jump to navigation

ಓಶೋ ವಿಚಾರಗಳು ಪ್ರಾಕ್ಟಿಕಲ್ಲಾಗಿವೆಯೇ? January 10, 2009

Posted by uniquesupri in ಚರ್ಚೆ.
trackback

– ಸುಪ್ರೀತ್.ಕೆ.ಎಸ್

ಈ ಬ್ಲಾಗನ್ನು ತೆರೆಯುವುದರ ಉದ್ದೇಶ ಓಶೋ ಮೇಲಿನ ನನ್ನ ಪ್ರೀತಿ, ಮುನಿಸು, ಅಭಿಮಾನ, ಆತನ ಬಗೆಗಿರುವ ಬೆರಗು, ಕುತೂಹಲ, ಅನುಮಾನ, ಅಸಹ್ಯಗಳನ್ನು ಬರೆದಿರಿಸುವುದು, ಆ ಮೂಲಕ ನನ್ನೊಳಗೊಂದು ಸ್ಪಷ್ಟ ನಿಲುವನ್ನು ರೂಪಿಸಿಗೊಳ್ಳುತ್ತಾ ಹೋಗುವುದು ಎಂದಾಗಿತ್ತು. ಓಶೋನ ವಿಚಾರಗಳನ್ನು ನಾನೆಷ್ಟೇ ಮೆಚ್ಚಿದರೂ pg12_3 ಅವನ್ನು ಯಥಾವತ್ತಾಗಿ ಬ್ಲಾಗಿಗೆ ಹಾಕುವುದು ವ್ಯರ್ಥ ಶ್ರಮ ಎನ್ನಿಸಿ ಸುಮ್ಮನಾದೆ. ಹಾಗೆ ನೋಡಿದರೆ ಅಂತರ್ಜಾಲದಲ್ಲಿ ಓಶೋ ಸಾಹಿತ್ಯಕ್ಕೆ ಕೊರತೆಯೇನೂ ಇಲ್ಲ. ಆತನ ಪ್ರತಿಯೊಂದು ಭಾಷಣ, ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಓಶೋ ವಿಚಾರಗಳಿಗಾಗಿಯೇ ಮೀಸಲಾದ ಪತ್ರಿಕೆಯಿದೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿರುವ ಪ್ರವಚನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಹೊರಟರೆ ನಮ್ಮ ಶ್ರದ್ಧೆಯೆಂಬ ಕಲ್ಮಷವೇ ಸೇರಿಕೊಂಡು ಭಾಷಾಂತರ ಮೂಲಕ್ಕಿಂತ ಹೆಚ್ಚು ಕ್ಲಿಷ್ಟಕರವಾಗಿಬಿಡುತ್ತದೆ. ಮೇಲಾಗಿ ಓಶೋ ಇಂಥದ್ದೊಂದು ವಿಷಯದ ಬಗ್ಗೆ ಎಂದು ತಯಾರಾಗಿ ಮಾತಾಡಿದವನಲ್ಲ. ತನ್ನ ಸಂನ್ಯಾಸಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಒಂದೊಂದು ಪ್ರವಚನದಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ವಿಷಯಗಳನ್ನು ವಿವರಿಸುತ್ತಾ ಹೋಗುವ ಆತನ ಶೈಲಿಯನ್ನು ಅನೇಕ ವೇಳೆ ನಾವು ವಿರೋಧಾಭಾಸ ಎಂದು ಭಾವಿಸುತ್ತೇವೆ.ಯೇಸುವಿನ ಬಗ್ಗೆ ಇದುವರೆಗೂ ನಾನು ಕೇಳಿರುವ ಪ್ರವಚನಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಕೆಲವೊಂದು ವೇಳೆ ವೈರುಧ್ಯಗಳಂತೆ ಕಾಣುವ ಹಾಗೆ ಆತ ಮಾತನಾಡಿದ್ದಾನೆ. ಹೀಗಾಗಿ ಓಶೋ ಚಿಂತನೆ ಎಂಬುದು ನನ್ನೆದುರು ಸಮುದ್ರದ ಹಾಗೆ ನಿಂತಂತೆ ಭಾಸವಾಗುತ್ತದೆ. ಕಲ್ಲು ಸಕ್ಕರೆಯ ದೊಡ್ಡ ಬಂಡೆಯೆದುರು ನಿಂತಂತೆ ಅನ್ನಿಸುತ್ತದೆ. ಹೀಗಾಗಿ ಆತನ ಪ್ರವಚನಗಳನ್ನು ಯಥವಾತ್ತಾಗಿ ಭಾಷಾಂತರಿಸಿ ಬ್ಲಾಗಿಗೆ ಹಾಕುವುದಕ್ಕಿಂತ ಆತನ ಪ್ರೇರಣೆಯಿಂದ ನಾನು ಕಂಡುಕೊಂಡ ಸತ್ಯ ಯಾವುದು, ಆತ ನನ್ನಲ್ಲಿ ಹುಟ್ಟುಹಾಕಿದ ವಿಚಾರಗಳು ಯಾವುವು, ಅವು ನನ್ನೊಳಗೆ ಮಾಡಿದ ಪ್ರಭಾವಗಳೇನು ಎಂಬುದರ ಬಗ್ಗೆ ಬರೆಯುತ್ತೇನೆ.

ಓಶೋ ಬಗ್ಗೆ ಹಿಂದೆ ಬರೆದಿದ್ದ ಕೆಲವು ಬರಹಗಳಿಗೆ ಬಂದಿದ್ದ ಥರೇವಾರಿ ಪ್ರತಿಕ್ರಿಯೆಗಳಲ್ಲಿ ನನ್ನ ಗಮನ ಸೆಳೆದ ಪ್ರತಿಕ್ರಿಯೆ ಒಂದಿದೆ. ಓಶೋನ ಬಗ್ಗೆ ನನ್ನ ಹಾಗೆ ಕುತೂಹಲದಿಂದ ಓದಿಕೊಂಡಿರುವ ಬ್ಲಾಗಿಗರೊಬ್ಬರ ಪ್ರತಿಕ್ರಿಯೆ ಇದು: “ರಜನೀಶನ ವಿಚಾರಗಳು ಎಷ್ಟೇ ಕ್ರಾಂತಿಕಾರಿಯಾಗಿದ್ದರೂ, ಎಷ್ಟೇ ತಾರ್ಕಿಕ ಅನ್ನಿಸಿದರೂ ಅವು ಪ್ರಾಕ್ಟಿಕಲ್ ಅಲ್ಲ.”  

ಹಲವು ಬಾರಿ ನಾನೂ ವಿಚಾರಗಳ ಪ್ರಾಕ್ಟಿಕಲ್ ಮಹತ್ವದ ಬಗ್ಗೆ ಆಲೋಚಿಸಿದ್ದಿದೆ. ಇದು ಕೇವಲ ಓಶೋ ವಿಚಾರಗಳಲ್ಲ ಬಗೆಗಿನ ಮಾತಲ್ಲ. ಗಾಂಧೀಜಿಯ ವಿಚಾರಗಳನ್ನು ಓದುವಾಗ, ಅಹಿಂಸೆಯ ಬಗ್ಗೆ, ಅಸಹಕಾರದಿಂದ, ಪ್ರೇಮದಿಂದ ಶತ್ರುವಿನ ಮನಗೆಲ್ಲುವ ಬಗ್ಗೆ, ಪ್ರಾಣವನ್ನು ಕೊಡಲು ಬೇಕಾದರೂ ಸಿದ್ಧರಾಗಬೇಕು ಆದರೆ ಸತ್ಯವನ್ನು ಬಿಟ್ಟುಕೊಡಬಾರದು ಎಂಬ ಬಗ್ಗೆ ಅವರ ವಿಚಾರಗಳನ್ನು ಓದುವಾಗ ಇವೆಲ್ಲಾ ಕೇಳಲು ಚೆನ್ನಾಗಿವೆ, ಪ್ರಾಕ್ಟಿಕಲಿ ಸಾಧ್ಯವಾಗುವಂಥವಾ ಎಂದೆನಿಸಿದ್ದಿದೆ. ವಿವೇಕಾನಂದರಿಂದ ಹಿಡಿದು ವ್ಯಕ್ತಿತ್ವ ವಿಕಸನ ಪುಸ್ತಕ ಬರೆದ ಲೇಖಕನವರೆಗೆ ಎಲ್ಲರ ಚಿಂತನೆಗಳನ್ನು ಕೇಳಿದಾಗ ಇವನ್ನು ಪಾಲಿಸಲು ಸಾಧ್ಯವಾಗುತ್ತದಾ ಎಂಬ ಪ್ರಶ್ನೆ ಏಳುತ್ತದೆ.

ಓಶೋ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಿಕೊಂಡಾಗ ನನಗೆ ಈ ಪ್ರಶ್ನೆಯ ಹಾಗೂ ಅದರ ಹಿಂದಿನ ಉದ್ದೇಶದ ಬಗ್ಗೆಯೇ ನಗುಬರುತ್ತದೆ. ಓಶೋ ತನ್ನ ಜೀವಮಾನವಿಡೀ ಹೇಳಿದ್ದು, ರೆಡಿಮೇಡ್ ಉತ್ತರಗಳನ್ನು ನಂಬುತ್ತಾ, ನಿಮ್ಮ ಬುದ್ಧಿವಂತಿಕೆಯನ್ನು ಅವಮಾನಿಸಬೇಡಿ. ಶಾಸ್ತ್ರಗಳು, ಧಾರ್ಮಿಕ ಗ್ರಂಥಗಳು, ಧರ್ಮ ಗುರುಗಳು, ಢೋಂಗಿ ಬೋಧಕರು ನಿಮ್ಮ ಪ್ರಶ್ನೆಗಳಿಗೆಲ್ಲಾ ಒದಗಿಸುವ ಸಿದ್ಧ ಮಾದರಿಯ ಉತ್ತರಗಳಿಂದ ಸಂತೃಪ್ತರಾಗಿ ಪ್ರಶ್ನಿಸುವುದನ್ನೇ ಮರೆತುಬಿಡಬೇಡಿ. ನಿಮ್ಮ ಬುದ್ಧಿವಂತಿಕೆಯನ್ನು ಗೌರವಿಸಿ. ಪ್ರಶ್ನಿಸುವುದನ್ನು ನಿಲ್ಲಿಸಬೇಡಿ. ನೀವಾಗಿ ಉತ್ತರ ಕಂಡುಕೊಳ್ಳದ ಹೊರತು ಯಾವ ಉತ್ತರಗಳೂ ನಿಮ್ಮವಾಗುವುದಿಲ್ಲ. ಹೀಗೆ ಹೇಳುವುದೆಂದರೆ ಆಸರೆಗಾಗಿ ನಮ್ಮ ಕೈ, ಕಾಲು ತಡವುವ ಮಗುವನ್ನು ಬಿಡಿಸಿ ನೆಲದ ಮೇಲೆ ಬಿಟ್ಟು ಅದು ತಾನಾಗಿ ತನ್ನ ಕಾಲ ಮೇಲೆ ನಿಲ್ಲಲು ಬಿಡುವುದು. ಅವಲಂಬನೆಯಿಂದ ಮುಕ್ತವಾಗಿಸುವುದು. ಓಶೋನ ಈ ಮಾರ್ಗದಲ್ಲಿ ಯಾವುದೇ ಸಿದ್ಧಾಂತಗಳಿಲ್ಲ. ಇದು ಸತ್ಯ, ಇದನ್ನು ನೀನು ಒಪ್ಪಿಕೊಳ್ಳಬೇಕು. ನಾನು ಹೇಳಿದಂತೆ ನಡೆದರೆ ನಿನಗೆ ಸತ್ಯ ಸಿಕ್ಕುತ್ತದೆ ಎಂದು ಆತ ಹೇಳಲಿಲ್ಲ. ನಿನ್ನ ಸತ್ಯವನ್ನು ನೀನೇ ಕಂಡುಕೊಳ್ಳಬೇಕು, ಅವರಿವರು ಒದಗಿಸುವ ಸತ್ಯದಿಂದ ನೀನು ತೃಪ್ತನಾಗಿ, ಅವರ ಮೇಲೆ ಅವಲಂಬಿತನಾಗಬೇಡ ಎಂದ.

ಈಗ ಹೇಳಿ ಓಶೋನ ವಿಚಾರಗಳನ್ನು ಪಾಲಿಸುವುದು ಎಂಬ ಮಾತಿಗೆ ಅರ್ಥವಿದೆಯೇ? ನಿಮ್ಮ ಸ್ವಂತ ಅನುಭವದಲ್ಲಿ ಕಂಡುಕೊಳ್ಳದೆ ಏನನ್ನೂ ಒಪ್ಪಬೇಡಿ, ಯಾರನ್ನೂ ಅನುಸರಿಸಬೇಡಿ, ಯಾವುದನ್ನೂ ಪಾಲಿಸಬೇಡಿ ಎಂಬ ವಿಚಾರವನ್ನೇ ‘ಪಾಲಿಸುವುದು’ ಎನ್ನುವುದು ಹಾಸ್ಯಾಸ್ಪದ.

ಓಶೋ ಅಷ್ಟೇ ಅಲ್ಲ, ಸತ್ಯವನ್ನು ಕಂಡುಕೊಂಡ ಅನೇಕರು ಹೇಳಿದ್ದು ಅದನ್ನೇ. ನಿಮ್ಮ ಸತ್ಯವನ್ನು ನೀವೇ ಕಂಡುಕೊಳ್ಳಬೇಕು.  ಅವರಿವರ ಕಾಲು, ಕೈ ಹಿಡಿದು ನಡೆಯಬೇಡ ನಿನ್ನ ಕಾಲ ಮೇಲೆ ನೀನು ನಿಲ್ಲು ಎಂದು ಹೇಳಿದಂತೆ ಇದು.

ಓಶೋನ ವಿಚಾರವನ್ನು ‘ನಂಬುವುದು’ , ಆತ ಹೇಳಿದ್ದನ್ನೆಲ್ಲಾ ವಿಮರ್ಶಿಸದೆ ಒಪ್ಪಿಕೊಳ್ಳುವುದು, ನಮ್ಮ ಪ್ರಶ್ನೆಗಳಿಗೆಲ್ಲಾ ಆತ ಉತ್ತರ ಕೊಡುತ್ತಾನೆ ಎಂದು ಭಾವಿಸುವುದು ಇವೆಲ್ಲವೂ ನಮ್ಮನ್ನು ನಾವು ಅವಲಂಬಿತರನ್ನಾಗಿಸಿಕೊಂಡಂತೆಯೇ. ನಮ್ಮ ಬುದ್ಧಿವಂತಿಕೆಯನ್ನು , ಸಾಮರ್ಥ್ಯವನ್ನು ನಾವು ಕಡೆಗಣಿಸಿದಂತೆಯೇ. ಇದನ್ನೇ ಮಾಡಬೇಡಿ ಎಂದು ಎಚ್ಚರಿಸಿದವ ಓಶೋ.

Comments»

No comments yet — be the first.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: