jump to navigation

ಗುರುವಿನೊಂದಿಗಿರಲು ಗುಂಡಿಗೆ ಬೇಕು! January 16, 2010

Posted by uniquesupri in ಓಶೋ ಹೇಳಿದ್ದು.
Tags: , , , , , ,
trackback

ಜೆನ್,ಜೆಸ್ಟ್,ಜಿಪ್,ಜ್ಯಾಪ್ ಅಂಡ್ ಜಿಂಗ್ ಉಪನ್ಯಾಸಮಾಲಿಕೆಯ ಏಳನೆಯ ಉಪನ್ಯಾಸದ ಸಂಗ್ರಹಾನುವಾದ.

ನೂರು ಮಂದಿ ಗುರುಗಳು ಎನ್ನಿಸಿಕೊಂಡವರಲ್ಲಿ ಒಬ್ಬನು ಮಾತ್ರ ಗುರು, ಉಳಿದ ತೊಂಬತ್ತೊಂಬತ್ತು ಮಂದಿ ಶಿಕ್ಷಕರಾಗಿರುತ್ತಾರೆ. ಶಿಕ್ಷಕನು ಆವಶ್ಯಕವಾಗಿ ಹೆಚ್ಚು ಓದಿದವನಾಗಿರುತ್ತಾನೆ. ಗುರುವಿಗೆ ಓದು ಅವಶ್ಯಕವಲ್ಲ. ಶಿಕ್ಷಕ ಸಂಪ್ರದಾಯ, ಕಟ್ಟಳೆ, ಸಮಾಜದ ರೀತಿ ನೀತಿ, ಶಾಸ್ತ್ರ-ಸಂಹಿತೆಗಳನ್ನು ಅರೆದು ಕುಡಿದಿರುತ್ತಾನೆ. ಆತನದು ಎರವಲು ಜೀವನ. ಎರವಲು ಪಡೆದ ಯಾವ ಸಂಗತಿಗಳೂ ಜೀವನವನ್ನು ಹಗುರವಾಗಿಸುವುದಿಲ್ಲ. ಸ್ವಂತಿಕೆಯಿಲ್ಲದ ವ್ಯಕ್ತಿ ಭಾರವಾಗಿ, ಸಪ್ಪೆಯಾಗಿ, ಶುಷ್ಕವಾಗಿ, ಸತ್ತವನಂತೆ ಇರುತ್ತಾನೆ. ಗುರು ಬಂಡುಕೋರ925103951-2887690-2 . ಆತ ತನ್ನ ಸ್ವಂತಿಕೆಯಿಂದ ಬದುಕುತ್ತಾನೆ. ಆತ ಅಪ್ರಯತ್ನ ಪೂರ್ವಕವಾಗಿ, ಸಹಜವಾಗಿರುತ್ತಾನೆ, ಸಾಂಪ್ರದಾಯಿಕವಾಗಿ ಅಲ್ಲ. ಸಾಂಪ್ರದಾಯಿಕವಾಗಿರುವುದು ಗುರುವಿಗೆ ಅಸಾಧ್ಯ. ಯೇಸು ಹುಟ್ಟಿನಿಂದ ಯಹೂದಿ ಆದರೆ ಆತ ಯಹೂದಿಯಲ್ಲ, ಬುದ್ಧ ಹುಟ್ಟಿನಿಂದ ಹಿಂದು ಆದರೆ ಆತ ಹಿಂದುವಲ್ಲ. ಈ ಮಾತು ಎಲ್ಲಾ ಗುರುಗಳಿಗೂ ಅನ್ವಯಿಸುತ್ತದೆ. ಆದರೆ ಶಿಕ್ಷಕ ಹಾಗಲ್ಲ. ಆತ ಗುರುವಿನ ಅಣಕು ಚಿತ್ರದ ಹಾಗೆ. ಆತ ತಾನು ಗುರು ಎಂಬಂತೆ ನಟಿಸುತ್ತಾನೆ, ಅದು ಆತನ ಅಹಂಕಾರದ ಸುಳಿಯಷ್ಟೇ. ಗುರು ಅಹಂಕಾರರಹಿತನು, ಆತನಲ್ಲಿ ಪ್ರೀತಿಯಲ್ಲದೆ ಬೇರೇನು ಇಲ್ಲ. ಅಹಂಕಾರ ಕೈಬಿಟ್ಟ ತಕ್ಷಣ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಪ್ರೀತಿ, ಅನುಕಂಪ ಹಾಗೂ ಮಧುರತೆಗಳು ಆವರಿಸಿಕೊಳ್ಳುತ್ತವೆ. ಅದು ಶುದ್ಧ ಸಂಭ್ರಮ. ಅದೊಂದು ದೀಪಗಳ ಹಬ್ಬ, ಒಂದು ಹಾಡು, ಒಂದು ಕುಣಿತ, ಕಾರಣವಿಲ್ಲದ ಸಂಭ್ರಮ.

