jump to navigation

ಸಂಶಯವಾದಿಯ ನಂಬಿಕೆಗಳು (ಭಾಗ4) January 15, 2009

Posted by uniquesupri in ಓಶೋ ಹೇಳಿದ್ದು.
trackback

(ಭಾಗ )

ಒಮ್ಮೆ ಹೀಗಾಯಿತು… ಒಬ್ಬ ಖ್ಯಾತ ಸೋಫಿಸ್ಟ್ ಗುರುವಿನ ಬಳಿ ಯುವಕನೊಬ್ಬ ಬಂದ. ಯುವಕ ಆಗರ್ಭ ಶ್ರೀಮಂತನಾಗಿದ್ದ. ಗುರುವು ಬಹುದೊಡ್ಡ ಸಂಭಾವನೆಯನ್ನು ಕೇಳಿದ. ಯುವಕ ಹೇಳಿದ, “ಯೋಚಿಸಬೇಡಿ, ನೀವು ಕೇಳಿದಷ್ಟು ಹಣ ಕೊಡುತ್ತೇನೆ, ಆದರೆ ನನ್ನದೊಂದು ನಿಬಂಧನೆಯಿದೆ. ಸಂಭಾವನೆಯ ಅರ್ಧ ಭಾಗದ ಹಣವನ್ನು ನಾನೀಗ ಕೊಡುತ್ತೇನೆ, ಇನ್ನರ್ಧ ಭಾಗವನ್ನು ನಾನು ನನ್ನ ಮೊದಲ ವಾದವನ್ನು ಗೆದ್ದಾಗ ನೀಡುತ್ತೇನೆ. ಅದು ನೀವು ನನಗೆ ನಿಜವಾಗಿಯೂ ವಾದಕಲೆಯನ್ನು ಕಲಿಸಿರುವಿರೋ ಇಲ್ಲವೇ ಸುಮ್ಮನೆ ಮೋಸ ಮಾಡಿರುವಿರೋ ಎಂಬುದಕ್ಕೆ ಪರೀಕ್ಷೆ.”

ಅವನ ಮಾತು ಸಮಂಜಸವಾಗಿತ್ತು, ಗುರುವಿಗೆ ಅದರಲ್ಲಿ ಯಾವ ಹುಳುಕೂ ಕಾಣಲಿಲ್ಲ, “ನೀನು ಯೋಚಿಸಬೇಡ. ನಾನು ಇಡೀ ಗ್ರೀಸಿನಲ್ಲೇ ಶ್ರೇಷ್ಠನಾದ ಗುರು, ನೀನು ವಾದದಲ್ಲಿ ಗೆದ್ದೇ ಗೆಲ್ಲುವೆ.” osho03

ಅರ್ಧ ಮೊತ್ತವನ್ನು ಯುವಕ ತೆತ್ತ. ಎರಡು ವರ್ಷಗಳಲ್ಲಿ ಯುವಕನನ್ನು ವಾದಕಲೆಯಲ್ಲಿ ಪಾರಂಗತನನ್ನಾಗಿಸಲಾಯಿತು, ಯಾರ ಪರವಾಗಿ ವಾದಿಸಿದರೂ ಗೆಲ್ಲಬಲ್ಲನವನಾಗಿದ್ದ. ಆಸ್ತಿಕವಾದದ ಪರವಾಗಿ ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ, ಹಾಗೆಯೇ ನಾಸ್ತಿಕವಾದದ ಪರ ನಿಂತು ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ. ಈಗವನಿಗೆ ವಾದವನ್ನು ಹೇಗೆ ಮಂಡಿಸಬೇಕು, ಹೇಗೆ ಮನವೊಲಿಸಬೇಕು ಎಂಬ ಕಲೆ ಕರಗತವಾಗಿತ್ತು.

ಗುರು ಹೇಳಿದ, “ಇಲ್ಲಿಗೆ ನಿನ್ನ ಶಿಕ್ಷಣ ಮುಗಿಯಿತು. ಇನ್ನರ್ಧ ಹಣವನ್ನು ಪಾವತಿ ಮಾಡು.”

ಆತ ಹೇಳಿದ, “ಆದರೆ ನಾನಿನ್ನೂ ವಿಜಯಿಯಾಗಿಲ್ಲ. ನಮ್ಮ ಒಪ್ಪಂದದ ಪ್ರಕಾರ ನೀವು ಕಾಯಬೇಕು.” ಆ ಯುವಕ ಗುರುವಿಗಿಂತ ಹೆಚ್ಚು ಚಾಣಾಕ್ಷ. ಆತ ಯಾರೊಂದಿಗೂ ವಾದವನ್ನೇ ಮಾಡಲಿಲ್ಲ. ನೀವೇನೇ ಹೆಳಿದರು ಆತ ಹೌದು ಎನ್ನುತ್ತಿದ್ದ. ಯಾವ ವಾದಕ್ಕೂ ಆತ ಇಳಿಯುತ್ತಿರಲಿಲ್ಲವಾದ್ದರಿಂದ ಗೆಲ್ಲುವ ಪ್ರಶ್ನೆಯೇ ಇರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆದರೆ ವೃದ್ಧ ಗುರುವನ್ನು ಹೀಗೆ ಮೋಸ ಮಾಡಲಾಗದು, ಈ ಯುವಕನಸ್ಸು ಅತಿಯಾಯಿತು.

ವೃದ್ಧ ನ್ಯಾಯಾಲಯದಲ್ಲಿ ಯುವಕನ ಮೇಲೆ ಮೊಕದ್ದಮೆ ಹೂಡಿದ. ತನ್ನ ಶಿಕ್ಷಣ ಮುಗಿದ ಮೇಲೆ ಕೊಡುತ್ತೇನೆ ಎಂದಿದ್ದ ಅರ್ಧ ಮೊತ್ತವನ್ನು ಆತ ಪಾವತಿಸಿಲ್ಲ ಎಂದು ಆರೋಪಿಸಿದ. ಗುರುವಿನ ಉಪಾಯ ನಾಜೂಕಿನದಾಗಿತ್ತು. “ಒಂದು ವೇಳೆ ಕೋರ್ಟು ‘ನಿನ್ನ ಹಣವನ್ನು ನೀನು ಪಡೆಯಬೇಕು ಎಂದರೆ ಈ ಯುವಕ ವಾದವನ್ನು ಗೆಲ್ಲಬೇಕು’ ಎಂದರೆ ನಾನು ಸೋತಂತೆ. ಅಂದರೆ ಯುವಕ ವಾದದಲ್ಲಿ ಗೆದ್ದಂತಾಗುತ್ತದೆ. ಆತ ನನ್ನ ಹಣವನ್ನು ಕೊಡಬೇಕಾಗುತ್ತದೆ.” ಹೀಗೆ ಆಲೋಚಿಸಿದ ಆತ ಕೋರ್ಟಿನ ಹೊರಗೆ ಯುವಕನಿಗೆ, “ಈಗ ನೀನು ನಿನ್ನ ಮೊದಲ ಕೇಸು ಗೆದ್ದಿರುವೆ. ನನ್ನ ಹಣವನ್ನು ಕೊಡು” ಎಂದು ಕೇಳಿ ಹಣವನ್ನು ಪಡೆಯಬಹುದು ಎಂದುಕೊಂಡ.

ಆತ ಇನ್ನೊಂದು ಸಾಧ್ಯತೆಯ ಬಗೆಗೂ ಆಲೋಚಿಸಿದ: ತಾನೇನಾದರೂ ಮೊಕದ್ದಮೆ ಗೆದ್ದರೆ – ಅದು ಸಾಧ್ಯವಾಗದು, ಆದರೂ ಆತ ಬಹು ಶ್ರೇಷ್ಠ ವಾದಿಯಾಗಿದ್ದ – ಆಗಲೂ ಸಹ ತಾನು ಯುವಕನಿಗೆ, “ನೀನು ನ್ಯಾಯಾಲಯದ ಅಪ್ಪಣೆಯಂತೆ ನಡೆಯಬೇಕು, ನನಗೆ ಹಣವನ್ನು ಕೊಡಬೇಕು.” ಎನ್ನಬಹುದು. ಆದರೆ ಯುವಕ ತನ್ನ ಶಿಷ್ಯ, ಆತ ತನ್ನೆಲ್ಲಾ ಪಟ್ಟುಗಳನ್ನು ಅರಿತವನಾಗಿದ್ದ ಎಂಬುದು ಗುರುವಿಗೆ ತಿಳಿದಿರಲಿಲ್ಲ.

ಯುವಕ ನ್ಯಾಯಾಲಯದಲ್ಲಿ ತರ್ಕಬದ್ಧವಾಗಿ ವಾದಿಸಿದ. ಅಸಲಿಗೆ ಮೊಕದ್ದಮೆ ಆತನ ಪರವಾಗಿಯೇ ಇತ್ತು. “ನಾನು ನನ್ನ ಮೊದಲ ವಾದವನ್ನು ಗೆಲ್ಲುವವರೆಗೆ ಇನ್ನರ್ಧ ಹಣವನ್ನು ಕೊಡುವುದಿಲ್ಲ.” ಗುರುವಿಗೆ ವಾದದಲ್ಲಿ ಗೆಲ್ಲುವ ಆಸಕ್ರಿಯಿರಲಿಲ್ಲ. ಆತ ಹೇಳಿದ, “ಹೌದು, ಈ ಒಪ್ಪಂದವನ್ನು ನಾವು ಮಾಡಿಕೊಂಡದ್ದು ನಿಜ.” ಕೋರ್ಟಿನಲ್ಲಿ ಆತ ತನ್ನ ಸೋಲು ಒಪ್ಪಿಕೊಂಡ, ಹೊರಗೆ ಯುವಕನನ್ನು “ಈಗ…?” ಎಂದು ಕೇಳಬಹುದು ಎಂದು ಭಾವಿಸುತ್ತಾ.

ಗುರು ಮೊಕದ್ದಮೆ ಸೋತ. ಕೋರ್ಟಿನ ಹೊರಗೆ ಮೆಟ್ಟಿಲುಗಳನ್ನು ಇಳಿಯುವಾಗ ಯುವಕನನ್ನು ಹಿಡಿದು ಪಕ್ಕಕ್ಕೆ ಕರೆದು, “ಹುಡುಗಾ, ಈಗ ನೀನು ನಿನ್ನ ಮೊದಲ ವಾದವನ್ನು ಗೆದ್ದಿರುವೆ. ನನ್ನ ಹಣವನ್ನು ಕೊಟ್ಟು ಬಿಡು.” ಎಂದ.

ಯುವಕ ಹೇಳಿದ, “ನಾನು ನಿಮ್ಮ ಶಿಷ್ಯ, ನನ್ನ ನೀವು ಮೋಸ ಮಾಡಲು ಆಗುವುದಿಲ್ಲ. ನಾನು ನ್ಯಾಯಾಲಯದ ಅಪ್ಪಣೆಯ ವಿರುದ್ಧ ವರ್ತಿಸಲಾರೆ. ಅದು ನ್ಯಾಯಾಲಯದ ನಿಂದನೆಯಾಗುತ್ತದೆ. ಅಷ್ಟಕ್ಕೂ ನೀವು ಒತ್ತಾಯ ಮಾಡುವುದಿದ್ದರೆ, ನ್ಯಾಯಾಲಯದೊಳಕ್ಕೆ ಬಂದು ಮ್ಯಾಜಿಸ್ಟ್ರೇಟ್ ಎದುರು ಕೇಳಿ.”

ಈ ಸೊಫಿಸ್ಟ್ ಪದ್ಧತಿ ಕಾಲಾಂತರಗಳಿಂದ ನಾನಾ ಹೆಸರುಗಳನ್ನು ಪಡೆದುಕೊಂಡು ಮುಂದುವರಿದುಕೊಂಡು ಬಂದಿದೆ- ಈಗ ಇದನ್ನು ಸಂಶಯವಾದ ಎನ್ನುತ್ತಾರೆ. ಸಂಶಯವಾದಿಗೆ ಯಾವ ಸಿದ್ಧಾಂತವೂ ಇರುವುದಿಲ್ಲ, ಹಾಗಾಗಿ ಆತನನ್ನು ನೀವು ಸೋಲಿಸಲು ಸಾಧ್ಯವಾಗುವುದಿಲ್ಲ. ಆತ ಏನನ್ನೂ ಪ್ರತಿಪಾದಿಸುವುದಿಲ್ಲ. ಆತ ಏನನ್ನೂ ಪ್ರತಿಪಾದಿಸದಿದ್ದರೆ ನೀವು ಆತನನ್ನು ಸೋಲಿಸು ಹೇಗೆ ಸಾಧ್ಯ? ಆತನಿಗೆ ಯಾವುದರಲ್ಲೂ ಶ್ರದ್ಧೆ ಇಲ್ಲ. ಹೀಗಾಗಿ ಆತ ಹೆಚ್ಚು ಬಲಿಷ್ಠನಾಗಿರುತ್ತಾನೆ. ನಿಮಗೆ ಶ್ರದ್ಧೆಯಿದೆ, ನಿಮ್ಮ ಶ್ರದ್ಧೆಯಲ್ಲಿ ಆತ ಹುಳುಕುಗಳನ್ನು ಪತ್ತೆ ಹಚ್ಚಬಲ್ಲ, ನಿಮ್ಮನ್ನು ಸೋಲಿಸಬಲ್ಲ.

ಸಂಶಯವಾದಿ ನಂಬಿಕೆಗಳು, ಶ್ರದ್ಧೆಗಳು ಇರುವ ಯಾರ ವಿರುದ್ಧವಾದರೂ ಗೆಲ್ಲಬಲ್ಲ. ಹುರುಳಿಲ್ಲದ ವಾದ ಹಾಗೂ ವಿಜಯಗಳಲ್ಲದೆ ಸಂಶಯವಾಗಿ ಏನನ್ನೂ ಪಡೆದುಕೊಳ್ಳುವುದಿಲ್ಲ. ಮತ್ತು ಆತ ತನ್ನ ವಾದದಲ್ಲಿ ಹೆಚ್ಚು ನಿಷ್ಣಾತನಾಗುತ್ತ ಹೋದಷ್ಟೂ, ಜೀವನ ಇರುವುದು ವಾದಕ್ಕಲ್ಲ, ಜೀವನ ಎಂದರೆ ‘ಇಲ್ಲ’ ಎನ್ನುವುದಲ್ಲ, ‘ಇಲ್ಲ’ ಎನ್ನುವುದು ಸಾವು ಎಂಬುದನ್ನು ಮರೆಯುತ್ತಾ ಹೋಗುತ್ತಾನೆ. ಇಡೀ ಜೀವನ ಇತರರ ವಾದವನ್ನು ಸೋಲಿಸುತ್ತಾ ಹೋಗುವುದರಿಂದ ನಿಮಗೇನು ಸಿಕ್ಕುತ್ತದೆ, ನಿಮ್ಮ ಜೀವನವನ್ನು ನೀವು ಹಾಳು ಮಾಡಿಕೊಳ್ಳುವಿರಿ  ಅಷ್ಟೇ.

ನಾನು ನಿಮಗೆ ಸಂಶಯವಾದವನ್ನು ಕಲಿಸುತ್ತಿಲ್ಲ, ನಾನು ನಿಮಗೆ ಪ್ರಶ್ನಿಸುವ ಕಲೆಯನ್ನು ಕಲಿಸುತ್ತಿರುವೆ. ಪ್ರಶ್ನೆ ನಿಮಗೆ ಇದು ತಪ್ಪು, ಇದು ಇಲ್ಲ ಎಂದು ಹೇಳುವುದಿಲ್ಲ. ಅದು ಹೆಳುವುದಿಷ್ಟೇ, “ನನಗೆ ತಿಳಿದಿಲ್ಲ. ನಾನಿನ್ನೂ ಅದನ್ನು ಅನುಭವಿಸಿಲ್ಲ; ಹೀಗಾಗಿ, ನಾನು ಸತ್ಯವನ್ನು, ನೈಜವಾದದ್ದನ್ನು ಪಡೆಯುವವರೆಗೆ ಪ್ರಶ್ನಿಸುವುದನ್ನು ಬಿಡುವುದಿಲ್ಲ. ಅನಂತರ ನಾನು ಬರೀ ‘ಹೌದು’ ಆಗಿರುತ್ತೇನೆ- ಆದರೆ ಅದಕ್ಕೆ ಮುನ್ನ ಅಲ್ಲ.”

ಪ್ರಶ್ನೆಗಳಿರುವ ಮನುಷ್ಯ, ಹೌದು ಪ್ರಶ್ನೆಗಳಿರುವ ಮನುಷ್ಯ ಮಾತ್ರ ಒಂದು ದಿನ ಸತ್ಯ ಕಂಡುಕೊಳ್ಳುವ ಮನುಷ್ಯನಾಗುತ್ತಾನೆ.

(ಮುಗಿಯಿತು)

Comments»

1. chetana thirthahalli - September 26, 2009

Munduvaresu Please….


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: