ಸಂಶಯವಾದಿಯ ನಂಬಿಕೆಗಳು (ಭಾಗ 2) January 13, 2009
Posted by uniquesupri in Uncategorized.trackback
ಅನ್ವೇಷಕನಿಗೆ ಪ್ರಶ್ನೆ ಎನ್ನುವುದು ಒಂದು ಸಾಧನವಷ್ಟೇ. ಪ್ರಶ್ನೆ ನಿಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ. ಅದೊಂದು ಸವಾಲು. ನೀವು ಹೌದು ಎಂದೂ ಹೇಳುತ್ತಿಲ್ಲ, ಇಲ್ಲ ಎಂದೂ ಹೇಳುತ್ತಿಲ್ಲ. ನೀವು ಹೇಳುವುದಿಷ್ಟೇ, “ ನಾನು ತಿಳಿದಿಲ್ಲ. ಸ್ವತಃ ಅನುಭವಿಸುವವರೆಗೆ ನಾನು ಯಾವುದನ್ನೂ ನಂಬುವುದಿಲ್ಲ. ಒಂದು ಸಲಕ್ಕೆ ನಾನು ನಿಸ್ಸಂದೇಹವಾದಂಥ ಉತ್ತರ ಕಂಡುಕೊಂಡ ಮೇಲೆ ಎಷ್ಟೇ ಪ್ರಯತ್ನ ಪಟ್ಟರೂ ನನ್ನ ಪ್ರಶ್ನೆ ನಿಲ್ಲುವುದಿಲ್ಲ, ಅದು ತಾನಾಗಿ ಬಿದ್ದು ಹೋಗುತ್ತದೆ.”
ಸತ್ಯ ಎನ್ನುವುದು ಅದೆಷ್ಟು ವಿಸ್ತಾರವಾದದ್ದು, ವಾಸ್ತವವಾದದ್ದು, ಸ್ಪಷ್ಟವಾದದ್ದು, ಮೂಕವಿಸ್ಮಿತಗೊಳಿಸುವಂಥದ್ದು ಎಂದರೆ ಅದರೆದುರು ನಮ್ಮ ನಿಜ ಪ್ರಪಂಚವೇ ಕನಸಾಗಿ ಕಾಣುವುದು.
ಪ್ರಶ್ನೆ ಎನ್ನುವುದು ಅತ್ಯಂತ ಮಹತ್ವವಾದ ಸಂಗತಿ. ಕಟ್ಟ ಕಡೆಯವರೆಗೆ ಪ್ರಶ್ನಿಸಿತ್ತಾ ಹೋದವರಿಗೆ ಮಾತ್ರ ಸತ್ಯವೇನೆಂದು ಕಂಡಿತು, ಪ್ರೀತಿ ಎಂದರೇನು, ಮೌನ ಎಂದರೇನು, ಸೌಂದರ್ಯ ಎಂದರೇನು ಎಂಬುದು ಅರಿವಾಯಿತು. ಸಂಶಯವಾದಿಗೆ ಏನೂ ಕಾಣುವುದಿಲ್ಲ. ಆತ ಸಂಪೂರ್ಣ ಖಾಲಿಯಾಗಿರುತ್ತಾನೆ, ಆದರೆ ಹೆಚ್ಚು ಸದ್ದು ಮಾಡುತ್ತಾನೆ. ಖಾಲಿ ಪಾತ್ರೆಗಳು ಹೆಚ್ಚು ಸದ್ದು ಮಾಡುವಂತೆ. ನೀವು ಸಂಶಯವಾದಿಯೊಂದಿಗೆ ವಾದಕ್ಕೆ ನಿಲ್ಲಲಾಗದು, ಆತ ನೀವು ಹೇಳಿದಕ್ಕೆಲ್ಲಾ ಇಲ್ಲ ಎಂದು ಹೇಳುತ್ತಾನೆ, ಅವನೆದುರು ವಸ್ತುವಿನಂತೆ ತಂದಿಡಲಾಗದ ಮೌಲ್ಯಗಳನ್ನೆಲ್ಲಾ ಆತ ಇಲ್ಲ ಎಂದು ವಾದಿಸುತ್ತಾನೆ.
ಆದರೆ ಪ್ರಶ್ನೆಯ ಹಾದಿ ತುಂಬಾ ದೀರ್ಘವಾದದ್ದು ಹಾಗೂ ಕಠಿಣವಾದದ್ದು. ಅದು ಸತ್ಯವಲ್ಲದ್ದನ್ನೆಲ್ಲಾ ಅಳಿಸಿಹಾಕುತ್ತಾ ಹೋಗುತ್ತದೆ, ಕಡೆಗೆ ಸತ್ಯವಾದದ್ದು ಮಾತ್ರ ಉಳಿಯುತ್ತದೆ. ಒಮ್ಮೆ ಸತ್ಯ ಎದುರು ಮುಖಾ ಮುಖಿಯಾಗಿ ನಿಂತ ಮೇಲೆ, ಅದನ್ನು ಅನುಭವಿಸಿದ ಮೇಲೆ ಯಾರೂ ಸಹ ಅದನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಅನುಭವದ ಮುಖಾಂತರ ‘ಹೌದು’ ಹುಟ್ಟುತ್ತದೆ: “ಹೌದು, ಭಗವಾನ್, ಹೌದು”.
ಇದು ನಂಬಿಕೆಯಲ್ಲ. ಇದನ್ನು ನೀವು ಆತಂಕವನ್ನು, ಯಾತನೆಯನ್ನು, ದುಗುಡವನ್ನು ಅನುಭವಿಸಿ ಅನ್ವೇಷಿಸಿದ್ದೀರಿ. ಹಲವು ಸಂದರ್ಭಗಳಲ್ಲಿ ನಿಮಗೆ ಪಯಣ ಅಂತ್ಯವಿಲ್ಲದ್ದು, ನಿರರ್ಥಕವಾದದ್ದು ಎನ್ನಿಸಿ ನಿಂತು ಬಿಡಬೇಕು ಅನ್ನಿಸಿದ್ದಿದೆ. ಅದು ಹಾಗಿಲ್ಲ. ಅಂತ್ಯವೆಂಬುದೊಂದಿದೆ, ನೀವು ನಡೆಯುತ್ತಿರಬೇಕಷ್ಟೇ.
ಪ್ರಶ್ನೆ ಶಸ್ತ್ರಚಿಕಿತ್ಸೆಯಂಥದ್ದು – ಅದು ಅಸಂಗತವಾದದ್ದನ್ನೆಲ್ಲಾ ಕತ್ತರಿಸುತ್ತಾ ಹೋಗುತ್ತದೆ. ಕಡೆಗೆ ಸಂಗತವಾದದ್ದು, ಸತ್ಯವಾದದ್ದು ಮಾತ್ರ ಉಳಿಯುತ್ತದೆ. ಪ್ರಶ್ನೆ ಮೋಡಗಳನ್ನು ತೆಗೆಯುತ್ತದೆ.
ಸಂಶಯವಾದಿ ಮೋಡ ಕವಿದ ಆಗಸವನ್ನು ನೋಡಿ ಸೂರ್ಯನೇ ಇಲ್ಲ ಅನ್ನುತ್ತಾನೆ, ಆತನಿಗೆ ಸೂರ್ಯ ಕಾಣುತ್ತಿರುವುದಿಲ್ಲ. ಆತ ಸೂರ್ಯ ಇಲ್ಲವೇ ಇಲ್ಲ, ಬೆಳಕೇ ಇಲ್ಲ ಎಂಬ ತೀರ್ಮಾನಕ್ಕೆ ಬಂದು ನಿಲ್ಲುತ್ತಾನೆ. ಪ್ರಶ್ನಿಸುವವ ಮೋಡಗಳನ್ನೆಲ್ಲಾ ಬೇಧಿಸಿ ದಾರಿ ಮಾಡಿಕೊಂಡು ಹೋಗುತ್ತಾನೆ. ಮೋಡದ ಹಿಂದೆ ಏನೋ ಇದೆ ಎಂದು ಆತ ನಂಬುತ್ತಾನೆ ಎಂದಲ್ಲ, ಅಲ್ಲಿ ಏನೂ ಇಲ್ಲದಿರಬಹುದು, ಆದರೆ ಆತನಿಗೆ ಮೋಡದ ಹಿಂದೇನಿದೆ ಎಂಬುದು ತಿಳಿಯಬೇಕಿರುತ್ತದೆ. ಹಾಗೆ ಮುಂದುವರೆದು ಹೋದವರೆಲ್ಲಾ ಸತ್ಯವನ್ನು ಕಂಡಿದ್ದಾರೆ, ಅದಕ್ಕೆ ಧೈರ್ಯ ಬೇಕು.
ಸಂಶಯವಾದಿ ಜಗತ್ತಿನ ಇತರ ಧಾರ್ಮಿಕ ಶ್ರದ್ಧೆಯ ಜನರ, ಆಸ್ತಿಕರ ಹಾಗೆಯೇ ಇರುತ್ತಾನೆ. ಸಂಶಯವಾದ ಎಂಬುದು ನಕರಾತ್ಮಕವಾದ ಮುಖ, ಅದು ನಕರಾತ್ಮಕವಾದ ಧರ್ಮ. ಸಂಶಯವಾದಿಗೂ, ಆಸ್ತಿಕನಿಗೂ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರಿಗೂ ಹುಡುಕಬೇಕು ಎನ್ನುವ ಹಂಬಲವಿರುವುದಿಲ್ಲ. ಒಬ್ಬ ಮೋಡದ ಹಿಂದೆ ಸೂರ್ಯನಿದ್ದಾನೆ ಎಂದು ನಂಬುತ್ತಾನೆ, ಮತ್ತೊಬ್ಬ ಸೂರ್ಯ ಇಲ್ಲ ಎಂದು. ಇಬ್ಬರಿಗೂ ಅನ್ವೇಷಣೆಯ ದೀರ್ಘವಾದ ಹಾದಿಯನ್ನು ತುಳಿಯುವ ಆಸಕ್ತಿಯಿಲ್ಲ. ಆ ಹಾದಿಯಲ್ಲಿರುವ ದುಸ್ವಪ್ನಗಳನ್ನು ಎದುರಿಸುವ ಛಾತಿಯಿಲ್ಲ. ಮೋಡದ ಆಚೆಗೆ ನಡೆಯುವ ಧೈರ್ಯವಿಲ್ಲ. ಕೆಲವೇ ಕೆಲವರು ಹಾಗೆ ನಡೆದಿದ್ದಾರೆ.
ನಾನು ನಿಮಗೆ ಪ್ರಶ್ನಿಸುವುದನ್ನು ಕಲಿಸುತ್ತೇನೆ, ಸಂಶಯವಾದವನ್ನು ಅಲ್ಲ. ನೆನಪಿಡಿ, ಪ್ರಶ್ನೆ ಸಂಶಯವಾದವಲ್ಲ; ಅದು ಹುಡುಕಾಟ, ಅನ್ವೇಷಣೆ.
(ಮುಂದುವರೆಯಲಿದೆ…)
Comments»
No comments yet — be the first.