ಸಂಶಯವಾದಿಯ ನಂಬಿಕೆಗಳು (ಭಾಗ ೧) January 12, 2009
Posted by uniquesupri in ಓಶೋ ಹೇಳಿದ್ದು.trackback
[ ಸಂಪದದ ಬಹುತೇಕ ಚರ್ಚೆಗಳಲ್ಲಿ ಭಾಗವಹಿಸುವಾಗ ನಾನು ಒಂದಂಶವನ್ನು ಗಮನಿಸಿದ್ದಿದೆ. ಕೆಲವು ಲೇಖನಗಳು ಕೆಲವರ ಭಾವನೆಗಳ ಅಭಿವ್ಯಕ್ತಿಯಾಗಿರುತ್ತವೆ. ಉದಾಹರಣೆಗೆ, ನಾನು ಹೆಮ್ಮೆಯ ಹಿಂದೂ ಎಂದು ಯಾರೊ ಬರೆದಿರುತ್ತಾರೆ. ತಮ್ಮ ನಂಬಿಕೆಯ ಬಗ್ಗೆ ಅಭಿಮಾನದಿಂದ ಏನನ್ನೋ ಹೇಳಿಕೊಂಡಿರುತ್ತಾರೆ. ಆಗ ಹಲವು ಸಲ ನನ್ನನ್ನೂ ಸೇರಿದಂತೆ ಅನೇಕರು, ಹಿಂದೂ ಎಂದರೆ ಯಾರು, ಹಿಂದೂ ಎನ್ನುವುದು ಏನು ಎಂದು ಪ್ರಶ್ನಿಸಿದ್ದೇವೆ. ಚರ್ಚೆಯ ವಿಷಯವಾಗಿ ಆ ಪ್ರಶ್ನೆಯನ್ನು ಎತ್ತಿಕೊಂಡರೆ ಸಮಂಜಸ, ಆದರೆ ನಂಬಿಕೆಗಳು, ಭಾವನೆಗಳನ್ನು ಎದುರಿಸಲು ಆ ಪ್ರಶ್ನೆಯನ್ನು ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಬಹಳ ಹಿಂದೆಯೇ ಮನವರಿಕೆಯಾಗಿದೆ. ಆದರೂ ಕೆಲವೊಮ್ಮೆ ವಾದದ ಮದದಲ್ಲಿ ಪ್ರಶ್ನಿಸುವಿಕೆಯನ್ನು ಸಂಯಮದ ಗಡಿ ದಾಟಿ ತೆಗೆದುಕೊಂಡು ಹೋದದ್ದಿದೆ. ಅದರ ಬಗ್ಗೆ ನನಗೆ ಪಶ್ಚಾತಾಪವಿದೆ.
ಹಿಂದೂ ಎಂದರೆ ಯಾರು ಎಂದು ಹಲವರು ಸಂಪದದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವರ ವಿವರಣೆಗಳನ್ನು ಖಂಡ ತುಂಡವಾಗಿ ಕತ್ತರಿಸುವ ಪ್ರಶ್ನೆಗಳನ್ನು ಹಲವರು ಎಸೆದಿದ್ದೇವೆ. ನಾನಂತೂ ನನಗೆ ಸಮಂಜಸವಾದ ವಿವರಣೆ ಸಿಕ್ಕುವವರೆಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಒಂದು ಹಂತದಲ್ಲಿ ನನಗೆ ಒಂದು ಯೋಚನೆ ಶುರುವಾಗುತ್ತದೆ. ಇಷ್ಟೆಲ್ಲಾ ಇತರರ ನಂಬಿಕೆಯನ್ನು, ಸಿದ್ಧಾಂತಗಳನ್ನು, ಧರ್ಮ ಭಾವನೆಯನ್ನು ಪ್ರಶ್ನಿಸುವ ನನ್ನ ನಂಬಿಕೆ ಯಾವುದು? ನನ್ನ ಧರ್ಮ ಯಾವುದು? ನನ್ನ ಜೀವನ ಧೋರಣೆ ಎಂಥದ್ದು? ಬಹುಶಃ ನಾನು ಇದರ ಬಗ್ಗೆ ಗಮನ ಹರಿಸದೆ ಇತರರ ಭಾವನೆ, ನಂಬಿಕೆ, ಧರ್ಮ, ಜೀವನ ದೃಷ್ಟಿಯ ಸಾಚಾತನದ ಬಗ್ಗೆ ಹೆಚ್ಚು ಕಾಳಜಿ ಮಾಡಿದೆನೆನೋ ಎಂದು ಆತಂಕವಾಗುತ್ತದೆ.
ಪ್ರಶ್ನಿಸುವುದು ಎಲ್ಲಾ ಸಂದರ್ಭಗಳಲ್ಲೂ ಒಳ್ಳೆಯದಾ? ನಂಬಿಕೆ ಎಂಬುದೊಂದು ಇಲ್ಲವಾ? ಶ್ರದ್ಧೆ ಮೂಡಬೇಕಾದ ಜಾಗದಲ್ಲಿ ಪ್ರಶ್ನೆ ಇಟ್ಟುಕೊಂಡರೆ ಆಗುವ ಅಪಾಯವೇನು ಎಂದು ನನ್ನ ನಾನು ಅಸ್ಪಷ್ಟವಾಗಿ ಕೇಳಿಕೊಂಡದ್ದಿದೆ. ನನ್ನ ಹಾಗೂ ನನ್ನಂತೆ ಪ್ರಶ್ನಿಸುವ ಅನೇಕರ ಪ್ರಶ್ನೆಗಳು ನಿಜವಾಗಿಯೂ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲವನ್ನು ಹೊತ್ತಿರುತ್ತವೆಯಾ ಇಲ್ಲವೇ ಇತರರ ವಾದವನ್ನು ಕತ್ತರಿಸಿ ಹಾಕುವ ಆಯುಧವಾಗಿ ಮೆರೆಯುತ್ತಿವೆಯಾ ಎಂದು ಆಲೋಚಿಸಿದ್ದಿದೆ. ಆದರೆ ಅವೆಲ್ಲಾ ಅಸ್ಪಷ್ಟವಾಗಿ ಪ್ರಜ್ಞೆಯನ್ನು ಚುಚ್ಚುವ ಸೂಜಿಗಳಾಗಿ ಮನದ ಮೂಲೆಯಲ್ಲೆಲ್ಲೋ ಹರಿದಾಡುತ್ತಿದ್ದವು. ನಿನ್ನೆ ಓಶೋನ ಒಂದು ಪ್ರವಚನವನ್ನು ಓದುವಾಗ ಆ ಸೂಜಿಗಳು ಸ್ಪಷ್ಟವಾಗಿ ಕಣ್ಣ ಮುಂದೆ ಬಂದವು.
ಆ ಪ್ರವಚನ ಇಲ್ಲಿ ಕೊಟ್ಟರೆ ಉಪಯುಕ್ತವಾಗಬಹುದು ಎನ್ನಿಸಿ ಅದನ್ನು ಕೊಟ್ಟಿರುವೆ.]
………………………………………..
ಪ್ರಶ್ನೆ:
ಪ್ರೀತಿಯ ಓಶೋ,
ಸಂಶಯವಾದಿ ಅನುಯಾಯಿಯಾಗಲಾರ ಎಂದು ಹೇಳಿರುವೆ. ಜೊತೆಗೇ ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ ಎಂದಿರುವೆ. ದಯವಿಟ್ಟು ಸಂಶಯವಾದ(skepticism) ಹಾಗೂ ಪ್ರಶ್ನಿಸುವಿಕೆ(doubt)ಯ ನಡುವಿನೆ ವ್ಯತ್ಯಾಸವನ್ನು ವಿವರಿಸು.
ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವೆ ಬಹುದೊಡ್ಡ ವ್ಯತ್ಯಾಸವಿದೆ. ಬರೀ ವ್ಯತ್ಯಾಸವಿರುವುದಲ್ಲ, ಅವೆರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿರುವಂಥವು.
ಸಂಶಯವಾದ ಎಂಬುದು ಈಗಾಗಲೇ ಒಂದು ಧರ್ಮ-ಶ್ರದ್ಧೆಯಾಗಿದೆ, ಒಂದು ನಂಬಿಕೆಯಾಗಿದೆ, ಒಂದು ತೀರ್ಮಾನವಾಗಿದೆ. ಇದು ನಕರಾತ್ಮಕವಾದ ತೀರ್ಮಾನ. ಸಂಶಯವಾಗಿದೆ ತನ್ನದೆಂಬ ಸಿದ್ಧಾಂತ ಯಾವುದೂ ಇರುವುದಿಲ್ಲ; ಆತ ಕೇವಲ ಇತರರ ಸಿದ್ಧಾಂತದ ವಿರುದ್ಧವಾಗಿ ವಾದ ಮಾಡುತ್ತಾನೆ. ಆತನ ಸಿದ್ಧಾಂತದ ಬಗ್ಗೆ ನೀವು ಪ್ರಶ್ನಿಸಬಾರದು. ಆತನಲ್ಲಿ ಯಾವ ಸಿದ್ಧಾಂತವೂ ಇರುವುದಿಲ್ಲ. ಆತ ಒಂದು ದೊಡ್ಡ ಸೊನ್ನೆ. ಆತ ನಕರಾತ್ಮಕ ವ್ಯಕ್ತಿ. ಆತ ಯಾವುದನ್ನೂ ನಂಬುವುದಿಲ್ಲ – ಆದರೆ ಇದೂ ಸಹ ಒಂದು ನಂಬಿಕೆಯಾಗಿರುತ್ತದೆ.
ಉದಾಹರಣೆಗೆ, ಆತ ದೇವರನ್ನು ನಂಬುವುದಿಲ್ಲ. ಆತನನ್ನು ನಾವು ನಂಬಿಕೆಯಿಲ್ಲದವ ಎಂದು ಕರೆಯುತ್ತೇವೆ, ಆದರೆ ಆತ ದೇವರಲ್ಲಿ ನಂಬಿಕೆಯಿಲ್ಲದವ ಎಂದು ಕರೆಯುವುದು ಸರಿಯಲ್ಲ; ಆತ ದೇವರು ಇಲ್ಲ ಎಂದು ನಂಬಿರುತ್ತಾನೆ. ಇದು ನಕರಾತ್ಮಕವಾದ ನಂಬಿಕೆಯಾದ್ದರಿಂದ ನೀವು ಗೊಂದಲಕೊಳ್ಳಗಾಗುವಿರಿ. ಆಸ್ತಿಕ ದೇವರಲ್ಲಿ ನಂಬಿಕೆ ಹೊಂದಿರುತ್ತಾನೆ, ನಾಸ್ತಿಕ ದೇವರನ್ನು ನಂಬುವುದಿಲ್ಲ, ಆದರೆ ಆತ ಅನ್ವೇಷಕನಲ್ಲ, ಆತ ಸೃಜನಶೀಲನಲ್ಲ, ಆತ ಸಕಾರತ್ಮಕ ವ್ಯಕ್ತಿಯಲ್ಲ. ಆತ ಸತ್ಯಾನ್ವೇಷಣೆ ಮಾಡುತ್ತಿಲ್ಲ.
ಪುರಾತನ ಗ್ರೀಸಿನಲ್ಲಿ ಸಾಕ್ರೆಟಿಸ್‌ಗಿಂತ ಮುಂಚೆ ಒಂದು ವಿಚಾರ ಶಾಲೆಯಿತ್ತು, ಅವರನ್ನು ಸೋಫಿಸ್ಟ್ (sophist)ಗಳೆನ್ನುತ್ತಿದ್ದರು. ಅವರು ಸಂಶಯವಾದಿಗಳು. ಅವರಲ್ಲಿ ತಮ್ಮದೆನ್ನುವ ಯಾವ ಸಿದ್ಧಾಂತವೂ ಇರಲಿಲ್ಲ, ಆದರೆ ಇತರರ ಸಿದ್ಧಾಂತವನ್ನು ನಾಶ ಮಾಡಲು ಎಲ್ಲಾ ಆಯುಧಗಳೂ, ಎಲ್ಲಾ ಪ್ರತಿವಾದಗಳೂ ಇದ್ದವು.