ಗುರು ಕಾವ್ಯ ಸಂಗೀತವಿದ್ದಂತೆ. ಶಿಕ್ಷಕನೋ ಗಣಿತ, ಲೆಕ್ಕಾಚಾರಗಳಿದ್ದಂತೆ. ಶಿಕ್ಷಕ ಪದಗಳ ಲೋಕದಲ್ಲಿರುತ್ತಾನೆ, ಗುರು ಪದಗಳಿಗೆ ಮೀರಿ ಜೀವಿಸುತ್ತಿರುತ್ತಾನೆ. ಆದರೆ ನಾವು ಗುರುವನ್ನು ಅರ್ಥಮಾಡಿಕೊಳ್ಳುವ ಭಾಷೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬಿಟ್ಟಿದ್ದೇವೆ. ಏಕೆಂದರೆ ಒಬ್ಬ ಗುರು ಅವತರಿಸುವುದು ತುಂಬಾ ವಿರಳವಾಗಿ.

ಶಿಕ್ಷಕ ಹೆಚ್ಚು ತಿಳಿದುಕೊಂಡಿರುವವನಾಗಿರುತ್ತಾನೆ, ಹೆಚ್ಚು ಅರ್ಥ ಮಾಡಿಕೊಂಡವನಾಗಿರುತ್ತಾನೆ; ಆತ ಈ ನಮ್ಮ ಮೂರ್ಖ ಅಸ್ತಿತ್ವದ ಭಾಗವಾಗಿರುತ್ತಾನೆ. ಆತನೂ ನಿಮ್ಮಂತೇ ಕುರುಡ. ಆದರೆ ಆತ ನಿಮ್ಮ ಭಾಷೆಯನ್ನು ಮಾತನಾಡುತ್ತಾನೆ. ಹೀಗಾಗಿ ಆತ ನಿಮಗೆ ಅರ್ಥವಾಗುತ್ತಾನೆ. ಗುರು ಕುರುಡನಲ್ಲ. ಆತ ಮಾತನಾಡುವುದು ವಿಶಿಷ್ಟವಾದ ಭಾಷೆ. ಹೀಗಾಗಿ ಆತ ಹೊರಗಿನವನಾಗಿ ಕಾಣುತ್ತಾನೆ. ಶಿಕ್ಷಕ ನಿಮ್ಮವನಾಗಿ ಕಾಣುತ್ತಾನೆ. ಆತನೊಂದಿಗೆ ಹೊಂದಿಕೊಳ್ಳುವುದು ನಿಮಗೆ ಸುಲಭ, ಏಕೆಂದರೆ ಆತ ನಿಮ್ಮ ಮಟ್ಟದಲ್ಲಿಯೇ ಇರುತ್ತಾನೆ. ಗುರು ಅನ್ಯಗ್ರಹದವ, ಆತ ಅಪರಿಚಿತ. ಆತ ನಿಮ್ಮೊಳಗೆ ನಿಮ್ಮ ನಡುವೆ ಬಾಳುತ್ತಿದ್ದರೂ ಅತೀತಕ್ಕೆ ಸೇರಿದವ. ಆತನ ಸಂದೇಶ ದೂರದ, ಅತಿ ದೂರದ ಮೂಲದಿಂದ ಬಂದಿರುತ್ತದೆ. ಗ್ರಹಿಸಿಲ್ಲದ, ಗ್ರಹಿಸಲಾಗದುದರ ಪ್ರತಿನಿಧಿಯಾಗಿ ಆತ ಇಲ್ಲಿರುತ್ತಾನಷ್ಟೆ. ಆತ ನಿಮ್ಮ ಶಾಸ್ತ್ರಗಳ ಭಾಷೆ ಮಾತನಾಡುವುದಿಲ್ಲ, ಆತ ತನ್ನದೇ ಸಂವಹನವನ್ನು ರೂಪಿಸಿಕೊಳ್ಳುತ್ತಾನೆ.

ಗುರುವನ್ನು ನೀವು ಹಗೆಯಂತೆ ಕಾಣುವಿರಿ. ಶಿಕ್ಷಕನ ಬಗ್ಗೆ ನಿಮಗೆ ಅನುಕಂಪವಿರುತ್ತದೆ ಆದರೆ ಗುರುವಿನ ಬಗ್ಗೆ ನಿಮಲ್ಲಿ ಆಳವಾದ ಹಗೆತನವಿರುತ್ತದೆ. ಆತನನ್ನು ಕೊಲ್ಲುವುದಕ್ಕೆ, ನಾಶ ಮಾಡುವುದಕ್ಕೆ ಬಯಸುತ್ತೀರಿ. ಏಕಂದರೆ ಆತ ನಿಮ್ಮ ಬದುಕಲ್ಲಿ ಗೊಂದಲವೇಳಿಸುತ್ತಾನೆ. ನಿಮ್ಮ ಭ್ರಮೆಗಳನ್ನು ಛಿದ್ರಗೊಳಿಸುತ್ತಾನೆ, ನೀವು ಈ ಮೊದಲು ನಂಬಿದ ವಿಚಾರಗಳಿಗೆ ಹೊಡೆತಕೊಡುತಾನೆ. ಆತ ನಿಮ್ಮ ಅಡಿಪಾಯಕ್ಕೇ ಆಘಾತ ಉಂಟುಮಾಡುತ್ತಾನೆ – ನೀವು ನಿಂತಿರುವ ನೆಲವನ್ನೇ ತೆಗೆದು ಹಾಕುತ್ತಾನೆ. ಆತ ನಿಮ್ಮ ವಿಚಾರವಂತಿಕೆ, ನಿಮ್ಮ ಸಮಾಧಾನಗಳನ್ನು ನಾಶ ಮಾಡುತ್ತಾನೆ.

ಸಾಮಾನ್ಯವಾಗಿ ಸಮಾಜವು ಎರಡು ಭಾಗಗಳಾಗಿ ವಿಂಗಡಣೆಯಾಗಿದೆ: ‘ತಲೆ’ಗಳು ಹಾಗೂ ‘ಕೈ’ಗಳು. ನಾವು ಜನರನ್ನು ವಿಂಗಡಿಸಿರುವುದು ಹೀಗೆಯೇ: ಕಾರ್ಮಿಕರು ಹಾಗೂ ಮೇಲ್ವಿಚಾರಕರು. ಇದು ಕಾಕತಾಳೀಯವಲ್ಲ, ಅತಿ ಪ್ರಮುಖವಾದ ಸಂಗತಿ. ತಲೆ ಕೈಗಳನ್ನು ಆಳುತ್ತದೆ. ಆದರೆ ಇಲ್ಲಿ ಮೂರನೆಯ ವಿಂಗಡಣೆ ಇಲ್ಲವೇ ಇಲ್ಲ. – ‘ಹೃದಯ’ಗಳದ್ದು. ಗುರು ತೀರಾ ವಿರಳವಾಗಿರುವ ಈ ಮೂರನೆಯ ವಿಂಗಡಣೆಗೆ ಸೇರುತ್ತಾನೆ.

ಯಾವಗಲೋ ಒಮ್ಮೊಮ್ಮೆ ಅಪರೂಪಕ್ಕೆ ಒಬ್ಬ ಯೇಸು, ಒಬ್ಬ ಬುದ್ಧ, ಒಬ್ಬ ಝರಾತುಷ್ಟ್ರ, ಒಬ್ಬ ಲಾವೋ ತ್ಸು, ಒಬ್ಬ ಚಾಂಗ್ ತ್ಸುವನ್ನು ಕಾಣುತ್ತೀರಿ. ಆದರೆ ಇವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಿಮಗೆ ಸಾಧ್ಯವೇ ಆಗುವುದಿಲ್ಲ.

ನಿಮ್ಮ ಮುಂದಾಳುಗಳು ನಿಜವಾಗಿ ಮುಂದಾಳುಗಳಲ್ಲ, ಅವರು ತಮ್ಮ ಹಿಂಬಾಲಕರನ್ನು ಹಿಂಬಾಲಿಸುವವರು. ನಿಮ್ಮ ಶಿಕ್ಷಕರು ಶಿಕ್ಷಕರಲ್ಲ, ಅವರು ಅನವರತ ನಿಮ್ಮ ಪೂರ್ವಾಗ್ರಹಗಳಿಗೆ ಹೊಂದಿಕೊಳ್ಳುತ್ತಿರುತ್ತಾರೆ. ಇಲ್ಲವಾದರೆ ನೀವು ಅವರನ್ನು ಗೌರವಿಸುವುದಿಲ್ಲ; ಆಗ ಪ್ರತಿಷ್ಟೆಗೆ, ಅಧಿಕಾರಕ್ಕೆ ಅವಕಾಶ ಸಿಕ್ಕುವುದಿಲ್ಲ. ಎಲ್ಲರೂ ಕುರುಡರ ಭಾಷೆ ಮಾತನಾಡುವುದು, ಶಿಕ್ಷಕ ನಿಮಗೆ ಅದನ್ನು ಮನದಟ್ಟು ಮಾಡುತ್ತಾನೆ, ನಿಮ್ಮನ್ನು ಖುಶಿಯಾಗಿಡುತ್ತಾನೆ.

ಗುರು ಮುಚ್ಚಿದ ನಿಮ್ಮ ಗಾಯಗಳನ್ನು ಬೆಳಕಿಗೆ ಒಡ್ಡುತ್ತಾನೆ. ಗುರುವಿನೊಂದಿಗಿರುವುದು ಯಾತನೆಯನ್ನು ಕೊಡುತ್ತದೆ! ಒಬ್ಬನು ಶಿಲುಬೆಯ ಮೇಲೆ ಸಾಯುವುದಕ್ಕೆ, ವಿಷ ಸೇವಿಸುವುದಕ್ಕೆ, ನಿಮ್ಮಿಂದ ಕೊಲ್ಲಲ್ಪಡುವುದಕ್ಕೆ, ಹಿಂಸಿಸಲ್ಪಡುವುದಕ್ಕೆ ಸಿದ್ಧನಾಗದಿದ್ದರೆ ಆತ ಗುರುವಾಗಲಾರ. ಆತ ಸದಾ ಅಪಾಯದೊಂದಿಗೇ ಓಡಾಡುತ್ತಿರುತ್ತಾನೆ.

ಶಿಕ್ಷಕ ನಿಮಗೆ ಹೊಂದಿಕೊಳ್ಳುತ್ತಾನೆ. ಗುರು ಇದಕ್ಕೆ ವಿರುದ್ಧ; ನೀವು ಆತನಿಗೆ ಹೊಂದಿಕೊಳ್ಳಬೇಕು. ನೀವು ಲಕ್ಷಾಂತರ ಸಂಖ್ಯೆಯಲ್ಲಿರುತ್ತೀರಿ, ಬುದ್ಧ ಯಾವಾಗಲೂ ಒಬ್ಬನೇ. ನೀವು ಸದಾ ಬಹುಸಂಖ್ಯಾತರು, ಅಧಿಕಾರವೆಲ್ಲ ನಿಮ್ಮ ಬಳಿಯೇ ಇರುತ್ತದೆ. ನಿಮ್ಮ ಅಧಿಕಾರವೇನಿದ್ದರೂ ಪೊಳ್ಳು. ನೀವು ಯೇಸುವನ್ನು ಶಿಲುಬೆಗೇರಿಸಬಹುದು ಆದರೆ ಆತನ ಚೈತನ್ಯವನ್ನು ಕೊಲ್ಲಲಾಗುವುದಿಲ್ಲ. ಸಾಕ್ರೆಟಿಸನಿಗೆ ವಿಷವುಣ್ಣಿಸಬಹುದು ಆದರೆ ಆತನ ಸಂದೇಶಕ್ಕೆ ವಿಷವಿಕ್ಕಲಾಗುವುದಿಲ್ಲ.

ಈ ಶಿಕ್ಷಕರ ದೊಡ್ಡಿಯಲ್ಲಿ ಒಂದು ವೇಳೆ ನಿಮಗೆ ನಿಜವಾದ ಅರಿವುಳ್ಳ ಗುರು ಸಿಕ್ಕಿದರೂ ಆತನನ್ನು ಗುರುತಿಸುವಲ್ಲಿ ನೀವು ಬಹುಪಾಲು ವಿಫಲರಾಗುತ್ತೀರಿ.ಆತ ಕೋಪಿಷ್ಟನಾಗಿರುತ್ತಾನೆ. ಆತ ಅದೆಂಥ ಆಘಾತಕಾರಿ ವ್ಯಕ್ತಿತ್ವದವನಾಗಿರುತ್ತಾನೆಂದರೆ, ನೀವು ಅಲ್ಲಿಂದ ಪರಾರಿಯಾಗಬೇಕೆಂದು ಬಯಸುತ್ತೀರಿ. ನಿಮಗೆ ಉಸಿರುಗಟ್ಟಿ ಸಾಯುವಂತೆ ಭಾಸವಾಗುತ್ತದೆ. ಆತ ನಿಮ್ಮ ಪ್ರತಿಯೊಂದು ವಿಚಾರವನ್ನು, ಸಿದ್ಧಾಂತವನ್ನು, ನಂಬಿಕೆಯನ್ನು – ಒಟ್ಟಿನಲ್ಲಿ ಏನೇನು ಅತ್ಯಮೂಲ್ಯ ಎಂದು ಭಾವಿಸಿ ಹೊತ್ತಿರುತ್ತೀರೋ – ಅದನ್ನೆಲ್ಲ ಒಡೆದು ಹಾಕುತ್ತಾನೆ. ಅರಿವುಳ್ಳ ಗುರುವಿನ ಬಳಿ ನೀವು ವಜ್ರಗಳೆಂದು ಹೊತ್ತವೆಲ್ಲ ಸಾಮಾನ್ಯ ಕಲ್ಲುಗಳೆಂದು ಅರಿವಾಗುತ್ತದೆ.

ಗುರುವಿನೊಂದಿಗೆ ಇರುವುದಕ್ಕೆ ನಿಜಕ್ಕೂ ಗುಂಡಿಗೆ ಇರಬೇಕು. ಅಹಂಕಾರವನ್ನು, ನಿಮ್ಮ ನಿನ್ನೆಗಳನ್ನು, ನಿಮ್ಮೆಲ್ಲ ಬಂಡವಾಳವನ್ನು ಕೈಬಿಡುವ ಗುಂಡಿಗೆ ಇರಬೇಕು. ಸಮಾಜವನ್ನು ಎದುರುಹಾಕಿಕೊಂಡು, ಸಂಸ್ಕೃತಿಯನ್ನು ಎದುರಿಸಿ, ಇಡೀ ಇತಿಹಾಸವನ್ನು ಎದುರುಹಾಕಿಕೊಂಡು ಅಪಾಯಕಾರಿಯಾಗಿ ಬದುಕುವ ಗುಂಡಿಗೆ ಬೇಕು.

ನಿಜವಾದ ಶಿಷ್ಯ ಬಂಡುಕೋರನಾಗಿರುತ್ತಾನೆ, ಏಕೆಂದರೆ ಆತನ ಗುರು ಪರಮ ಬಂಡುಕೋರನಾಗಿರುತ್ತಾನೆ!

Comments»

1. Mounesh - August 3, 2010

true, true true true. it is really true.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: