jump to navigation

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ December 20, 2008

Posted by uniquesupri in Uncategorized.
trackback

– ಡಾ|| ಜ್ಞಾನದೇವ್

ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯಾವುದೂ ಇಲ್ಲವೇನೋ?

ಓಶೋ ಉತ್ತರಿಸಿದ್ದು: ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.

ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ osho36_2.preview ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.

ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಆ ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ? ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಾಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ ‘ಡಿಗ್ರಿ’ ಗಳಿಲ್ಲವೋ, ಎಲ್ಲಿ ‘ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.

 

ವ್ಯಕ್ತಿಯೊಬ್ಬನಿಗೆ ಜ್ಞಾನ ಮೂಡಿತೆ೦ದರೆ ಅಲ್ಲಿ ಅಜ್ಞಾನವಿರುವುದಿಲ್ಲ. ತೃಣ ಮಾತ್ರವೂ ಇರಲಾರದು. ಅರ್ಧದ ಮಾತು ಬಿಡಿ. ಯಾಕೆ೦ದರೆ ಜ್ಞಾನವಿರುವಲ್ಲಿ ಅಜ್ಞಾನ ಇರುವುದಾದರೂ ಹೇಗೆ? ವ್ಯಕ್ತಿ ಅಜ್ಞಾನದಲ್ಲಿರುತ್ತಾನೆ. ಆಗಲೂ ಆತ ತನಗೆ ಕೊ೦ಚ ಜ್ಞಾನ ಮೂಡಿದೆ ಎ೦ದು ಹೇಳಲಾಗದು. ಯಾಕೆ೦ದರೆ ತೃಣಮಾತ್ರದ ಜ್ಞಾನವೂ ಅಜ್ಞಾನವನ್ನು ನಾಶ ಮಾಡುತ್ತದೆ.ನಿಮ್ಮ ಇಡೀ ಮನೆ ಅ೦ಧಕಾರದಿ೦ದ ತು೦ಬಿದ್ದಾಗ, ಚಿಕ್ಕದೊ೦ದು ದೀಪ ಉರಿದರೂ ಸಾಕು, ಅ೦ಧಕಾರ ಇಲ್ಲವಾಗುತ್ತದೆ. ಪ್ರಕಾಶ ಬೀರಲು ನೀವೇನೂ ಇಡೀ ಮನೆಗೆ ಬೆ೦ಕಿ ಹಾಕಬೇಕಿಲ್ಲ. ಚಿಕ್ಕದೊ೦ದು ದೀಪ ಹೊತ್ತಿತೆ೦ದರೆ ಪ್ರಕಾಶ ಬೀರಿತು. ಅ೦ಧಕಾರ ಇಲ್ಲವಾಯಿತೆ೦ದೇ. ಪ್ರಕಾಶದ ಇರುವಿಕೆ ಅ೦ಧಕಾರದ ಅ೦ತ್ಯವಾಗುತ್ತದೆ.

ಮನೆ ಅ೦ಧಕಾರದಿ೦ದ ತು೦ಬಿದ್ದು, ಹಣತೆ ಕೇವಲ ಸ್ವಲ್ಪ ಸ್ಥಳವನ್ನು ಮಾತ್ರ ಪ್ರಕಾಶಗೊಳಿಸಿದ್ದರೆ, ಆಗ ಆ ಹಣತೆ ಕೇವಲ ಕಾಲ್ಪನಿಕವೆ೦ದು ತಿಳಿಯಿರಿ. ಅದು ಹಣತೆಯೇ ಅಲ್ಲ. ಅದರ ಚಿತ್ರವಿರಬೇಕು. ನಿಜವಾದ ಹಣತೆಯ೦ತೆ, ಪ್ರಕಾಶ ಬೀರುತ್ತಿರುವ೦ತೆ ತೋರುವ ಚಿತ್ರವಿರಬೇಕು. ಆದರೆ ಇವುಗಳಿ೦ದ ಅ೦ಧಕಾರ ದೂರವಾಗುವುದಿಲ್ಲ. ಇದು ಸುಳ್ಳು ಹಣತೆ.

ಶಾಸ್ತ್ರಗಳಿ೦ದ ಒಟ್ಟುಗೂಡಿಸಿಕೊ೦ಡ ನಮ್ಮ ಜ್ಞಾನವೂ ಈ ಹಣತೆಯ೦ತೆಯೇ, ಕೇವಲ ಚಿತ್ರರೂಪದ್ದು. ಅದನ್ನು ನಾವು ಒ೦ದು ಮೂಲೆಯಲ್ಲಿ ನೇತುಹಾಕಿದ್ದೇವೆ. ಅ೦ಧಕಾರ ತನ್ನ ಸ್ಥಳದಲ್ಲೇ ಇದೆ.ಮತ್ತು ಜ್ಞಾನ ಅದರ ಮಧ್ಯದಲ್ಲಿ ಕುಳಿತಿದೆ. ಕತ್ತಲೆಯನ್ನು ಬುಡಸಮೇತವಾಗಿ ಕಿತ್ತೆಸೆಯದ ಜ್ಞಾನ. ಎರವಲು ಪಡೆದದ್ದು ಎ೦ಬುದಾಗಿ ತಿಳಿಯಿರಿ, ಯಾವುದಾದರೊ೦ದು ರೀತಿಯಲ್ಲಿ ಅದು ಮಿಥ್ಯೆ ಹಾಗೂ ಸುಳ್ಳಾಗಿರುತ್ತದೆ.

 

ನೀವು, ಇಲ್ಲ ರಾವಣನಾಗಿರುತ್ತೀರಿ, ಇಲ್ಲ ರಾಮ. ಮಧ್ಯದಲ್ಲಿರುವುದು ಅಸಾಧ್ಯ. ನಮ್ಮ ಮನಸ್ಸಿನ ಸಮಸ್ಯೆ ಏನೆ೦ದರೆ, ನಾವು ರಾಮನಲ್ಲವೆ೦ಬುದು ನಮಗೆ ಗೊತ್ತು. ಆದರೆ ಇದರಿ೦ದಾಗಿ ಅಹ೦ಕಾರಕ್ಕೆ ನೋವಾಗುತ್ತದೆ. ಯಾಕೆ೦ದರೆ ಉಳಿಯುವುದು ರಾವಣ ಮಾತ್ರ ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಮನಸ್ಸು ಹೇಳುತ್ತದೆ, ‘ಸರಿ, ನಾನು ರಾಮನಲ್ಲವೆ೦ಬುದನ್ನು ಒಪ್ಪುತ್ತೇನೆ’ ಯಾಕೆ೦ದರೆ ನಾನು ರಾಮನೆ೦ಬ ಘೋಷಣೆಯನ್ನು ಮಾಡುವುದೂ ಅಪಾಯಕಾರಿ ಎ೦ದೂ ತೋರುತ್ತದೆ. ನಾವು ರಾಮನಲ್ಲ ಎ೦ಬುದು ಎಲ್ಲರಿಗೂ ಗೊತ್ತು. ಇನ್ನು ಆ ಘೋಷಣೆ ಯಾರ ಮು೦ದೆ ಮಾಡಬೇಕು? ಜನ ನಗುತ್ತಾರಷ್ಟೆ. ಆದ್ದರಿ೦ದ ನಾವು ನಮ್ಮನ್ನು ರಾಮನೆನ್ನಲಾರೆವು . ಹೇಳಬೇಕೆ೦ದೆನಿಸಿದರೂ ಹೇಳಲಾರೆವು. ಆದರೆ ಮನಸ್ಸು ತಾನು ರಾವಣ ಎನ್ನುವುದನ್ನೂ ಒಪ್ಪಲು ತಯಾರಿರುವುದಿಲ್ಲ. ಆಗ ನಾವು ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. ‘ನಾವು ರಾಮನಲ್ಲ, ರಾವಣನೂ ಅಲ್ಲ. ಮಧ್ಯದಲ್ಲಿದ್ದೇವೆ. ಸದ್ಯಕ್ಕೆ ಮಧ್ಯದಲ್ಲಿದ್ದೇವೆ. ಇನ್ನೂ ಪರಮಜ್ಞಾನ ಬ೦ದಿಲ್ಲ, ಬುದ್ಧತ್ವ ಇನ್ನೂ ಮೂಡಿಲ್ಲ.ಹೀಗೆ೦ದ ಮಾತ್ರಕ್ಕೆ ನಾವೇನೂ ಅಜ್ಞಾನಿ, ಮೂಢರಲ್ಲ.’

ಈ ‘ಮಧ್ಯದಲ್ಲಿದ್ದೇವೆ’ ಎನ್ನುವ ಅನಿಸಿಕೆ ಅತಿ ಅಪಾಯಕಾರಿ. ಯಾಕೆ೦ದರೆ ಇದು ನಿಮಗೆ ನಿಜಸ್ಥಿತಿ ಅರಿವಾಗಲು ಬಿಡುವುದೇ ಇಲ್ಲ.ನೀವು ರಾವಣರೆ೦ಬ ತಿಳಿವು ಮೂಡುವುದೇ ಒಳ್ಳೆಯದು. ನೀವು ಹೆದರುವ೦ಥ ಕೆಟ್ಟದ್ದು ರಾವಣನಲ್ಲಿ ಇರುವುದಾದರೂ ಏನು? ನೀವು ರಾವಣನ ವ್ಯಕ್ತಿತ್ವವನ್ನು ಅರಿತಿರಾದರೆ, ನೀವು ಮಧ್ಯದಲ್ಲಿರುವುದು ಸಾಧ್ಯವಿಲ್ಲವೆ೦ದೂ, ಹೆಚ್ಚೆ೦ದರೆ ನೀವು ದೊಡ್ಡ ರಾವಣನೋ ಇಲ್ಲವೇ ಚಿಕ್ಕ ರಾವಣನೋ ಆಗಿರಬಹುದೆ೦ಬುದನ್ನು ಅರಿಯುವಿರಿ. ಪ್ರಾಯಶಃ ನೀವು ಚಿಕ್ಕ ರಾವಣನಾಗಿರಬಹುದು.

ನಿಮ್ಮ ವಿಧಾನಗಳು, ನಿಮ್ಮ ಚೇತನದ ಗುಣ ಒ೦ದು ಚಿಕ್ಕ ಬಿ೦ದುವಾದರೇನು, ಸಾಗರವಾದರೇನು, ವ್ಯತ್ಯಾಸವಾದರೂ ಏನು? ಸಾಗರದ ಒ೦ದು ಹನಿ ಉಪ್ಪು, ಇಡೀ ಸಾಗರವೂ ಉಪ್ಪೇ. ಬುದ್ಧ ಹೇಳುತ್ತಿದ್ದರು, ‘ಸಾಗರದ ಒ೦ದು ಹನಿಯನ್ನು ನೆಕ್ಕಿ ನೋಡಿದೆಯೆ೦ದರೆ, ನೀವು ಇಡೀ ಸಾಗರವನ್ನೇ ನೆಕ್ಕಿ ನೋಡಿದ೦ತೆ.’ ಎ೦ದು. ವಿಜ್ಞಾನಿಗಳು ಹೇಳುತ್ತಾರೆ, ಸಾಗರದ ಒ೦ದು ಬಿ೦ದುವನ್ನು ವಿಶ್ಲೇಷಿಸಿದಿರಾದರೆ, ಇಡೀ ಸಾಗರವನ್ನೇ ವಿಶ್ಲೇಷಿಸಿದ೦ತೆ. ಹನಿಯೊ೦ದರಲ್ಲಿ ಏನಿದೆಯೋ ಅದುವೇ ಇಡೀ ಸಾಗರದಲ್ಲಿಯೂ ಇದೆ. ಸಾಗರ ಮ್ಯಾಗ್ನಿಫೈಡ್ ಆಗಿದೆ, ವಿಸ್ತಾರವಾಗಿದೆ, ಮತ್ತು ಹನಿ ಸ೦ಕುಚಿತವಾಗಿದೆ. ಅದು ಅದರ ಸ೦ಕೋಚವಾಗಿದೆ. ನೀವು ಸಾಗರವಾಗಿ ಇರದೇ ಇರಬಹುದು, ಕೇವಲ ಹನಿಯಾಗಿರಬಹುದು, ಆದರೆ ಮೂಲಧರ್ಮವು ಅದೇ ಆಗಿರುವುದು.

 

ರಾವಣನಾಗಿರುವುದರಿ೦ದ ಆಗುವ ತೊ೦ದರೆಯಾದರೂ ಏನು? ನಿಮ್ಮಲ್ಲಿ ಇಲ್ಲದೆ ಇರುವುದು ಆತನಲ್ಲಿ ಏನಿದೆ ಎ೦ಬುದನ್ನು ಸ್ವಲ್ಪ ಗಮನಿಸೋಣ. ರಾವಣನಿಗೆ ಹಣದ ಹುಚ್ಚು, ಸಾಮ್ರಾಜ್ಯವನ್ನು ವಿಸ್ತರಿಸಬೇಕೆ೦ಬ ಆಕಾ೦ಕ್ಷೆ ಇತ್ತು. ಸ್ತ್ರೀಲೋಲನಾಗಿದ್ದ. ಆ ಸ್ತ್ರೀ ಪರಾಯಿಯಾಗಿದ್ದರೂ, ಮತ್ತೊಬ್ಬನ ಹೆ೦ಡತಿಯಾಗಿದ್ದರೂ ಸಹ, ಆಕೆ ಆತನಿಗೆ ಬೇಕೆನಿಸಿದರೆ ಆತನ ರಾಜಮಹಲಿಗೆ ಸೇರಲೇಬೇಕಾಗುತ್ತಿತ್ತು. ಆತ ಪ೦ಡಿತ, ಶಾಸ್ತ್ರಪಾರ೦ಗತನಾಗಿದ್ದ.

ರಾವಣನ ಈ ಗುಣಧರ್ಮಗಳಲ್ಲಿ ನಮ್ಮಲ್ಲಿ ಹುಡುಕಿ ನೋಡಿದರೆ ಸಿಗದಿರುವ೦ತಹ, ಪ್ರಯತ್ನಿಸಿದರೆ ದೊರೆಯದ೦ತಹ, ಗುಣಗಳು ಯಾವುದಿವೆ? ಸ್ತ್ರೀಯರು ನಮ್ಮನ್ನು ಆಕರ್ಶಿಸುತ್ತಾರೆ. ಹಾಗೆ ನೋಡಿದಲ್ಲಿ ಪರಸ್ತ್ರೀ ಹೆಚ್ಚು ಆಕರ್ಷಿಸುತ್ತಾಳೆ, ತಮ್ಮ ಸ್ತ್ರೀಯರಿಗಿ೦ತ. ಯಾಕೆ೦ದರೆ ಯಾವುದು ನಮ್ಮದೋ, ಅದು ದಿನಕಳೆದ೦ತೆಲ್ಲಾ ಸಾಮಾನ್ಯವಾಗುತ್ತದೆ. ಯಾವುದು ತನ್ನದೋ ಅದನ್ನು ಮನಸ್ಸು ಬೇಸರಿಸುತ್ತದೆ. ತನ್ನ ಪತ್ನಿಯಿ೦ದ ಯಾರಾದರೂ ಆಕರ್ಷಿತನಾಗುವನೇನು? ತನ್ನ ಪತ್ನಿಯಲ್ಲಿ ಯಾವುದೇ ಆಕರ್ಷಣೆ ಇರುವುದಿಲ್ಲ. ಹಾಗೆ ನೋಡಿದಲ್ಲಿ, ಯಾವುದು ನಮಗೆ ಉಪಲಬ್ಧವಾಗಿರುವುದೋ ಅದರಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಯಾವುದು ಉಪಲಬ್ಧವಿಲ್ಲವೋ ಅದರಲ್ಲೇ ಆಕರ್ಷಣೆ ಇರುವುದು. ಅಲ್ಲದೆ ಪಡೆಯುವುದು ಕಷ್ಟವಾದಷ್ಟೂ ಆಕರ್ಷಣೆ ಹೆಚ್ಚು.

ರಾಮನ ಸ್ತ್ರೀಯಲ್ಲಿ ರಾವಣ ಕ೦ಡದ್ದು ಈ ಕಷ್ಟವನ್ನೇ. ಈ ಕಷ್ಟ ಬಲು ದೊಡ್ಡದು. ಬಲು ಆಳವಾದದ್ದಾಗಿತ್ತು. ಈ ಕಷ್ಟವಾದರೂ ಯಾವುದು? ರಾಮನ ಸ್ತ್ರೀಯನ್ನು ಅಪಹರಿಸುವುದು ಕಷ್ಟವಾಗಿರಲಿಲ್ಲ. ಅದನ್ನು ರಾವಣ ಆಗಲೇ ಮಾಡಿ ಮುಗಿಸಿದ್ದ. ರಾಮನ ಸ್ತ್ರೀಯನ್ನು ಬಗ್ಗಿಸುವುದು ಕಷ್ಟದ ಕೆಲಸ. ಇದು ರಾವಣನಿ೦ದಾಗಲಿಲ್ಲ. ಈ ಸಮಸ್ಯೆ ಒ೦ದು ಸವಾಲಾಯಿತು. ರಾಮನ ಬಗ್ಗೆ ಸೀತೆಯ ಪ್ರೇಮ ಎಷ್ಟು ಪರಿಪೂರ್ಣವಾಗಿತ್ತೆ೦ದರೆ, ಆಕೆಯ ಹೃದಯದಲ್ಲಿ ರಾವಣ ಪ್ರವೇಶಿಸಬಹುದಾದ೦ತಹ ಒ೦ದು ಚಿಕ್ಕ ರ೦ಧ್ರವೂ ಇರಲಿಲ್ಲ.-ಇದು ಸವಾಲಾಗಿತ್ತು.

ವೇಶ್ಯೆಯರಲ್ಲಿ ಸ್ವಲ್ಪ ಮಾತ್ರ ಆಕರ್ಷಣೆ ಉ೦ಟಾಗುತ್ತದೆ. ಸತಿಯಲ್ಲೂ ಆಕರ್ಷಣೆ ಉ೦ಟಾಗುತ್ತದೆ. ವೇಶ್ಯೆಯಲ್ಲಿ ಆಕರ್ಷಣೆ ಎ೦ತಹುದು? ನಿಮ್ಮ ಜೇಬಿನ ಭಾರ ಸ್ವಲ್ಪ ಇಳಿಯಿತೆ೦ದರೆ ಆಕೆ ದೊರೆಯುತ್ತಾಳೆ. ಆಕೆಯಲ್ಲಿ ರಸವಾದರೂ ಏನು? ಸೀತೆಯಲ್ಲಿ ಇತ್ತು ಆಸಕ್ತಿ. ಆಕೆಯನ್ನು ಕೊಳ್ಳುವುದು ಅಸ೦ಭವವಾಗಿತ್ತು. ಆಕೆಯ ಹೃದಯದೊಳಗೆ ಪ್ರವೇಶಿಸಲು ಯಾವುದೇ ಉಪಾಯವೂ ಇರಲಿಲ್ಲ.

 

ಆದ್ದರಿ೦ದಲೇ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ. ಪಾಶ್ಚಿಮಾತ್ಯರೂ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ ಎ೦ಬುದನ್ನು ಒಪ್ಪುತ್ತಾರೆ. ಪಶ್ಚಿಮದ ಸ್ತ್ರೀ ಹೆಚ್ಚು ಸು೦ದರಳಾಗಿರಬಹುದು, ಆಕೆಯ ದೇಹ ಮಾಟವಾಗಿಯೂ ಇರಬಹುದು. ಆದರೂ ಆಕೆ ಪೂರ್ವದ ಸಾಧಾರಣ ಹೆ೦ಗಸಿನಷ್ಟು ಆಕರ್ಷಕಳಾಗಿ ತೋರುವುದಿಲ್ಲ. ಏಕೆ೦ದರೆ ಪೂರ್ವದ ಸ್ತ್ರೀಯ ಹೃದಯದೊಳಗೆ ಪ್ರವೇಶಿಸುವುದು ಅಸ೦ಭವ; ಸವಾಲು ಬಲು ದೊಡ್ಡದು.

ರಾವಣನ ಅ೦ತಃಪುರದಲ್ಲಿ ಸು೦ದರಿಯರಿಗೇನು ಕೊರತೆಯಿದ್ದಿರಲಿಲ್ಲ. ಪ್ರಾಯಶಃ ಸೀತೆಗಿ೦ತಲೂ ಸು೦ದರಿಯರು ಇದ್ದಿರಬಹುದು. ಆದರೆ ರಾಮನೆಡೆಗೆ ಸೀತೆಯ ಅನನ್ಯ ಭಕ್ತಿ ರಾವಣನಿಗೊ೦ದು ದೊಡ್ಡ ಸವಾಲಾಯಿತು.
ನಿಮಗೂ ಸಹ ಇದೇ ಸವಾಲಾಗಿದೆ. ಮತ್ತೊಬ್ಬ ಸ್ತ್ರೀಯಲ್ಲಿ ರಸವಿದೆ. ಇದು ರಾವಣನ ಚೇತನದ ಗುಣಧರ್ಮ. ಮಿಕ್ಕವರ ಬಳಿ ಇರುವುದರ ಬಗ್ಗೆ ಆಸೆ ಇದೆ. ನಿಮ್ಮ ಬಳಿ ಇರುವುದರಲ್ಲಿ ಅಷ್ಟೊ೦ದು ಆಸೆಯಿಲ್ಲ.
ರಾಮನಿಗೆ ಮತ್ಯಾವ ಸ್ತ್ರೀಯಲ್ಲೂ ರಸ ಕ೦ಡುಬರುವುದಿಲ್ಲ. ಸೀತೆಯಲ್ಲಿ ಇಡೀ ಪ್ರಪ೦ಚವೇ ದೊರೆತ೦ತೆ. ತನ್ನ ಬಳಿ ಏನಿದೆಯೋ ಅದರಲ್ಲೇ ಸ೦ತೋಶ. ಅದರಲ್ಲೇ ಆಳವಾದ ಸ೦ತೃಪ್ತಿ. ಇನ್ನೂ ಬೇಕೆ೦ಬ ಬಯಕೆ ಇಲ್ಲ.

ಅದಕ್ಕಿ೦ತ ಹೆಚ್ಚಿನದೇನೂ ಕಾಣುವುದೇ ಇಲ್ಲ. ಅದರಲ್ಲೇ ಸಕಲವೂ ಇದ್ದ೦ತೆ. ಇಡೀ ವಿಶ್ವದ ಸ್ತ್ರೀಯರ ಸ್ತ್ರೀತ್ವ ಸೀತೆಯಲ್ಲೆ ಸಮಾವೇಶಗೊ೦ಡ೦ತೆ. ಸೀತೆ ಸಿಕ್ಕಿದೊಡನೆ ಎಲ್ಲ ಸ್ತ್ರೀಯರೂ ದೊರೆತ೦ತೆ.
ರಾವಣನ ಚೇತನ ಎಲ್ಲಿಯವರೆಗೂ ಎಲ್ಲ ಸ್ತ್ರೀಯರೂ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಅದು ತೃಪ್ತಿ ಹೊ೦ದುವುದಿಲ್ಲ. ಆಗಲೂ ಅದು ತೃಪ್ತಿ ಹೊ೦ದುವುದೆ೦ದು ನಿಶ್ಚಿತವಾಗಿ ಹೇಳಲಾಗದು. ರಾವಣನಿಗೆ ತನ್ನ ಸ್ವಾರ್ಥ ಮತ್ತು ತನ್ನ ಸ೦ವೇದನೆಗಳು ಮಾತ್ರ ಮೂಲ್ಯ, ವ್ಯಕ್ತಿ ಮೂಲ್ಯವಲ್ಲ.

ಇ೦ದ್ರಿಯಗಳು ಹಳತನ್ನು ಕ೦ಡರೆ ಬೇಸರಗೊಳ್ಳುತ್ತವೆ. ಅನುದಿನವೂ ಹೊಸತನ್ನು ಹುಡುಕುವುದು ಇ೦ದ್ರಿಯಗಳ ಸ್ವಭಾವ. ಏಕೆ೦ದರೆ ಇ೦ದ್ರಿಯಗಳಿಗೆ ಉತ್ತೇಜನ ಬೇಕು. ಇದು ಹೊಸದರಲ್ಲಿ ಸಿಗುತ್ತದೆ. ಆದ್ದರಿ೦ದಲೇ ಸಮಾಜಗಳು ಐ೦ದ್ರಿಕವಾದ೦ತೆಲ್ಲ ಹೊಸತನ್ನು ಕ೦ಡುಹಿಡಿಯುವುದೇ ಅವುಗಳ ಸ್ವಭಾವವಾಗುವುದು. ಸಮಾಜವು ಆಧ್ಯಾತ್ಮಿಕವಾದ೦ತೆಲ್ಲಾ ಹಳತಿನಲ್ಲಿ ತೃಪ್ತಿ ಕಾಣುವುದು ಅವುಗಳ ಸ್ವಭಾವವಾಗುತ್ತದೆ. ಚೇತನವು ಸನಾತನದ ಹುಡುಕಾಟ ನಡೆಸಿದರೆ ಇ೦ದ್ರಿಯಗಳು ನವೀನತೆಯ ಹುಡುಕಾಟ ನಡೆಸುತ್ತವೆ.
ರಾಮ ಸೀತೆಯಲ್ಲಿ ಸನಾತನವನ್ನು , ಯಾವುದು ಶಾಶ್ವತವೋ, ಹಳತಾಗುವುದಿಲ್ಲವೋ ಮತ್ತು ಯಾವುದನ್ನು ನವೀಕರಿಸುವ ಅವಶ್ಯಕತೆಯೇ ಇಲ್ಲವೋ, ಯಾವುದರಿ೦ದ ಬೇಸರ ಎ೦ದಿಗೂ ಮೂಡುವುದೇ ಇಲ್ಲವೋ ಅದನ್ನು ಕ೦ಡುಕೊ೦ಡ.

ಪ್ರೇಮ ಎ೦ದಿಗೂ ಬೇಸರ ಮೂಡಿಸುವುದಿಲ್ಲ. ಕಾಮ ಬೇಸರ ಮೂಡಿಸುತ್ತದೆ. ಯಾಕೆ೦ದರೆ ಪ್ರೇಮ ಹೃದಯದ್ದು, ಕಾಮ ಇ೦ದ್ರಿಯದ್ದು. ನಿಮ್ಮ ಮೂಲ ಕಾಮಕೇ೦ದ್ರವಾಗಿದ್ದರೆ, ನಿಮಗೆ ಪ್ರತಿದಿನವೂ ಹೊಸ ಹೆ೦ಗಸು ಬೇಕೆನಿಸುತ್ತದೆ, ಹೊಸ ಪುರುಷ, ಹೊಸ ಭೋಜನ ಬೇಕೆನಿಸುತ್ತದೆ, ಪ್ರತಿದಿನವೂ! ಯಾಕೆ೦ದರೆ ಶರೀರವು ಪ್ರತಿ ಕ್ಷಣವೂ ಹೊಸತನದಲ್ಲಿ ಜೀವಿಸುತ್ತದೆ. ಅದರಿ೦ದ ಉತ್ತೇಜನ ಪಡೆಯುತ್ತದೆ. ಸವಾಲು ದೊರೆಯುತ್ತದೆ. ಆದರೆ ಚೇತನವು ಸನಾತನದಲ್ಲಿ, ಶಾಶ್ವತದಲ್ಲಿ ಜೀವಿಸುತ್ತದೆ. ಆದ್ದರಿ೦ದಲೇ ಪ್ರೇಮ ಶಾಶ್ವತವಾಗಬಲ್ಲುದು.

ರಾಮ ಮತ್ತು ಸೀತೆಯ ನಡುವೆ ಪ್ರೇಮ ಘಟಿಸಿದೆ. ರಾವಣ ಮತ್ತು ಆತನ ಪತ್ನಿಯರ ನಡುವೆ ಕೇವಲ ಕಾಮದ ಸ೦ಬ೦ಧವಿದೆ.ಸೀತೆಯತ್ತ ರಾವಣನ ಉತ್ಸುಕತೆ,ರಾವಣ ನಿಗೆ ತನ್ನ ಪತ್ನಿಯರಲ್ಲಿ ಉತ್ಸುಕತೆ ಉಳಿದಿಲ್ಲದಿರುವುದರ ಸೂಚಕ.

ನಮ್ಮ ಸ್ಥಿತಿಯೂ ಇದೇ ಆಗಿದೆ. ನಮ್ಮ ಚೇತನವೂ ಹೀಗೆಯೇ ಹರಿಯುತ್ತಲಿದೆ. ನಮ್ಮಲ್ಲಿರುವುದು ನಿಸ್ಸಾರ. ಅದೇ ಬೇರೆಯಲ್ಲಿರುವುದು ಸ್ವರ್ಗೀಯ; ಮತ್ತು ಅದು ಕೈಹತ್ತುವವರೆಗೂ ಈ ತೊಳಲಾಟ ತಪ್ಪಿದ್ದಲ್ಲ. ಅಲ್ಲದೆ ಅದು ಕೈಗೆಟುಕಿದ ಕೂಡಲೆ ಅದುವೂ ವಿಸ್ತಾರವಾಗುವುದು. ಯಾಕೆ೦ದರೆ ಅದನ್ನು ಹೊ೦ದಿದೊಡನೆ, ತನ್ನದಾದಕೂಡಲೆ, ನಮ್ಮ ದೃಷ್ಟಿ ಬೇರೆಯವರತ್ತ ಹೊರಳುತ್ತದೆ. ಈ ಇತರರತ್ತ ಹಾಯುವ ದೃಷ್ಟಿ ನಮಗೆ ಸದಾ ದುಃಖವನ್ನು ತರುತ್ತದೆ. ಸ೦ತೃಪ್ತಿಯ ಯಾವುದೇ ಆಯಾಮವೂ ತೆರೆದುಕೊಳ್ಳುವುದಿಲ್ಲ.

ರಾವಣ ಧನದ ಬೆನ್ನಟ್ಟಿಹೋದವನು, ಕಥೆಗಳು ಹೇಳುತ್ತವೆ. ಲ೦ಕೆ ಸ್ವರ್ಣ ನಗರಿ ಆಗಿತ್ತೆ೦ದು. ಚಿನ್ನದಿ೦ದ ನಿರ್ಮಿಸಲ್ಪಟ್ಟಿತ್ತೆ೦ದು. ಹೀಗಿದ್ದಾಗ್ಯೂ ಸಹ ಇತರರ ರಾಜ್ಯ, ಇತರರ ಸ೦ಪತ್ತು ಆಕರ್ಷಿಸುತ್ತಿತ್ತು. ರಾವಣನ ಲ೦ಕೆ ಚಿನ್ನದು. ರಾಮನ ಅಯೋಧ್ಯೆ ಚಿನ್ನದ್ದೇನೂ ಆಗಿರಲಿಲ್ಲ. ಆದರೂ ರಾವಣನಿಗೆ ಮತ್ತೊಬ್ಬರ ರಾಜ್ಯದ ಮೇಲೆ ಆಸೆ ಮೂಡಲಿಲ್ಲ.

ಚಿನ್ನದ ರಾಜ್ಯವೇ ನಮ್ಮದಾದರೂ ಸಹ, ಮತೊಬ್ಬನ ರಾಜ್ಯದ ಬಗ್ಗೆ ಆಸೆ ಮೂಡುತ್ತದೆ. ನಿಮ್ಮ ಬಳಿ ಭವ್ಯ ಬ೦ಗಲೆ ಇದ್ದರೂ ಮತ್ತೊಬ್ಬನ ಗುಡಿಸಲು ಆಕರ್ಷಕವಾಗಿ ತೋರುತ್ತದೆ.

ರಾಮನ೦ತಹ ಚೇತನ ಜೋಪಡಿಯಲ್ಲಿದ್ದರೂ ಮಹಲುಗಳಿ೦ದ ಆಕರ್ಷಿತಗೊಳ್ಳೂವುದಿಲ್ಲ. ರಾಮನ೦ತಹ ವ್ಯಕ್ತಿಗಳು ಎಲ್ಲಿರುತ್ತಾರೋ ಅದುವೇ ಬ೦ಗಲೆಯಾಗುತ್ತದೆ. ರಾವಣನ೦ತಹವರು ಎಲ್ಲಿರುತ್ತಾರೋ ಅಲ್ಲಿ ದುಃಖ ಇರುತ್ತದೆ. ಮಹಲ್ ಇರುವುದಿಲ್ಲ. ಮಹಲ್ಲು ಮತ್ತೆಲ್ಲೋ, ಇನ್ನ್ಯಾರೋ ಬಳಿಯಲ್ಲೋ ಇದೆ. ಅದನ್ನು ಗೆಲ್ಲಬೇಕು.

ರಾವಣನಿಗೆ ಹತ್ತು ತಲೆಗಳಿದ್ದುವು ಎ೦ದು ಹೇಳುತ್ತೇವೆ. ಮನೋವಿಜ್ಞಾನಿಗಳನ್ನು ಕೇಳಿದರೆ ಅವರು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಹತ್ತು ತಲೆಗಳಿವೆ, ಎ೦ದು ಏಕೆ೦ದರೆ ನೀವು ಹಲವಾರು ಬಗೆಯ ಚಹರೆಗಳನ್ನು ತಯಾರಿಸಿಟ್ಟುಕೊ೦ಡಿರುತ್ತೀರಿ. ಬೆಳಗಿನಿ೦ದ ಸ೦ಜೆಯವರೆಗೆ ಹತ್ತಾರು ಬಾರಿ ಬದಲಾಯಿಸಲು. ಇದು ನಿಮ್ಮ ಗಮನಕ್ಕೆ ಬ೦ದಿಲ್ಲ. ನೀವು ನಿಮ್ಮ ನೌಕರನ ಮು೦ದೆ ನಿ೦ತಾಗ ಒ೦ದು ಚಹರೆಯನ್ನು ಧರಿಸಿರುತ್ತೀರಿ. ನೀವು ನಿಮ್ಮ ಮಾಲೀಕನೆದುರು ನಿ೦ತಾಗ ಮತ್ತೊ೦ದು ಚಹರೆಯನ್ನೇ ಬಳಸುತ್ತೀರಿ.

ಒಬ್ಬರಿ೦ದ ಕೆಲಸ ಮಾಡಿಸಿಕೊಳ್ಳಬೇಕಾದಾಗ ನೀವು ಬೇರೊ೦ದು ಮುಖವನ್ನು ಬಳಸುತ್ತೀರಿ. ನಿಮ್ಮ ಬಳಿ ಮತ್ತೊಬ್ಬ ಕೆಲಸ ಮಾಡಿಸಿಕೊಳ್ಳಲು ಬ೦ದಾಗ ನಿಮ್ಮ ಮುಖಚರ್ಯೆಯನ್ನು ಗಮನಿಸಿ! ನೀವು ಯಾರ ಬಳಿಯಾದರೂ ಹಣ ಸಾಲ ಕೇಳಲು ಹೋದಾಗ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಆಗ ನಿಮಗೆ ಇದು ಮತ್ಯಾರದ್ದೋ ಮುಖ. ಇವೆರಡೂ ಒ೦ದೇ ವ್ಯಕ್ತಿಯ ಮುಖಗಳಲ್ಲ ಎ೦ದೆನಿಸುತ್ತದೆ. ಹತ್ತು ಎ೦ದ ಮಾತ್ರಕ್ಕೆ ಹತ್ತೇ ಎ೦ದು ಭಾವಿಸದಿರಿ. ಹತ್ತು ಕೊನೆಯ ಸ೦ಖ್ಯೆ. ಮು೦ದಿನದೆಲ್ಲವು ಪುನರುಕ್ತಿ ಮಾತ್ರ.

ಆದ್ದರಿ೦ದಲೇ ಎಲ್ಲ ಸ೦ಖ್ಯೆಗಳಲ್ಲೂ, ಈ ವಿಶ್ವದ ಎಲ್ಲ ಸ೦ಖ್ಯೆಗಳೂ ಹತ್ತಕ್ಕೆ ಅ೦ತ್ಯಗೊಳ್ಳುತ್ತವೆ. ಹನ್ನೊ೦ದರ ಅರ್ಥವೆ೦ದರೆ ಒ೦ದರ ಪಕ್ಕ ಒ೦ದು. ಹೀಗೆ ಹಳೆಯ ಸ೦ಖ್ಯೆಗಳ ಪುನರಾವರ್ತನೆ. ಹತ್ತರವರೆಗಿನ ಸ೦ಖ್ಯೆಗಳಿ೦ದ ಕೆಲಸ ನಡೆಯುತ್ತದೆ. ಮಾನವ ಮೊದಲು ಕೈಬೆರಳುಗಳನ್ನು ಬಳಸಿ ಎಣಿಸಲು ಆರ೦ಭಿಸಿದ. ಆದ್ದರಿ೦ದಲೇ ಸ೦ಖ್ಯೆಗಳು ಹತ್ತಕ್ಕೆ ನಿ೦ತುಹೋಗಿವೆ. ಅಲ್ಲಿ೦ದ ಮು೦ದೆ ಅದನ್ನೇ ಬೆಳೆಸುತ್ತಾ ಹೋದ.

ರಾವಣನ ಹತ್ತು ತಲೆಗಳು ಸ೦ಖ್ಯೆಯ ಅ೦ತ್ಯದ ಸೂಚಕವಷ್ಟೆ. ಮುಖಗಳಿಗೆ ಅ೦ತ್ಯವೇ ಇಲ್ಲ. ಬೆಳಗಿನಿ೦ದ ಸ೦ಜೆಯವರೆಗೆ ನೀವು ಸಾವಿರಾರು ಚಹರೆಗಳನ್ನು ಬದಲಾಯಿಸಿರುತ್ತೀರಿ.

ರಾಮನದ್ದು ಒ೦ದೇ ಚಹರೆ, ಸುಖದಲ್ಲಾಗಲಿ, ದುಃಖದಲ್ಲಾಗಲಿ, ರಾಜಮಹಲ್ಲಿನಲ್ಲಿರಲಿ, ಇಲ್ಲವೇ ಕಾಡಿನಲ್ಲಿರಲಿ ಆತನ ಮುಖಚರ್ಯೆಯಲ್ಲಿ ಯಾವುದೇ ಭೇದ ಇರುವುದಿಲ್ಲ.
ಯಾರು ಒ೦ದೇ ಚಹರೆಯನ್ನು ಹೊದುತ್ತಾರೋ, ಆತ ರಾಮನಾಗುತ್ತಾನೆ. ಇದರ ಅರ್ಥವೆ೦ದರೆ ಆತನ ಚಹರೆ ‘ಅಥೆ೦ಟಿಕ್’ ಆಯಿತೆ೦ದು.ಪ್ರಾಮಾಣಿಕವಾಯಿತೆ೦ದು. ಆತನ ಚಹರೆ ಆ೦ತರಿಕವಾಯಿತೆ೦ದು. ಆತ ಬಾಹ್ಯಕ್ಕೆ ತಕ್ಕ೦ತೆ ತನ್ನ ಚಹರೆಯನ್ನು ಬದಲಾಯಿಸುವುದಿಲ್ಲ ಎ೦ದು. ಆತನ ಚಹರೆ ಈಗ ಒ೦ದು ಆ೦ತರಿಕ ದೆಶೆ ಮತ್ತು ಸ್ಥಿತಿಯಾಗಿದೆ. ನೀವು ಆತನನ್ನು ಬೈಯ್ದರೂ ಇಲ್ಲವೇ ಪ್ರಶ೦ಸೆ ಮಾಡಿದರೂ ಆತನ ಚಹರೆ ಅದೇ ಆಗಿರುತ್ತದೆ. ಇನ್ನು ಯಾವುದೇ ಪರಿಸ್ಥಿತಿ ಆತನ ಚಹರೆಯನ್ನು ಡೋಲಾಯಮಾನವಾಗಿಸುವುದಿಲ್ಲ. ಆತನ ಇರುವಿಕೆ ಸ್ಥಿರಗೊ೦ಡಿದೆಯೆ೦ದು. ಈ ಸ್ಥಿರತೆಯ ಹೆಸರೇ ರಾಮ.

ಯುದ್ಧದಲ್ಲಿ ರಾವಣನನ್ನು ಕೊಲ್ಲುವುದು ಕಷ್ಟದ ಕೆಲಸವಾಯಿತು. ಯಾಕೆ೦ದರೆ ಒ೦ದು ತಲೆಯನ್ನು ತು೦ಡರಿಸುವುದರಿ೦ದ ಏನೂ ಪ್ರಯೋಜನವಿಲ್ಲ. ಯಾವ ತಲೆಯನ್ನು ಕಡಿದರೆ ಆತನನ್ನು ಸಾಯಿಸಬಹುದೆ೦ಬುದೇ ತಿಳಿಯದಾಯ್ತು. ಸುಳ್ಳು ಚಹರೆ ಒ೦ದನ್ನು ಕಡಿದರೆ ಮತ್ತೊ೦ದು ಎದ್ದು ನಿಲ್ಲುತ್ತದೆ. ಸುಳ್ಳು ತಲೆಗಳನ್ನು ಕಡಿಯುವುದರಿ೦ದ ಯಾವುದೇ ಪ್ರಯೋಜನವಿಲ್ಲ. ಯಾಕೆ೦ದರೆ ಅದು ತಲೆಯೇ ಅಲ್ಲ. ಆದ್ದರಿ೦ದಲೇ ರಾವಣನ ಒ೦ದು ತಲೆ ಕಡಿಯುತ್ತಿದ್ದ೦ತೆಯೇ ಮತ್ತೊ೦ದು ಎದ್ದು ನಿಲ್ಲುವುದು ನಡೆದಿತ್ತು.

ನಿಮ್ಮ ಸುಳ್ಳು ಚಹರೆಯನ್ನು ಯಾರಾದರೂ ಕಡಿದುಹಾಕಿದರೂ ಅದರಿ೦ದಾಗುವ ವ್ಯತ್ಯಾಸವಾದರೂ ಏನು? ಅಲ್ಲಿ ರಕ್ತವೂ ಇಲ್ಲ, ಮಾ೦ಸವೂ ಇಲ್ಲ, ಏನೂ ಇಲ್ಲ. ಅದೊ೦ದು ಆಲೋಚನೆ, ಒ೦ದು ಭಾವನೆ. ಅದನ್ನು ಕಡಿದರೆ ಮತ್ತೊ೦ದು ತಕ್ಷಣ ಹುಟ್ಟಿಕೊಳ್ಳುತ್ತದೆ.

ರಾವಣನ ಸ೦ಹಾರದಲ್ಲಿ ಎದುರಾದ ಕಷ್ಟವೂ ಇದುವೇ. ಆತನ ಅಸಲೀ ಚಹರೆ ಯಾವುದೆ೦ದು. ನೀವು ಕೂಡ, ಪರಮಾತ್ಮನ ಸಮ್ಮುಖದಲ್ಲಿ ನಿಮ್ಮನ್ನು ಅಳಿಸಿಕೊಳ್ಳಲಾರಿರಿ. ನೀವು ಪರಮಾತ್ಮನ ಮು೦ದೆ ನಿ೦ತಿರುವ೦ತೆಯೇ ರಾವಣನೂ ರಾಮನ ಮು೦ದೆ ನಿ೦ತಿದ್ದ.. ಯಾವುದರ ಕಡಿಯುವಿಕೆಯಿ೦ದ ನೀವು ಮುಕ್ತಾಯಗೊಳ್ಳಬಹುದೋ ಆ ನಿಮ್ಮ ಅಸಲಿ ಚಹರೆ ಯಾವುದೆ೦ದು ನಿಮಗೂ ಸಹ ತಿಳಿಯದು. ಬಹಳಷ್ಟು ಬಾರಿ ನೀವು ಈ ನಕಲಿ ಚಹರೆಗಳನ್ನು ಮ೦ದಿರಗಳಲ್ಲಿ ಬಲಿಕೊಟ್ಟು ಹೋಗುವಿರಿ. ಇವು ನಕಲಿ ಚಹರೆಗಳು. ಇವುಗಳ ಕಟಾವಿನಿ೦ದ ಏನೂ ಪರಿಹಾರವಾಗುವುದಿಲ್ಲ.

ಗುಡಿಗಳಲ್ಲಿ ಜನ ತಲೆಬಾಗಿ ನಮಸ್ಕರಿಸುತ್ತಾರೆ. ಪರಮಾತ್ಮನ ಮು೦ದೆ. ಗಮನವಿಟ್ಟು ನೋಡಿದರೆ ಆತನ ಅಹ೦ ಮೊದಲಿನ೦ತೆಯೇ ಸೆಟೆದು ನಿ೦ತಿರುವುದು ಕಾಣಬರುವುದು. ನಿಜವಾದ ಚಹರೆ ನಿ೦ತೇ ಇದೆ. ನಕಲಿ ಚಹರೆ ಬಾಗಿ ನಮಿಸುತ್ತಿದೆ. ಅಸಲಿ ಮುಖ ಸುತ್ತಲೂ ನೋಡುತ್ತಾ ನನ್ನ೦ತಹ ಭಕ್ತನನ್ನು ಎಲ್ಲಾದರೂ ನೋಡಿದ್ದೀರಾ ಎ೦ದು ಬೀಗುತ್ತಿದೆ.

ರಾಜನೊಬ್ಬ ಮು೦ಜಾನೆ ಚರ್ಚೊ೦ದರಲ್ಲಿ ಪ್ರಾರ್ಥನೆ ಮಾಡುತ್ತಿದ್ದ. ಸಾಮ್ರಾಟ್ ಬೇರೆ, ಹಬ್ಬದ ದಿನವಾಗಿದ್ದರಿ೦ದ ಮೊದಲು ಪ್ರಾರ್ಥನೆ ಮಾಡುವುದು ಆತನ ಹಕ್ಕಾಗಿತ್ತು. ಹರಿದ್ವಾರದಲ್ಲಿ, ಗ೦ಗೆಯಲ್ಲಿ ಮೊದಲು ಸ್ನಾನ ಮಾಡುವ ಹಕ್ಕು ಯಾರದ್ದೆ೦ದು ಬಲ್ಲಿರಾ?

ಧರ್ಮದ ಜಗತ್ತಿನಲ್ಲೂ ಪ್ರಥಮ ಹಕ್ಕು ಸಾಧಿಸುವ೦ತಹ ಜನರೂ ಇದ್ದಾರೆ. ಇವರು ಅಹ೦ಕಾರಿಗಳು. ಕು೦ಭಮೇಲಾದ ಸಮಯದಲ್ಲಿ ದ೦ಗೆ, ಗಲಭೆಗಳು ಉ೦ಟಾಗುತ್ತವೆ. ಯಾಕೆ೦ದರೆ ಮೊದಲು ಸ್ನಾನ ಮಾಡುವ ಹಕ್ಕು ಹೊ೦ದಿರುವಾತನಿಗಿ೦ತ ಮು೦ಚೆ ಮತ್ಯಾರೋ ಸ್ನಾನ ಮಾಡಿದರೆ೦ದು, ಅಲ್ಲೇ ಹೊಡೆದಾಟ ಆರ೦ಭವಾಗುತ್ತದೆ. ದೇವರ ಮು೦ದೆಯೂ ನೀವು ಸುಲಭವಾಗಿ ನುಗ್ಗಲಾರಿರಿ. ಅಲ್ಲೂ ಲಾಠಿ ಹಿಡಿದು ಜನ ನಿ೦ತಿರುತ್ತಾರೆ. ನಿಮಗಿ೦ತ ಮು೦ಚೆ ಹೋಗುವ ಹಕ್ಕು ನಮ್ಮದು, ನೀವು ಅದು ಹೇಗೆ ಮು೦ಚೆ ಬ೦ದಿರುವಿರಿ ಎ೦ದು.

ನೀವೇನೋ ತಲೆಬಾಗುವಿರಿ. ಆದರೆ ನಿಮ್ಮ ಅಹ೦ಕಾರ ಎದ್ದು ನಿ೦ತೇ ಇರುತ್ತದೆ. ನಿಮ್ಮ ನಕಲಿ ತಲೆಯೇನೋ ಬಗ್ಗುತ್ತದೆ. ಅದಕ್ಕೆ ಯಾವುದೇ ಮೌಲ್ಯವಿಲ್ಲ.

ರಾವಣನ ಮನಸ್ಸನ್ನು ನೀವು ಅರಿತಿರಾದರೆ, ಆಗ ನಿಮ್ಮೊಳಗೆ ರಾವಣ ಎಲ್ಲ ರೀತಿಯಲ್ಲೂ ಪ್ರತಿಷ್ಠಿವಾಗಿರುವುದನ್ನು ಕಾಣುವಿರಿ. ಮತ್ತು ಅದೇ ರಾವಣ ಅ೦ದುಕೊಳ್ಳುತ್ತಿದ್ದಾನೆ, ‘ನಾನು ರಾಮನಲ್ಲದಿರಬಹುದು, ಆದರೆ ರಾವಣನ೦ತೂ ಅಲ್ಲ’ ಎ೦ದು.

 

ಆತನ ಮಾತನ್ನು ನೀವು ಕಿವಿಗೆ ಹಾಕಿಕೊಳ್ಳದಿರಿ. ಅದರ ಮಾತನ್ನು ಸಾಕಷ್ಟು ಕೇಳಿಸಿಕೊ೦ಡಿದ್ದಾಗಿದೆ. ಅದರ ಮಾತನ್ನು ಕೇಳಿಯೇ ನೀವು ಈ ದುರ್ದೆಶೆಗೆ ತಲುಪಿರುವಿರಿ. ನಿಮಗೆ ನೀವು ರಾಮನಲ್ಲವೆ೦ದೆನಿಸಿದರೆ, ಆಗ ನೀವು ಖ೦ಡಿತವಾಗಿಯೂ ರಾವಣನೇ ಎ೦ಬುದನ್ನು ಅರಿಯಿರಿ. ಯಾಕೆ೦ದರೆ ಇವರಿಬ್ಬರ ನಡುವೆ ನೀವು ನಿಲ್ಲಲು ಕೊ೦ಚವೂ ಸ್ಥಳವಿಲ್ಲ. ಇದನ್ನು ಸ೦ಪೂರ್ಣವಾಗಿ ಅರಿಯುವುದು ರಾಮನೆಡೆಗೆ ನೀವು ತೆಗೆದುಕೊಳ್ಳುವ ಮೊದಲ ಹೆಜ್ಜೆ. ತಾನು ಕೆಟ್ಟವನೆ೦ದು ಅರಿವು ಮೂಡುವುದೇ ಶುಭದ ಮೊದಲ ಕ್ರಾ೦ತಿಕಾರಿ ಘಟನೆ. ನಾನು ಕತ್ತಲಿನಲ್ಲಿದ್ದೇನೆ ಎ೦ಬ ಆಳವಾದ ಅರಿವು ಬೆಳಕಿನ ಶೋಧನೆಗೆ ಮೂಲವಾಗುತ್ತದೆ. ನಾನು ಅಜ್ಞಾನಿಯಾಗಿದ್ದೇನೆ ಎ೦ಬ ತಿಳಿವು ಜ್ಞಾನದ ಬಗ್ಗೆ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ.

ಮಧ್ಯದ ಮತ್ತು ಅರ್ಧದ ಬಗ್ಗೆ ಯೋಚಿಸಲೇಬೇಡಿ. ಇಲ್ಲ ಇತ್ತಕಡೆ, ಇಲ್ಲವೇ ಅತ್ತಕಡೆ. ಅಲ್ಲದೆ ಯಾರು ಈ ತೀರದಿ೦ದ ಬಿಡುಗಡೆ ಹೊ೦ದುತ್ತಾರೋ ಅವರು ತತ್ ಕ್ಷಣ ಆ ತೀರಕ್ಕೆ ಹೋಗಿ ತಲುಪುತ್ತಾರೆ. ಯಾಕೆ೦ದರೆ ಇವೆರಡರ ನಡುವೆ ನೀವು ನಿಲ್ಲಬಹುದಾದ೦ತಹ ಕೊ೦ಚವೂ ಸ್ಥಳವಿಲ್ಲ. ಜ್ಞಾನ ಮತ್ತು ಅಜ್ಞಾನಗಳ ನಡುವೆ ನಿಲ್ಲಲು ಸ್ಥಳವೇ ಇಲ್ಲ. ಇತ್ತ ಅಜ್ಞಾನ ಹೋಯಿತೆ೦ದತೆ ಅತ್ತ ಜ್ಞಾನ ಬ೦ತೆ೦ದೇ. ನೀರು ನೂರು ಡಿಗ್ರಿಯಷ್ಟು ತಾಪವನ್ನು ತಲುಪಿದರೆ, ಆಗ ನೀರಿನ ಮತ್ತು ಆವಿಯ ನಡುವೆ ಅ೦ತರ ಇರುವುದಿಲ್ಲ. ನೀರಿನ ಕೊ೦ಚ ಭಾಗ ನಡುವಿನಲ್ಲಿ ನಿ೦ತು, ‘ನಾವು ಈಗ ನೀರಾಗಿಲ್ಲ, ಆದರೆ ಇನ್ನೂ ಆವಿತೂ ಆಗಿಲ್ಲ, ಮಧ್ಯದಲ್ಲಿದ್ದೇವೆ’ ಎನ್ನಲು ಸಾಧ್ಯವಿಲ್ಲ. ಇಲ್ಲ ನೀರು, ಇಲ್ಲವೇ ಅವಿ. ನಡುವೆ ಯಾವುದೇ ಸ್ಥಳವಿಲ್ಲ.

ಈ ತೀರಕ್ಕೂ ಆ ತೀರಕ್ಕೂ ನಡುವೆ, ನೀವು ನಿಮ್ಮ ದೋಣಿಯನ್ನು ಇಳಿಸಬಹುದಾದ೦ತಹ ಯಾವುದೇ ನದಿಯೂ ಹರಿಯುತ್ತಿಲ್ಲ. ಕೇವಲ ಎರಡು ತೀರಗಳು ಮಾತ್ರ ಇವೆ. ಒ೦ದು ತೀರ ಬಿಟ್ಟಿರೆ೦ದರೆ ಮತ್ತೊ೦ದು ಕೂಡಲೇ ದೊರೆಯುತ್ತದೆ. ಎರಡನೆಯ ತೀರ ದೊರೆಯುವವರೆಗೂ ನೀವು ಮೊದಲನೆಯ ತೀರದಲ್ಲಿಯೇ ಇರುವಿರಿ ಎ೦ಬುದನ್ನು ಬಲು ಆಳವಾಗಿ ಅನುಭವಿಸಿರಿ. ಮನಸ್ಸಿನ ಆಟಗಳಿ೦ದ ಮೋಸಹೋಗದಿರಿ. ಅ೦ಧಕಾರ ಇಲ್ಲವೇ ಬೆಳಕು, ಜೀವನ ಇಲ್ಲವೇ ಮೃತ್ಯು. ಅರ್ಧಸತ್ತವನೂ ಸಹ ಅರ್ಧ ಸತ್ತಿಲ್ಲ ಎ೦ದೆನ್ನುವುದಿಲ್ಲವೇ? ಆತ ಬದುಕಿದ್ದಾನೆ, ಪೂರ್ತಿಯಾಗಿ. ಹೇಗೆ ಅರ್ಧ ಸಾಯಬಹುದು? ಇದು ಭಾಷೆಯ ದೋಷವಷ್ಟೇ. ಅರ್ಧ ಬದುಕಿರುವುದು ಹೇಗೆ ಸಾಧ್ಯ? ಒಬ್ಬ ವ್ಯಕ್ತಿ ಸ೦ಪೂರ್ಣವಾಗಿ ಪ್ರಜ್ಞೆ ತಪ್ಪಿದ್ದರೂ ಸಹ ಆತ ಜೀವ೦ತನಾಗಿದ್ದಾನೆ. ನೂರಕ್ಕೆ ನೂರರಷ್ಟು. ಈತ ಅರ್ಧ ಸತ್ತಿದ್ದಾನೆ ಎನ್ನುವ೦ತಿಲ್ಲ. ಸತ್ತಿದ್ದರೆ ಸತ್ತಿದ್ದಾನೆ, ಬದುಕಿದ್ದರೆ ಬದುಕಿದ್ದಾನೆ. ಇವೆರಡರ ನಡುವೆ ಯಾವುದೇ ಸ್ಥಳವಿಲ್ಲ. ಯಾವುದೇ ‘ಸ್ಪೇಸ್’ ಇಲ್ಲ, ಯಾವುದೇ ರಿಕ್ತತೆ ಇಲ್ಲ.

ಸರಿಯಾಗಿ ನಿಮ್ಮೊಳಗೆ ನೋಡಿಕೊಳ್ಳಿ. ಅಲ್ಲಿ ರಾವಣ ಅವಿತುಕೊ೦ಡಿರುವುದನ್ನು ಕಾಣುವಿರಿ. ಅಲ್ಲದೆ ನಾನು ರಾವಣನೇ ಎ೦ಬುದನ್ನೂ ತೀವ್ರವಾಗಿ ಅನುಭವಿಸಿ. ಇದೇ ತಪ್ಪನ್ನು ರಾವಣನೂ ಮಾಡಿದ್ದ. ಆತ ತನ್ನನ್ನು ಮಹಾಪ೦ಡಿತ, ಜ್ಞಾನಿ ಎ೦ದುಕೊ೦ಡಿದ್ದ, ತಾನು ರಾವಣ ಎ೦ಬುದನ್ನು ಅರಿತಿರಲಿಲ್ಲ. ಶಾಸ್ತ್ರದ ಬಗ್ಗೆ ಚರ್ಚೆ ಮಾಡಿದರೆ ಪ್ರಾಯಶಃ ರಾಮನನ್ನು ಸೋಲಿಸುತ್ತಿದ್ದನೇನೋ, ಯಾಕೆ೦ದರೆ ಅವನಿಗೆ ಶಾಸ್ತ್ರಗಳೆಲ್ಲವೂ ಕ೦ಠಪಾಠವಾಗಿತ್ತು. ಆತನೇನು ಕಡಿಮೆ ಶಕ್ತಿಶಾಲಿಯಾಗಿರಲಿಲ್ಲ. ಯಾಕೆ೦ದರೆ ಅಜ್ಞಾನಿ ಯಾವಾಗಲೂ ಶಕ್ತಿಯನ್ನೇ ಹುಡುಕುತ್ತಿರುತ್ತಾನೆ. ಬಹಳಷ್ಟು ಸಿದ್ಧಿಗಳನ್ನು ಆತ ಕೈವಶ ಮಾಡಿಕೊ೦ಡಿದ್ದ. ಸಿದ್ಧಿಗಳನ್ನು ಒಟ್ಟುಗೂಡಿಸಲು ಅಜ್ಞಾನಿ ಏನನ್ನಾದರೂ ಮಾಡಲು ತಯಾರಿರುತ್ತಾನೆ.

ಇದಕ್ಕಾಗಿ ಆತ ತನ್ನ ತಲೆಯನ್ನು ಕಡಿದುಕೊ೦ಡು ಶಿವನ ಚರಣಗಳಿಗೆ ಸರ್ಪಿಸುತ್ತಿದ್ದನೆ೦ದು ಕಥೆಗಳು ಹೇಳುತ್ತವೆ. ಅಜ್ಞಾನಿ ಈ ಹ೦ತದವರೆಗೂ ಹೋಗಬಲ್ಲ. ಏನನ್ನಾದರೂ ಬಿಡಲು ತಯಾರಿರುತ್ತಾನೆ. ಕೇವಲ ತನ್ನ ಅಹ೦ಕಾರ ಸಶಕ್ತವಾದರೆ ಸಾಕು. ಅಹ೦ಕಾರ ಉಳಿಸಿಕೊಳ್ಲಲು ಸಾಯಲೂ ತಯಾರಿರುತ್ತಾನೆ.

ರಾಮನ ಜೀವನದಲ್ಲಿ ರಾಮ ಇ೦ತಹ ಕಡೆಯಲ್ಲಿ ಈ ಸಾಧನೆಗೈದನೆ೦ಬ ವಿಚಾರವೇ ಇಲ್ಲ. ಸಿದ್ಧಿಗಳನ್ನು ಪಡೆದುಕೊ೦ಡನೆ೦ಬ ಮಾತೇ ಇಲ್ಲ. ಅದೇ ರಾವಣನ ಜೀವನದಲ್ಲಿ ಆತ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ, ಮಹತ್ತರ ಸಿದ್ಧಿಗಳನ್ನು ಪಡೆದುಕೊ೦ಡನೆ೦ಬ ವಿಷಯಗಳು ಹೇಳಲ್ಪಟ್ಟಿವೆ. ಕೊನೆಗೆ ಶಿವನನ್ನು ಒಲಿಸಿಕೊ೦ಡು ಆತ ಪರಮಶಕ್ತಿಯನ್ನು ಪಡೆದುಕೊ೦ಡ. ಜ್ಞಾನವೂ ಆತನ ಬಳಿ ಇತ್ತು, ಪಾ೦ಡಿತ್ಯವೂ ಇತ್ತು. ಆತನ ಬಳಿ ಎಲ್ಲವೂ ಇತ್ತು. ಆದ್ದರಿ೦ದ ಆತ ‘ನಾನು ರಾಮನಾಗಿದ್ದೇನೆ’ ಎ೦ದು ಅ೦ದುಕೊ೦ಡಿದ್ದು ಸ್ವಾಭಾವಿಕ.

ರಾವಣನಿಗೆ ಹೋಲಿಸಿದರೆ ಶಕ್ತಿ, ರಾಜ್ಯ ಸ೦ಪತ್ತಿನಲ್ಲಿ, ಚಿನ್ನ, ಜ್ಞಾನಗಳಲ್ಲಿ ರಾಮ ನಿರೀಹ. ರಾಮನ ಬಳಿ ಏನೂ ಇಲ್ಲ, ಸಕಲವನ್ನೂ ಕಿತ್ತುಕೊಳ್ಳಲಾಗಿತ್ತು. ಆತ ಕಾಡಿಗೆ ಹೊರಟುನಿ೦ತಾಗ, ರಾಮ ಏನೂ ಇಲ್ಲದೆ ನಿ೦ತಿದ್ದಾನೆ. ರಾವಣನ ಬಳಿ ಸಕಲವೂ ಇದೆ. ಹಾಗಾಗಿ ಆತನಿಗೆ ಅನ್ನಿಸಿರಬೇಕು, ನಾನು ರಾಮನಾಗಿ ಬಿಟ್ಟೆನೆ೦ದು.

ಕೇವಲ ಶಕ್ತಿಯ ದೃಷ್ಟಿಕೋನದಿ೦ದ ನೋಡಿದಲ್ಲಿ ಈ ತರ್ಕ ಸರಿ.

ಎಲ್ಲಿಯವರೆಗೂ ನಿಮಗೆ ನೀವು ರಾವಣನೆ೦ಬ ಭಾವನೆ ಆಳವಾಗಿ ಮೂಡುವುದಿಲ್ಲವೋ, ಆವರೆಗೂ ನೀವು ಜೀವನದಲ್ಲಿ ವಾಸ್ತವಿಕ ಕ್ರಾ೦ತಿಯ ಮೊದಲ ಹೆಜ್ಜೆಗಳನ್ನಿಡುವುದಿಲ್ಲ. ನಾನು ರಾವಣನೆ೦ಬ ಭಾವನೆ ಮೂಡುತ್ತಿದ್ದ೦ತೆಯೇ ರಾವಣನ ಮಹಲು ಮುರಿದು ಬೀಳಲಾರ೦ಭಿಸುತ್ತದೆ. ಯಾಕೆ೦ದರೆ ಸಚೇತನಗೊ೦ಡ ಯಾವುದೇ ವ್ಯಕ್ತಿ ರಾವಣನಾಗಿ ಉಳಿಯಲಾರ. ತಾನು ಕೆಟ್ಟವನು ಎ೦ದು ಅರಿತವನಲ್ಲಿ ಕೆಟ್ಟತನ ಇರಲಾರದು. ಈ ಅರಿವು ಒ೦ದು ಬೆ೦ಕಿ, ದುರುಳುತನ ಅದರಿ೦ದ ಸುಟ್ಟು ಭಸ್ಮವಾಗುವುದು.

ಕೆಟ್ಟತನವನ್ನು ಕಾಪಾಡಿಕೊಳ್ಳುವ ಮಾರ್ಗವೆ೦ದರೆ, ತಾನು ಕೆಟ್ಟವನಲ್ಲ ಎ೦ಬ ಭಾವನೆ ಉಳಿಸಿಕೊಳ್ಳುವುದೇ. ಹೇಳಿಕೊಳ್ಳುವುದು ಕಷ್ಟವಾದ್ದರಿ೦ದ, "ನಾನು ಕೆಟ್ಟವನಿರಬಹುದು, ಆದರೆ ಇತರರಿಗಿ೦ತಲೂ ಒಳ್ಳೆಯವನು ಮತ್ತು ಒಳ್ಳೆಯತನದೆಡೆಗೆ ಸಾಗುತ್ತಿದ್ದೇನೆ. ಮಿಕ್ಕವರಿಗೆ ಹೋಲಿಸಿಕೊ೦ಡರೆ ನಾನೆಷ್ಟೋ ಮೇಲು. ಈ ಜಗತ್ತಿನಲ್ಲಿ ಎ೦ತೆ೦ಥವರೆಲ್ಲಾ ಇದ್ದಾರೆ. ನಾನಷ್ಟು ಕೆಟ್ಟಿಲ್ಲ. ಬುದ್ಧನಾಗಿರದಿರಬಹುದು, ರಾಮನ೦ತಲ್ಲದಿರಬಹುದು, ರಾವಣನ೦ತೂ ಅಲ್ಲ. ಇಡೀ ವಿಶ್ವ ರಾವಣರಿ೦ದ ತು೦ಬಿದೆ. ನಾನು ಮಧ್ಯದಲ್ಲಿದ್ದೇನೆ" ಎ೦ದುಕೊಳ್ಳುವಿರಿ.

ಮಧ್ಯದಲ್ಲಿ ಯಾರೂ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಮಧ್ಯದ ಭ್ರಾ೦ತಿಯನ್ನು ತೊರೆದರೆ ಮಾತ್ರ ಕ್ರಾ೦ತಿ ಪ್ರಾರ೦ಭವಾಗಬಹುದು.

(ಮೂಲ ಮತ್ತು ಆಧಾರ: ಓಶೋವಚನ್)

Comments»

1. ravi - April 8, 2010

agreed…..


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: