ಸಂಶಯವಾದಿಯ ನಂಬಿಕೆಗಳು (ಭಾಗ 3) January 14, 2009
Posted by uniquesupri in ಓಶೋ ಹೇಳಿದ್ದು.trackback
ಸಾಕ್ರೆಟಿಸನಿಗೂ ಮುನ್ನ ಇದ್ದ ಈ ಸಂಶಯವಾದಿಗಳ ಶಾಲೆಯನ್ನು ಸೊಫಿಸಂ ಎನ್ನಲಾಗುತ್ತಿತ್ತು. ಅವರು ಸಂಚರಿಸುತ್ತಾ ಬೋಧನೆ ನಡೆಸುತ್ತಿದ್ದ ಶಿಕ್ಷಕರು. ನಿಮ್ಮನ್ನು ಸೊಫಿಸ್ಟ್ ಆಗಿಸಲು ಅವರು ಬಹುದೊಡ್ಡ ಪ್ರಮಾಣದ ಫೀ ಅಪೇಕ್ಷಿಸುತ್ತಿದ್ದರು. ಸೋಫಿಸ್ಟ್ ವಾದದಲ್ಲಿ ಯಾರ ಪರವಾದರೂ ಇಲ್ಲಬಲ್ಲವನಾಗಿರುತ್ತಿದ್ದ ಆತನಿಗೆ ಸತ್ಯದ ಬಗ್ಗೆ ಕಾಳಜಿಯಿರುತ್ತಿರಲಿಲ್ಲ. ನೀವು ಹೆಚ್ಚು ಹಣ ಕೊಟ್ಟರೆ ಆತ ನಿಮ್ಮ ಪರವಾಗಿ ವಾದ ಮಾಡುವನು. ಒಂದು ವೇಳೆ ನಿಮ್ಮ ವಿರೋಧಿ ಪಕ್ಷದವರು ಹೆಚ್ಚು ಹಣ ಕೊಟ್ಟರೆ ಆತ ಅವರ ಪರವಾಗಿ ವಾದ ಮಾಡುವನು. ಆತನಿಗೆ ಸ್ವತಃ ಏನೊಂದೂ ತಿಳಿದಿರುವುದಿಲ್ಲ, ಆದರೆ ಆತನಿಗೆ ವಾದದ, ತರ್ಕದ ಕಲೆ ತಿಳಿದಿರುತ್ತದೆ.
ಒಂದು ಕಥೆಯಿದೆ… ಸಣ್ಣ ಊರೊಂದರಲ್ಲಿ ಪುಟ್ಟದೊಂದು ಚರ್ಚ್ ಇತ್ತು. ಅಲ್ಲಿನ ಪಾದ್ರಿಗೆ ಒಬ್ಬ ಮುದುಕನಿಂದ ಬಹಳವೇ ಕಿರಿಕಿರಿ ಅನುಭವಿಸುತ್ತಿದ್ದ. ಆದರೆ ಚರ್ಚಿನ ಸಮೂಹದಲ್ಲೇ ಆತ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ಆತ ಚರ್ಚಿಗೆ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ- ಹಾಗೆ ನೋಡಿದರೆ ಆ ಚರ್ಚನ್ನು ಕಟ್ಟಿಸಿದ್ದೇ ಆತ. ಪಾದ್ರಿಗೂ ಸಂಬಳವನ್ನು ನೀಡುತ್ತಿದ್ದವನು ಆತನೇ. ಪ್ರತಿ ಪ್ರವಚನದಲ್ಲೂ ಆತ ಚರ್ಚಿನ ಮೊದಲ ಸಾಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಮುದುಕ ಪ್ರವಚನದ ಮಧ್ಯದಲ್ಲೇ ನಿದ್ದೆಗೆ ಜಾರಿ ಬಿಡುತ್ತಿದ್ದ. ಆತನ ನಿದ್ರೆಯಿಂದ ಪಾದ್ರಿಗೆ ಕಿರಿಕಿರಿಯಾಗುತ್ತಿರಲಿಲ್ಲ – ಆತ ನಿಜಕ್ಕೂ ಗಟ್ಟಿಯಾಗಿ ಗೊರಕೆ ಹೊಡೆಯುತ್ತಿದ್ದ. ಇದರಿಂದ ಪಾದ್ರಿಗಷ್ಟೇ ಅಲ್ಲ, ಚರ್ಚಿನಲ್ಲಿದ್ದ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಆತನ ಗೊರಕೆಯಿಂದ ಚರ್ಚಿನ ಇತರರ ನಿದ್ರೆಗೆ ಭಂಗವಾಗುತ್ತಿತ್ತು!
ಕಡೆಗೆ ಚರ್ಚಿನ ಇತರೆ ಭಕ್ತರು ಪಾದ್ರಿಗೆ ಹೇಳಿದರು, “ಈಗ ಏನಾದರೂ ಮಾಡಲೇಬೇಕು. ಈ ಮುದುಕ ಮೊದಲ ಸಾಲಲ್ಲೇ ಕುಳಿತು ಗೊರಕೆ ಹೊಡೆಯುತ್ತಾನೆ ಇದರಿಂದ ನಿಮಗೂ ತೊಂದರೆ, ನಮ್ಮೆಲ್ಲರ ನಿದ್ರೆಗೂ ತೊಂದರೆ.”
ಕ್ರೈಸ್ತ ದೇಶಗಳಲ್ಲಿನ ಜನರು ಶನಿವಾರ ತಡ ರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ. ಏಕೆಂದರೆ ನಾಳೆ ಭಾನುವಾರ, ಅವರು ವಿಶ್ರಮಿಸಿಕೊಳ್ಳಬಹುದು. ಮುಂಜಾನೆಯೇ ಚರ್ಚಿಗೆ ಹೋಗಬೇಕು. ಬಹುಶಃ ಅವರು ಹಿಂದಿನ ರಾತ್ರಿಯಿಡೀ ನಿದ್ರೆಯನ್ನೇ ಮಾಡಿರುವುದಿಲ್ಲ– ಹಾಗೂ ಚರ್ಚು ನಿದ್ರೆಗೆ ಅತ್ಯಂತ ಪ್ರಸಕ್ರವಾದ ಜಾಗ.
ಹಾಗಾಗಿ ಅವರು ಹೇಳಿದರು, “ನಾವು ಇಷ್ಟು ಮುಂಚಿತವಾಗಿ ಮುಂಜಾನೆಯಲ್ಲಿಯೇ ಚರ್ಚಿಗೆ ಬರುವುದು ತಣ್ಣಗೆ ಒಂದು ಸಣ್ಣ ನಿದ್ದೆ ತೆಗೆಯಲು. ಆದರೆ ಈ ಮೂರ್ಖ ಎಲ್ಲರನ್ನೂ ಎಬ್ಬಿಸಿಬಿಡುತ್ತಾನೆ. ನಿಮ್ಮ ಪ್ರವಚನವನ್ನು ಕೇಳುವುದಕ್ಕೆ ಬದಲಾಗಿ ನಾವು ಆತನ ಗೊರಕೆಯನ್ನು ಕೇಳಬೇಕು. ದಯವಿಟ್ಟು ಇದರ ಬಗ್ಗೆ ಏನಾದರೂ ಮಾಡಿ.”
ಪಾದ್ರಿ ಆಲೋಚಿಸಿದ. ಮುದುಕ ಪ್ರತಿ ಸಲ ಚರ್ಚಿಗೆ ಬರುವಾಗ ತನ್ನ ಮೊಮ್ಮಗನನ್ನು ಕರೆದುಕೊಂಡು ಬರುತ್ತಿದ್ದ, ಆ ಹುಡುಗ ಸಾಮಾನ್ಯವಾಗಿ ಮುದುಕನ ಪಕ್ಕದಲ್ಲೇ ಇರುತ್ತಿದ್ದ, ಪಾದ್ರಿ ಅಂದುಕೊಂಡ, “ಬಹುಶಃ ಆ ಹುಡುಗನಿಗೆ ಆಮಿಷ ಒಡ್ಡಬಹುದು.”
ಆ ಹುಡುಗನನ್ನು ಕರೆದು ಪಾದ್ರಿ ಹೇಳಿದ, “ನೀನು ನಿನ್ನ ತಾತನನ್ನು ನಿದ್ದೆ ಮಾಡುವಾಗಲೆಲ್ಲಾ ಎಬ್ಬಿಸಿದರೆ ನಿನಗೆ ಪ್ರತಿ ಭಾನುವಾರ ಒಂದು ಡಾಲರ್ ಕೊಡುವೆ. ನೀನು ಮಾಡಬೇಕಾದ್ದು ಇಷ್ಟೇ, ಆತ ಗೊರಕೆ ಹೊಡೆಯಲು ಶುರುಮಾಡಿದಾಗಲೆಲ್ಲಾ ನೀನು ಆತನಿಗೆ ಹೊಡೆದು ಎಚ್ಚರಿಸುತ್ತಿರಬೇಕು.”
ಹುಡುಗ ಹೇಳಿದ, “ಒಳ್ಳೆಯದು. ಅವನಿಗೆ ನಾನು ಮಲಗುವುದಕ್ಕೆ ಬಿಡುವುದಿಲ್ಲ.”.
ಮುಂದಿನ ಭಾನುವಾರ ಆಹ್ಲಾದಕರವಾಗಿತ್ತು. ಎಲ್ಲರೂ ಹಾಯಾಗಿ ಮಲಗಿದರು. ಪಾದ್ರಿ ಪ್ರತಿ ಬಾರಿ ಹೇಳುತ್ತಿದ್ದ ಪ್ರವಚನವನ್ನೇ ಪುನರುಚ್ಚರಿಸಿದ… ಆತನ ಬಳಿ ಮೂರ್ನಾಲ್ಕು ಪ್ರವಚನಗಳು ಸಿದ್ಧವಾಗಿರುತ್ತಿದ್ದವು. ಹುಡುಗ ಮುದಕನಿಗೆ ಬಡಿದು ಬಡಿದು ಎಚ್ಚರವಾಗಿಸುತ್ತಿದ್ದ.
ಮುದುಕ ಕೇಳಿದ, “ಏನಿದು ತಲೆ ಹರಟೆ, ಪದೇ ಪದೇ ಏನು ಮಾಡುತ್ತಿದ್ದೀಯ?”
ಹುಡುಗ ನಕ್ಕ, ಆದರೆ ಮುದುಕನಿಗೆ ಗೊರಕೆ ಹೊಡೆಯಲು ಬಿಡಲಿಲ್ಲ.
ಪ್ರವಚನ ಮುಗಿದ ನಂತರ ಮುದುಕ ತನ್ನ ಮೊಮ್ಮಗನಿಗೆ ಕೇಳಿದ, “ಏನು ವಿಷಯ? ನನ್ನ ಬೆಳಗನ್ನೆಲ್ಲಾ ಹಾಳು ಮಾಡಿದೆಯಲ್ಲ? ಯಾಕೆ ಹೇಳು..”
ಹುಡುಗ ಹೇಳಿದ, “ಇದು ವ್ಯಾಪಾರದ ವಿಷಯ. ನಿನ್ನನ್ನು ಗೊರಕೆ ಹೊಡೆಯದಂತೆ ತಡೆದರೆ ಆತ ನನಗೆ ಒಂದು ಡಾಲರ್ ಕೊಡುತ್ತಾನೆ.”
ಮುದುಕ ಹೇಳಿದ, “ಯೋಚನೆ ಮಾಡಬೇಡ, ಇದು ವ್ಯಾಪಾರ ಅನ್ನುವುದಾದರೆ ನಾನು ನಿನಗೆ ಪ್ರತಿವಾರ ಎರಡು ಡಾಲರ್ ಕೊಡುತ್ತೇನೆ. ಮುಂದಿನ ವಾರದಿಂದ ನನ್ನ ನಿದ್ದೆ ಹಾಳು ಮಾಡಬೇಡ.”
ಮುಂದಿನ ಭಾನುವಾರ ಬಂದಿತು. ಪಾದ್ರಿಗೆ ಆಶ್ಚರ್ಯವಾಯಿತು. ಮುದುಕ ಗೊರಕೆ ಹೊಡೆಯುತ್ತಿರುವುದನ್ನು ಕಂಡು ಪಾದ್ರಿ ಹುಡುಗನತ್ತ ತಿರುಗಿ ಕಣ್ಣು ಮಿಟುಕಿಸಿ ಮುದಕನನ್ನು ಎಚ್ಚರವಾಗಿಸುವಂತೆ ಸೂಚಿಸುತ್ತಾನೆ. ಆದರೆ ಹುಡುಗ ಸುಮ್ಮನೆ ನಗುತ್ತಾ ಕುಳಿತಿದ್ದ. ಮುದುಕ ನಿರಾಯಾಸವಾಗಿ ಗೊರಕೆ ಹೊಡೆಯುತ್ತಿದ್ದ. ಉಳಿದ ಯಾರಿಗೂ ನಿದ್ದೆ ಬರಲಿಲ್ಲ. ಪ್ರವಚನ ಮುಗಿಸಿದ ನಂತರ ಪಾದ್ರಿ ಹುಡುಗನನ್ನು ಪಕ್ಕಕ್ಕೆ ಕರೆದು ಕೇಳಿದ, “ಏನಾಯ್ತು, ನಿನಗೆ ಡಾಲರ್ ಬೇಡವೇ?”
ಆತ ಹೇಳಿದ, “ನಾನೇನ್ ಮಾಡ್ಲಿ? ಇದು ವ್ಯಾಪಾರದ ವಿಷಯ.”
ಪಾದ್ರಿ ಕೇಳಿದ, “ಏನು ವ್ಯಾಪಾರ?”
ಆತ ಹೇಳಿದ, “ತಾತ ನನಗೆ ಎರಡು ಡಾಲರ್ ಕೊಡುತ್ತೀನಿ ಅಂದಿದ್ದಾನೆ. ಈಗ ಏನು ಮಾಡ್ತೀರಿ ನೋಡಿ.”
ಪಾಪದ ಪಾದ್ರಿಗೆ ತಾನು ಮುದುಕನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಯಿತು. ಈತ ಮೂರು ಡಾಲರ್ ಕೊಟ್ಟರೆ – ಇದು ಬಡವ ಪಾದ್ರಿಗೆ ದೊಡ್ಡ ಮೊತ್ತವಾಗುತ್ತದೆ – ಮುದುಕ ನಾಲ್ಕು ಡಾಲರ್ ಕೊಡುತ್ತಾನೆ. ಈ ತಂತ್ರ ಉಪಯೋಗಿಸಿದರೆ ತಾನು ಸಂಪೂರ್ಣವಾಗಿ ಸೋಲಪ್ಪಬೇಕಾಗುತ್ತದೆ ಎಂಬುದು ಅರಿವಾಗುತ್ತದೆ. ಹುಡುಗನಿಗೆ ಪಾದ್ರಿಯ ಪ್ರವಚನದಲ್ಲೂ ಆಸಕ್ತಿಯಿಲ್ಲ, ಚರ್ಚಿನ ಕಲಾಪದಲ್ಲೂ ಆಸಕ್ತಿಯಿಲ್ಲ, ಮುದುಕನ ಬಗ್ಗೆಯೂ ಆಸಕ್ತಿಯಿಲ್ಲ. ಇದು ಆತನಿಗೆ ಕೇವಲ ವ್ಯಾಪಾರದ ಪ್ರಶ್ನೆಯಷ್ಟೇ.
ಇದು ಸೊಫಿಸ್ಟರ ಧೋರಣೆಯಾಗಿತ್ತು. ದೊಡ್ಡ ರಾಜರು ತಮ್ಮ ಮಕ್ಕಳನ್ನು ಸೋಫಿಸ್ಟ್‌ಗಳ ಬಳಿ ಶಿಕ್ಷಣಕ್ಕೆ ಕಳುಹಿಸುತ್ತಿದ್ದರು. ಮುಂದೆ ಅವರು ರಾಜರಾದಾಗ ಯಾವ ವಾದವನ್ನಾದರೂ ಗೆಲ್ಲಬೇಕು ಎಂಬುದು ಆ ಶಿಕ್ಷಣದ ಉದ್ದೇಶವಾಗಿತ್ತು. ಸೋಫಿಸ್ಟನಿಗೆ ಸರಿ ತಪ್ಪು ಎಂಬುದರ ಪ್ರಶ್ನೆಯೇ ಏಳುವುದಿಲ್ಲ, ಆತನಿಗೆ ಯಾರ ವಾದ ಬಲವಾದದ್ದು ಎಂಬುದಷ್ಟೇ ಪ್ರಶ್ನೆ.
(ಮುಂದುವರೆಯುವುದು…)
Comments»
No comments yet — be the first.