ಇಲ್ಲ ಎಂದು ಹೇಳುವುದು ತುಂಬಾ ಸುಲಭ.
ಇದೆ ಎಂದು ಹೇಳುವುದು ಕಷ್ಟದ ಕೆಲಸ.
ನೀವು ಯಾವುದನ್ನು ಬೇಕಾದರೂ ಇಲ್ಲ ಎಂದು ಹೇಳಬಹುದು. ಯಾರಾದರೂ, ‘‘ ಸುಂದರವಾದ ಸೂರ್ಯಾಸ್ತವನ್ನು ನೋಡಲ್ಲಿ’’ ಎಂದು ಹೇಳಿದರೆ ನೀವು,“ನಾನು ಸೂರ್ಯ ಮುಳುಗುತ್ತಿರುವದನ್ನು ನೋಡುತ್ತಿರುವೆ. ಆದರೆ ಅದರಲ್ಲಿ ಸುಂದರವಾದದ್ದೇನೂ ನನಗೆ ಕಾಣುತ್ತಿಲ್ಲ. ಸೌಂದರ್ಯ ಎಂದರೇನು ಎಂದು ಮೊದಲು ನನಗೆ ವಿವರಿಸು. ಸೂರ್ಯಾಸ್ತವನ್ನು ಸುಂದರ ಎಂದು ಹೇಗೆ ಕರೆಯಬಲ್ಲೆ ನೀನು? ಸೌಂದರ್ಯ ಎಂಬುದನ್ನು ವ್ಯಾಖ್ಯಾನಿಸದೆ ನೀನು ಸೂರ್ಯಾಸ್ತವನ್ನು ಸುಂದರ ಎಂದು ಕರೆಯಲಾಗದು.” ಎನ್ನಬಹುದು.
ಸೌಂದರ್ಯ ವ್ಯಾಖ್ಯಾನವನ್ನು ಮೀರಿದ್ದು. ಸಾವಿರಾರು ವರ್ಷಗಳಿಂದ ಜನರು ಸೌಂದರ್ಯವನ್ನು, ಸತ್ಯವನ್ನು, ಪ್ರೀತಿಯನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಪ್ರಯತ್ನವೂ ಫಲಕಾರಿಯಾಗಿಲ್ಲ. ಇದಕ್ಕೆ ಸರಳವಾದ ಕಾರಣವೆಂದರೆ ಇವೆಲ್ಲಾ ಅನುಭವಗಳು. ನೀವು ಅನುಭವಗಳನ್ನು, ಅನುಭವಿಸಬೇಕಾದವುಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆದರೆ ಇವನ್ನೆಲ್ಲಾ ನಿರಾಕರಿಸುವುದು ಕಷ್ಟದ ಕೆಲಸವಲ್ಲ.
ಸಂಶಯವಾದಿ ಈಗಾಗಲೇ ಎಲ್ಲಾ ವಿಷಯಗಳ ಬಗೆಗೆ ತನ್ನ ‘ಇಲ್ಲ’ ಎಂಬ ಧೋರಣೆಯನ್ನು ಸ್ಥಾಪಿಸಿಕೊಂಡು ಬಿಟ್ಟಿರುತ್ತಾನೆ. ಈತ ಇತರ ಆಸ್ತಿಕರಿಗಿಂತ ಭಿನ್ನನಾದವನಲ್ಲ. ಅವರೂ ತಮ್ಮ ನಂಬಿಕೆಗಳಲ್ಲಿ ನೆಲೆನಿಂತಿದ್ದಾರೆ. ಇವರಿಬ್ಬರೂ ಅನ್ವೇಷಣೆಯ ಮಾರ್ಗದಲ್ಲಿರುವವರಲ್ಲ.
