ಎಲ್ಲಾ ಕಾಲುವೆಗಳನ್ನು ಬತ್ತಿಸಿದ್ದಾರೆ. ಇದರಲ್ಲಿ ಪೂರ್ವ ಪಶ್ಚಿಮಗಳೆಂಬ, ಭಾರತ-ಅಮೇರಿಕಾಗಳೆಂಬ ವ್ಯತ್ಯಾಸವಿಲ್ಲ.

ಮನುಷನಲ್ಲಿನ್ನೂ ಪ್ರೀತಿಯ ಹರಿವು ಕಾಣಿಸಿಕೊಂಡಿಲ್ಲ. ಇದಕ್ಕೆ ನಾವು ಮನುಷ್ಯನಿಗೇ ದೋಷವನ್ನು ಆರೋಪಿಸುತ್ತೇವೆ. ಮನುಷ್ಯ ಕೆಟ್ಟು ಹೋಗಿರುವುದಕ್ಕೇ ಆತನಲ್ಲಿ ಪ್ರೀತಿ ಅರಳುತ್ತಿಲ್ಲ. ಆತನ ಜೀವನದಲ್ಲಿ ಪ್ರೀತಿಯ ಒರತೆ ಚಿಮ್ಮುವುದಿಲ್ಲ ಎನ್ನುತ್ತೇವೆ. ಆತನ ಮನಸ್ಸು ವಿಷಯುಕ್ತವಾಗಿದೆ ಎಂದು ದೂಷಿಸುತ್ತೇವೆ. ಮನಸ್ಸು ವಿಷಯುಕ್ತವಲ್ಲ. ದೇವರ ಈ ಸೃಷ್ಟಿಯಲ್ಲಿ ಯಾವುದೂ ವಿಷಯುಕ್ತವಲ್ಲ. ಎಲ್ಲವೂ ಸಿಹಿಯಾದ ಮಕರಂದವೇ. ಈ ಮಕರಂದದ ಬಟ್ಟಲನ್ನು ವಿಷವಾಗಿ ಪರಿವರ್ತಿಸಿಕೊಂಡವನು ಮನುಷ್ಯನೇ. ಈ ಕೃತ್ಯದಲ್ಲಿ ಮುಖ್ಯ ಅಪರಾಧಿಗಳು ಶಿಕ್ಷಕರೆಂದು ಕರೆಯಲ್ಪಡುವವರು, ಮಹಾತ್ಮರು, ಸಂತರೆಂದು ಕರೆಸಿಕೊಳ್ಳುವವರು ಹಾಗೂ ರಾಜಕಾರಣಿಗಳು.

ಈ ಅಂಶವನ್ನು ವಿವರವಾಗಿ ಧ್ಯಾನಿಸಿ. ಈ ರೋಗವನ್ನು ತುರ್ತಾಗಿ ಗುರುತಿಸಿ ನಿವಾರಿಸದಿದ್ದರೆ ಮುಂದೆಂದೂ ಮನುಷ್ಯನ ಬದುಕಿನಲ್ಲಿ ಪ್ರೀತಿಯನ್ನು ಕಾಣುವುದಕ್ಕೆ ಸಾಧ್ಯವಿಲ್ಲ.

ಜಗತ್ತಿನಲ್ಲಿ ಪ್ರೀತಿಯು ಅರಳದಿರುವುದಕ್ಕೆ ಮನುಷ್ಯನೇ ಕಾರಣ ಎನ್ನುವುದನ್ನು ನಾವು ಕುರುಡಾಗಿ ನಂಬಿದ್ದೇವೆ. ಈ ನಮ್ಮ ಕುರುಡು ನಂಬಿಕೆಗೆ ನಾವು ಆಧಾರವಾಗಿ ಬಳಸುವ ಮೂಲಗಳೇ ನಿಜವಾದ ಅಪರಾಧಿಗಳು. ದಾರಿತಪ್ಪಿಸುವ ತತ್ವಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ, ಶತಮಾನಗಳ ನಂತರ ಈ ತತ್ವಗಳ ಹಿಂದಿರುವ  ಕುತರ್ಕವನ್ನು ಗುರುತಿಸುವುದಕ್ಕೆ ನಾವು ವಿಫಲರಾಗುತ್ತೇವೆ. ಆಗ ಗೊಂದಲ ಸೃಷ್ಟಿಯಾಗುತ್ತದೆ. ಈ ತತ್ವಗಳು ಅಸಹಜವಾದ, ನೈಸರ್ಗಿಕವಲ್ಲದ ಬದುಕನ್ನು ಬೋಧಿಸುತ್ತವೆ. ಮನುಷ್ಯನಿಗೆ ಎಂದಿಗೂ ಆ ರೀತಿ ಬದುಕಲು ಸಾಧ್ಯವಾಗುವುದಿಲ್ಲ. ಆಗ ಸುಲಭವಾಗಿ ನಾವು ಮನುಷ್ಯನಲ್ಲೇ ದೋಷವಿರಬೇಕು ಎನ್ನುವ ತೀರ್ಮಾನಕ್ಕೆ ಬರುತ್ತೇವೆ.

ಒಂದಾನೊಂದು ಕಾಲದಲ್ಲಿ ಒಬ್ಬ ಬೀಸಣಿಗೆ ಮಾರುವವನಿದ್ದ. ಪ್ರತಿದಿನ ಆತ ರಾಜನ ಅರಮನೆಯ ಮುಂದೆ ಹಾದುಹೋಗುತ್ತಿದ್ದ. ತನ್ನ ಬೀಸಣಿಗೆಗಳು ವಿಶಿಷ್ಟವಾದವು, ಅಪರೂಪವಾದವು. ಇಂತಹ ಬೀಸಣಿಗೆಗಳನ್ನು ಯಾರೂ ಎಲ್ಲೂ ಕಂಡಿರಲು ಸಾಧ್ಯವಿಲ್ಲ ಎಂದು ಕೊಚ್ಚಿಕೊಳ್ಳುತ್ತಿದ್ದ. ಅರಮನೆಯಲ್ಲಿದ್ದ ರಾಜನಿಗೆ ಈ ಬೀಸಣಿಗೆಯವನಲ್ಲಿ ಆಸಕ್ತಿ ಮೂಡಿತ್ತು. ಎಲ್ಲಾ ಬಗೆಯ ಅಪರೂಪದ, ಬೆಲೆಬಾಳುವ ಬೀಸಣಿಗೆಗಳನ್ನು ಆತ ಜಗತ್ತಿನ ಮೂಲೆ ಮೂಲೆಗಳಿಂದ ಸಂಗ್ರಹಿಸಿದ್ದ. ಒಮ್ಮೆ ಆತ ಅರಮನೆಯ ಮೇಲ್ಛಾವಣಿಯಿಂದ ಬಗ್ಗಿ ಈ ವಿಶಿಷ್ಟ ಬೀಸಣಿಕೆಳನ್ನು ನೋಡಿದ. ಅವುಗಳು ಸಾದಾ ಬೀಸಣಿಗೆಗಳಂತೆ ಕಂಡವು. ಮಾರುವವನನ್ನು ಒಳಕ್ಕೆ ಕರೆಸಿಕೊಂಡು ರಾಜ ಕೇಳಿದ, “ಆ ಬೀಸಣಿಗೆಗಳ ವಿಶಿಷ್ಟತೆಯೇನು? ಏನು ಅವುಗಳ ಬೆಲೆ?”

ವ್ಯಾಪಾರಿ ಹೇಳಿದ, “ಮಹಾಪ್ರಭೂ, ದುಬಾರಿಯೇನಲ್ಲ. ಇವುಗಳ ಗುಣಮಟ್ಟಕ್ಕೆ ಹೋಲಿಸಿದರೆ ಬೆಲೆ ಕಡಿಮೆಯೇ. ಬರೀ ನೂರು ರುಪಾಯಿ.”

ರಾಜನಿಗೆ ಆಶ್ಚರ್ಯವಾಯಿತು. “ನೂರು ರುಪಾಯಿಯಾ? ಇದು ನಯಾಪೈಸೆಯ ಬೀಸಣಿಗೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಸಿಕ್ಕುತ್ತೆ. ಇದಕ್ಕೆ ನೀನು ನೂರು ರುಪಾಯಿ ಹೇಳುವೆಯಾ? ಏನು ವಿಶೇಷತೆ ಇದೆ ಇವುಗಳಲ್ಲಿ?”

“ಗುಣಮಟ್ಟ! ಪ್ರತಿಯೊಂದು ಬೀಸಣಿಗೆಯೂ ನೂರು ವರ್ಷಗಳ ಕಾಲ ಬಾಳಿಕೆ ಬರುತ್ತವೆ.” ವ್ಯಾಪಾರಿ ಉತ್ತರಿಸಿದ.

“ಇವನ್ನು ನೋಡಿದರೆ ಒಂದು ವಾರವೂ ಬಾಳಿಕೆ ಬರುವಂತಿಲ್ಲ. ನನಗೇನು ಮೋಸ ಮಾಡುತ್ತಿರುವೆಯಾ? ರಾಜನೊಂದಿಗೇ ಮೋಸದಾಟ ಆಡುವೆಯಾ?” ರಾಜ ಗುಡುಗಿದ.

“ನನ್ನೊಡೆಯ, ಆ ಧೈರ್ಯ ನಾನು ಮಾಡಬಲ್ಲೆನೆ? ನಾನು ಪ್ರತಿದಿನ ಬೀಸಣಿಗೆ ಮಾರಲು ನಿಮ್ಮರಮನೆಯ ಬಳಿಯೇ ನಡೆದು ಹೋಗುವೆನು. ಬೀಸಣಿಗೆ ಬೆಲೆ ನೂರು ರುಪಾಯಿ, ನೂರು ವರ್ಷ ಇದು ಬಾಳಿಕೆ ಬಾರದಿದ್ದರೆ ನಾನು ಹೊಣೆ. ನಾನು ಬೀದಿಯಲ್ಲೇ ಸಿಕ್ಕುವೆ. ಮೇಲಾಗಿ ನೀವು ಈ ರಾಜ್ಯದ ಒಡೆಯರು ನಿಮ್ಮಿಂದ ತಲೆತಪ್ಪಿಸಿಕೊಂಡು ಬಾಳಲು ಸಾಧ್ಯವೇ?” ವ್ಯಾಪಾರಿ ವಿನಯದಿಂದ ಉತ್ತರಿಸಿದ.

ಆತ ಹೇಳಿದ ಬೆಲೆ ಕೊಟ್ಟು ರಾಜ ಬೀಸಣಿಗೆಯನ್ನು ಖರೀದಿಸಿದ. ವ್ಯಾಪಾರಿಯ ಮಾತಿನಲ್ಲಿ ನಂಬಿಕೆಯಿರದಿದ್ದರೂ ರಾಜನಿಗೆ ಆ ಬೀಸಣಿಗೆಯನ್ನು ಪರೀಕ್ಷಿಸುವ ಕುತೂಹಲವಿತ್ತು. ಯಾವ ಆಧಾರದ ಮೇಲೆ ಈತ ಹೀಗೆ ಭರವಸೆ ನೀಡಬಲ್ಲ ಎಂದು ತಿಳಿಯಬೇಕೆನಿಸಿತ್ತು. ವ್ಯಾಪಾರಿಗೆ ಒಂದು ವಾರ ಕಳೆದು ಬಂದು ನೋಡಲು ತಿಳಿಸಲಾಯ್ತು.

ಮೂರೇ ದಿನದಲ್ಲಿ ಬೀಸಣಿಗೆಯ ಕೇಂದ್ರದಲ್ಲಿದ್ದ ಕಡ್ಡಿ ಮುರಿದುಹೋಯ್ತು. ವಾರ ಕಳೆಯುವಷ್ಟರಲ್ಲಿ ಬೀಸಣಿಗೆ ಸಂಪೂರ್ಣ ಜೀರ್ಣವಾಯ್ತು. ಇನ್ನು ಆ ವ್ಯಾಪಾರಿ ಇತ್ತ ತಲೆ ಹಾಕುವುದಿಲ್ಲ ಎಂದು ರಾಜನಿಗೆ ಖಾತರಿಯಾಯ್ತು. ಆದರೆ ಆತನ ಅಚ್ಚರಿಯಾಗುವಂತೆ ಏಳು ದಿನ ಕಳೆದ ನಂತರ ವ್ಯಾಪಾರಿ ಏನೂ ನಡೆದೇ ಇಲ್ಲ ಎಂಬಂತೆ ಅರಮನೆಗೆ ಬಂದ.

ಆತನನ್ನು ಕಂಡು ರಾಜನಿಗೆ ಕೋಪವೇರಿತು. “ನೀಚ! ಮೂರ್ಖ! ನೋಡಿಲ್ಲಿ ನೀನು ಕೊಟ್ಟ ಬೀಸಣಿಗೆಗೆ ನಾಲ್ಕೇ ದಿನದಲ್ಲಿ ಯಾವ ಪಾಡು ಬಂದಿದೆ. ಇದು ನೂರು ವರ್ಷ ಬಾಳಿಕೆ ಬರುತ್ತೆ ಎಂದಿದ್ದೆಯಲ್ಲ, ನೀನೇನು ಹುಚ್ಚನೋ ಇಲ್ಲ ಮಹಾಮೋಸಗಾರನೋ?”

ವ್ಯಾಪಾರಿ ದೈನ್ಯದಿಂದ ಉತ್ತರಿಸಿದ, “ಮನ್ನಿಸಬೇಕು. ಪ್ರಭುಗಳಿಗೆ ಈ ಬೀಸಣಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಸರಿಯಾಗಿ ಬಳಸಿದ್ದರೆ ಇದು ನೂರು ವರ್ಷ ಬಾಳಿಕೆ ಬಂದೇ ಬರುವುದು.”

“ಅಬ್ಬ! ಬೀಸಣಿಗೆ ಬಳಸುವುದು ಹೇಗೆಂದೂ ನಾನು ಕಲಿಯಬೇಕಾ?” ಕೋಪದಿಂದ ಪ್ರಶ್ನಿಸಿದ ರಾಜ.

“ದಯವಿಟ್ಟು ಕೋಪಮಾಡಿಕೊಳ್ಳಬೇಡಿ. ನನ್ನ ಬೀಸಣಿಗೆಗೆ ಈ ದುಸ್ಥಿತಿಗೆ ಹೇಗೆ ಬಂದಿತು? ನೀವದನ್ನು ಹೇಗೆ ಬಳಸಿದಿರಿ?”

ರಾಜ ಬೀಸಣಿಗೆಯನ್ನೆತ್ತಿಕೊಂಡು ಹಿಂದಕ್ಕೆ ಮುಂದಕ್ಕೆ ಸಾಮಾನ್ಯವಾಗಿ ಬೀಸುವಂತೆ ಬೀಸುತ್ತ ತೋರಿಸಿದ. 

“ಈಗ ನನಗೆ ಅರ್ಥವಾಯ್ತು. ನೀವು ಹೀಗೆ ಬೀಸಬಾರದು.” ವ್ಯಾಪಾರಿ ಹೇಳಿದ.

“ಏನು? ಬೇರೆ ಹೇಗೆ ಬೀಸುವುದು?” ರಾಜ ಕೇಳಿದ.

ವ್ಯಾಪಾರಿ ವಿವರಿಸಿದ, “ಬೀಸಣಿಗೆಯನ್ನು ಅಲುಗದಂತೆ ಮುಖದ ಮುಂದೆ ಹಿಡಿದುಕೊಂಡು ತಲೆಯನ್ನು ಎಡಕ್ಕೂ ಬಲಕ್ಕೂ ತಿರುಗಿಸಬೇಕು. ಹೀಗೆ ಬಳಸಿದರೆ ಬೀಸಣಿಗೆ ನೂರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ನೀವು ಗತಿಸಿಹೋಗಬಹುದು ಆದರೆ ಬೀಸಣಿಗೆ ಇದ್ದ ಹಾಗೇ ಇರುತ್ತೆ. ನನ್ನ ಬೀಸಣಿಗೆಯಲ್ಲಿ ಯಾವ ದೋಷವೂ ಇಲ್ಲ, ದೋಷವಿರುವುದು ಅದನ್ನು ಬಳಸುವ ರೀತಿಯಲ್ಲಿ.”

ಮಾನವ ಕುಲಕ್ಕೆ ಇಂಥದ್ದೇ ದೋಷವನ್ನು ಆರೋಪಿಸಲಾಗಿದೆ. ಸಾವಿರಾರು ವರ್ಷಗಳಿಂದ ಒಟ್ಟು ಸೇರುತ್ತಿರುವ ರೋಗದಿಂದ ಮನುಕುಲ ನರಳುತ್ತಿದೆ. ಇದಕ್ಕೆ ಕಾರಣ ಮನುಷ್ಯನೇ ಹೊರತು ಸಂಸ್ಕೃತಿಯಲ್ಲ ಎಂದು ಮತ್ತೆ ಮತ್ತೆ ಹೇಳಲಾಗುತ್ತಿದೆ. ಮನುಷ್ಯ ಕೊಳೆಯುತ್ತಿದ್ದಾನೆ, ಆದರೂ ಪರಂಪರೆಯನ್ನು ಕೊಂಡಾಡಲಾಗುತ್ತದೆ. ನಮ್ಮ ಶ್ರೇಷ್ಠ ಪರಂಪರೆ! ನಮ್ಮ ಮತ!