ಈಗ ನಿಮಗೆ ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವಿನ ವೈರುಧ್ಯ ಅರ್ಥವಾಗಿರಬಹುದು. ಪ್ರಶ್ನಿಸುವಿಕೆ ಎಂಬುದು ತೀರ್ಮಾನವಲ್ಲ. ಪ್ರಶ್ನೆ ಪಯಣವೊಂದರ ಆರಂಭ. ಅದೊಂದು ತೀರ್ಥಯಾತ್ರೆ. ಸಂಶಯವಾದಿ ಆಗಲೇ ಎಲ್ಲವಕ್ಕೂ ‘ಇಲ್ಲ’ ಎಂಬ ಉತ್ತರವನ್ನು ಕಂಡುಕೊಂಡಿರುತ್ತಾನೆ. ತನ್ನೆದುರು ಇರಿಸಲಾಗದ ಎಲ್ಲ, ತಾನು ಮೇಜಿನ ಮೇಲಿಟ್ಟುಕೊಂಡು ವಿಭಜಿಸಲಾಗದ ಎಲ್ಲವನ್ನೂ ಆತ ‘ಇಲ್ಲ’ ಎಂದು ತೀರ್ಮಾನಿಸಿಬಿಟ್ಟಿರುತ್ತಾನೆ.
ಕಾರ್ಲ್ ಮಾರ್ಕ್ಸ್ ಹೀಗೆ ಹೇಳಿದ್ದ, “ದೇವರನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ, ಟೆಸ್ಟ್ ಟ್ಯೂಬಿನಲ್ಲಿ ನೋಡುವವರೆಗೆ ನಾನು ಆತನನ್ನು ನಂಬುವುದಿಲ್ಲ.”
ದೇವರು ಟೆಸ್ಟ್ ಟ್ಯೂಬಿನಲ್ಲಿ ಕಂಡುಕೊಳ್ಳಬೇಕಾದುದಲ್ಲ. ದೇವರನ್ನು ಅರಸಬೇಕು. ನೀವು ಅರಸುವಿಕೆಯ ಹಾದಿಯಲ್ಲಿರುವಾಗ ಸಾವಿರಾರು ಸಂಗತಿಗಳನ್ನು ಪ್ರಶ್ನಿಸಬೇಕಾಗುತ್ತದೆ, ಆದರೆ ಈ ಹುಡುಕುವಿಕೆಯಲ್ಲಿ ನೀವೊಂದು ನಿಲ್ದಾಣವನ್ನು ತಲುಪುತ್ತೀರಿ, ಅಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳು ಮಾಯವಾಗಿಬಿಡುತ್ತವೆ. ಅಚಾನಕ್ಕಾಗಿ ನೀವು ಸತ್ಯದೆದುರು ಮುಖ ಮಾಡಿ ನಿಂತಿರುತ್ತೀರಿ. ನೀವು ಚಕಿತರಾಗಿರುತ್ತೀರಿ, ನಿಮಗೆ ದೇವರು ಸಿಕ್ಕಿರುವುದಿಲ್ಲ, ಆದರೆ ನೀವು ಏನನ್ನೋ ಕಂಡುಕೊಂಡಿರಿ ಎಂಬುದನ್ನು ನಿರಾಕರಿಸಲೂ ಸಾಧ್ಯವಾಗುವುದಿಲ್ಲ, ದೇವರಿಗಿಂತ ಉನ್ನತವಾದದ್ದೇನನ್ನೋ ನೀವು ಕಂಡುಕೊಂಡಿರುತ್ತೀರಿ. ಇದನ್ನು ನಾನು ದೈವತ್ವ ಎಂದು ಕರೆಯುತ್ತೇನೆ.
(ಮುಂದುವರೆಯಲಿದೆ…)
[…] ಸಂಶಯವಾದಿಯ ನಂಬಿಕೆಗಳು (ಭಾಗ 2) January 13, 2009 Posted by uniquesupri in Uncategorized. trackback ಮೊದಲ ಭಾಗ […]
[…] January 14, 2009 Posted by uniquesupri in ಓಶೋ ಹೇಳಿದ್ದು. trackback (ಮೊದಲ ಭಾಗ) (ಎರಡನೆಯ […]
[…] 15, 2009 Posted by uniquesupri in ಓಶೋ ಹೇಳಿದ್ದು. trackback (ಭಾಗ ೧ ೨ […]