“ಮನುಷ್ಯನಲ್ಲಿ ತಪ್ಪಿದೆ, ಆತ ಬದಲಾಗಬೇಕು” ಎನ್ನಲಾಗುತ್ತದೆ. ಆದರೂ ಯಾರೊಬ್ಬರೂ ಎದ್ದು ನಿಂತು ಇದನ್ನು ಪ್ರಶ್ನಿಸುವುದಿಲ್ಲ. ಮನುಷ್ಯನಲ್ಲಿ ಪ್ರೀತಿಯನ್ನು ಅರಳಿಸುವುದಕ್ಕೆ ವಿಫಲವಾದ ಸಂಸ್ಕೃತಿ ಹಾಗೂ ಮತಗಳು ಹುಸಿ ಮೌಲ್ಯಗಳ ಮೇಲೆ ನಿಂತಿವೆ ಎಂದು ತೋರಿಸಿಕೊಡುವುದಿಲ್ಲ. ಈ ಸಾವಿರ ವರ್ಷಗಳಲ್ಲಿ ಪ್ರೀತಿ ಅರಳಿಲ್ಲವೆಂದರೆ, ನಾನು ಹೇಳುವೆ – ಇವೇ ಸಂಸ್ಕೃತಿ, ಮತಗಳು ಇದ್ದರೆ-  ಇನ್ನು ಸಾವಿರ ವರ್ಷ ಕಳೆದರೂ ಪ್ರೀತಿ ತುಂಬಿದ ಮನುಷ್ಯನನ್ನು ಕಾಣಲಿಕ್ಕೆ ಸಾಧ್ಯವಿಲ್ಲ. ಇವತ್ತಿನ ಮನುಷ್ಯನೇ ನಾಳೆಯೂ ಇರುತ್ತಾನೆ. ಶಿಷ್ಟಾಚಾರ, ನಾಗರೀಕತೆ, ತಂತ್ರಜ್ಞಾನಗಳೆಂಬ ಆತನ ಹೊರಕವಚಗಳು ಸಮಯ ಕಳೆದಂತೆ ಬದಲಾಗುತ್ತವೆಯೇ ಹೊರತು ಒಳಗೆ ಆತ ಹಾಗೆಯೇ ಉಳಿದಿರುತ್ತಾನೆ.

ನಾವು ನಮ್ಮ ಸಂಸ್ಕೃತಿ, ಮತಗಳನ್ನು ವಿಮರ್ಶಿಸಿಕೊಳ್ಳಲು ಸಿದ್ಧರಿಲ್ಲ, ಆದರೂ ಅವುಗಳನ್ನು ಎದೆತುಂಬ ಹಾಡಿಹೊಗಳುತ್ತೇವೆ. ಅವುಗಳ ಪಾಲಕರ, ಸಂತರ ಕಾಲುಗಳಿಗೆ ಮುತ್ತಿಕ್ಕುತ್ತೇವೆ. ನಮ್ಮ ಆಲೋಚನಾ ವಿಧಾನವನ್ನು, ಮನುಕುಲ ನಡೆದು ಬಂದ ದಾರಿಯನ್ನು ಅವಲೋಕಿಸಿ ಅವರು ನಮ್ಮನ್ನು ದಾರಿತಪ್ಪಿಸುತ್ತಿರಬಹುದು, ಅವರು ಹೇಳುವುದೆಲ್ಲ ತಪ್ಪಿರಬಹುದು ಎಂದು ಪರೀಕ್ಷಿಸುವ ಗೋಜಿಗೇ ನಾವು ಹೋಗುವುದಿಲ್ಲ.

ಮೂಲದಲ್ಲಿರುವ ತತ್ವಗಳು  ದೋಷಯುಕ್ತವಾಗಿವೆ ಹಾಗೂ ಹುಸಿ ಮೌಲ್ಯಗಳಿಂದ ಕೂಡಿವೆ ಎಂದು ನಾನು ಹೇಳುವೆ. ಈ ಮಾತಿಗೆ ಇಂದಿನ ಮನುಷ್ಯನಿಗಿಂತ ಬೇರೆ ಸಾಕ್ಷಿ ಬೇಕೆ?

(ಸಶೇಷ)

Comments»

1. gajanan - June 2, 2010

waw thaz…..w….

2. Mounesh - August 8, 2010

ok good


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: